Saturday, December 21, 2024
Homeಸಾಧನೆಶಿಕ್ಷಣದ ಸ್ಫೂರ್ತಿ ಅಂಬೇಡ್ಕರ್ ರವರಿಗೆ ಜನ್ಮ ದಿನದ ಶುಭಾಶಯಗಳು:ವೆಂಕಟೇಶ್ ಬಾಬು ಎಸ್

ಶಿಕ್ಷಣದ ಸ್ಫೂರ್ತಿ ಅಂಬೇಡ್ಕರ್ ರವರಿಗೆ ಜನ್ಮ ದಿನದ ಶುಭಾಶಯಗಳು:ವೆಂಕಟೇಶ್ ಬಾಬು ಎಸ್

ದೇಶದಲ್ಲಿ ಹೆಚ್ಚೆಚ್ಚು ದೇವಸ್ಥಾನಗಳನ್ನು ಸ್ಥಾಪಿಸಬೇಡಿ  ಹೆಚ್ಚು ಶಾಲಾ ಕಾಲೇಜು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ದೇವಸ್ಥಾನಗಳಿಂದ ದೇಶದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತದೆ ಶಾಲಾ ಕಾಲೇಜುಗಳಿಂದ ದೇಶದಲ್ಲಿ ಜ್ಞಾನ ಪಡೆದ ವಿವೇಕವುಳ್ಳ ನಾಗರಿಕರು ಹೆಚ್ಚಾಗುತ್ತಾರೆ ಇದರಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಸಾರಿ ಸಾರಿ ಹೇಳಿದ್ದ ಭೀಮ್ ರಾವ್ ಅಂಬೇಡ್ಕರ್ ಅವರಿಗೆ  ಹುಟ್ಟುಹಬ್ಬದ ಶುಭಾಶಯಗಳು 

ಡಾ. ಬಿ. ಆರ್. ಅಂಬೇಡ್ಕರ್ ಎಂದಾಕ್ಷಣ ಎಲ್ಲರ ಮನಸ್ಸಿನಲ್ಲಿ ಹಾಗೂ ತಲೆಯಲ್ಲಿ ಬರುವ ಪದಗಳೆಂದರೆ ಸಂವಿಧಾನಶಿಲ್ಪಿ, ವಿಶ್ವ ಜ್ಞಾನಿ ಮಹಾನಾಯಕ ಬುದ್ಧಿವಂತ ಪುಸ್ತಕ ಪ್ರೇಮಿ ಜ್ಞಾನ ಭಂಡಾರ ಗ್ರಂಥಾಲಯ ಹೀಗೆ ಶಿಕ್ಷಣ, ಕಲಿಕೆಗೆ ಸಂಬಂಧಿಸಿದ ಪದಗಳು ಥಟ್ಟನೆ ಬರುತ್ತವೆ. ನಮ್ಮ ದೇಶದಲ್ಲಿ ಪ್ರತಿಯೊಂದು ನಿರ್ಧಾರಗಳು ಚುನಾವಣೆ ಆಧಾರಿತವಾಗಿವೆ. ಚುನಾವಣೆಯಲ್ಲಿ ಗೆಲ್ಲುವುದೆ ಮುಖ್ಯವಾಗಿರುವ ಈ ಸಂದರ್ಭದಲ್ಲಿ ದೇಶದಲ್ಲಿರುವ ಜ್ಞಾನಿಗಳು ವಿದ್ಯಾವಂತರು ವೈಚಾರಿಕ ಹಾಗೂ ವೈಜ್ಞಾನಿಕ ನಿಲುವಿನಿಂದ ಯೋಚಿಸದೆ ಜಾತಿ ಧರ್ಮ ಪಕ್ಷ ಲಿಂಗ ಎಂಬ ವಿವಿಧ ಸ್ತರಗಳಲ್ಲಿ ಯೋಚಿಸುತ್ತಾ ಇದ್ದಾರೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನದ ಓದು ಪ್ರತಿಯೊಬ್ಬರಿಗೂ ಅವಶ್ಯಕ ಅದರ ಓದಿನಿಂದ ದೇಶದಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.

ಭೀಮ್ ರಾವ್ ರವರು ಸಮಾಜ ಸುಧಾರಕ ಭಾರತದಲ್ಲಿರುವ ಗುಲಾಮಗಿರಿ ಪದ್ಧತಿಯನ್ನು ತೊಡೆದು ಹಾಕುವಲ್ಲಿ ಪ್ರಯತ್ನ ಪಟ್ಟು ಉತ್ತರ ಕಂಡುಕೊಂಡ ನಾಯಕ. ಅವರು ನಂಬಿದ್ದು ಶಿಕ್ಷಣ. ಶಿಕ್ಷಣ ಒಂದಿದ್ದರೆ ದೇಶ, ಸಮಾಜ, ವ್ಯಕ್ತಿ ಈ ಮೂರು ಸುಧಾರಣೆ ಆಗುತ್ತದೆ. ಶಿಕ್ಷಣ ಪ್ರತಿಯೊಂದನ್ನು ಸುಧಾರಿಸುತ್ತದೆ ಎಂದು ನಂಬಿದ ವ್ಯಕ್ತಿ.

ದೇಶದ ಪ್ರತಿಯೊಬ್ಬ ಪ್ರಜೆಯೂ ಸಾಕ್ಷರತೆಯನ್ನು ಪಡೆಯಬೇಕು. ಶಿಕ್ಷಣವು ತಮ್ಮ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಹಾಗೆ ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲೆತ್ತಲು ಹಿಂದಿರುವವರು ಮುಂದೆ ಬರಲು ಇರುವ ಅತ್ಯಂತ ಅದ್ಭುತವಾದ ಸಾಧನವಾಗಿದೆ. ಶಿಕ್ಷಣದಿಂದ ಪ್ರತಿಯೊಬ್ಬ ವ್ಯಕ್ತಿಗೆ ಜೀವನದಲ್ಲಿ ಉತ್ತಮವಾದ ಬೆಳಕನ್ನು ಕಾಣಬಹುದು. ಶಿಕ್ಷಣವು ಮನುಷ್ಯನಲ್ಲಿ ವ್ಯಕ್ತಿತ್ವ ಬುದ್ಧಿವಂತಿಕೆ ದೂರ ದೃಷ್ಟಿಕೋನ ಸಾಮಾಜಿಕ ಸಂಬಂಧಗಳು ಮಾನವತೆ ಮೌಲ್ಯ ಎಲ್ಲವನ್ನು ಬೆಳೆಸುತ್ತದೆ. ಶಿಕ್ಷಣವನ್ನು ಬರಿ ಜ್ಞಾನಕ್ಕಾಗಿ ಪಡೆಯಬರದು, ಇದರಿಂದ ಕೌಶಲ್ಯ ಅಭಿವೃದ್ಧಿ ವಿನಯ, ವಿವೇಕ, ಸಂಸ್ಕೃತಿ, ಎಲ್ಲವನ್ನೂ ಕಲಿಯಬಹುದು.

ಶಿಕ್ಷಣ ಪಡೆದ ವ್ಯಕ್ತಿ ಸಮಾಜದಲ್ಲಿ ಸಾಮಾಜಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಹಾಗೂ ನೈತಿಕವಾಗಿ ಬೆಳೆಯಲು ಸಾಧ್ಯ ಇದರಿಂದ ಸದೃಢ ಸಮಾಜ ಉತ್ತಮ ರಾಷ್ಟ್ರ ನಿರ್ಮಾಣ ಆಗುತ್ತದೆ. ಅಂಬೇಡ್ಕರ್ ದೃಷ್ಟಿಯಲ್ಲಿ ಶಿಕ್ಷಣ ಎಂದರೆ ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಿ ಆರ್ಥಿಕ ಸುಧಾರಣೆಯಲ್ಲಿ ರಾಜಕೀಯ ಸ್ವಾತಂತ್ರ್ಯವನ್ನು ಪಡೆದು ಸಮಾಜಕ್ಕೆ ಕೊಡುಗೆಯನ್ನು ನೀಡುವಂತೆ ಮಾಡುವ ಶಕ್ತಿ ಸಾಧನವೇ ಶಿಕ್ಷಣ. ಆಸ್ತಿ ಗಳಿಸಲಷ್ಟೇ ಶಿಕ್ಷಣವನ್ನು ಬಳಸದೆ ಸಮಾಜದ ಮತ್ತು ಇತರರ ಹಿತಕ್ಕಾಗಿ ಸುಧಾರಣೆಗಾಗಿ ಶಿಕ್ಷಣವನ್ನು ಬಳಸಿದರೆ ಶಿಕ್ಷಣದ ಮಹತ್ವ ಹೆಚ್ಚುತ್ತದೆ.

ಇಂದಿನ ಯುವ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡದೆ ಇತರ ಕೆಲಸಗಳಿಗೆ ಹೆಚ್ಚು ಸಮಯವನ್ನು ಮೀಸಲಿಟ್ಟು ತಮ್ಮ ಅತ್ಯಂತ ಅಮೂಲ್ಯವಾದ ಜೀವನವನ್ನು ಯೌವ್ವನದ ಸಮಯದಲ್ಲಿ ಹಾಳುಮಾಡಿಕೊಳ್ಳುತ್ತಿದ್ದಾರೆ. ಯುವಕರಲ್ಲಿ ಶಿಕ್ಷಣ ಎಂದರೆ ಕಾಲೇಜಿಗೆ ಹೋಗಿ ಬಂದು ಪರೀಕ್ಷೆಯನ್ನು ಬರೆದು ಫಲಿತಾಂಶವನ್ನು ಮೊಬೈಲ್ ಮೂಲಕ ನೋಡಿ ಇತರರಿಗೆ ಶೇರ್ ಮಾಡಿದರೆ ಅಲ್ಲಿಗೆ ಕಾಲೇಜು ಶಿಕ್ಷಣ ಮುಕ್ತಾಯವಾಯಿತು ಎಂಬ ನಂಬಿಕೆ. ಶಿಕ್ಷಣದ ಉದ್ದೇಶ ಪರಿಪೂರ್ಣವಾಗಬೇಕಾದರೆ ಪ್ರತಿಯೊಬ್ಬ ಯುವಕರು ಅಥವಾ ವಿದ್ಯಾರ್ಥಿಗಳು ತಮ್ಮ ಕಲಿಕೆ ಸಂದರ್ಭದಲ್ಲಿ ಪಠ್ಯಗಳ ಜೊತೆಗೆ ದೇಶ ಸಮಾಜ ವ್ಯಕ್ತಿಗೆ ಇತರೆ ವಿಷಯಗಳು ಕುರಿತು ಕೂಡ ಹೆಚ್ಚೆಚ್ಚು ಜ್ಞಾನವನ್ನು ಸಂಪಾದಿಸಬೇಕು ಬೆಳೆಸಿಕೊಳ್ಳಬೇಕು ಅಂಬೇಡ್ಕರ್ ಜೀವನ ಅವರಿಗೆ ಆದರ್ಶವಾಗಬೇಕು. ಅವರಲ್ಲಿದ್ದ ಪುಸ್ತಕ ಪ್ರೇಮ ಓದಿನ ಹುಚ್ಚು ತಿಳಿದುಕೊಳ್ಳುವ ಛಲ ಇವುಗಳೆಲ್ಲವನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಅವರಂತೆ ಹೆಚ್ಚು ಜ್ಞಾನವಂತರ ಆದರೆ ದೇಶವು ಉತ್ತಮವಾಗಿ ಸದೃಢವಾಗಿ ಬೆಳೆಯಲು ಸಹಾಯವಾಗುತ್ತದೆ.

ಇಂದಿನ ಯುವ ಪೀಳಿಗೆ ಅಂಬೇಡ್ಕರರ ಜೀವನವನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಅವರು ಜ್ಞಾನಾರ್ಜನೆಗೆ ತೋರಿಸುತ್ತಿದ್ದ ಆಸಕ್ತಿ ಅವರು ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಾಜದ ಹಾಗೂ ದೇಶದ ಬೆಳವಣಿಗೆಗೆ ಶಿಕ್ಷಣವನ್ನು ಉಪಯೋಗಿಸಿಕೊಂಡ ಬಗ್ಗೆ ಹಾಗೂ ಅವರ ದೇಶಪ್ರೇಮಕ್ಕೆ ತೋರಿಸಿದರು ದೇಶದ ಆರ್ಥಿಕ ವ್ಯವಸ್ಥೆಗೆ ನೀಡಿದ ಕೊಡುಗೆ ಇವೆಲ್ಲವೂ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಹಾಗೂ ಶಿಕ್ಷಣದ ಬಗ್ಗೆ ಅವರಿಗಿದ್ದ ಕಾಳಜಿ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಓದುಬರಹ ಶಿಕ್ಷಣ ಜ್ಞಾನ ಎಂದಾಗ ಥಟ್ಟನೆ ಅಂಬೇಡ್ಕರ್ ನೆನಪಾಗಬೇಕು.

ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಕೂಡ ಬೆಳೆಸಿಕೊಳ್ಳುವುದು ಮುಖ್ಯ ಕೌಶಲ್ಯ ವಿಲ್ಲದ ಶಿಕ್ಷಣ ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಸಂದರ್ಭ ಉಂಟಾಗಿದೆ. ಬರೀ ಕೌಶಲ್ಯ ವಿದ್ದರೆ ಜೀವನ ಸಾಗಿಸಬಹುದು. ಆದರೆ ಕೌಶಲ್ಯದೊಂದಿಗೆ ಶಿಕ್ಷಣ ವಿದ್ದರೆ ಜೀವನದಲ್ಲಿ ಎತ್ತರಕ್ಕೆ ಹೋಗಬಹುದು ಬಹು ಎತ್ತರದ ಅದ್ಭುತವನ್ನು ಸಾಧಿಸಬಹುದು. ಶಿಕ್ಷಣ ವಿದ್ದರೆ ಕೌಶಲ್ಯದ ಉಪಯೋಗ ಹೆಚ್ಚು ಹಾಗಾಗಿ ಕಲಿಕೆ ನಿರಂತರ ಕಲಿಯುವ ಮನಸ್ಸು ಪ್ರತಿಯೊಬ್ಬರು ಮಾಡಬೇಕು ಮನಸ್ಸು ಮಾಡಲು ಒಂದು ಸ್ಪೂರ್ತಿ ಆದರ್ಶ ಇರಬೇಕು, ಆದರ್ಶ ಸ್ಫೂರ್ತಿಯನ್ನು ನಾವು ಅಂಬೇಡ್ಕರರ ರೂಪದಲ್ಲಿ ತೆಗೆದುಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವಂತೆ ಶಿಕ್ಷಣವನ್ನು ಪಡೆಯುವಂತಾಗಲಿ.

ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಪೂಜಿಸುವುದಾಗಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಅಲ್ಲಲ್ಲಿ ನಿರ್ಮಾಣ ಮಾಡುವುದಕ್ಕಿoತ ಅಂಬೇಡ್ಕರ್ ಅವರ ಹೆಸರನ್ನು ಕಟ್ಟಡಗಳಿಗೆ ನಗರದ ರಸ್ತೆಗಳಿಗೆ ಇಡುವುದಕ್ಕಿಂತ ವಿಶ್ವ ವಿಶ್ವಜ್ಞಾನಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಆದರ್ಶಗಳನ್ನು ಅವರ ನುಡಿಮುತ್ತುಗಳನ್ನು ಅವರ ತತ್ವಗಳನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಸುಭದ್ರ ಭವ್ಯ ಜ್ಞಾನ ಭಾರತವಾಗಿ ಹೊರಹೊಮ್ಮಲು ಸಾಧ್ಯ. ಎಂದು ಹೇಳುತ್ತಾ ಮತ್ತೊಮ್ಮೆ ವಿಶ್ವಜ್ಞಾನಿಗೆ ಹುಟ್ಟುಹಬ್ಬದ ಶುಭಾಶಯಗಳು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments