ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ:
ವೈಜ್ಞಾನಿಕ ಸೇತುವೆ ನಿರ್ಮಿಸಲು ಶಾಸಕ ಜೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ತಾಕೀತು
ದಾವಣಗೆರೆ: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಹಾದು ಹೋಗುವ ಮಾರ್ಗದಲ್ಲಿ ವೈಜ್ಞಾನಿಕವಾಗಿ ಸೇತುವೆಗಳನ್ನು ನಿರ್ಮಾಣ ಮಾಡಬೇಕೆಂದು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು, ಇಂಜಿನಿಯರ್ ಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ರೈಲ್ವೆ ಅಧಿಕಾರಿಗಳು, ಇಂಜಿನಿಯರ್ ಗಳೊಂದಿಗೆ ಚರ್ಚೆ ನಡೆಸಿದ ಅವರು, ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಈ ಹೊಸ ರೈಲು ಮಾರ್ಗದಲ್ಲಿ ಬುಳ್ಳಾಪುರ, ಆನಗೋಡು, ನೀರ್ಥಡಿ, ಚಿನ್ನಸಮುದ್ರ, ಹೆಬ್ಬಾಳು ಗ್ರಾಮಗಳು ಬರುತ್ತವೆ. ಅಲ್ಲದೇ ಜಿಲ್ಲಾ ಮತ್ತು ರಾಜ್ಯ ಹೆದ್ದಾರಿಗಳು ಇದ್ದು, ಈ ಭಾಗದಲ್ಲಿ ಮುಂದಿನ 50 ವರ್ಷಗಳ ಕಾಲ ಬಾಳಿಕೆ ಬರಬೇಕು. ಭವಿಷ್ಯದಲ್ಲಿ ಜನಸಂಖ್ಯೆ ಹೆಚ್ಚಳ, ವಾಹನಗಳ ಪ್ರಮಾಣ ಹೆಚ್ಚಳದ ದೃಷ್ಟಿಕೋನದಲ್ಲಿ ವೈಜ್ಞಾನಿಕವಾಗಿ ಕೆಳ ಸೇತುವೆ ಅಥವಾ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಸೇತುವೆಗಳನ್ನು 5 ಮೀಟರ್ ಗೆ ಎತ್ತರಿಸದೆ, 7 ಮೀಟರ್ ಗೆ ಎತ್ತರಿಸಬೇಕು. ಆನಗೋಡು-ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಲಾರಿಗಳು ಸಂಚರಿಸುವುದರಿಂದ 5 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಿಸಿದರೆ ಸಂಚರಿಸಲು ತೊಂದರೆ ಆಗುತ್ತದೆ. ಹೀಗಾಗಿ 7 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಿಸಬೇಕು. ಅವೈಜ್ಞಾನಿಕ ಸೇತುವೆಗಳನ್ನು ನಿರ್ಮಾಣ ಮಾಡಿ ಮತ್ತೆ ಮತ್ತೆ ಕಿತ್ತು ಸೇತುವೆ ನಿರ್ಮಾಣ ಮಾಡಲು ಕೋಟ್ಯಂತರ ರೂಪಾಯಿ ವ್ಯರ್ಥ ಮಾಡದೆ
ಪ್ರತಿನಿತ್ಯ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತೆ ಮಾಡಬಾರದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಇತ್ತೀಚೆಗೆ ಅವೈಜ್ಞಾನಿಕ ಸೇತುವೆಗಳನ್ನು ಕಿತ್ತು ಕಿತ್ತು ಮಾಡಿದ ಉದಾಹರಣೆಗಳು ಕಣ್ಣು ಮುಂದಿವೆ. ಒಂದು ಬಾರಿ ಮಾಡಿದ ಕಾಮಗಾರಿಗಳು ಶಾಶ್ವತವಾಗಿ ಉಳಿಯಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಹಣ ಪೋಲಾಗದಂತೆ ಎಚ್ಚರ ವಹಿಸಬೇಕು. ಕಾಟಾಚಾರಕ್ಕೆ ಕಾಮಗಾರಿ ನಡೆಸದೆ ಗುಣಮಟ್ಟದ ಕಾಮಗಾರಿ ನಡೆಸಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಸೂಚಿಸಿದರು.
ಈ ಹೊಸ ರೈಲ್ವೆ ಮಾರ್ಗದಲ್ಲಿ ಜಮೀನುಗಳು ಬರಲಿದ್ದು, ಅಲ್ಲಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಗಳು ಇದ್ದು, ಅಲ್ಲೂ ಕೂಡ ರೈತರು ಜಮೀನುಗಳಿಗೆ ಹೋಗಿ ಬರಲು ಯಾವುದೇ ರೀತಿಯ ತೊಂದರೆ ಆಗದಂತೆ ಸೇತುವೆಗಳನ್ನು ನಿರ್ಮಿಸಬೇಕು. ಈ ಭಾಗಗಳಲ್ಲಿ ಸೇತುವೆ ನಿರ್ಮಿಸಲು ಎಸ್ಟಿಮೆಟ್ ಇರದಿದ್ದರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿ ಸೇತುವೆ ನಿರ್ಮಾಣಕ್ಕೆ ಸೇರ್ಪಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಭೂಸ್ವಾಧೀನ ಮಾಡಿಕೊಳ್ಳಲು ರೈತರಿಂದ ಸಮಸ್ಯೆಗಳು ಬಂದರೆ ಜಿಲ್ಲಾಧಿಕಾರಿಗಳು ತ್ವರಿತವಾಗಿ ಬಗೆಹರಿಸುವ ಕೆಲಸ ಮಾಡಬೇಕೆಂದರು.
ಪಕ್ಕದ ಚಿತ್ರದುರ್ಗ ಜಿಲ್ಲೆಯಲ್ಲಿ ರೈಲ್ವೆ ಮಾರ್ಗದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಾಮಗಾರಿ ತ್ವರಿತವಾಗಿ ಗತಿಯಲ್ಲಿ ನಡೆಯುತ್ತಿರುವಂತೆ ಅಲ್ಲೂ ಕೂಡ ತ್ವರಿತ ಗತಿಯಲ್ಲಿ ಕಾಮಗಾರಿ ನಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ರೈಲ್ವೆ ಅಧಿಕಾರಿಗಳು ಇದ್ದರು.