Thursday, August 21, 2025
Homeಸ್ಮರಣೆನಾಡಿಗೆ ಬೆಳಕಾಗಿ ಬಂದ ರಬಕವಿಯ ಗುರುದೇವರು

ನಾಡಿಗೆ ಬೆಳಕಾಗಿ ಬಂದ ರಬಕವಿಯ ಗುರುದೇವರು

ಅನಿಮಿತ್ಯ ಬಂದು ಆಗಿ, ಗೆದ್ದಾಗ ಬೆನ್ನ ಹಿಂದಿನ ಶಕ್ತಿಯಾಗಿ, ಸೋತಾಗ ಕೈಹಿಡಿದು ಮುನ್ನಡೆಸುವ ಮಹಾನ್ ಕರುಣಾಮೂರ್ತಿ ಎಂದರೆ ಅದು ಗುರು. ಪ್ರತಿಯೊಬ್ಬನ ಬದುಕಿನಲ್ಲಿಯೂ ಗುರುವಿನ ಪಾತ್ರ ಮಹತ್ವದಾಯಕ ಎನಿಸಿಕೊಳ್ಳುವುದು.ಭಾರತದಲ್ಲಿನ ಗುರು ಶಿಷ್ಯರ ಪರಂಪರೆಗೆ ಸುದೀರ್ಘವಾದ ಇತಿಹಾಸವೇ ಇದೆ. ಜಗತ್ತನ್ನು ಮುನ್ನಡೆಸುವ ಭಗವಂತನು ಕಣ್ಣಿಗೆ ಕಾಣಲಾರ ಅನುಭವಕ್ಕೆ ಸಿಗಲಾರ ನಾವು ಒಂದಿಷ್ಟು ಮನಸ್ಸು ಮಾಡಿದರೆ ಆ ಕಾಣದ ದೇವನನ್ನು ನೋಡಬಹುದು ಆತನ ದಿವ್ಯ ಸಂದೇಶವನ್ನ ಅನುಭವಿಸಬಹುದು ಸುಲಭವಾಗಿ ನಮ್ಮೆಲ್ಲರ ಕಣ್ಣಿಗೆ ಕಾಣುವ ಆ ಭಗವಂತನ ಸ್ವರೂಪಿಯೇ ಗುರು ಆಗಿರುವನು. ಗುರು ಎಂದರೆ ಬೇರೆಯಲ್ಲ ದೇವನೆಂದರೆ ಬೇರೆಯಲ್ಲ.
ಗುರುವಿಂದಲೇ ಬಂಧುಗಳು
ಗುರುವಿಂದಲೇ ಸಕಲ ದೈವಗಳು
ಗುರುವೇ ದೈವ ಸರ್ವಜ್ಞ
ಸರ್ವಜ್ಞನು ಇಲ್ಲಿ ಹೇಳುವ ಹಾಗೆ ದೇವರನ್ನ ಬಿಟ್ಟು ಗುರು ಇಲ್ಲ, ಗುರುವನ್ನು ಬಿಟ್ಟು ದೇವರಿಲ್ಲ. ದೇವರೇ ಗುರುವಾಗಿರುವನು ಗುರುವೇ ದೇವರಾಗಿರುವನು. ಗುರುವಿನ ಸಂದೇಶಗಳೇ ದೇವ ಸಂದೇಶಗಳಾಗಿರುವವು ಆತನಿಗೆ ಶರಣಾಗುದೆಂದರೆ ಅದು ದೇವನಿಗೆ ಶರಣದಂತೆ ಇದನ್ನೇ ಒಂದು ಕಡೆ ಅಲ್ಲಮ ಪ್ರಭುದೇವರು ತಮ್ಮ ವಚನದಲ್ಲಿ ಹೇಳುತ್ತಾರೆ.
ಕಂಡುದ ಹಿಡಿಯಲೊಲ್ಲದೆ
ಕಾಣದುದನರಸಿ ಹಿಡಿದೆನೆಂದರೆ
ಸಿಕ್ಕಿದೆಂಬ ಬಳಲಿಕ್ಕೆ ನೋಡಾ
ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ //
ಕಣ್ಣಿಗೆ ಕಾಣದ ದೇವನನ್ನು ಹುಡುಕುವುದಕ್ಕಿಂತ ಕಣ್ಣಿಗೆ ಕಾಣುವ ದೇವನಾದ ಗುರುವಿನ ಪಾದ ಹಿಡಿದರೆ ಆ ಕಾಣಲಾರದ ದೇವನನ್ನು ಕಾಣಬಹುದು ಗುರುವಿನ ಪಾದದೊಳಗಿನ ಶಕ್ತಿ ಅಗಮ್ಯ ಅಗೋಚರವಾದದ್ದು.ಅನೇಕ ಶತಮಾನಗಳಿಂದ ಸರ್ವ ಸಮಾಜಕ್ಕೂ ತಮ್ಮ ಜ್ಞಾನದ ಅಮೃತವನ್ನು ಉಣಿಸುತ್ತ ನಮ್ಮನ್ನೆಲ್ಲಾ ಧರ್ಮ ಮಾರ್ಗದಲ್ಲಿ ಮುನ್ನಡೆಸುತ್ತಾ ಬಂದಿರುವುದು ಗುರುಪರಂಪರೆ. ಇಂದಿಗೂ ಅನೇಕ ಗುರುಗಳು ನಮ್ಮ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದು ನಮ್ಮನ್ನು ಉದ್ದರಿಸುತ್ತಿರುವರು. ಅಂತಹ ಅಪರೂಪದ ಸಂತರಲ್ಲೊಬ್ಬರಾದವರೇ ರಬಕವಿಯ ಶ್ರೀ ಬ್ರಹ್ಮಾನಂದ ಮಠದ ಪರಮ ಪೂಜ್ಯಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು. ಸರಳತೆಯ ಸಂತರಾಗಿ ತಮ್ಮ ಮಧುರವಾದ ಮಾತುಗಳ ಮೂಲಕ ಜನರ ಮನವನ್ನು ಅರಳಿಸುತ್ತಿರುವರು. ಪೂಜ್ಯರ ಪ್ರವಚನದ ನುಡಿಗಳು ಎಂಥವರನ್ನು ತಮ್ಮ ಆಕರ್ಷಿಸಿ ಸೆಳೆದುಕೊಳ್ಳುತ್ತವೆ. ಅವರ ಪ್ರೀತಿಯ ಬಲೆಯೊಳಗೆ ಒಮ್ಮೆ ಬಿದ್ದರೆ ತಪ್ಪಿಸಿಕೊಳ್ಳುವುದು ಅಸಾಧ್ಯವಾದದ್ದು. ಶ್ರೀಗಳ ಅನೇಕ ಪ್ರವಚನಗಳು ಗ್ರಂಥರೂಪ ತಾಳಿ ಸರ್ವ ಓದುಗರನ್ನ ತಮ್ಮತ್ತ ಆಕರ್ಷಿಸಿಕೊಂಡಿವೆ. ಪೂಜ್ಯರು ಸಾಹಿತ್ಯ ಲೋಕಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿರುವರು ಎಲ್ಲ ಪರಂಪರೆಯ ಸ್ವಾಮೀಜಿಗಳ ಜೊತೆಗೂ ಅತ್ಯಂತ ಪ್ರೀತಿಯ ಒಡನಾಟ ಹೊಂದಿ ಸರ್ವರ ಹೃದಯ ಗೆದ್ದವರು. ನಿತ್ಯ ನಿರಂತರವಾಗಿ ಶ್ರೀಮಠದಲ್ಲಿ ಭಕ್ತರಿಗೆ ಆಧ್ಯಾತ್ಮದ ಅನುಭೂತಿ ನೀಡುತ್ತಾ ಅನೇಕರ ಅಂತರಾಳದೊಳಗೆ ಜ್ಞಾನದ ಬೆಳಕು ತಂದವರು. ನಮ್ಮಂತ ಸಾಧಕರಿಗೆ ಪೂಜ್ಯರು ಮಾತೆಯ ಸ್ಥಾನದಲ್ಲಿ ನಿಂತು ಹರಿಸುತ್ತಿರುವರು. ಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮೀಜಿಗಳ ಜೊತೆಗೆ ಕಾಲ ಕಳೆದ ಸಮಯವೆಲ್ಲಾ ನಮ್ಮ ಬದುಕಿನ ಅಮೃತಗಳಿಗೆ ಅದು ಎಂದಿಗೂ ಮರೆಯಲಾರದ ನೆನಪಾಗಿ ಸದಾಕಾಲ ಸ್ಮರಣೆಯಲ್ಲಿ ಉಳಿಯುವಂತಹ ಅದ್ಭುತ ಕ್ಷಣವದು. ಅದನ್ನು ಅನುಭವಿಸಿದವರೇ ಧನ್ಯರು.

                            ✍️ ಶ್ರೀ ರಾಮಕೃಷ್ಣ ದೇವರು 
                     ಶ್ರೀ ಷಣ್ಮುಖಾರೂಢ  ಮಠ. ವಿಜಯಪುರ
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments