Homeರಾಜಕೀಯ“ಕ್ಷೇತ್ರದ ಅಭಿವೃದ್ಧಿ ಸಹಿಸದೆ ಜನರ ಮಧ್ಯೆ ಕಲಹ ಹಚ್ಚುವ ಕೆಲಸ ಮಾಡುತ್ತಿರುವ ಸ್ಥಳೀಯ ಮಾಜಿ ಶಾಸಕರು":...

“ಕ್ಷೇತ್ರದ ಅಭಿವೃದ್ಧಿ ಸಹಿಸದೆ ಜನರ ಮಧ್ಯೆ ಕಲಹ ಹಚ್ಚುವ ಕೆಲಸ ಮಾಡುತ್ತಿರುವ ಸ್ಥಳೀಯ ಮಾಜಿ ಶಾಸಕರು”: ಶಾಸಕ ಬಿ.ದೇವೇಂದ್ರಪ್ಪ

ದಾವಣಗೆರೆ:ಜಗಳೂರು ತಾಲ್ಲೂಕು ಬರಪಟ್ಟಿಗೆ ಸೇರ್ಪಡೆಯಾದ ನಂತರ ಪಟ್ಟಣಕ್ಕೆ ಬುಧವಾರ ಬಂದ ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಸ್ವಾಗತಿಸಿ, ಮೆರವಣಿಗೆ ಮೂಲಕ ಜನಸಂಪರ್ಕ ಕಚೇರಿಗೆ ಕರೆ ತಂದರು. ಅಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

“ಮುಂದಿನ ಚುನಾವಣೆಯ ಬಗ್ಗೆ ನಾನು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಮತ್ತು ಎಚ್.ಪಿ.ರಾಜೇಶ್ ಅವರ ಅಧಿಕಾರದ ಹಪಾಹಪಿ ನೋಡಿದ ನಂತರ ಇವರ ವಿರುದ್ಧ ಮತ್ತೊಮ್ಮೆ ಸ್ಪರ್ಧಿಸಿ ಗೆದ್ದು ಬಂದು ಶಾಸಕ, ಮಂತ್ರಿಯಾಗಿ ತೋರಿಸುತ್ತೇನೆ.

ಆರ್‌ಎಸ್‌ಎಸ್, ಹಿಂದುತ್ವ, ಸಂಸ್ಕೃತಿ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಯವರು ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಬಸ್‌ಗಳಿಗೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಆದೇಶ ಹಾಗೂ ಎನ್‌ಡಿಆರ್‌ಎಫ್ ಕಠಿಣ ನಿಯಮಗಳಿಂದಾಗಿ ಬರ ಘೋಷಣೆ ವಿಳಂಬವಾಗಿದೆ” ಎಂದು ತಿರುಗೇಟು ನೀಡಿದರು.

“ಸೆಟಲೈಟ್ ಸಮೀಕ್ಷಾ ವರದಿ ಮಾನದಂಡಗಳಿಂದ ಬಿಟ್ಟು ಹೋಗಿರುವುದನ್ನು ಮನಗಂಡಿದ್ದ ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅವರು ಸೆ.22ರಂದು ಆದೇಶ ಹೊರಡಿಸುವ ಭರವಸೆ ನೀಡಿದ್ದರು. ಈ ಬಗ್ಗೆ ಪತ್ರಿಕೆಗಳಿಗೆ ನಾನು ಮೊದಲೇ ಸ್ಪಷ್ಟಪಡಿಸಿದ್ದೆ. ಮೊದಲನೇ ಪಟ್ಟಿಯಿಂದ ಮೂರು ಪಟ್ಟಿಗಳಲ್ಲಿ ಬರಪಟ್ಟಿಯಿಂದ ಕೈತಪ್ಪಿದ್ದರಿಂದ ನಾನು ಸಿಎಂ ಡಿ.ಕೆ.ಶಿವಕುಮಾರ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರನ್ನೊಳಗೊಂಡಂತೆ ಸಚಿವರನ್ನು ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ನಿರಂತರ ಶ್ರಮಪಟ್ಟಿದ್ದೇನೆ. ಸರ್ಕಾರ ಕೊನೆಗೂ ನಮ್ಮ ಮನವಿ ಪರಿಗಣಿಸಿ ನ್ಯಾಯ ಕಲ್ಪಿಸಿದೆ” ಎಂದರು.

“ಮಾಜಿ ಶಾಸಕ ರಾಜೇಶಣ್ಣ ಅವರೇ, ನಿಮ್ಮೂರು ಬಿದರಕೆರೆ ಗ್ರಾಮದಲ್ಲಿ ಕೆರೆಯಿದ್ದರೂ 57 ಕೆರೆ ತುಂಬಿಸುವ ಯೋಜನೆಯಡಿ ಯಾಕೆ ನೀರು ಹರಿಸಿಲ್ಲ. ನನ್ನ ಸ್ವಗ್ರಾಮ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಕೆರೆಯಿಲ್ಲದಿದ್ದರೂ ನೂತನ ಕೆರೆ ನಿರ್ಮಿಸಿ ನೀರು ಹರಿಸಿದ್ದೇನೆ, ಹೋಗಿ ನೋಡಿ.

ಬಿದರಕೆರೆ ಗ್ರಾಮಸ್ಥರ ಮನವಿಯಂತೆ ನೀರಾವರಿ ಸಚಿವರೊಂದಿಗೆ ಚರ್ಚಿಸಿ, ಬಿದರಕೆರೆ, ಜಮ್ಮಾಪುರ ಕೆರೆಗಳ ಸೇರ್ಪಡೆಗೊಳಿಸುತ್ತಿದ್ದೇನೆ. ನೀವು ಮೊದಲು ಮನೆಗೆದ್ದು ಮಾರು ಗೆಲ್ಲಿ. ವಿನಾಕಾರಣ ನನ್ನ ಖಾಸಗಿ ವಿಚಾರಗಳಲ್ಲಿ ಮೂಗು ತೂರಿಸಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನನ್ನ ಸಹೋದರರು. ಅಭಿವೃದ್ಧಿ ಕೆಲಸಗಳಿಗೆ ನಮ್ಮ ಸಹೋದರರ ನಡುವೆ ಜಗಳ, ಮನಸ್ತಾಪ ಇದ್ದದ್ದೇನಿಲ್ಲ. ಜಿಲ್ಲೆಯಲ್ಲಿ ನಮ್ಮ ಶಾಸಕರು, ಸಂಸದರು, ಸಚಿವರು ಒಗ್ಗಟ್ಟಾಗಿದ್ದೇವೆ.

ಮಾಜಿ ಶಾಸಕರಿಗೆ ಶಕ್ತಿ ಇದ್ದರೆ ಭದ್ರಾ ಮೇಲ್ದಂಡೆ ಯೋಜನೆಗೆ ಬಿಡಿಗಾಸೂ ನೀಡದ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿ ನೋಡೋಣ” ಎಂದು ಸವಾಲು ಹಾಕಿದರು.

ಜಗಳೂರು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಇದೇ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

“ಜಗಳೂರು ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ, ವಿದ್ಯುತ್ ಸ್ಟೇಷನ್‌, ಬಿಳಿಚೋಡು ಸೇತುವೆ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾಜಿ ಶಾಸಕರು ಕೈಜೋಡಿಸಲಿ. ಭದ್ರಾ ಮೇಲ್ದಂಡೆ ಯೋಜನೆಗೆ ಸರ್ವಪಕ್ಷ ನಿಯೋಗ ತೆರಳೋಣ, ಚುನಾವಣೆ ಬಂದಾಗ ರಾಜಕಾರಣ ಮಾಡೋಣ” ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ, ಮುಖಂಡರಾದ ತಿಪ್ಪೇಸ್ವಾಮಿಗೌಡ, ಬಿ.ಮಹೇಶ್ವರಪ್ಪ, ಎನ್.ಓಮಣ್ಣ ಕೃಷ್ಣಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಅಹಮದ್, ಚಿತ್ತಪ್ಪ, ಅಜ್ಜಪ್ಪ, ಮರೇನಹಳ್ಳಿ ಶೇಖರಪ್ಪ, ಮಾಳಮ್ಮ, ವೆಂಕಟೇಶ್, ರಾಮಣ್ಣ, ಶಿಲ್ಪಾ, ಜಯಲಕ್ಷ್ಮಿ, ಸಾವಿತ್ರಮ್ಮ ಸೇರಿದಂತೆ ಹಲವರು ಇದ್ದರು.(ವರದಿ‌: ಎಂ.ಡಿ. ಅಬ್ದುಲ್ ರಖೀಬ್)


RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments