Saturday, December 21, 2024
Homeಸಾಹಿತ್ಯಡಾ.ಕೆ.ಶರೀಫಾ ಅವರ ನೀರೊಳಗಣ ಕಿಚ್ಚು ಕೃತಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ

ಡಾ.ಕೆ.ಶರೀಫಾ ಅವರ ನೀರೊಳಗಣ ಕಿಚ್ಚು ಕೃತಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ

ಈ ಬಾರಿಯ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಕನ್ನಡದ ಹಿರಿಯ ಮುಸ್ಲಿಂ ಲೇಖಕಿಯೂ, ಕನ್ನಡದ ಮೊದಲ ಮುಸ್ಲಿಂ ಕವಯತ್ರಿಯೂ ಆದ ಡಾ.ಕೆ.ಶರೀಫಾ ಅವರ ನೀರೊಳಗಣ ಕಿಚ್ಚು ಕೃತಿಗೆ ಸಂದಿದೆ. ಈ ಸಂದರ್ಭದಲ್ಲಿ ಅಮ್ಮಿಯಂತಹ ಸಾಹಿತಿಯ ಕುರಿತು ನಾಲ್ಕು ಮಾತು ಬರೆಯಲೇಬೇಕಿನಿಸುತ್ತಿದೆ.

ಶರೀಫಾ ಅವರ ಕಾವ್ಯವನ್ನು ನಾನು ಮೊದಲ ಬಾರಿ ಓದಿದ್ದು ಗೌರಿ ಲಂಕೇಶ್‌ನಲ್ಲಿ. ಅದೊಂದು ಸಂಕೀರ್ಣ ಸಂದರ್ಭ.ಬುರ್ಖಾ ಕುರಿತು ಸಂಘಿಗಳು ರಾಡಿಯೆಬ್ಬಿಸಿದ್ದ ದಿನಗಳವು.ನಮ್ಮ ದಕ್ಷಿಣ ಕನ್ನಡದ ಬಂಟ್ವಾಳದ ಎಸ್.ವಿ.ಎಸ್.ಕಾಲೇಜಿನ ವಿದ್ಯಾರ್ಥಿನಿ ಆಯಿಶಾ ಅಸ್ಮೀನ್ ಎಂಬಾಕೆಗೆ ಬುರ್ಖಾ ತೊಡುವ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿತ್ತು. ಆಗ .ಸಾರಾ ಅಬೂಬಕರ್ ಬುರ್ಖಾದ ವಿರುದ್ಧ ಮಾತನಾಡಿ ಕಾಲೇಜಿನವರ ಧೋರಣೆಗೆ ಪರೋಕ್ಷ ಬೆಂಬಲ ನೀಡಿದ್ದರು. ಆಗ ನಾನು ಕರಾವಳಿ ಅಲೆ ಪತ್ರಿಕೆಯಲ್ಲಿ ಬರೆದಿದ್ದ ” ಬುರ್ಖಾ ಮತ್ತು ಸ್ವಾತಂತ್ರ್ಯ ” ಎಂಬ ಲೇಖನದಲ್ಲಿ‌ ಸಾರಾ ಅಬೂಬಕರ್ ಅವರಿಗೆ ಚುಚ್ಚಿದ್ದೆ ಕೂಡಾ.
ಅದೇ ಸಂದರ್ಭದಲ್ಲಿ ಗೌರಿಯಕ್ಕ ತನ್ನ ಸಂಪಾದಕೀಯ ಅಂಕಣ “ಕಂಡ ಹಾಗೆ”ಯ ಪಕ್ಕವೇ ಬುರ್ಖಾ ಪ್ಯಾರಡೈಸ್ ಎಂಬ ಕವನವೊಂದನ್ನು ಪ್ರಕಟಿಸಿದ್ದರು.ಕವಯತ್ರಿಯ ಹೆಸರು ಕೆ.ಶರೀಫಾ.
ಆ ಕವನ ನಾನು ಆ ವರೆಗೂ ಯೋಚಿಸಿಯೇ ಇರದ ಬುರ್ಖಾದ ಇನ್ನೊಂದು ಮಗ್ಗುಲನ್ನು ಪರಿಚಯಿಸಿತು.
ಕವನದ ಒಟ್ಟು ಆಶಯ ಬುರ್ಖಾದ ಪರ ವಿರೋಧ ಮಾತನಾಡುವ ಯಾರಿಗೂ ಹರಕಲು ಬುರ್ಖಾ ತೊಟ್ಟ ಬುರ್ಖಾದೊಳಗಿನ ಜೀವದ ಭಾವನೆಗಳು ಬೇಕಾಗಿಲ್ಲ.ಉಳ್ಳವರಿಗೆ ಬುರ್ಖಾ ಕೂಡಾ ಇಂದು ಫ್ಯಾಶನ್ ಆಗಿದ್ದರೆ ಇಲ್ಲದವರಿಗೆ ಅದು ತಮ್ಮ ಬಡತನವನ್ನು ಮುಚ್ಚುವ ಪರದೆಯೂ ಹೌದು.

ಶರೀಫಾ ಸ್ವತಃ ಬುರ್ಖಾ ತೊಡುವುದಿಲ್ಲ.ಆದರೆ ಬುರ್ಖಾ ಕುರಿತು ವಿವಾದವೆದ್ದಾಗೆಲ್ಲಾ ಬುರ್ಖಾ ತೊಡುವ ಹೆಣ್ಮಕ್ಕಳ ಹಕ್ಕು ಮತ್ತು ಸ್ವಾತಂತ್ರ್ಯದ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಾರೆ.ಸಂಘ ಪರಿವಾರದ ಷಡ್ಯಂತ್ರಗಳ ವಿರುದ್ಧ ನಿಷ್ಟೂರವಾಗಿ ಮಾತನಾಡುತ್ತಾರೆ. ಬುರ್ಖಾ ಎಂಬ ಉಡುಗೆ ಅವರ ಸಮಸ್ಯೆಯಲ್ಲ. ಬುರ್ಖಾ ತೊಡುವ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಸಾಧನೆಯ ಉತ್ತುಂಗಕ್ಕೇರುತ್ತಿರುವುದು ಅವರಿಗಾಗುತ್ತಿರುವ ಸಮಸ್ಯೆ ಎಂದು ವಾದಿಸುವ ಶರೀಫಾರನ್ನು ನೋಡುವಾಗ ಇವರೇನಾ ಬುರ್ಖಾ ತೊಡದ ಶರೀಫಾ ಎಂದೆನಿಸದಿರದು.

ಕಲ್ಯಾಣ ಕರ್ನಾಟಕ ಮೂಲದ ಉರ್ದು ಮನೆಭಾಷಿಕ ಶರೀಫ ಶಿವಶರಣೆ ಅಕ್ಕ ಮಹಾದೇವಿಯ ಬಂಡಾಯ ಪ್ರವೃತ್ತಿಯಿಂದ ಹೈಸ್ಕೂಲ್ ದಿನಗಳಿಂದಲೇ ಪ್ರಭಾವಿತರಾದವರು. ಹೈಸ್ಕೂಲ್ ದಿನಗಳಲ್ಲೇ ವಚನಗಳನ್ನು ಬರೆಯಲಾರಂಭಿಸಿದ ಶರೀಫರ ಮೊದಲ ಪ್ರಕಟಿತ ಕವನ ಫ್ಯಾಶನ್‌. ಸಾರಾ ಅಬೂಬಕರ್, ಭಾನು ಮುಶ್ತಾಕ್‌ರಂತಹ ಮುಸ್ಲಿಂ ಲೇಖಕಿಯರಂತೆಯೇ ಶರೀಫಾರಿಗೂ ಲಂಕೇಶರೇ ಗಾಡ್ ಫಾದರ್ ಎಂದರೂ ತಪ್ಪಾಗದು. ಲಂಕೇಶ್ ಪತ್ರಿಕೆಯ ಆರಂಭದ ದಿನಗಳಲ್ಲಿ ಅದರಲ್ಲಿ ಕವಿತೆ ಬರೆದಿದ್ದ ಶರೀಫಾರನ್ನು ಅಭಿನಂದಿಸಿ ಲಂಕೇಶ್ ಮೇಷ್ಟ್ರು ಹದಿನೈದು ಪೈಸೆಯ ಕಾರ್ಡು ಬರೆದು ಅಭಿನಂದಿಸಿದ್ದರಂತೆ.ಮುಂದೆ ಅವರ ಬರಹಗಳನ್ನು ಪ್ರಕಟಿಸುವ ಮೂಲಕ ಅವರಿಗೆ ಆರಂಭದ ದಿನಗಳಿಂದಲೂ ಬೆಂಬಲ ನೀಡಿದ ಲಂಕೇಶರೇ ಹೇಳುವಂತೆ ಶರೀಫಾ ಕನ್ನಡದ ಮೊದಲ ಮುಸ್ಲಿಂ ಕವಯತ್ರಿ.

ಅತ್ಯಂತ ಜೀವನೋತ್ಸಾಹಿ ಶರೀಫ ಈಗಾಗಲೇ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ, ಕತೆ, ವಿಮರ್ಶೆ, ಗ್ರಂಥ ಸಂಪಾದನೆ ಇತ್ಯಾದಿಗಳೆಂದು ಇಪ್ಪತ್ತಾರು ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ ಅವರ ಆರು ಕೃತಿಗಳು ಅಚ್ಚಿಗೆ ಸಿದ್ಧಗೊಳ್ಳುತ್ತಿದೆ.ಚಳವಳಿಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಮಾತೃ ಹೃದಯಿ ಶರೀಫರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿತ್ತು.ಅದಾಗಿ ಇನ್ನೂ ವಾರ ಕಳೆಯುವ ಮುನ್ನವೇ ಅವರಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿಯೂ ಬಂದಿದೆ.ಶರೀಫಾರಂತಹ ನೇರ ನಿಷ್ಟುರ ಹಿರಿಯ ಸಾಹಿತಿಯ ಕೊರಳಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಬೀಳುವ ಮೂಲಕ ಅದೂ ಕೂಡಾ ತನ್ನ ಮೌಲ್ಯ ಹೆಚ್ಚಿಸಿದೆ.

-ಇಸ್ಮತ್ ಪಜೀರ್

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments