ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪ್ರಕಾಶ ಪಿ.ಬಿ. ಅವರ ಗೌರವಾನ್ವಿತ ಸಮ್ಮುಖದಲ್ಲಿ, ಆಗಸ್ಟ್ 10, 2025 ರ ಶನಿವಾರ ಡಿಎಆರ್ ಆವರಣದಲ್ಲಿ ಡಿಎಆರ್ ಪೊಲೀಸ್ ಸಿಬ್ಬಂದಿಗೆ “ಸಂವಾದ ವಿಧಾನದ ಮೂಲಕ ಸಂಘರ್ಷ ಪರಿವರ್ತನೆ” ಕಾರ್ಯಾಗಾರವನ್ನು ಕ್ಷೇತ್ರ ಫೌಂಡೇಶನ್ ಫಾರ್ ಡೈಲಾಗ್ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಯಿತು.
ಈ ಅಧಿವೇಶನವು ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ಕೆಲಸಕ್ಕೆ ಸಂಬಂಧಿಸಿದ ಒತ್ತಡವನ್ನು ನಿರ್ವಹಿಸಲು, ಕುಟುಂಬ ಸಂಬಂಧಗಳನ್ನು ಬಲಪಡಿಸಲು ಹಾಗು ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಂವಾದ ವಿಧಾನವು ಹೇಗೆ ಪರಿಣಾಮಕಾರಿ ಎಂಬುದನ್ನು ಅನುಭವಾತ್ಮಕ ಚಟುವಟಿಕೆ ಮತ್ತು ವಿಮರ್ಶಾತ್ಮಕ ಚಿಂತನ ಪ್ರಕ್ರಿಯೆಗಳ ಮೂಲಕ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪ್ರಕಾಶ ಪಿ.ಬಿ. ಇವರು ಕಾರ್ಯಾಗಾರದಲ್ಲಿ ಭಾಗವಹಿಸಿದ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡುತ್ತ, ಇಂದ್ರಾ ನೂಯಿ ಪೆಪ್ಸಿಕೋ ಕಂಪನಿಯ ಸಿಇಒ ಆಗಿ ನೇಮಕಗೊಂಡಾಗ, ಅವರು ತುಂಬಾ ಸಂತೋಷದಿಂದ ಮನೆಗೆ ಹೋಗಿ ತಮ್ಮ ತಾಯಿಗೆ “ನಾನು ಪೆಪ್ಸಿಕೋ ಎಂಬ ಬಹುರಾಷ್ಟ್ರೀಯ ಕಂಪನಿಯ ಸಿಇಒ ಆಗಿದ್ದೇನೆ” ಎಂದು ಹೆಮ್ಮೆಪಟ್ಟು ಹೇಳಿದರು. ಆದರೆ ತಾಯಿ ಹೇಳಿದರು: “ಮೊದಲು ನಿನ್ನ ಮಗಳಿಗೆ ಅರ್ಧ ಲೀಟರ್ ಹಾಲು ತಂದುಕೊಡು, ಮನೆಯಲ್ಲಿ ಹಾಲಿಲ್ಲ.” ಇಂದ್ರಾ ನೂಯಿ ತಮ್ಮ ಆತ್ಮಕಥೆಯಲ್ಲಿ ಈ ಘಟನೆ ಕುರಿತು ಹೇಳುತ್ತಾರೆ—ನಾನು ಪೆಪ್ಸಿಕೋ ಕಂಪನಿಯ ಸಿಇಒ ಆಗಿದ್ದರೂ, ಮನೆಯಲ್ಲಿ ನಾನು ನನ್ನ ಮಗಳಿಗೆ ತಾಯಿ, ನನ್ನ ತಾಯಿಗೆ ಮಗಳು.
“ಇದೇ ರೀತಿ, ನಾವು ಡಿವೈಎಸ್ಪಿ ಅಥವಾ ಎಸ್ಪಿ ಆಗಿದ್ದರೂ, ಮನೆಯಲ್ಲಿ ನಾವು ನಮ್ಮ ಹೆಂಡತಿಗೆ ಗಂಡ, ಮಕ್ಕಳಿಗೆ ತಂದೆ. ಈ ಪಾತ್ರಗಳನ್ನು ನ್ಯಾಯವಾಗಿ, ಸಮರ್ಪಕವಾಗಿ ನಿರ್ವಹಿಸಬೇಕು. ನಾವು ಎಷ್ಟೇ ಬ್ಯುಸಿಯಾಗಿದ್ದರೂ, ಯಾವ ಸ್ಥಳದಲ್ಲಿ ಯಾವ ಪಾತ್ರ ಬೇಕೋ, ಆ ಪಾತ್ರವನ್ನು ನಿಷ್ಠೆಯಿಂದ ನಿರ್ವಹಿಸಬೇಕು. ನಾವು ಹಾಗೆ ಮಾಡಿದರೆ, ನಮ್ಮ ವ್ಯಕ್ತಿತ್ವದಲ್ಲಿ ಉತ್ತಮ ಬದಲಾವಣೆ ಬರುತ್ತದೆ, ಅದು ಅದ್ಭುತವಾಗಿರುತ್ತದೆ ಮತ್ತು ನಾವು ನಿಜವಾಗಿಯೂ ಒಳ್ಳೆಯ ಹೆಸರು ಗಳಿಸಬಹುದು, ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನವನ್ನು ತೆಗೆದುಕೊಳ್ಳಿ.” ಎಂದು ಒತ್ತಿ ಹೇಳಿದರು.
ಕಾರ್ಯಾಗಾರದ ಶಿಬಿರಾರ್ಥಿಗಳು ತಮ್ಮ ಸಕಾರಾತ್ಮಕ ಕಲಿಕೆಯ ಅನುಭವಗಳನ್ನು ಹಂಚಿಕೊಂಡರು.
ಒಬ್ಬ ಶಿಬಿರಾರ್ಥಿ “ಈ ಕಾರ್ಯಕ್ರಮ ತುಂಬಾ ಉಪಯುಕ್ತ ಕಾರ್ಯಕ್ರಮ, ಏಕೆಂದರೆ ಪ್ರತಿಯೊಬ್ಬರೂ ಮನೆ ಸಂಸಾರ ಅನ್ನೋದು ಒಂದು ಹೇಗೆ ನಿಭಾಯಿಸಬೇಕು ಅನ್ನೋದು ಒಂದು ಕಲೆ. ನಮಗೆ ಒಂದು ಒತ್ತಡ ಇಲ್ಲ ಈ ಕಡೆ ತಂದೆ ತಾಯಿ, ಗಂಡ ಹೆಂಡತಿ, ಮಕ್ಕಳು ನಮ್ಮ ವೃತ್ತಿ ಸ್ವಲ್ಪ ಸಮಾಜದ ಹಿಡ್ಕೊಂಡು ಎಲ್ಲಾ ಉತ್ತರಗಳನ್ನು ನಿಭಾಯಿಸಿಕೊಂಡು ಹೋಗಬೇಕಾದ್ರೆ ನಮ್ಮ ಮುಂದೆ ಆಯ್ಕೆಗಳಿರುತ್ತವೆ ಮತ್ತು ಪರಿಹಾರನೂ ಇರುತ್ತೆ ಆದರೆ ಅದನ್ನ ಕಂಡುಕೊಳ್ಳುವಂತಹ ತಾಳ್ಮೆ ನಮ್ಮಲ್ಲಿ ಇರುವುದಿಲ್ಲ, ರೇಗಾಡಿ ಬಿಡ್ತಿವಿ ಉತ್ತರ ಇದ್ರೂ ಅದನ್ನು ಹುಡುಕು ಅಂತ ತಾಳ್ಮೆ ನಮ್ಮಲ್ಲಿ ಇಲ್ಲ, ಕೆಲವೊಂದು ಸಂದರ್ಭದಲ್ಲಿ ತಾಳ್ಮೆಯಿಂದ ಹುಡುಕಿದ್ರೆ ಸಿಕ್ಕೇ ಸಿಗ್ತವೆ ಅಷ್ಟೊಂದ್ ತಾಳ್ಮೆ ನಾವು ಬೆಳೆಸಿಕೊಂಡಿಲ್ಲ, ಆ ಒಂದು ಒತ್ತಡದಿಂದ ನಮ್ಮ ಜೀವನ ನಾವು ಮಾಡಿಕೊಳ್ಳುತ್ತಿದ್ದೇವೆ ಅದನ್ನ ಸ್ವಲ್ಪ ತಾಳ್ಮೆ ವಿವೇಕದಿಂದ ಪರಿಹಾರ ಮಾಡ್ಕೋಬಹುದು ಅನ್ನೋದು ಒಂದು ಚೆನ್ನಾಗಿ ಮನವರಿಕೆಯಾಯಿತು.”
ಮತ್ತೊಬ್ಬ ಶಿಬಿರಾರ್ಥಿ “ಕ್ಷೇತ್ರ ಫೌಂಡೇಶನ್ ಕಾರ್ಯಕ್ರಮ ಮಾಡಿದ್ರಲ್ಲ, ಇದು ಬೇರೆ ಎಲ್ಲೂ ಇಲ್ಲ ನಮ್ಮ ಫ್ಯಾಮಿಲಿದಲ್ಲಿ, ನಮ್ಮ ಕುಟುಂಬದ ನಿರ್ವಹಣೆ, ಮಕ್ಕಳ ಜವಾಬ್ದಾರಿ, ತಂದೆ ತಾಯಿ ಜವಾಬ್ದಾರಿ, ಯಾವ ರೀತಿ ನಾವು ಒತ್ತಡದಲ್ಲಿ ಇದ್ದಾಗ, ಯಾವ ರೀತಿ ನಡ್ಕೋಬೇಕು, ಯಾವ ರೀತಿ ತಪ್ಪಾದ್ರೆ ನಡ್ಕೋಬೇಕು, ಶಾಲೆಯಲ್ಲಿ ಮಕ್ಕಳು ಓದಲಾರದೆ ಹೋದರೆ, ಯಾವ ರೀತಿ ಶಾಲೆಯಲ್ಲಿ ಅವರ ಟೀಚರ್ಸ್ ಗಳನ್ನ ವಿಚಾರಿಸಬೇಕು, ಮಾತಾಡ್ಬೇಕು, ಎಲ್ಲ ಸವಿಸ್ತಾರವಾಗಿ ಹೇಳಿದಿರಿ, ಬಹಳ ಸಂತೋಷ ಆಯಿತು.” ಎಂದು ಹಂಚಿಕೊಂಡರು.
ಈ ಕಾರ್ಯಾಗಾರವನ್ನು ಕ್ಷೇತ್ರ ಸಂಸ್ಥೆಯ ಸಮುದಾಯ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಸಿದ್ದಾರೂಡ ಪಿ.ಎಂ. ಮತ್ತು ದಾವಣಗೆರೆ ಜಿಲ್ಲಾ ಪೊಲೀಸ್ನ ಯೋಗಕ್ಷೇಮ ಅಧಿಕಾರಿ ಶ್ರೀ ರಂಜಿತ್ ಗೌಡ ಇವರು ಸುಗಮಗಾರಿಕೆ ಮಾಡಿದರು.