ಬೆಂಗಳೂರು:ಏಪ್ರಿಲ್ 9 ರಂದು ನಡೆಯುವ ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಸ್.ಡಿ.ಪಿ.ಐ ಸೇರಿದಂತೆ ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಕರ್ನಾಟಕ ರಾಜ್ಯ ಸಮಿತಿ ಮತದಾರರಿಗೆ ಕರೆ ನೀಡಿದೆ.
ಒಂದು ಕಾಲದಲ್ಲಿ ದಾವಣಗೆರೆ ಕಾರ್ಮಿಕ ವರ್ಗದ ಸೌಹಾರ್ದ ಕೇಂದ್ರವಾಗಿತ್ತು. ಆದರೆ ಹಿಂದುತ್ವ ಕೋಮುವಾದವು ಆರ್.ಎಸ್.ಎಸ್. ಬಿಜೆಪಿ ನೇತೃತ್ವದಲ್ಲಿ ಕಾರ್ಮಿಕ ವರ್ಗವನ್ನು ವಿಭಜಿಸಿ ಜನರ ಐಕ್ಯತೆಯನ್ನು ಮುರಿಯುವ ವ್ಯವಸ್ಥಿತ ಸಂಚನ್ನು ಕಳೆದ ಮೂರು ದಶಕಗಳಿಂದ ಮಾಡುತ್ತಲೇ ಬಂದಿದೆ ಅದರ ಪರಿಣಾಮ 1990 ಹಾಗೂ 1994 ರಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಹತ್ತಾರು ಬಡಜನರು ಜೀವ ಕಳೆದುಕೊಂಡಿದ್ದರು ಮಾತ್ರವಲ್ಲ ನೂರಾರು ಕುಟುಂಬಗಳು ಕೋಮು ಸಂಘರ್ಘದ ಬೆಂಕಿಯಲ್ಲಿ ನಲುಗಿ ಹೋಗಿದ್ದವು.ತಮ್ಮ ಮತೀಯ ರಾಜಕೀಯಕ್ಕಾಗಿ ಇಂತಹ ಕೃತ್ಯಗಳನ್ನು ಆರ್.ಎಸ್.ಎಸ್ ಹಾಗೂ ಬಿಜೆಪಿ ಗಳೆರಡು ವ್ಯವಸ್ಥಿತವಾಗಿ ಅಲ್ಲಿನ ಅಮಾಯಕ ಹಾಗೂ ಮುಗ್ಧ ಜನರನ್ನು ಬಳಸಿ ನಡೆಸಿದ್ದನ್ನು ದಾವಣಗೆರೆ ಜನರ ಮನಸ್ಸಿನಲ್ಲಿ ಇನ್ನೂ ಹಸಿ ಹಸಿಯಾಗಿದೆ. ಆದರೆ ಇತಿಹಾಸದಿಂದ ಪಾಠ ಕಲಿಸಿರುವ ದಾವಣಗೆರೆ ಪ್ರಜ್ಞಾವಂತ ಜನರು ಇಂತಹ ಕೋಮು ಶಕ್ತಿಗಳನ್ನು ಮೂಲೆಗುಂಪು ಮಾಡುತ್ತಾ ಬಂದಿದ್ದಾರೆ. ಆದರೂ ಪ್ರತಿವರ್ಷದ ವಿಜಯದಶಮಿ, ಗಣೇಶ ಹಬ್ಬಗಳ ಸಂದರ್ಭಗಳಲ್ಲಿ ಇಂತಹ ಉನ್ಮಾದಗಳನ್ನು ನಿರಂತರವಾಗಿ ಸೃಷ್ಟಿಸಲಾಗುತ್ತಿದೆ. ಮುಸ್ಲಿಂ ಹಾಗೂ ವಿವಿಧ ಜಾತಿ ಉಪಜಾತಿಯ ಹಿಂದೂಗಳ ಸಮ್ಮಿಳಿತವಾಗಿರುವ ದಾವಣಗೆರೆ ದಕ್ಷಿಣ ಮತಕ್ಷೇತ್ರವು ಭವಿಷ್ಯದಲ್ಲಿ ಶಾಂತಿ ಸೌಹಾರ್ದತೆಯ ಕೇಂದ್ರವಾಗಿ ಉಳಿಯುವುದು ತೀರ ಅವಶ್ಯವಾಗಿದೆ.
ಆರ್.ಎಸ್.ಎಸ್. ಮತ್ತು ಅದರ ಸಂಘಟನೆಗಳ ಹಿಂದುತ್ವ ಕೋಮುವಾದ ಮತ್ತು ಎಸ್.ಡಿ.ಪಿ.ಐ., ಜಮಾತೆ-ಇಸ್ಲಾಮಿ ಹಿಂದ್ ಪಕ್ಷಗಳ ಮುಸ್ಲಿಂ ಮೂಲಭೂತವಾದ ಎರಡೂ ಭವಿಷ್ಯದಲ್ಲಿ ಜನತೆಯ ಐಕ್ಯತೆಯನ್ನು ನಾಶ ಮಾಡುತ್ತವೆ. ಸಾಮಾನ್ಯ ಹಿಂದುಗಳು ಮತ್ತು ಮುಸ್ಲಿಮರು ಕೋಮು ಸೌಹಾರ್ಧತೆಯಿಂದ ಬದುಕುವುದು ಮುಖ್ಯವಾಗಿದೆ.
ಅಲ್ಪಸಂಖ್ಯಾತ ಸಮುದಾಯದಿಂದ ಅಭ್ಯರ್ಥಿಯನ್ನು ನಿಲ್ಲಿಸುವುದರಲ್ಲಿ ಕಾಂಗ್ರೆಸ್ ಪಕ್ಷದ ಗೊಂದಲದ ಧೋರಣೆಯನ್ನು ಅಲ್ಪಸಂಖ್ಯಾತ ಸಮುದಾಯ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್ ಚಾರಿತ್ರಿಕವಾಗಿ ಇಂತಹ ಅನ್ಯಾಯಗಳನ್ನು ಮಾಡುತ್ತಲೇ ಬಂದಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರೂ ಸೇರಿದಂತೆ ಜಾತ್ಯಾತೀತ ಜನತೆ ಎಡ-ಪ್ರಜಾಸತ್ತಾತ್ಮಕ ಪರ್ಯಾಗಳ ಜೊತೆ ಅಣಿನೆರೆಯಬೇಕಾದ ಅಗತ್ಯವಿದೆ. ಕಾಂಗ್ರೆಸ್ ನ ವಂಶಪಾರಂಪರ್ಯ ಅವಕಾಶವಾದಿತನವನ್ನು ಭವಿಷ್ಯದಲ್ಲಿ ಎದುರಿಸಬೇಕಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ದೇಶದ ಮತ್ತು ರಾಜ್ಯದ ಒಟ್ಟಾರೆ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ಕೋಮುವಾದಿ ಮತ್ತು ಮೂಲಭೂತವಾದಿ ಶಕ್ತಿಗಳನ್ನು ಸೋಲಿಸಲು ಎಲ್ಲಾ ಜಾತ್ಯಾತೀತ, ಪ್ರಗತಿಪರ ಶಕ್ತಿಗಳು ಪ್ರಯತ್ನಿಸಬೇಕಾಗಿದೆ. ಈ ನಿಟ್ಟಿನಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನತೆ ಯೋಚಿಸಿ ಮತ ನೀಡಬೇಕೆಂದು ಸಿಪಿಐ(ಎಂ) ಪಕ್ಷವು ಕರೆ ನೀಡುತ್ತದೆ.ಎಂದು
ಡಾ. ಕೆ.ಪ್ರಕಾಶ ರಾಜ್ಯ ಕಾರ್ಯದರ್ಶಿ
ಕೆ.ಮಹಾಂತೇಶ್ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ
ಕೆ.ಎಚ್. ಆನಂದರಾಜ್ ಕಾರ್ಯದರ್ಶಿ
ಜಿಲ್ಲಾ ಸಂಘಟನಾ ಸಮಿತಿ ದಾವಣಗೆರೆ ಇವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

