ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪ್ರಕಾಶ ಪಿ.ಬಿ. ಮತ್ತು ಪೊಲೀಸ್ ನೀರಿಕ್ಷಕರು ಶ್ರೀ ಸೋಮಶೇಖರ್ ಅವರ ಗೌರವಾನ್ವಿತ ಸಮ್ಮುಖದಲ್ಲಿ, ಜುಲೈ 12, 2025 ರ ಶನಿವಾರ ಡಿಎಆರ್ ಆವರಣದಲ್ಲಿ ಡಿಎಆರ್ ಪೊಲೀಸ್ ಸಿಬ್ಬಂದಿಗೆ “ಸಂವಾದ ವಿಧಾನದ ಮೂಲಕ ಸಂಘರ್ಷ ಪರಿವರ್ತನೆ” ಕಾರ್ಯಾಗಾರವನ್ನು ಕ್ಷೇತ್ರ ಫೌಂಡೇಶನ್ ಫಾರ್ ಡೈಲಾಗ್ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಯಿತು.
ಈ ಅಧಿವೇಶನವು ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ಕೆಲಸಕ್ಕೆ ಸಂಬಂಧಿಸಿದ ಒತ್ತಡವನ್ನು ನಿರ್ವಹಿಸಲು, ಕುಟುಂಬ ಸಂಬಂಧಗಳನ್ನು ಬಲಪಡಿಸಲು ಹಾಗು ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಅನುಭವಾತ್ಮಕ ಚಟುವಟಿಕೆ ಮತ್ತು ವಿಮರ್ಶಾತ್ಮಕ ಚಿಂತನ ಪ್ರಕ್ರಿಯೆಗಳ ಮೂಲಕ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪ್ರಕಾಶ ಪಿ.ಬಿ. ಇವರು “ಒಲೆ ಚೆನ್ನಾಗಿದ್ರೆ ತಲೆ ಚೆನ್ನಾಗಿರುತ್ತೆ ಎಂಬ ಗಾಧೆ ಮಾತು ಹೇಳುತ್ತಾ ಮನೆಯೊಳಗೇ ಎಲ್ಲ ಚೆನ್ನಾಗಿದ್ರೆ ನೀವು ಚೆನ್ನಾಗಿರ್ತೀರಿ, ಹಾಗೆ ಮನೆಯವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳ ಬೇಕು. ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನವನ್ನು ತೆಗೆದುಕೊಳ್ಳಿ.” ಎಂದು ಒತ್ತಿ ಹೇಳಿದರು.
ಕಾರ್ಯಾಗಾರದ ಶಿಬಿರಾರ್ಥಿಗಳು ತಮ್ಮ ಸಕಾರಾತ್ಮಕ ಕಲಿಕೆಯ ಅನುಭವಗಳನ್ನು ಹಂಚಿಕೊಂಡರು.
ಒಬ್ಬ ಶಿಬಿರಾರ್ಥಿ “ಮಾನಸಿಕ ಒತ್ತಡಗಳು ಅಥವಾ ಕಠಿಣ ಪರಿಸ್ಥಿತಿಗಳು ಬಂದಾಗ—ಅದು ಮೇಲಧಿಕಾರಿಗಳು, ಕುಟುಂಬದವರು ಅಥವಾ ಸ್ನೇಹಿತರು, ಯಾರಿಗೂ ಹೇಳಲಾಗದಂತಹ ಸಂದರ್ಭಗಳಿದ್ದರೂ, ಅವುಗಳನ್ನು ನಾವೇ ಹೇಗೆ ನಿಭಾಯಿಸಬಹುದು ಎಂಬ ಧೈರ್ಯ ಈ ಕಾರ್ಯಕ್ರಮದಿಂದ ಬಂದಿದೆ,” ಎಂದು ಹೇಳಿದರು.
ಮತ್ತೊಬ್ಬ ಶಿಬಿರಾರ್ಥಿ “ನನಗೆ ಕಾರ್ಯಾಗಾರದಲ್ಲಿ ಬಹಳ ಇಷ್ಟವಾದದ್ದು ಆಲಿಸುವಿಕೆ, ಒಂದು ಸಮಸ್ಯೆ ಬಂದಾಗ ನಾವು ಸಮಾಧಾನದಿಂದ ಆಲಿಸಬೇಕು, ನಂತರ ‘ಏಕೆ’ ಮತ್ತು ‘ಏನು’ ಎಂಬ ಪ್ರಶ್ನೆಗಳನ್ನು ಕೇಳುವುದರ ಮೂಲಕ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬಹುದು,” ಎಂದು ಹಂಚಿಕೊಂಡರು.
ಈ ಕಾರ್ಯಾಗಾರವನ್ನು ಕ್ಷೇತ್ರ ಸಂಸ್ಥೆಯ ಸಮುದಾಯ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಸಿದ್ದಾರೂಡ ಪಿ.ಎಂ. ಸುಗಮಗಾರಿಕೆ ಮಾಡಿದರು ಮತ್ತು ದಾವಣಗೆರೆ ಜಿಲ್ಲಾ ಪೊಲೀಸ್‌ನ ಯೋಗಕ್ಷೇಮ ಅಧಿಕಾರಿ ಶ್ರೀ ರಂಜಿತ್ ಗೌಡ ಸಂಯೋಜಿಸಿದರು.
ಇಲ್ಲಿಯವರೆಗೆ, 100 ಕ್ಕೂ ಹೆಚ್ಚು ಜಿಲ್ಲಾ ಪೊಲೀಸ್ ಸಿಬ್ಬಂದಿಗೆ ಸಂವಾದ ವಿಧಾನದ ಕುರಿತು ತರಬೇತಿ ನೀಡಲಾಗಿದ್ದು, ಜಿಲ್ಲೆಯಾದ್ಯಂತ 1500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಲು ದಾವಣಗೆರೆ ಜಿಲ್ಲಾ ಪೊಲೀಸ್ ಮತ್ತು ಕ್ಷೇತ್ರ ಸಂಸ್ಥೆ ನಡುವೆ ಒಡಂಬಡಿಕೆಯಾಗಿದೆ.