ಬೆಳಗಾವಿ, ಡಿ.4: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಳ ಚಳಿಗಾಲ ಅಧಿವೇಶನ ವೀಕ್ಷಣೆಗೆ ಆಗಮಿಸುವ ಶಾಲಾ ಮಕ್ಕಳಿಗೆ ಇದೇ ಮೊದಲ ಬಾರಿ ವಿಶೇಷ ಆತಿಥ್ಯ ನೀಡಲಾಯಿತು.
ಕಲಾಪ ವೀಕ್ಷಣೆಗೆ ತಂಡೋಪತಂಡವಾಗಿ ಆಗಮಿಸುವ ಮಕ್ಕಳನ್ನು ಸುವರ್ಣ ವಿಧಾನಸೌಧದ ಉತ್ತರ ದ್ವಾರದ ಬಳಿಯ ಆಡಿಟೋರಿಯಂನಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ.
ಇದಲ್ಲದೇ ರಾಜ್ಯದ ಕಲೆ-ಸಂಸ್ಕೃತಿ, ಪ್ರವಾಸೋದ್ಯಮ ಕುರಿತ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಚಳಿಗಾಲ ಅಧಿವೇಶನದ ಮೊದಲ ದಿನವಾದ ಸೋಮವಾರ(ಡಿ.4) ಸುವರ್ಣ ವಿಧಾನಸೌಧದ ಆಡಿಟೋರಿಯಂನಲ್ಲಿ ಮಕ್ಕಳಿಗೆ ಸಂವಿಧಾನ ಪೀಠಿಕೆ ಓದಿಸಲಾಯಿತು.
ಇದಾದ ಬಳಿಕ ಸಂಪನ್ಮೂಲ ವ್ಯಕ್ತಿಗಳು ಸಂವಿಧಾನದಲ್ಲಿ ತಿಳಿಸಿರುವಂತಹ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಕುರಿತು ತಿಳಿಸಿಕೊಟ್ಟರು.
ಮಕ್ಕಳು ದೇಶದ ಭವಿಷ್ಯ. ಆದ್ದರಿಂದ ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವ, ಶಾಸಕಾಂಗ ಮತ್ತಿತರ ವಿಷಯಗಳ ಬಗ್ಗೆ ತಿಳಿಸಿಕೊಡಬೇಕು ಎಂಬುದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರ ಆಶಯ ಆಗಿದೆ. ಅವರ ಆಶಯದಂತೆ ಕಾರ್ಯರೂಪಕ್ಕೆ ತರಲಾಗಿರುತ್ತದೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅತ್ಯಂತ ಮುತುವರ್ಜಿಯಿಂದ ಮಕ್ಕಳಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಮೊದಲ ದಿನವೇ ಯಶಸ್ವಿಗೊಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರ ನೇತೃತ್ವದ ಸಮಿತಿಯು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.
ಅಧಿವೇಶನದ ಮುಕ್ತಾಯದವರೆಗೆ ಪ್ರತಿದಿನ ಇದು ಮುಂದುವರಿಯಲಿದೆ. ಕಲಾಪ ವೀಕ್ಷಣೆಗೆ ಬಂದು ಸರದಿಗಾಗಿ ಕಾರಿಡಾರ್ ನಲ್ಲಿ ಕಾಯುತ್ತ ಕುಳಿತುಕೊಳ್ಳುವುದು ತಾಪತ್ರಯ ಮಕ್ಕಳಿಗಿರುವುದಿಲ್ಲ.
ಇದರಿಂದ ಸಮಯದ ಸದುಪಯೋಗ ಆಗುವುದರ ಜತೆಗೆ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ಶಾಸಕಾಂಗದ ಕಾರ್ಯವೈಖರಿಯ ಕುರಿತು ತಿಳಿವಳಿಕೆ ಕೂಡ ಮೂಡಿಸುವುದರಿಂದ ಇದೊಂದು ಅತ್ಯುತ್ತಮ ಪ್ರಯೋಗವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳು ಕೂಡ ಸಂತಸದಿಂದ ಕಲಾಪವನ್ನು ವೀಕ್ಷಿಸುವಂತಾಗಿದೆ.