Tuesday, December 24, 2024
Homeಶಾಮನೂರು ಶಿವಶಂಕರಪ್ಪ : ಮುಕ್ಕಾಗದ ಮತ್ತು ಮುಪ್ಪಾಗದ ಚೇತನ

ಶಾಮನೂರು ಶಿವಶಂಕರಪ್ಪ : ಮುಕ್ಕಾಗದ ಮತ್ತು ಮುಪ್ಪಾಗದ ಚೇತನ

ಶಾಮನೂರು ಎಂಬ ಹೆಸರು ದಾವಣಗೆರೆಗೆ ಲಗತ್ತಾಗಿರುವ ದಾವಣಗೆರೆ ಪರಿಸರದ ಒಂದು ಚಿರಪರಿಚಿತ‌ ಊರು. ಶಾಮನೂರು ಶಿವಶಂಕರಪ್ಪ ಈ ಊರಿನವರಲ್ಲ. ಪರಂತು ಈ ಊರಿನ ದೇವರು ಆಂಜನೇಯ ಸ್ವಾಮಿಯ ಪರಮಭಕ್ತರು. ಆದರೆ ಶಾಮನೂರು ಶಿವಶಂಕರಪ್ಪ ಎಂಬುದು ಕರ್ನಾಟಕದ ಸೀಮೆಯ ತುಂಬೆಲ್ಲಾ ಪ್ರಸಿದ್ಧಿ ಪಡೆದಿರುವ ಜನಜನಿತ ಹೆಸರು. 

ಅವರು ಜನಾನುರಾಗಿ ರಾಜಕಾರಣಿಯಾಗಿ, ಸಾಮಾಜಿಕ ಬದುಕಿನ ಮಹತ್ತರ ವ್ಯಕ್ತಿಯಾಗಿ, ಸಂಘ ಸಂಸ್ಥೆಗಳು ಮತ್ತು ನಿರ್ಗತಿಕರ ಬದುಕಿಗೆ ನೆರವಾದ ದಾನಿಯಾಗಿ, ನೂರಾರು ಕುಟುಂಬಗಳ ಬದುಕಿಗೆ ಆಪತ್ ಬಂಧುವಾಗಿ, ಇವೆಲ್ಲಕ್ಕೂ ಮಿಗಿಲಾಗಿ ಶೈಕ್ಷಣಿಕ ಬದುಕಿನ ವಿದ್ಯಾಕಾಶಿಯನ್ನು ಸಮೃದ್ಧಗೊಳಿಸಿದ ಶಿಕ್ಷಣಶಿಲ್ಪಿ ಶಾಮನೂರು ಶಿವಶಂಕರಪ್ಪ. 
ನೆನಪಿರಲಿ ಅವರ ಸಾರಥ್ಯದ ಬಾಪೂಜಿ ವಿದ್ಯಾಸಂಸ್ಥೆಯಿಂದ ಪ್ರತಿವರುಷವೂ ಇಪ್ಪತ್ತು ಸಾವಿರಕ್ಕು ಮಿಕ್ಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಾರೆ. 

ಇದು ಶಾಮನೂರು ಶಿವಶಂಕರಪ್ಪ ಕುರಿತು ಬಹುಮುಖಿ‌ ವ್ಯಕ್ತಿತ್ವ ದರ್ಶನದ ಪುಟ್ಟವರ್ಣನೆ. ಅವರು ನಡೆದು ಬಂದ ಆರೇಳು ದಶಕದ ಪಯಣದ ದಾರಿ ಸರಳ ಸುಬಗವೇನಲ್ಲ. ಅದೆಲ್ಲ ಕಲ್ಲು, ಮುಳ್ಳು, ಮಣ್ಣು ತುಂಬಿದ ಕಾಠಿಣ್ಯದ ಹಾದಿ. ಅಂತಹ ಹಾದಿಯಲ್ಲಿ ನಡೆದು ಬಂದುದು. ಅದನ್ನು ಖುದ್ದು ತಾವೇ ಹಸನು ಮಾಡಿಕೊಂಡು ನಡೆದು ಬಂದವರು. ಅದು ಕೇವಲ ವಯಕ್ತಿಕ ಬದುಕಿನ ಹಾದಿಯಾಗಿರದೇ ಸಂಘ ಸಂಸ್ಥೆಗಳು ಮತ್ತು ಸಾಮಾಜಿಕ ಬದುಕಿನ ಸಾರ್ವಜನಿಕ ಜೀವನದ ಹಾದಿಯೇ ಆಗಿತ್ತು. 

ಹಾಗೆ ನೋಡಿದರೆ ರಾಜಕಾರಣವೇ ಅವರ ಗಮ್ಯ ಗಂತವ್ಯವೇನಲ್ಲ. ಅಷ್ಟಕ್ಕೂ ರಾಜಕಾರಣವೇ ಇವರನ್ನು ಹುಡುಕಿಕೊಂಡು ಬಂದುದು. ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಅವುಗಳಿಗೆ ಶಾಮನೂರು ಜತೆಗೆ ಸಹೃದಯತೆಯ ಸದಾಸಖ್ಯ. ಅಷ್ಟರಮಟ್ಟಿಗೆ ಅವರು ಅಜಾತ ಶತ್ರು. ಆರಂಭಕ್ಕೆ ವ್ಯಾಪಾರೋದ್ಯಮ, ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಜೀವನ ಅವರ ಆದ್ಯತೆಯ ಕ್ಷೇತ್ರ. 

1995 ರಲ್ಲಿ ಮೊದಲ ಬಾರಿಗೆ ಅವರು ಶಾಸಕರಾದ ನಂತರ ಅವರ ಪಾಲಿಗೆ ವಿಧಾನಸಭೆ ಮತ್ತು ಲೋಕಸಭೆ ಪ್ರವೇಶ ದ್ವಾರಗಳು ಖುಲ್ಲಾ ಆದವು. ಅಲ್ಲೀಮಟ ಕೆ.ಪಿ.ಸಿ.ಸಿ. ಖಜಾಂಚಿ ಹುದ್ದೆಯಲ್ಲೇ ಸಂತೃಪ್ತರು. ಅಷ್ಟೇ ಯಾಕೆ ಅವರ ಆ ಹುದ್ದೆಯನ್ನು ಇದುವರೆಗೂ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಾಗಿಲ್ಲ. ಅವರು ಬದುಕಿರುವವರೆಗೂ ಅವರೇ ಖಾಯಂ ಖಜಾಂಚಿ. ಹಾಗೆಂದು ಹಣದಿಂದಲೇ ಅವರು ಯಾವತ್ತೂ ರಾಜಕೀಯ ಅಧಿಕಾರ ಪಡೆದವರಲ್ಲ. ದೇವರಾಜ ಅರಸು ಕಾಲದಲ್ಲೇ ಪ್ರಮುಖ ರಾಜಕಾರಣಿ ಎಂಬ ರಾಜ್ಯಮಟ್ಟದ ಹೆಸರು. ಆದರೆ ಅದಕ್ಕೆ ಮೊದಲೇ ಅವರು ದಾವಣಗೆರೆ ನಗರಸಭೆ ಅಧ್ಯಕ್ಷ ಪಟ್ಟ ಏರಿ ಬಂದವರು.

ನನಗೆ ಪವಾಡಗಳಲ್ಲಿ ನಂಬಿಕೆ ಇಲ್ಲ. ಆದರೆ ಶಾಮನೂರು ಶಿವಶಂಕರಪ್ಪ ಅವರ ವಿಷಯದಲ್ಲಿ ಘಟಿಸುವ ಕೆಲವು ಪವಾಡ ಸದೃಶ ಸಂಗತಿಗಳನ್ನು ನಂಬಲೇ ಬೇಕಿದೆ. ಅವರಿಗೀಗ ತೊಂಬತ್ಮೂರು ವರುಷಗಳ ಏರುಪ್ರಾಯ. ಇಂತಹ ವಯಸ್ಸಿನಲ್ಲಿ ಅವರು ಚುನಾವಣೆಗೆ ಸ್ಪರ್ಧಿಸುವುದು ತರವಲ್ಲ. ಅದು ಅನೇಕರಿಗೆ ಸಹಜವೂ ಅನಿಸಿತ್ತು. ಹಾಗೊಂದು ವೇಳೆ ಸ್ಪರ್ಧಿಸಿ ಪರಾಜಿತರಾದರೆ ಈ ವಯಸ್ಸಿನಲ್ಲಿ ಸೋಲಿನ ನೋವು ಬದುಕಿನ ಕಡೇ ಗಳಿಗೆವರೆಗೂ ಬಾಧಿಸದೇ ಬಿಡುವುದಿಲ್ಲ. ಇಂತಹದ್ದೊಂದು ಗುರುತರ ಆತಂಕ ಹಿತೈಷಿಗಳದಾಗಿತ್ತು. ಗೆದ್ದರೂ ಅವಧಿ ಪೂರೈಸುವ ಆರೋಗ್ಯ ಅವರಿಗಿಲ್ಲವೆಂದು ಕೆಲವು ಕುಹಕಿಗಳ ಕುಹಕ ನುಡಿ. ಇದ್ಯಾವುದನ್ನು ಕೇರ್ ಮಾಡದೇ ಅವರು ಚುನಾವಣಾ ಕಳಕ್ಕಿಳಿದೇ ಬಿಟ್ಟರು. 

ಏಕೆಂದರೆ ಅವರಿಗೆ ವಾಸ್ತವದ ದಟ್ಟ ಅರಿವಿತ್ತು. ದಾವಣಗೆರೆ ಜನರು ತನ್ನನ್ನು ಯಾವತ್ತೂ 'ಕೈ' ಬಿಡುವುದಿಲ್ಲ ಎಂಬ ಅಪಾರ ನಂಬುಗೆಯಿತ್ತು. ರಿಯಾಲಿಟಿ ಚೆಕ್ ಮಾಡಲು ಬಂದ ಮಾಧ್ಯಮದ ಕಣ್ಣುಗಳು ಕೂಡಾ ಬೆಕ್ಕಸ ಬೆರಗಾದವು. ಪ್ರಚಾರಕ್ಕೆಂದು ಶಾಮನೂರು ಸಾಹುಕಾರರು ವಿದ್ಯುತ್ ಚಾಲಿತ ತೆರೆದ ಗಾಡಿ ಮೂಲಕ ನಗರದಲ್ಲಿ ಓಡಾಡುವಾಗ ಸಾಮಾನ್ಯ ಜನರು ತೋರಿದ ಪ್ರೀತಿ ಕಂಡು ನಾನಂತೂ ಬೆಕ್ಕಸ ಬೆರಗಾದೆ. 

ಕೆಲವರಂತೂ ಅವರ ಪಾದಮುಟ್ಟಿ ನಮಸ್ಕರಿಸುತ್ತಿದ್ದರು. ಹಾಗೆ ನೋಡಿದರೆ ಹಿರಿಯಜೀವ ಎಸ್ಸೆಸ್ ಅವರೇನು ಅದನ್ನು ಬಯಸಿದವರಲ್ಲ. ಉಲ್ಲಾಸ ತುಂಬಿ ತುಳುಕುವ ತಮ್ಮಕಾಲದ ಹಿರಿಯ ಚೇತನಕ್ಕೆ ಸಾಮಾನ್ಯರು ಸಲ್ಲಿಸುವ ಪ್ರೀತಿ, ಗೌರವ ಅದಾಗಿತ್ತು. ಅದು ಅವರ ಪಾಲಿನ ವಾತ್ಸಲ್ಯದ ಭಕುತಿಯಂತೆ ಗೋಚರಿಸುತ್ತಿತ್ತು. ಎಸ್ಸೆಸ್ ನಂಬಿದ ಜನ ಅವರ 'ಕೈ' ಬಿಡದೇ ನಿರೀಕ್ಷೆ ಮೀರಿ 27888 ರಷ್ಟು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದರೆಂದರೆ ಜನ ಮತ್ತು ಎಸ್ಸೆಸ್ ನಡುವಿನ ನಂಬುಗೆ ಅದೆಷ್ಟು 'ಅದಮ್ಯ' ಎಂಬುದು ತಿಳಿಯ ಬಲ್ಲದು. ಅದನ್ನು ಈ ಗೆಲುವು ಗಟ್ಟಿಯಾಗಿ ಸಾಬೀತು ಗೊಳಿಸಿದೆ.

ಅವರ ತೊಂಬತ್ಮೂರನೇ ಹುಟ್ಟುಹಬ್ಬದ ದಿನದಂದು ದೃಶ್ಯಮಾಧ್ಯಮದ ಪತ್ರಕರ್ತರು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಮುಖವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎದುರಾಳಿ ಬಿ‌.ಜೆ.ಪಿ. ಯನ್ನು ಎದುರಿಸುವ ಕುರಿತಾದ ಪ್ರಶ್ನೆ. ಅದಕ್ಕೇನಂತೆ ನಮ್ಮ ಕಾಂಗ್ರೆಸ್ಸಿನಲ್ಲಿ ಬೇಕಾದಷ್ಟು ಮಂದಿ ಅಭ್ಯರ್ಥಿಗಳಿದ್ದಾರೆ. ಬೇಕಾದರೆ ದಾವಣಗೆರೆಯಲ್ಲಿ ನಾನೇ ಸೆಡ್ಡು ಹೊಡೆಯುತ್ತೇನೆ. 

ಅಳಿಯ ಜಿ. ಎಂ. ಸಿದ್ದೇಶನೆದುರು ಗೆದ್ದು ಬರುವೆ. ಹೇಗಿದ್ರೂ ಈಗೊಬ್ಬ ಬೀಗರು ಜಗದೀಶ ಶೆಟ್ರು ಈಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಹೀಗೆ ಅಗ್ದೀ ಸೋಜಾಗಿ, ಅಷ್ಟೇ ಚುರುಕಾಗಿ ತಮ್ಮದೇ ಆದ ದಾವಣಗೇರಿಯ ಜವಾರಿತನದಿಂದ ತುಟಿಯಂಚಲೇ ನಕ್ಕು ಉತ್ತರಿಸುವ ವೈಖರಿಯೇ ಸೊಗಸಾಗಿತ್ತು. ತೊಂಬತ್ಮೂರರ ಅವರ ಈ ಜೀವನೋತ್ಸಾಹ ಎಂಥವರಿಗೂ ಅದು ಪವಾಡ ಸದೃಶ ಅಲ್ಲದೇ ಇನ್ನೇನು.?
  ✍️ಮಲ್ಲಿಕಾರ್ಜುನ ಕಡಕೋಳ
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments