*ಸಿಟ್ಟಿನ ಕೈಗೆ ಬುದ್ಧಿ ಕೊಡುವುದರಿಂದಲೋ "ನೈತಿಕತೆಯ ಪ್ರತಿ ಮೂರ್ತಿಯೇ ತಾವು" ಎನ್ನುವ ಹಮ್ಮಿನಿಂದಲೋ ಅಥವಾ ಸ್ವಾರ್ಥದ ಪಂಕದಲ್ಲಿ ಮಿಂದಿರುವ ಕಾರಣವಾಗಿ ವಿವೇಕ ಮತ್ತು ಮುಂದಾಲೋಚನೆಯ ಕೊರತೆಯಿಂದಲೋ ಏನೋ, ಒಟ್ಟಾರೆ ಕೆಲವೊಂದು ಅವಘಡಗಳಿಗೆ ಮನುಷ್ಯ ಕಾರಣನಾಗಿ ಬಿಡುತ್ತಾನೆ. ಅಂದರೆ ಮಾರಣಾಂತಿಕ ಹಲ್ಲೆಗೈಯ್ಯುತ್ತಾನೆ, ಕೊಲೆಯನ್ನೂ ಮಾಡಿಬಿಡುತ್ತಾನೆ. ಕಹಿ ನಡೆ, ನುಡಿಗಳನ್ನು ಪ್ರದರ್ಶಿಸಿಬಿಡುತ್ತಾನೆ. ಅದೆಲ್ಲವೂ ಸರಿ, ಅದರಿಂದಾಗುವ ಪರಿಣಾಮವೆಂದರೆ ಜೈಲು ಶಿಕ್ಷೆ, ಶತ್ರುತ್ವ, ಬಂಧುಗಳ ಸಂಪರ್ಕ ಕಡಿತ, ಆಮೇಲೆ ಸಮಾಜದಲ್ಲಿ ಆತನಿಗೆ ನಿರೀಕ್ಷಿಸದಷ್ಟು ಸ್ಥಾನಮಾನದ ಕೊರತೆ, ಮಾನಸಿಕ ವೇದನೆ, ಪಶ್ಚಾತ್ತಾಪ ಇವುಗಳಷ್ಟೇ ಬಳುವಳಿಯಾಗಿ ಬಿಡುತ್ತವೆ. ಆದ್ದರಿಂದಲೇ ಬದುಕಿನ ನೆಮ್ಮದಿ ಕೆಡುವಂತಹ, ವ್ಯಕ್ತಿತ್ವ ಅಳಿಸಿ ಹೋಗುವಂತಹ, ಪಶ್ಚಾತ್ತಾಪ ಪಡುವಂತಹ ಯಾವುದೇ ಕಾರ್ಯಗಳನ್ನು ಮಾಡಬಾರದು. ಹಾಗೆ ಮಾಡುವುದೇ ಆದರೆ ಅದರಿಂದಾಗುವ ಸಾಧಕ-ಬಾಧಕಗಳ ಬಗ್ಗೆ ವಿವೇಚಿಸುವ ಸಲಹೆ, ಮಾರ್ಗದರ್ಶನ ತೆಗೆದುಕೊಳ್ಳುವ ನಡೆಯಾದರೂ ನಡೆಯಬೇಕು. ಇಲ್ಲದಿದ್ದರೆ ಸಿಟ್ಟಿನಲ್ಲಿ ಕೊಯ್ದುಕೊಂಡ ಮೂಗು ಮರಳಿ ಬರುವುದಿಲ್ಲ. ಇಷ್ಟೆಲ್ಲಾ ತಿಳಿದಿದ್ದರೂ ಮನುಷ್ಯ ಕೆಲವೊಮ್ಮೆ ಬುದ್ಧಿಹೀನನಂತೆ ಕೆಲವೊಂದು ಆಚಾತುರ್ಯಗಳನ್ನು ಎಸೆದು ಬಿಡುತ್ತಾನೆ, ಅವುಗಳಲ್ಲಿ ವಿವಾಹ ನಂತರದ "ಡೈವೋರ್ಸ್" ಕೊಡುವುದೂ ಸಹ ಒಂದೆನ್ನಬಹುದು.*
*ಅತಿ ಆಧುನಿಕತೆಯನ್ನು ಅಪ್ಪಿಕೊಂಡಿರುವ ಮನುಷ್ಯ ಸ್ವಾತಂತ್ರ್ಯ-ಸ್ವೇಚ್ಛಾಚಾರದ ನಡುವಿನ ಅಂತರ, ಭಾವನಾತ್ಮಕತೆ-ಸಂಬಂಧಗಳ ಬೆಲೆ, ತಾಳ್ಮೆ, ಸಂಯಮದ ಪರಿಪಾಠ ಮೊದಲಾದವುಗಳನ್ನು ತಿಳಿಯದವನಾಗಿದ್ದಾನೆ. ಹಿರಿಯರು ಅನುಸರಿಸಿಕೊಂಡು, ಉಳಿಸಿಕೊಂಡು ಬಂದ ದಾಂಪತ್ಯದ ಆ ಸೆಲೆಯನ್ನು ಆಪೋಷನ ತೆಗೆದುಕೊಳ್ಳುವ ಮಟ್ಟಿಗೆ ಮುಂದುವರೆದಿದ್ದಾನೆ. ಅದರ ಫಲವೆಂಬಂತೆ ಸಣ್ಣ-ಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ತನ್ನ ವೈವಾಹಿಕ ಬದುಕಿನ ಬುಡಕ್ಕೆ ಕೊಡಲಿ ಪೆಟ್ಟಾಗುವ "ಡೈವೋರ್ಸ್" ಎನ್ನುವ ಪಿಡುಗಿಗೆ ಬಲಿಯಾಗುತ್ತಿದ್ದಾನೆ. ನೂರು ವಿಚ್ಛೇದಿತ ಪ್ರಕರಣಗಳಲ್ಲಿ ಗಂಭೀರವಾದ ಎಂಟು ಹತ್ತು ಪ್ರಕರಣಗಳು ಮಾತ್ರ ದಾಖಲಾಗಿದ್ದರೆ, ಇನ್ನುಳಿದ 90ರಷ್ಟು ಪ್ರಕರಣಗಳು ಕ್ಷುಲ್ಲಕ ಕಾರಣಗಳಿಗಾಗಿ ಕೋರ್ಟ್ ಮೆಟ್ಟಿಲೇರಿವೆ ಎಂದರೆ ಸಂಬಂಧಗಳ ಜೊತೆಗೆ ಮನುಷ್ಯ ಆಟವಾಡುತ್ತಿರುವ ಪರಿಯನ್ನು ಅರಿಯಬಹುದು. ಅಂತಹ ಕ್ಷುಲ್ಲಕ ಕಾರಣಗಳ ಸರಿಸುಮಾರು 75 ಸಾವಿರದಷ್ಟು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿರುವ ಕೇಸುಗಳು ರಾಜ್ಯದ ಹೈಕೋರ್ಟ್ ಒಂದರಲ್ಲೇ ದಾಖಲಾಗಿವೆ ಎಂದರೆ ಅದರ ತೀವ್ರತೆಯನ್ನು ಸುಲಭವಾಗಿ ಅಳೆಯಬಹುದು.*
*ಶಿಕ್ಷಣದ ವ್ಯಾಪಕತೆ, ಸ್ವಾವಲಂಬಿಯಾಗಿ ಬದುಕಬಲ್ಲೆನೆಂಬ ನಂಬಿಕೆ ಅಥವಾ ಅದಕ್ಕಿಂತಲೂ ಮೇಲ್ಪಟ್ಟ ವೇತನದ ಧೈರ್ಯ, ಗಂಡ/ಹೆಂಡತಿಯು ಹೇಳಿದಂತೆ ಕೇಳಿ ನಡೆಯುವುದೇ ಅಪಮಾನ ಎನ್ನುವ ಭ್ರಮೆ, ಅಪನಂಬಿಕೆ ಎನ್ನುವ ಭೂತದ ಆವಾಹನೆ, ಅನ್ಯ ವ್ಯಕ್ತಿತ್ವದೊಂದಿಗೆ ಹೋಲಿಕೆ, ಮಾನಸಿಕ ಚಾಂಚಲ್ಯ, ಪ್ರೀತಿ, ಪ್ರೇಮದ ಬಣ್ಣವು ಪೇಲವಾಯಿತು ಎನ್ನುವ ಭಾವ, ಸಾಮರಸ್ಯದಲ್ಲಿ ಅಭಾವ ಉಂಟಾಯಿತೆನ್ನುವ ಕಲ್ಪನೆ, ಅನ್ಯಾಕರ್ಷಣೆ, ಅನೈತಿಕ ಸಂಬಂಧಗಳು ಇವುಗಳಷ್ಟೇ ಡೈವೋರ್ಸ್ ಗಳಿಗೆ ಕಾರಣವಾಗಿರದೆ, ತಡವಾಗಿ ಮನೆಗೆ ಬರುವ, ನೈಟ್ ಶಿಫ್ಟ್, ಸತತ ಹೊರಗಿನ ಆಹಾರ ಸೇವನೆ, ಭಾವನಾತ್ಮಕ ಕೊರತೆ, ತನ್ನದೇ ನಡೆಯಬೇಕೆನ್ನುವ ಹಟ ಸಾಧನೆ, ಲೈಂಗಿಕ ಮಿಲನಕ್ಕೆ ಸ್ಪಂದಿಸದಿರುವುದು, ಗಂಡನ ವಸ್ತ್ರ ಸಂಹಿತೆಯನ್ನು ಪಾಲಿಸದಿರುವುದು, ನೆಮ್ಮದಿಯ ಬದುಕಿಗೆ ಕಂಪನಿ/ಕಾರ್ಪೋರೇಟ್/ಸಂಸ್ಥೆಯ ಕೆಲಸ ತ್ಯಜಿಸುವಂತೆ ಹೆಂಡತಿಗೆ ಹೇಳುವುದು, ಭರವಸೆಗಳನ್ನು ಈಡೇರಿಸದಿರುವುದು, ಹೊತ್ತಿಗೆ ಸರಿಯಾಗಿ ಊಟ, ಉಪಹಾರಗಳ ಅಲಭ್ಯತೆ, ಜೂಜು, ನಪುಂಸಕತೆ, ಶೋಷಣೆ, ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧ, ಕುಡಿತ ಇವೇ ಮೊದಲಾದವು ಡೈವೋರ್ಸ್ ಗೆ ಪ್ರಧಾನ ಕಾರಣಗಳಾಗುತ್ತಿವೆ.*
*ಹಿಂದೆ ಡೈವೋರ್ಸ್ ಕೇಸ್ ಗಳಿರಲಿಲ್ಲವೆಂದಲ್ಲ, ಇತ್ತು, ಆದರೆ ಕಡೆಯ ಮೂರು ನಾಲ್ಕು ಕಾರಣಗಳಿಗಾಗಿ ಅದು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದವು. ಹೊಂದಿಕೊಂಡು ನಡೆಯುವ, ಗಟ್ಟಿ ಪಾಠವನ್ನು ಜಟ್ಟಿಯಂತೆ ಮೈಗೂಡಿಸಿಕೊಂಡು 25/ 50/ 60 ವರ್ಷಗಳ ದೀರ್ಘ ದಾಂಪತ್ಯದ ಸವಿ ಉಣ್ಣುತ್ತಿದ್ದರು. ಅಲ್ಲಿ ಜಗಳಗಳಿರಲಿಲ್ಲ ಎಂದಲ್ಲ, ಆದರೆ ಆ ಜಗಳಗಳು ಮತ್ತಷ್ಟು ಪ್ರೀತಿಗೆ ಮುನ್ನುಡಿ ಬರೆಯುತ್ತಿದ್ದವು, ಮನಸ್ತಾಪಗಳು ಇಣುಕುತ್ತಿರಲಿಲ್ಲ ಎಂದಲ್ಲ. ಆದರೆ ಹಿರಿಯ, ಅನುಭವಿಗಳ ಮಧ್ಯಸ್ಥಿಕೆಯಿಂದ ಒಡನೆ ಕೊನೆಗಾಣುತ್ತಿದ್ದವು. ಪರಸ್ಪರ ಗುಣ-ಸ್ವಭಾವಗಳನ್ನು ಅರ್ಥೈಸಿಕೊಂಡು ಬಹುತೇಕ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಿಬಿಡುತ್ತಿದ್ದರು. ಆದರೆ ಅದನ್ನೆಲ್ಲ ಈಗಿನ ಐಟಿ /ಬಿಟಿ/ ಕಾರ್ಪೊರೇಟ್ /ವಿದ್ಯಾವಂತ ಆಧುನಿಕ ಮನಸ್ಥಿತಿಯವರ ಕುರಿತಾಗಿ ಹೇಳಲಾಗುವುದಿಲ್ಲ. ಕೆಲವೇ ದಿನಗಳ ಬಣ್ಣದ ಬದುಕನ್ನೇ ನಿಜವೆಂದು ನಂಬಿ ವಾಸ್ತವಿಕವಾದ ಬದುಕಿಗೆ ಕೊಳ್ಳಿ ಇಟ್ಟುಕೊಳ್ಳುವುದಕ್ಕೆ ಏನು ಬೇಕೋ ಬಹುತೇಕ ಅದನ್ನೆಲ್ಲ ಮಾಡಿಬಿಡುತ್ತಾರೆ. ಅದರಲ್ಲಿ ಡೈವೋರ್ಸ್ ಕೂಡ ಒಂದು. ಆದರೆ ಅದರ ಪರಿಣಾಮಗಳಿಂದ ಅಪರಿಚಿತರಾಗಿರುತ್ತಾರೆ. ಅದನ್ನು ಮುಂದಿನ ಭಾಗದಲ್ಲಿ ನೋಡೋಣ. ನೀವೇನಂತೀರಿ ?*
(ಶ್ರೀ ಶ್ರೀ ಶ್ರೀ ಗುರುವೆಂಕಪ್ಪಯ್ಯ ಒಡೆಯರ್ ಮಹಾಸ್ವಾಮಿಗಳು. ವಂಶಪಾರಂಪರ್ಯ ಧರ್ಮಾಧಿಕಾರಿಗಳು.ಪ್ರಧಾನ ಅರ್ಚಕರು. ಶ್ರೀ ಗುರು ಕಪಿಲಮುನಿ ಕಲಿಮೈಲಾರದ ಸಿಂಹಾಸನಾಧಿಶ್ವರರು.ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ. ಶ್ರೀ ಕ್ಷೇತ್ರ ಮೈಲಾರ ಹೂವಿನಹಡಗಲಿ ತಾಲ್ಲೂಕು. ವಿಜಯನಗರ ಜಿಲ್ಲೆ. 583217)