ದಾವಣಗೆರೆ:ಶ್ರೀಮತಿ ಗೌರಮ್ಮ ಪಿ ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿರುವ 2024 ರ ಸಾಲಿನ “ಮಹಲಿಂಗರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ” ಗೆ ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಹಾಗೂ ಶ್ರೀಮತಿ ಗೌರಮ್ಮ ಪಿ ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್(ರಿ) ನ ಅಧ್ಯಕ್ಷ ಮೋತಿ ಆರ್ ಪರಮೇಶ್ವರ ರಾವ್ ತಿಳಿಸಿದ್ದಾರೆ. ಶ್ರೀಮತಿ ಗೌರಮ್ಮ ಪಿ ಮೋತಿ ರಾಮರಾವ್ ಗೌರವಾರ್ಥ 2002 ರಲ್ಲಿ ಸ್ಥಾಪಿತವಾದ ಪ್ರತಿಷ್ಠಿತ “ಮಹಲಿಂಗರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ”ಯು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿದ ಸಾಹಿತಿಗಳಿಗೆ ಕೊಡಲಾಗುತ್ತದೆ. ಕುವೆಂಪು ಕನ್ನಡ ಭವನದಲ್ಲಿ ನಡೆದ ಪ್ರಶಸ್ತಿಯ ಆಯ್ಕೆ ಸಮಿತಿಯ ಸಭೆಯಲ್ಲಿ ಮಲ್ಲಿಕಾರ್ಜುನ ಕಡಕೋಳರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು ರೂ.15000 ನಗದು ಹಾಗೂ ಸನ್ಮಾನಪತ್ರವನ್ನು ಒಳಗೊಂಡಿದೆ. ಮಲ್ಲಿಕಾರ್ಜುನ ಕಡಕೋಳರು ಕಳೆದ 4 ದಶಕಗಳಿಂದ ಸಾಹಿತ್ಯ ಕ್ಷೇತ್ರದ ಸೇವೆಯ ಮೂಲಕ ರಾಜ್ಯಾದ್ಯಂತ ಹೆಸರಾಗಿದ್ದಾರೆ. ವಿಶೇಷವಾಗಿ ರಂಗಭೂಮಿ ಕ್ಷೇತ್ರದ ಕುರಿತಾದ ಅವರ ಸಂಶೋಧನೆ ಹಾಗೂ ಲೇಖನಗಳು ಹೆಚ್ಚು ಜನಪ್ರಿಯವಾಗಿವೆ. ಪ್ರಸ್ತುತ ಕಡಕೋಳರು ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅತೀ ಶೀಘ್ರದಲ್ಲಿ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಯ್ಕೆ ಸಮಿತಿಯು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಪ್ರಶಸ್ತಿ ದಾನಿಗಳಾದ ಮೋತಿ ಪರಮೇಶ್ವರ ರಾವ್, ಹಿರಿಯ ಸಾಹಿತಿ ಎನ್. ಟಿ.ಎರ್ರೀಸ್ವಾಮಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಹಾಗೂ ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಅವರುಗಳನ್ನು ಒಳಗೊಂಡಿತ್ತು ಎಂದು ಬಿ.ವಾಮದೇವಪ್ಪ ಮಾಹಿತಿ ನೀಡಿದರು.