ದಾವಣಗೆರೆ; ಏ.22; ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯುತ್ತಿದ್ದು ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತವಾಗಿ ನಡೆಸಲು ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ತಕ್ಷಣ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಲು ಸ್ವತಂತ್ರರು ಎಂದು ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರಾದ ಎಂ.ಲಶ್ಮಿ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಸ್ವೀಪ್ ಅಧ್ಯಕ್ಷರು, ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಯಾ ಕ್ಷೇತ್ರವಾರು ಚುನಾವಣಾ ಅಂಕಿ ಅಂಶ ಹಾಗೂ ಮಾದರಿ ನೀತಿ ಸಂಹಿತೆ ಅನುಷ್ಠಾನ ಕಾರ್ಯಸೂಚಿಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಮಾಹಿತಿ ಇದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಎಲ್ಲಾ ತಂಡದವರು ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ, ಮತದಾರರ ಮೇಲೆ ಯಾವುದೇ ಆಮಿಷ, ಒತ್ತಡ ಇಲ್ಲದಂತೆ ಮತದಾನದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸುವಂತಹ ವಾತಾವರಣವನ್ನು ಕಲ್ಪಿಸುವ ಮೂಲಕ ಶಾಂತಯುತ ಹಾಗೂ ಮುಕ್ತ ಚುನಾವಣೆ ನಡೆಸಲು ಕರ್ತವ್ಯ ನಿರ್ವಹಿಸಬೇಕೆಂದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಮಾತನಾಡಿ ಚುನಾವಣೆಯಲ್ಲಿ ಪಾರದರ್ಶಕತೆ, ಮುಕ್ತ, ನ್ಯಾಯಸಮ್ಮತ, ನಿಯಮಬದ್ದವಾಗಿ ಹಾಗೂ ಸಕ್ರಿಯವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಹಂತದಲ್ಲಿಯು ಚುನಾವಣಾ ನಿಯಮಗಳನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು.
ಯಾವುದೇ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಉದಾಸೀನತೆ, ಎಂಸಿಸಿ ಅನುಷ್ಠಾನದಲ್ಲಿ ಲೋಪದೋಷ ಕಂಡುಬಂದಲ್ಲಿ ಚುನಾವಣಾ ವೀಕ್ಷಕರು ಆಯೋಗಕ್ಕೆ ನಿರ್ಧಾಕ್ಷೀಣ್ಯವಾಗಿ ವರದಿ ಮಾಡಲಿದ್ದು ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ಅಧಿಕಾರಿಗಳು ಚುನಾವಣಾ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿ ಅನುಷ್ಠಾನಾಧಿಕಾರಿಗಳಾಗಿ ಕೆಲಸ ಮಾಡಬೇಕೆಂದರು.
ವೀಕ್ಷಕರಿಗೆ ಮಾಹಿತಿ; ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಹರಪನಹಳ್ಳಿ ಸೇರಿದಂತೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಸೇರಲಿದ್ದು 8 ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಕ್ಷೇತ್ರದಲ್ಲಿನ ಮತಗಟ್ಟೆಗಳು, ಇದರಲ್ಲಿ ಕ್ರಿಟಿಕಲ್, ವಲ್ನೆರೆಬಲ್, ಒಂದಕ್ಕಿಂತ ಹೆಚ್ಚು ಇರುವ ಕ್ಲಸ್ಟರ್ ಮತಗಟ್ಟೆ ಮತ್ತು 3 ಕ್ಕಿಂತ ಹೆಚ್ಚು ಒಂದೇ ಕಡೆ ಇರುವ ಮತಗಟ್ಟೆಗಳ ವಿವರ ನೀಡಿದರು. ಮತ್ತು ಎಂ.ಸಿ.ಸಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಾರ್ ರೂಂ ಮೂಲಕ ಅಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸಿರುವ ಬಗ್ಗೆ ಮಾಹಿತಿ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೀತಿ ಸಂಹಿತೆ ಸಂದರ್ಭದಲ್ಲಿ ರಸ್ತೆಬದಿಯ ಇಲಾಖೆ ಜಾಗೃತಿ ಕಾರ್ಯಾಚರಣೆ ಹೆಚ್ಚಿಸಿ ವಾಹನಗಳ ತಪಾಸಣೆ ಹೆಚ್ಚಿಸಲಾಗಿದೆ. ಮತ್ತು ವಸ್ತುಗಳ ಸಂಗ್ರಹಣಾ ಗೋಡೌನ್‍ಗಳ ಶೋಧನೆ ನಡೆಸುವ ಮೂಲಕ ಉಚಿತ ಕೊಡುಗೆಗಳ ಮೇಲೆ ಸಂಪೂರ್ಣ ಕಣ್ಗಾವಲು ವಹಿಸಲಾಗಿದೆ ಎಂದರು.
ಮನೆಯಿಂದ ಮತದಾನ; 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡಲು ಅವಕಾಶ ಇದ್ದು 85 ವರ್ಷ ಮೇಲ್ಪಟ್ಟ 1458 ಮತದಾರರು ಮತ್ತು 804 ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡುವರು. ಮತ್ತು ಅಗತ್ಯ ಸೇವೆಯಡಿ ಬರುವ 915 ಗೈರು ಮತದಾರರು ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡುವರು ಎಂದು ನೋಡಲ್ ಅಧಿಕಾರಿ ಭಾವನ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.