ದಾವಣಗೆರೆ: ಹೋರಾಟಗಳ ಚರಿತ್ರೆ, ಸಂಘಟನೆಯ ಸಿದ್ಧಾಂತ, ಅರಿವು, ವರ್ತಮಾನದ ಹೋರಾಟಗಳನ್ನು ನಡೆಸಲು ಕಾರ್ಯಕರ್ತರ ತರಬೇತಿ ಅತ್ಯವಶ್ಯಕ. ಸಾರಿಗೆ ನೌಕರರ ಫೆಡರೇಷನ್ ಕಾರ್ಯಕರ್ತರ ತರಬೇತಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕೀಹೊಳಿ ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಆಶ್ರಯದಲ್ಲಿ ಬುಧವಾರ ಹರಿಹರದ ಶಿವಮೊಗ್ಗ ರಸ್ತೆಯಲ್ಲಿನ ಮೈತ್ರಿವನದ ಮಾನವ ಮಂಟಪದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಆಯೋಜಿಸಲಾಗಿದ್ದ ೨ದಿನಗಳ ರಾಜ್ಯಮಟ್ಟದ ಕಾರ್ಯಕರ್ತರ ಉದ್ಘಾಟಿಸಿ ಮಾತನಾಡಿದರು.
ಫೆಡರೇಷನ್ ಗೌರವಾಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ಮಾನವ ಬಂಧುತ್ವ ವೇದಿಕೆಯು ರಾಜ್ಯದ ಕೇಂದ್ರ ಭಾಗದಲ್ಲಿ ಪ್ರೊ. ಬಿ.ಕೃಷ್ಣಪ್ಪ ಭವನದಲ್ಲಿ ರಾಜ್ಯದ ಎಲ್ಲಾ ಪ್ರಗತಿಪರ ಚಳುವಳಿಗಳಿಗೆ ನೆರವಾಗುತ್ತಿದೆ. ಸತೀಶ್ ಜಾರಕಿಹೊಳಿ ಅವರು ರಾಜ್ಯದಲ್ಲಿ ಕಳೆದ ಒಂದು ದಶಕದಿಂದ ವೈಚಾರಿಕ ಪ್ರಜ್ಞೆ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ರಾಜ್ಯದ ಎಲ್ಲಾ ಶಾಸಕರು, ಸಚಿವರು ಸತೀಶ್ ಜಾರಕಿಹೊಳಿ ಅವರಂತೆ ಸಂವೇದನಾ ಶೀಲರಾಗಿ, ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ರಾಜ್ಯದಲ್ಲಿ ಪ್ರತಿಗಾಮಿ ಶಕ್ತಿಗಳನ್ನು, ಅವರ ಕುತಂತ್ರಗಳನ್ನು ಹಿಮ್ಮೆಟ್ಟಿಸಬಹುದೆಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕಾಂ.ವಿಜಯ ಭಾಸ್ಕರ್ ಶಿಬಿರಾರ್ಥಿಗಳು, ಅತಿಥಿಗಳನ್ನು ಸ್ವಾಗತಿಸಿದರು. ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಇತರರು ಇದ್ದರು.