Saturday, December 21, 2024
Homeದೇಶಪ್ರಧಾನಿಯ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿಗಾಂಧಿ ಸ್ಮಾರಕ ಕಟ್ಟಡ ಮತ್ತು ಚಿಂತನೆಗಳ ಧ್ವಂಸ

ಪ್ರಧಾನಿಯ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿಗಾಂಧಿ ಸ್ಮಾರಕ ಕಟ್ಟಡ ಮತ್ತು ಚಿಂತನೆಗಳ ಧ್ವಂಸ

ನಾವು ಬದುಕುತ್ತಿರುವ ಕಾಲಘಟ್ಟ ಎಷ್ಟು ಕ್ರೂರವಾಗಿದೆ ಮತ್ತು ವಿಷಮಯ ವಾತಾವರಣದಿಂದ ಕೂಡಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿ ನಗರದಲ್ಲಿ ಕಳೆದ ಅರವತ್ತು ವರ್ಷಗಳಿಂದ ಸಕ್ರಿಯವಾಗಿದ್ದ ‘’ ಸರ್ವಾ ಸೇವಾ ಸಂಘ’’ ಎಂಬ ಗಾಂಧಿ ಅಧ್ಯಯನ ಕೇಂದ್ರದ ಕಟ್ಟಡವನ್ನು ನೆಲಸಮ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಕಟ್ಟಡದಲ್ಲಿದ್ದ ಕುರ್ಚಿ, ಮೇಜು ಹಾಗೂ ಸಾವಿರಾರು ಪುಸ್ತಕಗಳನ್ನು ಹೊರತೆಗೆದು ಪೊಲೀಸರು ತಮ್ಮ ಸುಪರ್ಧಿಗೆ ತೆಗೆದುಕೊಂಡಿದ್ದಾರೆ. ಮುನ್ನೂರು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸ್ಥಳಿಯ ಜಿಲ್ಲಾಧಿಕಾರಿಗಳು ಬುಲ್ಡೋಜರ್ ಗಳಿಗೆ ಕಾಯುತ್ತಿದ್ದಾರೆ. ನಾನು ನಾಲ್ಕು ವರ್ಷದ ಹಿಂದೆ ಬಿಸ್ಮಿಲ್ಲಾ ಖಾನ್ ಕುರಿತ ಅಧ್ಯಯನಕ್ಕೆ ಐದು ದಿನಗಳ ಕಾಲ ವಾರಣಾಸಿಯಲ್ಲಿ ಇದ್ದಾಗ, ಕನ್ನಡಿಗ ಗೌತಮ್ ಎಂಬುವರು ಜಿಲ್ಲಾಧಿಕಾರಿಯಾಗಿದ್ದರು. ಬೆಳಿಗ್ಗೆಯಿಂದ ಅವರ ಸಂಪರ್ಕಕ್ಕೆ ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ.ಗಾಂಧಿ ಚಿಂತನೆಗಳ ಅಧ್ಯಯನ ಕೇಂದ್ರ ಇರುವ ಜಾಗವು ರೈಲ್ವೆ ಇಲಾಖೆಗೆ ಸೇರಿದ ಸ್ಥಳ ಎಂದು ಗುರುತಿಸಲಾಗಿದೆ. ಒಟ್ಟು ಹತ್ತು ಕಟ್ಟಡಗಳನ್ನು ಹಾಗೂ ಹದಿನಾಲ್ಕು ಎಕರೆ ಪ್ರದೇಶವನ್ನು ಸ್ಥಳಿಯ ಆಡಳಿತ ತನ್ನ ವಶಕ್ಕೆ ಪಡೆದಿದೆ. ಹಿಂದಿನ ಅರವತ್ತು ವರ್ಷಗಳಲ್ಲಿ ಕಾಣದ ವಿವಾದ ಈಗ ಗೋಚರವಾಗಿದೆ. ಏಕೆಂದರೆ, ಗಾಂಧಿ ಮತ್ತು ಅವರ ಅಭಿಮಾನಿಗಳಿಂದ ಬಿ.ಜೆ.ಪಿ.ಗೆ ಮತ ದಕ್ಕುವುದಿಲ್ಲ. ಗೋಡ್ಸೆ ಅಥವಾ ಸಾವರ್ಕರ್ ಕಟ್ಟಡವಾಗಿದ್ದರೆ ಅವರಿಗೆ ಯಾವ ಸಮಸ್ಯಸೆಯೂ ಇರುತ್ತಿರಲಿಲ್ಲ.ಬಾಯಲ್ಲಿ ಶಾಂತಿ ಮಂತ್ರ, ಕೈಯಲ್ಲಿ ದೊಣ್ಣೆ ಎನ್ನುವ ಹಾಗೆ ವರ್ತಿಸುತ್ತಿರುವ ಈ ದೇಶದ ಪ್ರಧಾನಿಗೆ ಗಾಂಧಿ ಸ್ಮಾರಕಗಳನ್ನು ಉಳಿಸುವ ಯಾವ ಆಸಕ್ತಿಯೂ ಇಲ್ಲ. ಒಂದು ವೇಳೆ ಆ ಪ್ರದೇಶವು ರೈಲ್ವೆ ಇಲಾಖೆಗೆ ಸೇರಿದ್ದರೆ, ಗಾಂಧಿ ಅಧ್ಯಯನ ಕೇಂದ್ರಕ್ಕೆ ಬೇರೆಡೆ ಕನಿಷ್ಠ ಎರಡು ಎಕರೆ ಜಾಗ ನೀಡುವಷ್ಟು ಅಧಿಕಾರ ಪ್ರಧಾನಿಗೆ ಇಲ್ಲವೆ? ಕಳೆದ ಒಂದು ತಿಂಗಳಿನಿಂದ ನೂರಕ್ಕೂ ಹೆಚ್ಚು ಮಂದಿ ಗಾಂಧಿವಾದಿಗಳು ವಾರಣಾಸಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರಧಾನಿ ವಾರಣಾಸಿಗೆ ಭೇಟಿ ನೀಡಿದಾಗ ಅವರಿಗೆ ಮನವಿ ಸಲ್ಲಿಸಲು ಪ್ರಯತ್ನಿಸಿದಾಗ ಭೇಟಿಗೆ ಅವಕಾಶ ನಿರಾಕರಿಸಲಾಯಿತು.ನಿನ್ನೆ ಮಹಾರಾಷ್ಟ್ರದ ವಾರ್ಧಾದ ಗಾಂಧಿ ಸೇವಾ ಗ್ರಾಮ ಸಂಘಟನೆಯ ಅಧ್ಯಕ್ಷ ಚಂದನ್ ಪಾಲ್ ಮತ್ತು ವಾರಣಾಸಿ ಘಟಕದ ಅಧ್ಯಕ್ಷ ರಾಮ್ ಧೀರಜ್ ಸೇರಿದಂತೆ ಆರು ಮಂದಿಯನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ನವೀಕರಣದ ಹೆಸರಿನಲ್ಲಿ ಅಹಮದಾಬಾದಿನ ಸಬರಮತಿ ಆಶ್ರಮವನ್ನು ವಿಕೃತಗೊಳಿಸಿ, ಗಾಂಧೀಜಿಯವರ ಸರಳ ಹಾಗೂ ಮಿತವ್ಯಯ ಚಿಂತನೆಗಳನ್ನು ಗಾಳಿಗೆ ತೂರಲಾಗಿದೆ. ಇದೇ ಕೇಂದ್ರ ಸರ್ಕಾರವು ಈಗ ವಾರ್ಧಾದ ಸೇವಾ ಗ್ರಾಮದ ಆಧುನಿಕರಣಕ್ಕೆ ಕೈ ಹಚ್ಚಲು ನಿರ್ಧರಿಸಿದೆ. ಒಟ್ಟಿನಲ್ಲಿ ಅಭಿವೃದ್ಧಿಯ ನೆಪದಲ್ಲಿ ಭಾರತದಲ್ಲಿ ಗಾಂಧಿ ಮತ್ತು ಅವರ ಚಿಂತನೆಗಳು ಶಾಶ್ವತವಾಗಿ ಉಳಿಯಬಾರದು ಎಂಬುದು ಸಂಘ ಪರಿವಾರದ ಮರೆ ಮಾಚಿದ ಗುರಿ ಎಂಬಂತೆ ಕಾಣುತ್ತಿದೆ.(ಜಗದೀಶ್ ಕೊಪ್ಪ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments