Monday, January 13, 2025
Homeಬರಹಮಹಿಳಾ ಸಬಲೀಕರಣ ಕ್ಷೇತ್ರದ ಸಾಧನೆಗಾಗಿಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಗೊಳ್ಳಲಿರುವ ಎನ್.ಟಿ. ಎರ್ರಿಸ್ವಾಮಿ.

ಮಹಿಳಾ ಸಬಲೀಕರಣ ಕ್ಷೇತ್ರದ ಸಾಧನೆಗಾಗಿಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಗೊಳ್ಳಲಿರುವ ಎನ್.ಟಿ. ಎರ್ರಿಸ್ವಾಮಿ.

ದಾವಣಗೆರೆ: ಬ್ಯಾಂಕಿನ ವ್ಯಾವಹಾರಿಕ ದಿನಮಾನದಲ್ಲಿ ಕೆಲಸವೆಂದರೆ ಕಾಯಕ ಕೂಡು-ಕಳೆಯುವ ಎನ್ನುವಂತಾಗಿರುವ ಬ್ಯಾಂಕು ಹಾಗೂ ಅಲ್ಲಿನ ಇಂದಿನ ಸಿಬ್ಬಂದಿ ಮನಸ್ಸುಮಾಡಿದರೆ ಜನರ, ದೇಶದ ಆರ್ಥಿಕ- ಸಾಮಾಜಿಕ ಬದುಕನ್ನು ಸಮಗ್ರವಾಗಿ ಇಂದಿಗೂ ಅಲ್ಲಲ್ಲಿ ಬೆರಳೆಣಿಕೆಯಷ್ಟು ಬದಲಾಯಿಸಬಲ್ಲರು ಎಂಬುದಕ್ಕೆ ಉದಾಹರಣೆಗಳು ಸಿಗಬಲ್ಲವು. ಅಂತಹ ಸಾಧಕರೊಬ್ಬರು ದಾವಣಗೆರೆ ಜಿಲ್ಲೆ, ಜಗಳೂರಿನಲ್ಲಿದ್ದಾರೆ. ಅವರೇ ಕೆನರಾ ಬ್ಯಾಂಕಿನ ವಿಶ್ರಾಂತ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ಎನ್.ಟಿ. ಎರ್ರಿಸ್ವಾಮಿ. ಹಾಲೇಹಳ್ಳಿ ಎನ್ನುವ ಕುಗ್ರಾಮದಲ್ಲಿ ಹುಟ್ಟಿದ, ಹಳ್ಳಿಹೈದನಾದ ಎರ್ರಿಸ್ವಾಮಿ ಬ್ಯಾಂಕಿನ ಮೂಲಕ ಗ್ರಾಮೀಣಾಭಿವೃದ್ಧಿ, ಸ್ವಯಂ ಉದ್ಯೋಗ ತರಬೇತಿ, ನಿರುದ್ಯೋಗ ನಿವಾರಣೆ, ಗ್ರಾಮಗಳ ದತ್ತು ಸ್ವೀಕಾರ, ಕೃಷಿ, ಗುಡಿ ಕೈಗಾರಿಕೆ, ಮಹಿಳಾ ಸಬಲೀಕರಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದ ಸಾಧನೆಗಳನ್ನು ಮಾಡಿ ಹೆಸರಾಗಿದ್ದಾರೆ. ತಾವು ಕೆಲಸ ಮಾಡಿದ ಕರ್ನಾಟಕದ 14 ಜಿಲ್ಲೆಗಳು ಹಾಗೂ ಆಂಧ್ರದಲ್ಲಿ ಇವರು ರಚಿಸಿದ ಮಹಿಳಾ ಸ್ವ-ಸಹಾಯ ಸಂಘಗಳು ಒಂದೆರಡಲ್ಲ. ಬರೋಬ್ಬರಿ 8 ಸಾವಿರ ಗುಂಪುಗಳು. ಸುಮಾರು ಒಂದೂವರೆ ಲಕ್ಷ ಮಹಿಳೆಯರನ್ನು ಒಗ್ಗೂಡಿಸಿ ಇವರು ರಚಿಸಿದ ಸಂಘಗಳು ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳು ಹಾಗೂ ಹೊರದೇಶದ ಗಮನ ಸೆಳೆಯುವಂತಾಗಿರುವುದು ಒಂದು ವಿಶೇಷ. ರಾಜ್ಯದಲ್ಲಿ ಸ್ತ್ರೀ-ಶಕ್ತಿ ಯೋಜನೆ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ಅಂಗನವಾಡಿ ಶಿಕ್ಷಕಿಯರ ಮೂಲಕ ಬ್ಯಾಂಕು ಪರಿಧಿಯ ಹಳ್ಳಿಗಳಲ್ಲಿ ನೂರಾರು ಮಹಿಳಾ ಸ್ವ-ಸಹಾಯ ಸಂಘಗಳನ್ನು ರಚಿಸಿ ಸ್ತ್ರೀ-ಶಕ್ತಿ ಯೋಜನೆಗೆ ಪ್ರೇರಕರಾದವರು ಎರ್ರಿಸ್ವಾಮಿಯವರು. ಮಹಿಳೆಯರು ಸಂಘಟನಾತ್ಮಕವಾಗಿ ಸಮರ್ಥರಾಗಲು ಆರ್ಥಿಕ ಶಕ್ತಿಯೂ ಕೂಡ ಮುಖ್ಯ ಎಂಬುದನ್ನು ಅರಿತ ಎರ್ರಿಸ್ವಾಮಿಯವರು ತಾನಿದ್ದ ಕೆನರಾ ಬ್ಯಾಂಕಿನ ಮೂಲಕ ನೂರಾರು ಕೋಟಿ ರೂಪಾಯಿಗಳ ಆರ್ಥಿಕ ಸೌಲಭ್ಯವನ್ನು ಒದಗಿಸಿದ್ದು ಅಲ್ಲದೆ ಮಹಿಳೆಯರು ಶೇಕಡಾ 100% ರಷ್ಟು ಮರುಪಾವತಿ ಮಾಡುವಂತೆಯೂ ನೋಡಿಕೊಂಡರು. 1500 ಮಹಿಳಾ ಸ್ವ-ಸಹಾಯ ಸಂಘಗಳು ಒಂದೇ ದಿನ 41 ಕೋಟಿ ಸಾಲ ಸೌಲಭ್ಯವನ್ನು ಹೊಂದಲು ಕಾರಣರಾದವರು ಇವರು. ಆಂಧ್ರದ ನಂದ್ಯಾಲದಲ್ಲಿ ಒಂದು ಸಾವಿರ ವಿಶೇಷಚೇತನರನ್ನು ಒಗ್ಗೂಡಿಸಿ ಅವರದೇ ಸ್ವ-ಸಹಾಯ ಗುಂಪುಗಳನ್ನು ರಚಿಸಿ ಮುನ್ನಡೆಸಿ ಅವರ ಸ್ವಾಭಿಮಾನದ ಬದುಕಿಗೆ ನೆರವಾದ ರೀತಿ ಆಂಧ್ರದಲ್ಲಿ ಇವರಿಗೆ ಅಪಾರ ಕೀರ್ತಿಯನ್ನು ತಂದು ಕೊಟ್ಟಿದೆ. ಅದೇ ರೀತಿ 400 ಜನ ಮಹಿಳೆಯರಿಗೆ ಒಂದೇ ಶಾಖೆಯಲ್ಲಿ ‘ಮನೆ ಸಾಲ’ಗಳನ್ನು ಮಂಜೂರು ಮಾಡಿ, ಅವರು ಸೂರು ಹೊಂದಲು ನೆರವಾದದ್ದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಒಂದು ದಾಖಲೆಯಾಗಿದೆ. ಹೀಗೆ ಹತ್ತು ಹಲವು ರೀತಿಯಲ್ಲಿ ಮಹಿಳಾ ಉನ್ನತಿಗಾಗಿ ಶ್ರಮಿಸಿದ ಎನ್.ಟಿ. ಎರ್ರಿಸ್ವಾಮಿಯವರನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಬಲೀಕರಣದ ಸಾಧನೆಗಾಗಿ ಸನ್ಮಾನಿಸುತ್ತಿರುವುದು ಅನೇಕರಲ್ಲಿ ಸಂತಸವನ್ನುಂಟು ಮಾಡಿದೆ. ಅವರ ಸಾಹಿತ್ಯಿಕ ಸಾಧನೆಯೂ ಕೂಡ ಅಮೋಘವಾದುದು. ಇವರು ಬ್ಯಾಂಕಿಗರಾಗಿದ್ದು ಇದುವರೆಗೆ ಕನ್ನಡದಲ್ಲಿ 36 ಕೃತಿಗಳನ್ನು ರಚಿಸಿ 28 ಕೃತಿಗಳನ್ನು ಹೊರತಂದಿದ್ದಾರೆ. ಇವರ ಈ ಸಾಧನೆಗಾಗಿ ಜಿಲ್ಲೆ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಬಂಧುಗಳು ಹಾಗೂ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶ್ರೀಮತಿ ಗೀತಾ ಮಂಜು ಕವಿ, ಸಹ ಶಿಕ್ಷಕಿ. ಬೆಣ್ಣೆಹಳ್ಳಿ, ಜಗಳೂರು ತಾ||.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments