ಹಾವೇರಿ.ಜು.14: ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹೆಣ್ಣುಮಕ್ಕಳ ಸಬಲೀಕರಣವು ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಟಿ. ಬಾಗಲಕೋಟಿ ಹೇಳಿದರು.
ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶ್ವ ಜನಸಂಖ್ಯೆ ಹೆಚ್ಚಳ ಹಾಗೂ ಭಾರತದ ಸಂದರ್ಭದಲ್ಲಿ ಅರ್ಥಿಕ ವಲಯದ ವೃದ್ಧಿಯ ಸ್ಥಿತಿಗತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಯುವ ಸಮುದಾಯದ ಪ್ರಮಾಣ ಕೇವಲ ಶೇ. 30 ರಷ್ಟಿದ್ದು, ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಇದರಿಂದ ಪ್ರಜನನ ಪ್ರಕ್ರಿಯೆ ಮುಂದೂಡಲ್ಪಟ್ಟು ಜನಸಂಖ್ಯೆ ನಿಯಂತ್ರಣ ಸಾಧ್ಯವಾಗುವುದು ಎಂದು ವಿಶ್ಲೇಷಿಸಿದರು.
ವಿಶ್ವದ ಜನಸಂಖ್ಯೆಯು ಎಂಟುನೂರು ಕೋಟಿ ತಲುಪಿದ್ದು, ಭೂಮಿಯ ಧಾರಣಾಶಕ್ತಿಯನ್ನು ಸ್ಥಿರವಾಗಿ ಕಾಪಾಡಿಕೊಂಡು ಹೋಗಬೇಕಾದ ಸವಾಲು ಎದುರಾಗಿದೆ. 1987ರ ಜುಲೈ 11 ರಂದು ವಿಶ್ವದ ಜನಸಂಖ್ಯೆಯು ಐದುನೂರು ಕೋಟಿ ತಲುಪಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ಕರೆಕೊಟ್ಟಿದ್ದು, ಜಗತ್ತಿನಾದ್ಯಂತ ಜನಸಂಖ್ಯಾ ಹಚ್ಚಳದ ಪರಿಣಾಮಗಳನ್ನು ಕುರಿತು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಭಾರತ 142 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ವಿಶ್ವಜನಸಂಖ್ಯೆಯ ಶೇ. 18 ರಷ್ಟು ಜನಸಂಖ್ಯೆ ಹೊಂದುವ ಮೂಲಕ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದೆ. ವಿಶ್ವಜನಸಂಖ್ಯೆಯ ಶೇ. 17 ರಷ್ಟು ಪಾಲು ಹೊಂದಿರುವ ಚೀನಾವನ್ನು ಹಿಂದಿಕ್ಕಿದೆ. ವೈದ್ಯಕೀಯ ಸೌಲಭ್ಯಗಳ ಹೆಚ್ಚಳ ಮತ್ತು ಶಿಶು ಮರಣ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಭಾರತದ ಜನಸಂಖ್ಯಾ ವೃದ್ಧಿಯ ದರ ಕಳೆದ ಒಂದು ದಶಕದಲ್ಲಿ ಕಡಿಮೆಯಾಗುತ್ತಿದೆ. ಆದರೆ ಹೆಚ್ಚುತ್ತಿರುವ ಜನಸಂಖ್ಯೆಯು ಪ್ರಗತಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸವಾಲುಗಳನ್ನು ಹುಟ್ಟುಹಾಕುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮಿ ತಿರ್ಲಾಪುರ, ಭಾರತೀಯ ಸಮಾಜದಲ್ಲಿನ ಕೆಲವು ಪಾರಂಪರಿಕ ನಂಬಿಕೆಗಳಿಂದಾಗಿ ಲಿಂಗ ತಾರತಮ್ಯ ಜಾರಿಯಲ್ಲಿದೆ. ಮಹಿಳೆ ಇಂದು ಎಲ್ಲ ರಂಗಗಳಿಲ್ಲಿಯೂ ಮುಂಚೂಣಿಯ ಸ್ಥಾನದಲ್ಲಿದ್ದು, ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿ ಯುವ ಸಮುದಾಯವು ಲಿಂಗ ತಾರತಮ್ಯದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಡಾ.ಪ್ರಶಾಂತ ಎಚ್.ವೈ., ಡಾ.ಅನಿತಾ ಹಾಲಮತ, ಡಾ. ಚಿದಾನಂದ ಕಮ್ಮಾರ್, ಡಾ.ವಿಶ್ವನಾಥ ಚಿಂತಾಮಣಿ, ಪೆÇ್ರ. ವಿ.ಎಸ್.ಕೆಲೂರ ಮತ್ತಿತರು ಉಪಸ್ಥಿತರಿದ್ದರು.