ದಾವಣಗೆರೆ:ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕರುಗಳ ಸಮಿತಿ ವತಿಯಿಂದ ಜಿಲ್ಲೆಯ ಐದು ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಒಂದು ತಾಸಿನ ಶ್ರಮದಾನದ ಮೂಲಕ ಇಂದು ಆಚರಿಸಲಾಯಿತು. ಗಾಂಧಿ ಜಯಂತಿ ಅಂಗವಾಗಿ ಕೇಂದ್ರ ಸರಕಾರವು ಹಮ್ಮಿಕೊಂಡಿದ್ದ “ಸ್ವಚ್ಛತೆಯೇ ಸೇವೆ” ಕಾರ್ಯಕ್ರಮದಡಿಯಲ್ಲಿ ಎರಡು ಗ್ರಾಮೀಣ ಮತ್ತು ಮೂರು ನಗರ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಬ್ಯಾಂಕರುಗಳು ತಮ್ಮ ಕಾಳಜಿ ಮೆರೆದರು.
ಬ್ಯಾಂಕರುಗಳ ಈ ಕಾರ್ಯಕ್ಕೆ ಸಾರ್ವಜನಿಕರು, ಹಿರಿಯ ನಾಗರಿಕರು, ನಗರಸಭೆಯ ಸಿಬ್ಬಂದಿಗಳು ಸಹ ಕೈಜೋಡಿಸಿದ್ದು ವಿಶೇಷವಾಗಿತ್ತು. ಒಟ್ಟು ಐದು ತಂಡಗಳನ್ನು ರಚಿಸಿ ಮಾಯಕೊಂಡ ಸಾರ್ವಜನಿಕ ಶಾಲೆ ಆವರಣ, ಅನಗೋಡಿನ ಸಾರ್ವಜನಿಕ ಸ್ಥಳ, ದಾವಣಗೆರೆಯ ಡಿಸಿಎಂ ಬಡಾವಣೆಯ ಪಾರ್ಕು, ಸಂಗೊಳ್ಳಿ ರಾಯಣ್ಣನ ವೃತ್ತ , ವಿದ್ಯಾನಗರದ ಸಾರ್ವಜನಿಕ ಸ್ಥಳಗಳನ್ನು ಆಯ್ದುಕೊಂಡು ಸ್ವಚ್ಛಗೊಳಿಸಲಾಯಿತು.
ಜಿಲ್ಲಾ ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ಪ್ರಕಾಶ್ ಜಿ ಸಿ ಹಾಗೂ ನಬಾರ್ಡ್ ಜಿಲ್ಲಾ ವ್ಯಸ್ಥಾಪಕರಾದ ರಶ್ಮಿರೇಖಾ ಅವರ ಮಾರ್ಗದರ್ಶನದಲ್ಲಿ ನೆಡೆದ ಈ ಅಭಿಯಾನದಲ್ಲಿ ಜಿಲ್ಲೆಯ ಪ್ರಮುಖ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಡಿ ಸಿ ಸಿ ಬ್ಯಾಂಕ್, ಎಚ್ ಡಿ ಎಫ್ ಸಿ ಸೇರಿದಂತೆ ಎಲ್ಲ ಬ್ಯಾಂಕುಗಳ ಸಹಕಾರದೊಂದಿಗೆ ಅಭಿಯಾನವನ್ನು ಯಶಸ್ವಿಯಾಗಿ ನೆಡೆಸಲಾಯಿತು. ದಾವಣಗೆರೆ ಮಹಾ ನಗರ ಪಾಲಿಕೆಯ ಸಹಾಯಕ ಕಾರ್ಯಪಾಲ ಅಭಿಯಂತರ ಜಗದೀಶ್ ಮತ್ತು ತಂಡದವರು ತ್ಯಾಜ್ಯ ವಿಲೇವಾರಿಗೆ ಸಹಕರಿಸಿದರು ಎಂದು
ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ಜಿ.ಸಿ.ಪ್ರಕಾಶ್ ತಿಳಿಸಿದ್ದಾರೆ.