Thursday, August 21, 2025
Homeಸಾಧನೆ"ಕನ್ನಡದ ಧ್ರುವತಾರೆ" ಹಳ್ಳಿ ರೈತನಾಗಿ ವಿಮಾನಯಾನ ಕಂಪನಿ ಕಟ್ಟಿ, ಜನಸಾಮಾನ್ಯರ ಕನಸು ನನಸು ಮಾಡಿದ ಅಪ್ಪಟ...

“ಕನ್ನಡದ ಧ್ರುವತಾರೆ” ಹಳ್ಳಿ ರೈತನಾಗಿ ವಿಮಾನಯಾನ ಕಂಪನಿ ಕಟ್ಟಿ, ಜನಸಾಮಾನ್ಯರ ಕನಸು ನನಸು ಮಾಡಿದ ಅಪ್ಪಟ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್

ಕನ್ನಡಿಗರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಬೆರಗು ಹುಟ್ಟಿಸುವಂತಹ ಸಾಧನೆಯನ್ನು ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಮಾಡಿರುವ ಸಾಧಕರ ಕುರಿತು ಮಾಹಿತಿ ಲಭ್ಯವಿರುತ್ತದೆ. ಕೆಲವು ಕ್ಷೇತ್ರಗಳಲ್ಲಿನ ಸಾಧಕರು ‘ಎಲೆ ಮರೆಯ ಮರ’ಗಳಂತೆ ಅಪಾರ ಸಾಧನೆಯನ್ನು ಮಾಡಿದ್ದಾರೆ. ಮಾಹಿತಿ ಇದ್ದರೂ ಸಾಧಕರನ್ನು ನೇರವಾಗಿ ನೋಡುವ ಅವರ ಜೊತೆ ಸಂವಾದ ಮಾಡುವ ಅವಕಾಶ ಸಾರ್ವಜನಿಕರಿಗೆ ಸಿಕ್ಕಿರುವುದಿಲ್ಲ. ಕನ್ನಡ-ಕನ್ನಡಿಗ-ಕರ್ನಾಟಕದ ಅಭ್ಯುದಯವನ್ನು ತನ್ನ ಧೈಯವಾಗಿ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಈ ಹಿನ್ನೆಲೆಯಲ್ಲಿ ‘ಕನ್ನಡದ ಧ್ರುವತಾರೆ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದ್ದು ಇದರಲ್ಲಿ ಸಾಧಕರು ಅತಿಥಿಗಳಾಗಿ ಬಂದು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ, ಸಾರ್ವಜನಿಕರ ಪ್ರಶ್ನೆಗಳಿಗೂ ಕೂಡ ಉತ್ತರಿಸುತ್ತಾರೆ. ಸಾಧಕರು ಮತ್ತು ಸಾರ್ವಜನಿಕರ ನಡುವೆ ಸುವರ್ಣ ಸೇತುವೆಯಾಗುವ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮದ ಅತಿಥಿಯಾಗಿ ಕ್ಯಾಪ್ಟನ್ ಗೋಪಿನಾಥ್ ಭಾಗವಹಿಸಲಿದ್ದಾರೆ.

ಕ್ಯಾಪ್ಟನ್ ಗೋಪಿನಾಥ್

ಜನಸಾಮಾನ್ಯರೂ ವಿಮಾನಯಾನದ ಕನಸನ್ನು ಕಾಣುವಂತೆ ಮಾಡಿದ ಹೆಗ್ಗಳಿಕೆ ಕ್ಯಾಪ್ಟನ್ ಗೋಪಿನಾಥ್ ಅವರದ್ದು, ಅವರ ಸಿಂಪ್ಲಿ ಫೈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವ ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅವರನ್ನು ಕಡಿಮೆ ದರದ ವಿಮಾನಯಾನದ ಕಲ್ಪನೆಯ ಪಿತಾಮಹ’ ಎಂದೇ ಕರೆಯಬಹುದು ಎಂದು ವರ್ಣಿಸಿದ್ದಾರೆ.

ಕ್ಯಾಪ್ಟನ್ ಗೋಪಿನಾಥ್ ಅವರು ಹುಟ್ಟಿದ್ದು ಹಾಸನ ಜಿಲ್ಲೆಯ ಗೊರೂರಿನಲ್ಲಿ, ಅವರ ತಂದೆ ಶಾಲಾ ಶಿಕ್ಷಕರಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಇವರು ಬರಹಗಾರ ಗೊರೂರುರಾಮಸ್ವಾಮಿ ಅಯ್ಯಂಗಾರರು ಅಲ್ಲ) ಕೌಟುಂಬಿಕ ವಾತಾವರಣದಲ್ಲಿ ಕನ್ನಡವಿಲ್ಲದಿದ್ದರೂ ತಡವಾಗಿ ಕನ್ನಡವನ್ನು ಕಲಿತು, ಕನ್ನಡಿಗರ ನೋವು ನಲಿವುಗಳನ್ನು ಕನ್ನಡದಲ್ಲಿ ಅಭಿವ್ಯಕ್ತಿಸುವ ಶಕ್ತಿಯನ್ನು ಪಡೆದುಕೊಂಡರು, ನಾಲ್ಕನೆಯ ತರಗತಿಯವರೆಗೂ ಹಳ್ಳಿಯ ಶಾಲೆಯಲ್ಲಿಯೇ ಕಲಿತ ಅವರು ನಿತ್ಯವೂ ಬರಿಗಾಲಿನಲ್ಲಿಯೇ ಶಾಲೆಗೆ ಬಂದು ಹೋಗಿ ಮಾಡುತ್ತಿದ್ದರು. ೧೯೬೨ರಲ್ಲಿ ಬಿಜಾಪುರದ ಸೈನಿಕ ಶಾಲೆಗೆ ಸೇರಿದ ಗೋಪಿನಾಥ್ ಅಲ್ಲಿ ಕಠಿಣವಾದ ತರಬೇತಿಯನ್ನು ಪಡೆದುಕೊಂಡರು. ಮುಂದೆ ತಮ್ಮ ಶಿಕ್ಷಣವನ್ನು ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಮುಂದುವರೆಸಿದರು. ಡೆಹ್ರಾಡೂನ್‌ನ ಇಂಡಿಯನ್ ಮಿಲ್ಟಿ ಅಕಾಡೆಮಿಯಲ್ಲಿ ಪದವಿಯನ್ನು ಪಡೆದು ೧೯೭೧ರಲ್ಲಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕವಾದರು. ಪೂರ್ವ ವಲಯದಲ್ಲಿ ಪಾಕಿಸ್ತಾನದೊಡನೆ ನಡೆದ ಚಾರಿತ್ರಿಕ ಯುದ್ಧದಲ್ಲಿ ಅವರೂ ಕೂಡ ಭಾಗಿಯಾಗಿ ಶೌರ್ಯದಿಂದ ಹೋರಾಡಿ ತಮ್ಮ ದೇಶಭಕ್ತಿಯನ್ನು ಮೆರೆದರು.

ಮುಂದೆ ಅವರು ಕಾಶ್ಮೀರ, ಭೂತಾನ್, ಆಸ್ಸಾಂ, ಸಿಕ್ಕಿಂ ಸೇರಿದಂತೆ ಭಾರತದ ಅನೇಕ ಭಾಗಗಳಲ್ಲಿ ಸೇವೆ ಸಲ್ಲಿಸಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದರು. ಹೀಗೆ ಎಂಟು ವರ್ಷಗಳ ಸಾರ್ಥಕ ಸೇವೆಯ ನಂತರ ತಮ್ಮ ಹಳ್ಳಿಗೆ ಹಿಂದಿರುಗಿ ಕೃಷಿ ವೃತ್ತಿಯನ್ನು ಕೈಗೊಂಡರು. ಈ ಕ್ಷೇತ್ರದಲ್ಲಿ ಪರಿಣಾಮಕಾರಿ ಸೇವೆ ಸಲ್ಲಿಸುವ ಮೂಲಕ ಯಶಸ್ವಿ ಕೃಷಿಕ ಎಂದು ಕರೆಸಿಕೊಂಡರು. ಪರಿಸರ ಸ್ನೇಹಿ ಪದ್ಧತಿ ಮತ್ತು ಭೂಮಿಯ ಸತ್ವಕ್ಕೆ ಹಾನಿಯಾಗದಂತೆ ಹೆಚ್ಚು ಇಳುವರಿ ತೆಗೆಯುವ ಪರಿಣಾಮಕಾರಿ ಕೃಷಿ ಪದ್ಧತಿಗಳಿಂದ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಹೆಸರನ್ನು ಮಾಡಿದರು.

ಮುಂದೆ ಗೋಪಿನಾಥರ ಚಿತ್ತ ವಿಮಾನಯಾನದ ಕಡೆಗೆ ತಿರುಗಿತು. ಆಗೆಲ್ಲಾ ವಿಮಾನವನ್ನು ಶ್ರೀಮಂತರು ಅದರಲ್ಲಿಯೂ ಅತಿ ಶ್ರೀಮಂತರು ಮಾತ್ರ ಏರಬಹುದಿತ್ತು. ಜನ ಸಾಮಾನ್ಯರೂ ವಿಮಾನಯಾನವನ್ನು ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಲು ಗೋಪಿನಾಥ್ ಪಣ ತೊಟ್ಟರು. ಹೀಗೆ ಆರಂಭವಾಗಿದ್ದು ಡೆಕ್ಕನ್ ಏರ್ ವೇಸ್. ಬಹುಬೇಗ ದೇಶದ ಅರವತ್ತೆಂಟು ಸ್ಥಳಗಳಲ್ಲಿ ಡೆಕ್ಕನ್ ಏರ್ ವೇಸ್ ವಿಮಾನಗಳು ಸಂಚರಿಸಲು ಆರಂಭಿಸಿ ಜನ ಸಾಮಾನ್ಯರೂ ವಿಮಾನವನ್ನು ಏರುವ ಕನಸನ್ನು ನನಸು ಮಾಡಿಕೊಳ್ಳುವುದು ಸಾಧ್ಯವಾಯಿತು. ತಮ್ಮ ಸೇನೆಯ ಅನುಭವ ಮತ್ತು ಅಲ್ಲಿನ ಸ್ನೇಹಿತರ ನೆರವಿನಿಂದ ಕ್ಯಾಪ್ಟನ್ ಗೋಪಿನಾಥ್ ಹೆಲಿಕ್ಯಾಪ್ಟರ್ ಸೇವೆಗೂ ಮುಂದಾದರು. ವೈವಿಧ್ಯಮಯ ಉಪಯೋಗಗಳಿಗೆ ಹೆಲಿಕ್ಯಾಪ್ಟರ್ ಬಳಕೆ ಅವರ ಪ್ರಯೋಗಶೀಲ ಮನಸ್ಸಿನಿಂದ ಸಾಧ್ಯವಾಯಿತು. ಗುಡ್ಡಗಾಡು ಪ್ರವಾಸ, ವೈಮಾನಿಕ ಸಮೀಕ್ಷೆ, ಭೂ ಮಾಪನ, ಗ್ಯಾಸ್ ಪೈಪ್ ಲೈನ್ ಸರ್ವೆ, ವೈದ್ಯಕೀಯ ಸೇವೆ ಹೀಗೆ ಹಲವು ರಂಗಗಳಲ್ಲಿ ಹೆಲಿಕ್ಯಾಪ್ಟರ್ ಗಳು ಬಳಕೆಯಾದವು, ದೇಶದ ಹದಿನೈದು ಸ್ಥಳಗಳಲ್ಲಿ ಅವರು ವಿಮಾನ ಮತ್ತು ಹೆಲಿಕ್ಯಾಪ್ಟರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಿದರು. ಸರ್ಕಾರಿ ಸ್ವಾಮ್ಯದ ಇಂಡಿಯನ್ ಏರ್‌ಲೈನ್ಸ್ ಮೀರಿಸುವಂತೆ ಕ್ಯಾಪ್ಟನ್ ಗೋಪಿನಾಥ್ ಅವರ ವೈಮಾನಿಕ ಸೇವೆ ಬೆಳೆಯಿತು. ೨೦೦೬ರಲ್ಲಿ ‘ಬೆಸ್ಟ್ ಲೋ ಫೇರ್ ಏರ್ ಲೈನ್ಸ್’ ಪ್ರಶಸ್ತಿ ಭಾರತ ವಿಮಾನ ಯಾತ್ರಿಗಳ ಸಂಘದಿಂದ ದೊರೆತರೆ ಗ್ಯಾಲಿಯೋ ಎಕ್ಸಪ್ರೆಸ್ ಟ್ರಾವೆಲ್ ವರ್ಲ್ಡ್ ಆವಾರ್ಡ್‌ ೨೦೦೬ ಮತ್ತು ೨೦೦೭ನೆಯ ಸಾಲಿಗೆ ಸತತವಾಗಿ ದೊರಕಿತು. ೨೦೦೫ನೆಯ ಸಾಲಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಗೋಪಿನಾಥ್ ಅದೇ ವರ್ಷ ಫ್ರೆಂಚ್ ಸರ್ಕಾರದ ಆತಿ ಉಚ್ಚ ನಾಗರಿಕ ಗೌರವದಿಂದ ಪುರಸ್ಕೃತರಾದರು. ಕರ್ನಾಟಕ ಛೇಂಬರ್ ಆಫ್ ಕಾಮರ್ಸ್‌ ಅಂಡ್ ಇಂಡಸ್ಟ್ರಿಯವರಿಂದ ‘ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ಕೂಡ ಇವರಿಗೆ ನೀಡಲಾಗಿದೆ.

ಕ್ಯಾಪ್ಟನ್ ಗೋಪಿನಾಥ್ ಅವರ ಜೀವನದ ಸತ್ಯಘಟನೆಗಳನ್ನು ಆಧರಿಸಿ ತಮಿಳಿನಲ್ಲಿ ‘ಸೂರ‌ ಪೊಟು’ ಚಿತ್ರ ರೂಪುಗೊಂಡಿತು. ಸುಧಾ ಕೊಂಗಾರ ನಿರ್ದೇಶಿಸಿದ ಚಿತ್ರದಲ್ಲಿ ಗೋಪಿನಾಥ್ ಪಾತ್ರವನ್ನು ಸೂರ್ಯ ನಿರ್ವಹಿಸಿದ್ದರು. ಚಿತ್ರ ಯುವ ಸಮುದಾಯದಲ್ಲಿ ಕನಸುಗಳನ್ನು ಬಿತ್ತುವಲ್ಲಿ ಯಶಸ್ವಿಯಾಯಿತು. ಗೋಪಿನಾಥ್ ಅವರು ‘ಸಿಂಪ್ಲಿ ಫೈ’ ಮತ್ತು ‘ನಮ್ಮ ಭಾರತ’ ಎಂಬ ಕೃತಿಗಳನ್ನು ರಚಿಸಿದ್ದಾರೆ. ಹಳ್ಳಿ ರೈತನಾಗಿ ವಿಮಾನಯಾನ ಕಂಪನಿ ಕಟ್ಟಿ, ಜನಸಾಮಾನ್ಯರ ಕನಸು ನನಸು ಮಾಡಿದ ಅಪ್ಪಟ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ನಮ್ಮೆಲ್ಲರಿಗೂ ಸ್ಫೂರ್ತಿದಾಯಕರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments