ದಾವಣಗೆರೆ-ಹಿಂದೆಂದಿಗಿಂತಲೂ ಇಂದು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಸೈದ್ಧಾಂತಿಕವಾಗಿ ತಿಳಿದುಕೊಳ್ಳಬೇಕಾದದು ಬಹಳ ಅಗತ್ಯವಾಗಿದೆ ಎಂದು ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ಆವರಗೆರೆ ಚಂದ್ರು ಹೇಳಿದರು. ಅವರು ಇಂದು ನಗರದ ಶೇಖರಪ್ಪ ನಗರದಲ್ಲಿರುವ ಕಾಮ್ರೆಡ್ ಹೆಚ್ ಅಡಿವೆಪ್ಪ ಸಮುದಾಯ ಭವನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲೆಯ ಪಕ್ಷದ ಸದಸ್ಯರ ಸೈದ್ಧಾಂತಿಕ ಅಧ್ಯಯನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ದೇಶ ಕಟ್ಟುವಲ್ಲಿ ದೇಶ ನಡೆಸುವಲ್ಲಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಪಾತ್ರ ಇಂದು ಬಹಳ ಮಹತ್ವವನ್ನು ಪಡೆದಿದೆ, ದೇಶದಲ್ಲಿ ಜನಸಾಮಾನ್ಯರು ಆಳುವ ಪಕ್ಷಗಳನ್ನು ಪ್ರಶ್ನಿಸುವುದಿರಲಿ ಪ್ರಾಮಾಣಿಕ ಪತ್ರಕರ್ತರೂ ಸರ್ಕಾರವನ್ನು ಪ್ರಶ್ನಿಸಿದರೆ ದೇಶದ್ರೋಹದಂತ ಕಾನೂನುಗಳನ್ನು ಎದುರಿಸುವ ಪರಿಸ್ಥಿತಿ ಇದೆ, ದೇಶದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳನ್ನು ತಡೆಯುವುದು ಸಮಾಜದಲ್ಲಿ ಶಾಂತಿ ಕಾಪಾಡುವುದು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಪ್ರಮುಖ ಕರ್ತವ್ಯವಾಗಿದೆ ಎಂದರು. ಪಕ್ಷದ ಜಿಲ್ಲಾ ಮಂಡಳಿ ಖಜಂಚಿಗಳಾದ ಕಾಮ್ರೆಡ್ ಆನಂದರಾಜ್ ರವರು ಶಿಬಿರದ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಕ್ಷದ ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರನ್ನು ಇಂದು ಸೈದ್ಧಾಂತಿಕವಾಗಿ ಅಣಿನೇರಿಸಿ ಸಮಾಜದಲ್ಲಿ ಕಮ್ಯುನಿಸ್ಟ್ ಪಕ್ಷದ ಮಹತ್ವವನ್ನು ಸಾದರ ಪಡಿಸಬೇಕು ಎಂದರು. ಸಭೆಯನ್ನು ಉದ್ದೇಶಿಸಿ ಪಕ್ಷದ ಜಿಲ್ಲಾ ಮಂಡಳಿ ಸಹಕಾರ್ಯದರ್ಶಿ ಕಾಮ್ರೆಡ್ ಹೆಚ್ ಜಿ ಉಮೇಶ್ ಮಾತನಾಡಿದರು ವೇದಿಕೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಶಿಬಿರದ ಈ ದಿನದ ಉಪನ್ಯಾಸಕರು ಆದ ಡಾ.ಸಿದ್ದನಗೌಡ ಪಾಟೀಲ್, ಎಂ ಬಿ ಶಾರದಮ್ಮ, ಟಿ ಎಸ್ ನಾಗರಾಜ್, ಎಂ ಸಿ ಡೋಂಗ್ರೆ, ಧರ್ಮರಾಜ್, ಮಹಮ್ಮದ್ ಬಾಷಾ ಇದ್ದರು. ಉದ್ಘಾಟನಾ ಕಾರ್ಯಕ್ರಮದ ಮೊದಲಿಗೆ ಇಪ್ಟಾ ಸಂಗಾತಿಗಳು ಜಾಗೃತಿ ಗೀತೆಗಳನ್ನು ಹಾಡಿದರು ಪಕ್ಷದ ಜಿಲ್ಲಾ ಮಂಡಳಿ ಸಹಕಾರ್ಯದರ್ಶಿ ಕಾಮ್ರೇಡ್ ಆವರಗೆರೆ ವಾಸು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.