ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾನುವಾರ ಬೆಳ್ಳಂಬೆಳಿಗ್ಗೆ ಕುಂದುವಾಡ ಕೆರೆ, ಇನ್ ಡೋರ್ ಸ್ಟೇಡಿಯಂ ಹಾಗೂ ಎಸ್ ಎಸ್ ಬಡಾವಣೆ ತರಕಾರಿ ಮಾರುಕಟ್ಟೆಗಳಲ್ಲಿ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದರು.
ಕುಂದುವಾಡ ಕೆರೆಯ ವಾಯುವಿಹಾರಿಗಳ ಜೊತೆ ಆಪ್ತವಾಗಿ ಮಾತನಾಡಿದ ಪ್ರಭಾ ಅವರು, ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಯಾದ ತಮಗೆ ಮತ ನೀಡಬೇಕೆಂದು ಮನವಿ ಮಾಡಿದರು. ತಮ್ಮ ಯೋಜನೆಗಳನ್ನು ವಿವರಿಸಿ ಹೇಳಿದರು. ತಮ್ಮ ಪತಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ದೂರದೃಷ್ಟಿಯ ಕಾರಣ ಕುಂದುವಾಡ ಕೆರೆ ಮರು ನಿರ್ಮಾಣವಾಗಿ ದಾವಣಗೆರೆ ಜನತೆಗೆ ಕುಡಿವ ನೀರಿನ ಕೊರತೆ ನಿವಾರಣೆ ಮಾಡಿದೆ. ಅದೇ ರೀತಿ ಟಿ.ವಿ. ಸ್ಟೇಶನ್ ಕೆರೆಯ ಹೂಳು ತೆಗೆದು ಇನ್ನಷ್ಟು ನೀರು ಶೇಖರಣೆಗೆ ಅವಕಾಶ ಮಾಡಿದ್ದರಿಂದ ಆ ಭಾಗದ ಜನತೆಗೆ ನೀರು ದೊರೆಯುತ್ತಿದೆ. ಈ ಎಲ್ಲ ಅಭಿವೃದ್ಧಿ ನೋಡಿ ತಮಗೆ ಮತ ನೀಡಬೇಕೆಂದು ಅವರು ಮನವಿ ಮಾಡಿದರು.
ನಂತರ ಇನ್ ಡೋರ್ ಸ್ಟೇಡಿಯಂ ಕ್ರೀಡಾಪಟುಗಳು ಜೊತೆ ಮಾತನಾಡಿ ಮತಯಾಚನೆ ಮಾಡಿದರು. ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಒಮ್ಮೆ ತಮಗೆ ಅವಕಾಶ ನೀಡಬೇಕೆಂದು ವಿನಂತಿಸಿದರು.

ಎಸ್. ಎಸ್. ಬಡಾವಣೆ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಪುರುಷರು ಮತ್ತು ಮಹಿಳಾ ವ್ಯಾಪಾರಿಗಳ ಬಳಿ ಮತಯಾಚನೆ ಜೊತೆಗೆ ಅವರ ಆರ್ಥಿಕ ಸ್ಥಿತಿಗತಿ, ಆರೋಗ್ಯದ ಬಗ್ಗೆಯೂ ವಿಚಾರಿಸಿದ ಪ್ರಭಾ, ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು. ಮಹಿಳೆಯರು, ಯುವಕರು ಸೇರಿದಂತೆ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ತಿಳಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ವಿನಂತಿಸಿದರು. ವಾಯುವಿಹಾರಿಗಳು ಹಾಗೂ ವರ್ತಕರು ಕೂಡ ಪ್ರಭಾ ಅವರನ್ನು ಅತ್ಯಂತ ಆತ್ಮೀಯತೆಯಿಂದ ಸ್ವಾಗತಿಸಿದರು.