ಇಂತಹದ್ಧನ್ನು ಖಂಡಿಸಲು ಶಬ್ಧಗಳು ಸಾಕಾಗವು. ಸುಮಾರು 70 ವರ್ಷಗಳಿಂದಲೂ ಅಲ್ಲೇ ವಾಸವಾಗಿದ್ದ ದಲಿತ ಭಂಗಿ ಕುಟುಂಬಗಳನ್ನು ಎತ್ತಂಗಡಿ ಮಾಡಿ ಊರಾಚೆ ನೂಕಿ ಅಲ್ಲೊಂದು ವ್ಯಾಪಾರಿ ಮಳಿಗೆ ಕಟ್ಟಿಸುವ ಪುರಸಭೆಯ ಹುನ್ನಾರದ ವಿರುದ್ಧ ಹತಾಶೆಗೊಂಡ ಸವಣೂರಿನ ದಲಿತರು ಕೊನೆಯ ಅಸ್ತ್ರವಾಗಿ ತಲೆ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದ್ದು ಎಂತಹ ದುರ್ಭರ ಸ್ಥಿತಿ ಇದೆ.
ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧಗೊಂಡು 40 ವರ್ಷಗಳಿಂದ ಅನಾಗರಿಕ, ಅಮಾನವೀಯ ಪದ್ಧತಿಯು ಇನ್ನೂ ಜೀವಂತವಿರುವುದನ್ನು ಹೊರಜಗತ್ತಿಗೆ ಪ್ರಚುರಪಡಿಸಿತು..!
ಈಗ ಲಭ್ಯವಾಗುತ್ತಿರುವ ಮಾಹಿತಿಗಳಂತೆ ಇದು ಕೇವಲ ಈ ಹಿಂದುಳಿದ ಪ್ರದೇಶಗಳಲ್ಲಿ ಮಾತ್ರವಲ್ಲ. ಮೈಸೂರಿನಂತಹ ಮಹಾನಗರದಲ್ಲೇ ಸುಮಾರು 10 ಪಂಚಾಯ್ತಿ ವ್ಯಾಪ್ತಿಯಲ್ಲಿ ಇಂತಹುದೇ ಮಲ ಹೊರುವ ಪದ್ಧತಿ ಜಾರಿಯಲ್ಲಿರುವುದು ನಮ್ಮ ಸಾಮಾಜಿಕ, ಆಡಳಿತದ ವ್ಯವಸ್ಥೆಯ ಕ್ರೂರ ಮುಖಕ್ಕೆ ಹಿಡಿದ ಕನ್ನಡಿ ಆಗಿದೆ .
ಒಳಚರಂಡಿ ಇಲ್ಲದ ಪ್ರದೇಶಗಳಲ್ಲಿ ಈಗ ಇಂತಹುದೇ ಸ್ಥಿತಿಯಿದೆ ಎಂಬುದು ಇನ್ನೊಂದು ಆಘಾತಕಾರಿಯಾದ ಅಂಶವಾಗಿದೆ. ಅಂದರೆ ಸರ್ಕಾರದ ಕಾನೂನು, ಆದೇಶಗಳು ಏನಾದವು? ಅಭಿವೃದ್ಧಿ ಮಾತುಗಳು ಎಲ್ಲಿ ಹೋದವು? ಯಾಕೆ ಹೀಗೆ ಎಂಬುದನ್ನು ಆಳವಾಗಿ ಚಿಂತಿಸಿ ಪ್ರಾಶಸ್ತ್ಯದ ಪ್ರಶ್ನೆಗಳನ್ನಾಗಿ ಪರಿಗಣಿಸದೇ ಇದ್ದರೆ ಸ್ಥಿತಿಯ ಬದಲಾವಣೆಗೆ ಇನ್ನೂ ಅದೆಷ್ಟು ಶತಮಾನಗಳು ಬೇಕಾದಾವು?
ಸವಣೂರು ಹಿಂದೊಮ್ಮೆ ಸಂಸ್ಥಾನದ ರಾಜಧಾನಿ ಪಟ್ಟಣ!
ವಸಾಹತುಶಾಹಿಗಳ, ನಿಜಾಮರ ಆಡಳಿತದ, ಆಧುನಿಕ ಭಾರತದ ಆಳ್ವಿಕೆಯಲ್ಲಿ ನಿರ್ಲಕ್ಷತೆಯ ಶಾಪಕ್ಕೆ ಗುರಿಯಾದ ಪ್ರದೆಶಗಳಲ್ಲಿ ಒಂದು. ಪ್ರಾದೇಶಿಕ ಅಸಮತೋಲನದ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಿರುವ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಈ ಸವಣೂರೂ ಒಂದು.
ಇದಕ್ಕೂ ಅಗ್ರಸ್ಥಾನ. ಈ ವರದಿಯನ್ನು ಒಪ್ಪಿ, ಅಸಮತೋಲನ ನಿವಾರಿಸಿ ಅಭಿವೃದ್ಧಿಯನ್ನು ಸಾಧಿಸುತ್ತೇವೆ ಎಂದು ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಹಂಚುವ ಸರ್ಕಾರದ
`ಅಭಿವೃದ್ಧಿ’ ಹಣ, ಅದರ ಕಾರ್ಯಗಳು ಏನಾದವು?
ಈ ವರದಿಯ ಶಿಫಾರಸುಗಳ ಜಾರಿಗೆಂದೇ ಒಂದು ಸಮಿತಿಯನ್ನು ರಚಿಸಿ ಸಚಿವ ಸಂಪುಟ ದರ್ಜೆಯ ಸ್ಥಾನ ಸೌಲಭ್ಯ ನೀಡಿದ್ದರೂ ಅವು ಏನು ಮಾಡುತ್ತಿವೆ? ಎನ್ನುವಾಗ ಸರ್ಕಾರದ ಆಳುವವರ ಡೋಂಗಿತನ ಸ್ಪಷ್ಟವಾಗುತ್ತದೆ..!
ಅಸ್ಪೃಶ್ಯತೆ, ತಲೆ ಮೇಲೆ ಮಲ ಹೊರುವ ಪದ್ಧತಿಯು ಅನಾಗರೀಕವೆನಿಸದ ಅದರ ಮಾನಸಿಕ ಚೌಕಟ್ಟು ನಿರ್ಲಕ್ಷ್ಯ ಅಮಾನವೀಯ ಜಾತಿ ಪದ್ಧತಿಯ ಸಮರ್ಥನೆಯ ಆಧಾರದಲ್ಲೇ ಇದೆ.
ಊಳಿಗಮಾನ್ಯ ವ್ಯವಸ್ಥೆಯ ಈ ಜಾತಿ ವಾದದ ಕ್ರೌರ್ಯದ ಕಣ್ಣೋಟವಿದೆ. ಮತ ಯಾಚಿಸಲೆಂದು ಐದು ವರುಷಗಳಿಗೊಮ್ಮೆಯಾದರೂ ಹೋಗುವ ಈ ರಾಜಕೀಯ ಪಕ್ಷಗಳಿಗೆ ಚುನಾಯಿತ ಜನಪ್ರತಿನಿಧಿಗಳಿಗೆ ಆಡಳಿತಕ್ಕೆ ಕಣ್ಣಿಗೆ ಕಾಣದಿರುವುದು, ಕಂಡರೂ ಈ ಕ್ರೂರ `ಕರ್ಮ’ವನ್ನು ಸಹಜವೆಂಬಂತೆ ಅಂಗೀಕರಿಸಿರುವ ಅಮಾನವೀಯತೆಯೂ ಅದರ ಉತ್ಪನ್ನವೇ..!
ಇನ್ನು ಮನಧರ್ಮಶಾಸ್ತ್ರವನ್ನು ತಮ್ಮ ಸಂವಿಧಾನವೆಂದು ಅಂಗೀಕರಿಸಿರುವವರು ಅಧಿಕಾರದಲ್ಲಿರುವಾಗ ಇನ್ನು ಏನಾದೀತು? ಸವಣೂರಿನಲ್ಲಿಯೂ ಬಿಜೆಪಿಯದ್ದೇ ಪುರಸಭೆ, ಶಾಸಕರೂ ಅವರೇ ಎನ್ನುವಾಗ ಈ ಮನುವಾದಿಗಳ ಮನಸ್ಸು ಕಲಕೀತು ಹೇಗೆ?
ತಲೆ ಮೇಲೆ ಮಲ ಹೊರುವ ಪದ್ಧತಿಯು ಇನ್ನೂ ಹಲವೆಡೆ ಜೀವಂತವಾಗಿರುವಲ್ಲಿ ಶೌಚಾಲಯಗಳಿಗೆ ಒಳಚರಂಡಿ ವ್ಯವಸ್ಥೆ ಇಲ್ಲ ಎಂಬುದು. ಸವಣೂರಿನಲ್ಲಿಯೂ ಇಂತಹುದೇ ಸ್ಥಿತಿ.
ಅಂದರೆ ಸರ್ಕಾರ, ಪುರಸಭೆಯ ಆಡಳಿತ ನಾಗರೀಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ, ಒಳಚರಂಡಿ ನಿರ್ಮಿಸಿದಲ್ಲಿ ಶುಚಿತ್ವ, ಪರಿಸರವನ್ನು ಕಾಯಲು ಆ ಮೂಲಕ ಮಲ ಹೊರುವ ಪದ್ಧತಿಯನ್ನು ನಿರ್ಮಾಲ ಮಾಡಲು ಸಾಧ್ಯವಿತ್ತು. ಇಂತಹ ಗುಂಡಿಗಳನ್ನು ಕಸ, ತ್ಯಾಜ್ಯವನ್ನು ಪರಿಷ್ಕರಿಸಲು ಬ್ಯಾಕ್ಟಿರೀಯಾದಂತಹ ತಂತ್ರಜ್ಞಾನದ ಬಳಕೆ ಲಭ್ಯವಿದೆ.
ಆದ್ದರಿಂದ ಆ ಪದ್ಧತಿಯ ನಿರ್ಮಾಲನೆಯು ಆಡಳಿತಕ್ಕೆ ಇದು ಪ್ರಧಾನ ವಿಷಯವಾಗಬೇಕಿತ್ತು. ಆದರೆ ಹಾಗೆ ಮಾಡದೇ ಇರುವುದೇ ಇಂತಹ ಅಮಾನವೀಯ ಪದ್ಧತಿ ಮುಂದುವರಿಯಲು ಬಿಟ್ಟಿವುದಕ್ಕೆ ಹೊಣೆ ಹೊತ್ತುಕೊಳ್ಳಬೇಕಿದೆ.
ಪರಿಣಾಮವಾಗಿ ತಲೆ ತಲಾಂತರದ ಕಸುಬಾಗಿರುವ ದಲಿತರು ಅಸಹ್ಯವಾದರೂ ಅದನ್ನೇ ಅನುಸರಿಸಿ ದುಡಿಯಬೇಕಾಗಿ ಬಂದಿದೆ. ಅಸ್ಪೃಶ್ಯತೆ, ಕೀಳೆಂಬ ಬೇಧಭಾವದ ಅವಮಾನ, ದಾರಿದ್ರ್ಯ, ಬಡತನಗಳ ನಡುವೆ ಪ್ರಾಣಿಗಳಿಗಿಂತಲೂ ಕಡೆಯಾಗಿ ಕಡೆಗಣಿಸಲ್ಪಟ್ಟ ಈ ದಲಿತರು ಅನುಭವಿಸುವ ಮಾನಸಿಕ ಹಿಂಸೆಗೆ ಕೊನೆಯಿಲ್ಲವೇ?
ಸರ್ಕಾರ ಈ ಕೂಡಲೇ ತಲೆ ಮೇಲೆ ಮಲ ಹೊರುವ ಪದ್ಧತಿಯ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅದನ್ನು ತರದ ಆಡಳಿತವನ್ನು ಒಳಗೊಂಡು ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಅನಿವಾರ್ಯವಾಗಿ ಈ ಉದ್ಯೋಗ ಮಾಡುತ್ತಿರುವ ದಲಿತ ಕುಟುಂಬಗಳಿಗೆ ಘನತೆ ತರುವ ಪರ್ಯಾಯ ಉದ್ಯೋಗಗಳನ್ನು, ಅನ್ನ ಗಳಿಕೆಯ ಅವಕಾಶಗಳನ್ನು ಕಲ್ಪಿಸಬೇಕು.
ಅದಕ್ಕೆ ಬೇಕಾದ ಶಿಕ್ಷಣವನ್ನೂ ನೀಡಬೇಕು. ದೇಶದ ಇತರೆಡೆಗಳಲ್ಲಿ ಈ ನಿಷೇಧದಿಂದ ಹೊರಹಾಕಲ್ಪಟ್ಟ ದಲಿತ ಭಂಗಿಗಳಿಗೆ ಸುಲಭ ಶೌಚಾಲಯ ದಂತಹ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಅದೇ ಕಸುಬಿನ ಇನ್ನೊಂದು ಅಂಗಳಕ್ಕೆ ತಳ್ಳಿರುವುದನ್ನೇ ಪರಿಹಾರವೆಂಬಂತೆ ಅನುಸರಿಸಬಾರದು.
ವ್ಯವಸ್ಥೆಯ ಭಾಗವೆಂದು ಯಥಾಸ್ಥಿತಿಯನ್ನೇ ಕಾಯಬಾರದು. ಅವರಿಗೆ ಎಲ್ಲರೊಡನೆ ಬಾಳುವಂತಹ ಸ್ಥಳದಲ್ಲಿ ಮನೆ, ಅಗತ್ಯ ನಾಗರೀಕ ಸೌಲಭ್ಯಗಳನ್ನು ನೀಡಬೇಕು. ಒಳಚರಂಡಿ ವ್ಯವಸ್ಥೆಯೂ ಆಗಬೇಕು. ಮುಖ್ಯವಾಗಿ ಈ ದಲಿತರು ಎಲ್ಲೆಡೆಗಳಲ್ಲಿರುವಂತೆ ಬಹುಸಂಖ್ಯೆಯಲ್ಲಿ ಭೂಹೀನರು ಬಹುರಾಷ್ಟ್ರೀಯ ಕಂಪನಿಗಳಿಗೆ, ಭೂಗಳ್ಳರಿಗೆ ರಾತ್ರೋರಾತ್ರಿ ಭೂಮಿ ಹಂಚುವ ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣವೇ ಈ ಎಲ್ಲಾ ಕುಟುಂಬಗಳಿಗೆ ಉಳುಮೆಯೋಗ್ಯವಾದ ಭೂಮಿ, ಸವಲತ್ತುಗಳನ್ನು ನೀಡಬೇಕು.
ಕೃಷಿ ಕೂಲಿಕಾರರೇ ಅತ್ಯಧಿಕವಾಗಿರುವ ದಲಿತರು ಅನುಭವಿಸುವ ನೋವು, ಸಂಕಟಗಳಿಗೆ ಭೂ ಹಂಚಿಕೆಯ ಸಮಗ್ರ ಪ್ರಗತಿಪರ ಸುಧಾರಣೆಯೇ ಪ್ರಧಾನವಾದುದು. ಹೀಗಾಗಿ ಈ ಎಲ್ಲಾ ಆಯಾಮಗಳಲ್ಲಿ ಆರ್ಥಿಕ, ರಾಜಕೀಯ, ಸಾಮಾಜಿಕ ತಾರತಮ್ಯ ನಿವಾರಣೆಯಲ್ಲಿ ದಲಿತ ಹಕ್ಕುಗಳ ರಕ್ಷಣೆಗಾಗಿ ಉತ್ಪಾದನಾ ವ್ಯವಸ್ಥೆ, ಸಂಬಂಧಗಳ ಬದಲಾವಣೆಗಾಗಿ ಇತರೆ ಪ್ರಜಾಸತ್ತಾತ್ಮಕ ಜನ ವಿಭಾಗಗಳೊಂದಿಗಿನ ಆಂದೋಲನದಲ್ಲಿ ಒಂದಾಗಿ ಹೋರಾಟಕ್ಕೆ ಮುಂದಾಗಬೇಕು..!
ಒಂದೆಡೆ ಹಣ, ಐಷಾರಾಮು, ಅಕ್ರಮ ಹಣ ಗಳಿಕೆಯ ಠೇಂಕಾರ, ಇನ್ನೊಂದೆಡೆ ನೆಲ ಕಚ್ಚಿ ನಲುಗುತ್ತಿರುವ ವಿಶಾಲ ಜನಸಮೂಹಗಳಲ್ಲಿ ಅಸಮಾನತೆ, ಅನ್ಯಾಯಗಳು, ಈ ಎರಡು ಭಾರತದ ಬದುಕು ಬದಲಾಗಲೇಬೇಕು..!(ಕೆ.ಶಿವು.ಲಕ್ಕಣ್ಣವರ್)