ದಾವಣಗೆರೆ ಏಪ್ರಿಲ್. 30; ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು ಅಣಕು ಮತದಾನವನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿ ನಂತರ ಮಾಕ್ ಪೋಲ್ ಕ್ಲಿಯರ್ ಮಾಡಿ ಕ್ಲೊಸ್ ಬಟನ್ ಒತ್ತುವ ಮೂಲಕ ವಾಸ್ತವ ಮತದಾನ ಆರಂಭಿಸಬೇಕೆಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಮಂಗಳವಾರ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಮತದಾನ ಸಿಬ್ಬಂದಿಗಳಿಗೆ ಏರ್ಪಡಿಸಲಾದ ಎರಡನೇ ಹಂತದ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು. ಅಣಕು ಮತದಾನ ಕ್ರಿಯರ್ ಮಾಡದಿದ್ದಲ್ಲಿ ಎಣಿಕೆ ಮಾಡುವಾಗ ಸಮಸ್ಯೆಯಾಗಲಿದೆ. ಆದ್ದರಿಂದ ಎಲ್ಲರೂ ಸಿಆರ್‍ಸಿ ಮಾಡಿದ ಬಗ್ಗೆ ಖಾತರಿ ನಂತರ ಮತದಾನ ಆರಂಭಿಸುವುದನ್ನು ಮರೆಯಬಾರದು. ಅಣಕು ನಂತರ ಸಿ-ಕ್ಲೋಸ್, ಆರ್-ರಿಸಲ್ಟ್, ಸಿ-ಕ್ಲಿಯರ್ ಇದನ್ನು ಎಲ್ಲಾ ಮತದಾನ ಸಿಬ್ಬಂದಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಮತದಾನ ದಿನ ಯಾವುದೇ ಹಂತದ ಪ್ರಕ್ರಿಯೆಗಳನ್ನು ಮರೆಯದೇ ಮತಗಟ್ಟೆ ಮಾರ್ಗದರ್ಶಿ ನಿಯಮಗಳನ್ನು ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕು, ಇಲ್ಲವಾದಲ್ಲಿ ಅಂತಹ ಅಧಿಕಾರಿಗಳು, ಸಿಬ್ಬಂದಿಗಳು ಶಿಸ್ತುಕ್ರಮದ ಜೊತೆಗೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದರು.
ಚುನಾವಣಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾರ್ಗದರ್ಶನಕ್ಕಾಗಿ ಸೆಕ್ಟರ್ ಅಧಿಕಾರಿಗಳು ಇರುತ್ತಾರೆ. ಅದೇ ರೀತಿ ಪ್ರತಿ ಮತಗಟ್ಟೆಯಲ್ಲಿ ಮತದಾನವಾದ ಬಗ್ಗೆ ಮಾಹಿತಿ ನೀಡಲು ತಂಡವನ್ನು ನೇಮಕ ಮಾಡಲಿದ್ದು ಕರಾರುವಕ್ಕಾಗಿ ಮತದಾನದ ಅಂಕಿ ಅಂಶಗಳನ್ನು ನೀಡಬೇಕಾಗುತ್ತದೆ ಎಂದರು.
ಹರಿಹರ, ಹರಪನಹಳ್ಳಿಗೆ ಅಪರ ಜಿಲ್ಲಾಧಿಕಾರಿ ಭೇಟಿ; ಹರಿಹರದ ಸೆಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್‍ನಲ್ಲಿ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ನಡೆದ ಎರಡನೇ ಹಂತದ ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿಯವರು ಭೇಟಿ ನೀಡಿ ಮತದಾನ ದಿನ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಮತದಾನ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ಹರಪನಹಳ್ಳಿ ಕ್ಷೇತ್ರದಲ್ಲಿ ನಡೆದ ಸೆಕ್ಟರ್ ಅಧಿಕಾರಿಗಳಿಗೆ ನೀಡಲಾದ ತರಬೇತಿಯಲ್ಲಿ ಭಾಗಿಯಾಗಿ ಸೆಕ್ಟರ್ ಅಧಿಕಾರಿಗಳ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮತಗಟ್ಟೆ ತಂಡ ಸಿದ್ದ; ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ 1693 ಮತಗಟ್ಟೆಗಳು ಸೇರಿದಂತೆ ವಿಜಯನಗರ ಜಿಲ್ಲೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ 253 ಮತಗಟ್ಟೆಗಳು ಸೇರಿ 1946 ಮತಗಟ್ಟೆಗಳು ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಎರಡನೇ ತರಬೇತಿಯಲ್ಲಿ ಕ್ಷೇತ್ರವಾರು ಪ್ರತಿ ಮತಗಟ್ಟೆಗೆ 4 ಜನರ ತಂಡ ಸಿದ್ದವಾಗಿದ್ದು ಮೇ 6 ರಂದು ಮಸ್ಟರಿಂಗ್ ಕೇಂದ್ರದಲ್ಲಿ ಯಾವ ಮತಗಟ್ಟೆಗೆ ಈ ತಂಡ ನಿಯೋಜಿತವಾಗುತ್ತದೆ ಎಂದು ಅಂದು ತಿಳಿಯಲಿದೆ.
ವಿಧಾನಸಭಾ ಕ್ಷೇತ್ರವಾರು ನೇಮಕವಾಗಿರುವ ಅಧಿಕಾರಿ, ಸಿಬ್ಬಂದಿಗಳು; ಜಗಳೂರು ಕ್ಷೇತ್ರಕ್ಕೆ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಮತದಾನ ಸಿಬ್ಬಂದಿಗಳು ಸೇರಿ 1212, ಹರಿಹರ 1048, ದಾವಣಗೆರೆ ಉತ್ತರ 1128, ದಕ್ಷಿಣ 996, ಮಾಯಕೊಂಡ 1104, ಚನ್ನಗಿರಿ 1172 ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ 1124 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ತರಬೇತಿ ನಡೆದ ಸ್ಥಳಗಳು; ಜಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರ ಸೆಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್, ಹರಪನಹಳ್ಳಿ ರಸ್ತೆ, ಹರಿಹರ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಿದ್ದಗಂಗಾ ವಿದ್ಯಾಸಂಸ್ಥೆ, ಸಿದ್ದರಾಮೇಶ್ವರ ಬಡಾವಣೆ, ಮಾಯಕೊಂಡ ತರಳಬಾಳು ವಿದ್ಯಾಸಂಸ್ಥೆ, ಅನುಭವ ಮಂಟಪ, ಹದಡಿ ರಸ್ತೆ, ಚನ್ನಗಿರಿ ಶ್ರೀಶ್ರೀಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹೊನ್ನಾಳಿಯಲ್ಲಿ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ, ಹಿರೇಕಲ್ಮಠ ಇಲ್ಲಿ ತರಬೇತಿ ನಡೆಯಿತು.
=======