ದಾವಣಗೆರೆ:ಜಗಳೂರಿನ ಬಯಲು ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ ದಾವಣಗೆರೆ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ ಚಿಕ್ಕಮ್ಮನ ಹಟ್ಟಿ ಬಿ.ದೇವೇಂದ್ರಪ್ಪ ಅವರ ನೇತೃತ್ವದಲ್ಲಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಚಿಂತಕ ಡಾ.ಎ.ಬಿ.ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ, ಸ್ವಾಗತ ಸಮಿತಿಯ ಸಂಚಾಲಕ ಎನ್.ಟಿ.ಎರ್ರಿಸ್ವಾಮಿಯವರ ಮಾರ್ಗದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ಸಮ್ಮೇಳನದ ಯಶಸ್ಸಿಗಾಗಿ ಕಳೆದೆರಡು ತಿಂಗಳಿನಿಂದ ಅರ್ಹನಿಶಿ ದುಡಿದ ಸರ್ವರಿಗೂ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಹಿಂದೆ ಜಗಳೂರಿನಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ೧೯೯೪ ರಲ್ಲಿ ನಡೆದಿತ್ತು. ಸುಮಾರು ಮೂರು ದಶಕಗಳ ನಂತರ ಈ ಬಾರಿ ಜಗಳೂರಿನ ಶಾಸಕ ಬಿ.ದೇವೇಂದ್ರಪ್ಪ ಅವರ ಸಂಪೂರ್ಣ ಸಹಕಾರದೊಂದಿಗೆ ನ ಭೂತೋ ನ ಭವಿಷ್ಯತಿ ಮಾದರಿಯಲ್ಲಿ ಈ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ನಡೆದಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಿಸಮನಾಗಿ ಈ ಸಮ್ಮೇಳನ ನಡೆದಿರುವುದು ದಾವಣಗೆರೆ ಜಿಲ್ಲೆಯ ಸಮಸ್ತ ಕನ್ನಡ ಮನಸ್ಸುಗಳಿಗೆ ಅತ್ಯಂತ ಸಂತಸ ತಂದಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಚರಿತ್ರೆಯಲ್ಲಿಯೇ ಪ್ರಪ್ರಥಮ ಬಾರಿಗೆ ಕನ್ನಡ ತಾಯಿ ಭುವನೇಶ್ವರಿಯನ್ನು ಹೊತ್ತ ಕನ್ನಡ ರಥವು ಜಗಳೂರು ತಾಲೂಕಿನ ೨೨ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ನೂರಾರು ಹಳ್ಳಿಗಳಲ್ಲಿ ಸಂಚರಿಸುವ ಮೂಲಕ ಗ್ರಾಮೀಣ ಪ್ರದೇಶದ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮ್ಮೇಳನಕ್ಕೆ ವಿಶಿಷ್ಟವಾದ ಮೆರಗನ್ನು ತಂದಿತು. ಸಮ್ಮೇಳನದ ಉದ್ಘಾಟನಾ ಸಮಾರಂಭದ ಪೂರ್ವದಲ್ಲಿ ನಡೆದ ಕನ್ನಡಾಂಬೆ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ನೂರಾರು ಕಲಾ ತಂಡಗಳು ಹಾಗೂ ಸಾವಿರಾರು ಕಲಾವಿದರು, ಗಣ್ಯರು ಹಾಗೂ ಕನ್ನಡಿಗರು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಆಯೋಜನೆಗೊಂಡಿದ್ದ ಸಾಹಿತ್ಯ ಗೋಷ್ಠಿಗಳು ರಾಜ್ಯ ಮಟ್ಟದ ವಿದ್ವಾಂಸರ ಭಾಗವಹಿಸುವಿಕೆಯ ಮೂಲಕ ಆತ್ಯಂತ ಅರ್ಥಪೂರ್ಣವಾಗಿ ನಡೆದವು. ಗಂಗಾವತಿ ಪ್ರಾಣೇಶ್ ಮತ್ತು ತಂಡದ ಹಾಸ್ಯ ಸಂಜೆ ಹಾಗೂ ವಿದ್ಯಾರ್ಥಿಗಳ, ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನಕ್ಕೆ ಕಿರೀಟಪ್ರಾಯದಂತೆ ಕಂಗೊಳಿಸಿದವು.
ಸಮ್ಮೇಳನವು ಈ ಮಟ್ಟಿಗೆ ಯಶಸ್ವಿಯಾಗಿ ನಡೆಯುವಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾಡಳಿತ, ತಾಲೂಕಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಶಿಕ್ಷಕ ಸಮುದಾಯ, ಪತ್ರಕರ್ತರು, ಸಮ್ಮೇಳನದ ಯಶಸ್ಸಿಗೆ ರಚನೆಯಾದ ವಿವಿಧ ಸಮಿತಿಗಳ ಸದಸ್ಯರು, ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು, ವಿವಿಧ ಸರಕಾರಿ ಇಲಾಖೆಗಳು, ಸಂಘ ಸಂಸ್ಥೆಗಳು, ವಿದ್ವಾಂಸರು, ಸಾಹಿತಿಗಳು, ಕಲಾವಿದರು, ಜಿಲ್ಲಾ ಕಸಾಪ ಪದಾಧಿಕಾರಿಗಳು, ತಾಲೂಕು ಕಸಾಪ ಪದಾಧಿಕಾರಿಗಳು, ಪೋಲಿಸ್ ಇಲಾಖೆ, ಕಾರ್ಮಿಕ ಸಂಘಗಳು, ರೈತ ಸಂಘಗಳು, ಪೌರ ನೌಕರರು, ಕಸಾಪ ಆಜೀವ ಸದಸ್ಯರು ಸೇರಿದಂತೆ ಸಮಸ್ತ ಕನ್ನಡಿಗರು ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶ್ರಮಿಸಿದ ಎಲ್ಲರ ಸಹಕಾರ ಅಪಾರವಾಗಿದೆ. ಸಮ್ಮೇಳನವು ಯಶಸ್ವಿಯಾಗಿ ನಡೆಯಲು ಮಾಧ್ಯಮ ಬಂಧುಗಳು ವಿಶೇಷವಾಗಿ ಕಾರಣರಾಗಿದ್ದಾರೆ. ಅವರ ಸಹಕಾರದಿಂದಲೇ ನಮ್ಮ ಸಮ್ಮೇಳನದ ಸುದ್ದಿಗಳು ರಾಜ್ಯಾದ್ಯಂತ ಪಸರಿಸಲು ಕಾರಣವಾಗಿದೆ. ಅವರ ಸಹಕಾರಕ್ಕೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಭಾರಿಯಾಗಿದೆ. ಎಲ್ಲರಿಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ವತಿಯಿಂದ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಕೃತಜ್ಞತಾಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಜಿಲ್ಲಾ ಸಮ್ಮೇಳನಗಳನ್ನು ಕೇವಲ ಜಿಲ್ಲಾ ಕೇಂದ್ರಗಳಿಗೆ ಮೀಸಲು ಮಾಡದೇ ಸಾಹಿತ್ಯಕ ಚಟುವಟಿಕೆಗಳನ್ನು ಎಲ್ಲಾ ತಾಲೂಕುಗಳಿಗೂ ಕೊಂಡೊಯ್ಯವ ನಮ್ಮ ಕನಸು ನನಸಾಗುತ್ತಿದೆ. ಮುಂದೆಯೂ ಈ ರೀತಿಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ನಡೆಸಲು ಸರ್ವ ಕನ್ನಡಿಗ ಸಹಯೋಗ ಮತ್ತು ಸಹ ಭಾಗಿತ್ವವನ್ನು ಬಿ.ವಾಮದೇವಪ್ಪ ಕೋರಿದರು.