ದಾವಣಗೆರೆ:ದಿನಾಂಕ 5.6.2024 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಇಲ್ಲಿ ಕಾಲೇಜಿನ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಕಾಲೇಜಿನ ಆವರಣದಲ್ಲಿ ವಿವಿಧ ಬಗೆಯ 20 ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಾದಾಪೀರ್ ಬಿ.ಸಿ.ಯವರು ವಹಿಸಿದ್ದರು. ಪಂಚಭೂತಗಳಾದಂತಹ ಗಾಳಿ, ನೀರು, ಮಣ್ಣು ಇವುಗಳ ಪಾವಿತ್ರ್ಯತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ವಿದ್ಯಾರ್ಥಿಗಳು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು, ಹಸಿರೀಕರಣವನ್ನು ಮಾಡುವುದು ನಮ್ಮ ಇಂದಿನ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಎಂದು ತಿಳಿಸಿದರು. ಕಾಲೇಜಿನ ಎನ್. ಸಿ. ಸಿ.,ಎನ್. ಎಸ್. ಎಸ್. ಸಾಂಸ್ಕೃತಿಕ ವೇದಿಕೆ, ರೋವರ್ಸ್ ಅಂಡ್ ರೇಂಜರ್ಸ್, ಕಾಲೇಜಿನ ಮಹಿಳಾ ಕೋಶ, ರೆಡ್ ಕ್ರಾಸ್ ಹಾಗೂ ಪರಿಸರ ವೇದಿಕೆ ಸಂಚಾಲಕರು, ಕಾಲೇಜಿನ ಎಲ್ಲ ಪ್ರಾಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ದರು.
ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ನಾಗೇಂದ್ರ ನಾಯ್ಕ್ ಕೆ. ವಿಶ್ವ ಪರಿಸರ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು. ಮನುಷ್ಯ ಇಂದು ಪರಿಸರ ಸಂಬಂಧಿ ಸಮಸ್ಯೆಗಳಾದಂತಹ ಜಾಗತಿಕ ತಾಪಮಾನದ ಅತಿಯಾದ ಏರಿಕೆ,ಅಂತರ್ಜಲದ ಅತಿಯಾದ ಇಳಿಕೆ, ಆಮ್ಲ ಮಳೆ, ಓಜೋನ್ ಪದರದ ನಾಶ, ಘನ ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳು ಮನುಷ್ಯನ ಮಾನವ ಕೇಂದ್ರಿತ ಪರಿಸರ ನೈತಿಕತೆಯ ಕಾರಣ ಅನುಭವಿಸುತ್ತಿದ್ದೇವೆ ಆದ್ದರಿಂದ ನಾವು ಪರಿಸರ ಕೇಂದ್ರಿತ ನೈತಿಕತೆಯನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆ ಕುರಿತ ವಿದ್ಯಾರ್ಥಿಗಳ ಪಾತ್ರದ ಕುರಿತು ಮಾತನಾಡಿದರು.