ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ ಇವರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು, ಕಲಮರಹಳ್ಳಿಯ ಹಳ್ಳಿಯ ಮಹದೇವಯ್ಯ ಮತ್ತು ಜಯಮ್ಮ ಇವರ ಎರಡನೆಯ ಪುತ್ತರನಾಗಿ ಜನಿಸಿದರು. ಮೋಹನ್ ಪ್ರದಾನ ಎಂಬ ಪೂರ್ವ ನಾಮದ ಇವರು ಆದ್ಯಾತ್ಮದ ಹಸಿವಿನಿಂದ 18 ನೇ ವಯಸ್ಸಿನಲ್ಲಿ ಮನೆಯನ್ನು ಬಿಟ್ಟು ಬಂದರು. ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಪ್ರಭಾವ, ಶರಣ ಸಾಹಿತ್ಯದ ಜೊತೆಗೆ ಎಲ್ಲ ಧರ್ಮಗಳ ಅಧ್ಯಯನವನ್ನು ಚಿತ್ರದುರ್ಗದ ಮುರುಘಾಮಠದಲ್ಲಿ ಕೈಗೊಂಡವರು. 2011ರಲ್ಲಿ ಕನಕ ಗುರು ಪೀಠಕ್ಕೆ ಸ್ವೀಕರಿಸಿದ ಇವರನ್ನು ಜನಗಳ ಒತ್ತಡದ ಮೇರೆಗೆ ಕಲಬುರ್ಗಿ ವಿಭಾಗಕ್ಕೆ ನೇಮಿಸಲಾಯಿತು. ಪ್ರಾರಂಭದ ನಾಲ್ಕು ವರ್ಷ ಸಿಂಧನೂರಿನಲ್ಲಿ ವಾಸ್ತವ್ಯ ಮಾಡಿ, 2004 ರಲ್ಲಿ ಕನಕ ಪೀಠದ 12 ನೇ ವಾರ್ಷಿಕೋತ್ಸವವನ್ನು ಅದ್ಬುತವಾಗಿ ಆಚರಿಸಿದರು. ನಂತರ ಕೃಷ್ಣಾ ನದಿಯ ದಂಡೆಯಲ್ಲಿ ರಾಯಚೂರು ಜಿಲ್ಲೆ, ದೇವದುರ್ಗ ತಾಲೂಕಿನ, ತಿಂಥಣಿಬ್ರಿಜ್ ಊರಿನಲ್ಲಿ, ಗುಡಿಸಿಲಿನಲ್ಲಿ ಪೀಠವನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿ ವರ್ಷ ಜನವರಿ 12, 13, 14 ರಂದು ಹಾಲುಮತ ಸಂಸ್ಕೃತಿ ವೈಭವವನ್ನು ಆಚರಿಸುತ್ತಾರೆ. ಈ ಕಾರ್ಯಕ್ರಮವು ಅಂತರ ರಾಜ್ಯಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಶ್ರೀಪೀಠದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೆ ಶಾಲೆಯನ್ನು ತೆರೆದು, ಉಚಿತ ದಾಸೋಹದೊಂದಿಗೆ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ ಬಂದಿರುತ್ತಾರೆ. ಬಾಗಲಕೋಟೆ ಜಿಲ್ಲೆಯ ಗುಡೂರಿನಲ್ಲಿ ಬಿಎ ಬಿಕಾಂ ಪದವಿ ಕಾಲೇಜನ್ನು, ಮುದ್ದೇಬಿಹಾಳದಲ್ಲಿ ಬಿಎ ಬಿಕಾಂ ಕಾಲೇಜನ್ನು ನಡೆಸುತ್ತಿದ್ದಾರೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜನ ಸಂಪರ್ಕಗಾಗಿ ಹಾಗೂ ಹಾಲುಮತ ಸಂಸ್ಕೃತಿಯ ಪ್ರಚಾರಕ್ಕಾಗಿ 9 ಜಿಲ್ಲೆಗಳ ಪ್ರವಾಸ ಮಾಡುತ್ತಾ ಹಸಿರುಕ್ರಾಂತಿಗಾಗಿ ಸಹಸ್ರಾರು ಗಿಡಗಳನ್ನು ಹಂಚುತ್ತಾರೆ. ಹಲವಾರು ಪುಸ್ತಕಗಳನ್ನು ಮಠದಿಂದ ಪ್ರಕಟಿಸಿರುತ್ತಾರೆ. ಪ್ರತಿವರ್ಷ ಪೂಜ್ಯರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯ ಹಾಲವರ್ತಿಯಲ್ಲಿ ಮತ್ತು ಕುಷ್ಟಗಿ ತಾಲೂಕಿನ ಬಾದಿಮನಾಳದ ಶಾಖಾಮಠಗಳಲ್ಲಿ ಸಾಮೂಹಿಕ ವಿವಾಹವನ್ನು ನೆರವೇರಿಸಿಕೊಡುತ್ತಾರೆ. ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಮಠದಿಂದ ಆಯೋಜಿಸುತ್ತಾರೆ. ಪ್ರತಿ ವರ್ಷ ಸಾಹಿತ್ಯ, ಸಮಾಜಸೇವೆ ಮಾಡಿದ ಮೂವರು ಗಣ್ಯರಿಗೆ ಹಾಲುಮತ ಭಾಸ್ಕರ, ಕನಕ ರತ್ನ, ಸಿದ್ಧ ಶ್ರೀ ಹೆಸರಿನ ಲ್ಲಿ ಪ್ರಶಸ್ತಿ ಪ್ರಧಾನವನ್ನು ನೀಡಿ ಗೌರವಿಸುತ್ತಾರೆ. ಸಾವಿರಾರು ವರ್ಷಗಳಿಂದ ದಾಸೋಹವೆ ಇಲ್ಲದಿದ್ದ, ಲಕ್ಷಾಂತರ ಜನರು ಸೇರುವ ಹುಲಿಜಂತಿ ಕ್ಷೇತ್ರದಲ್ಲಿ ದಾಸೋಹವನ್ನು ಪ್ರಾರಂಭಿಸಿದ ಕೀರ್ತಿ ಸಿದ್ದರಾಮಾನಂದ ಶ್ರೀಗಳಿಗೆ ಸಲ್ಲುತ್ತದೆ. ‘ಪುರಿ’ ಹೆಸರು ಹಾಲುಮತ ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಮನಗೊಂಡು ಶ್ರೀ ಬೀರೇಂದ್ರ ಕೇಶವ ತಾರಕಾನಂದ ಸ್ವಾಮೀಜಿಯರಿಗೆ ಮನಗಾಣಿಸಿ, ಪುರಿ ಹೆಸರನ್ನು ತ್ಯಜಿಸಿದರು.