ವಿಜಯಪುರ ಜೂ 27:ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಹಯೋಗದಲ್ಲಿ ವಿನೂತನವಾಗಿ ಆಯೋಜಿಸಲಾದ ನಗರದ ಪ್ರೇಕ್ಷಣೀಯ ಸ್ಥಳಗಳ ಒಂದು ದಿನದ ಪ್ರವಾಸದ “ವಿಜಯ ರಥ”ಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಶುಕ್ರವಾರ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.
ವಿಜಯ ರಥ ಬಸ್ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು,ನಗರದ ಇಬ್ರಾಹಿಂ ರೋಜಾ ಸ್ಮಾರಕ, ಶ್ರೀ ಲಕ್ಷ್ಮೀದೇವಸ್ಥಾನ ತೊರವಿ, 1008 ಸಹಸ್ರಫಣಿ ಶ್ರೀ ಪಾರ್ಶ್ವನಾಥ ಜೈನ ಬಸದಿ, ಮಲೀಕ-ಇ-ಮೈದಾನ ತೋಪ್, ಬಾರಾಕಮಾನ, ಗಗನ್ ಮಹಲ್, ಜಾಮೀಯಾ ಮಸೀದಿ, ಶಿವಗಿರಿ-ಶಿವನ ಮೂರ್ತಿ, ಗೋಳಗುಮ್ಮಟ, ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಮರಳಿ ಸಂಜೆ 4 ಗಂಟೆಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ.
ಈ ವಿಜಯ ರಥ ಬಸ್‍ನಲ್ಲಿ ಪ್ರಯಾಣಿಕರಿಗೆ ಪ್ರವಾಸಿ ಮಾರ್ಗದರ್ಶಿಗಳ ಮೂಲಕ ಪ್ರವಾಸಿ ತಾಣಗಳ ಮಾಹಿತಿ, ಪ್ರವಾಸಿ ತಾಣಗಳಿಗೆ ತಡೆ ರಹಿತ ಭೇಟಿ, ಸುರಕ್ಷಿತ ಪ್ರಯಾಣದೊಂದಿಗೆ ಪ್ರವಾಸ, ನೀರಿನ ಬಾಟಲ್, ಚಹಾ, ಸ್ನ್ಯಾಕ್ಸ್ ಸೌಲಭ್ಯ, ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಬಸ್ ಪ್ರಯಾಣಕ್ಕೆ ಉಚಿತ ಅವಕಾಶ ಹಾಗೂ ಮುಂಚಿತವಾಗಿ ಕಾಯ್ದಿರಿಸುವ (ಬಸ್ ಟಿಕೆಟ್ ಬುಕ್ಕಿಂಗ್ : 7760914008, 08352-250359) ಸೌಲಭ್ಯ ಒದಗಿಸಲಾಗಿದೆ. 12 ವರ್ಷ ಒಳಗಿನ ಬಾಲಕಿಯರಿಗೆ 125 ರೂ., ಬಾಲಕರಿಗೆ 175 ರೂ., 12 ವರ್ಷ ಮೇಲ್ಪಟ್ಟ ಬಾಲಕಿಯರು ಹಾಗೂ ಮಹಿಳೆಯರಿಗೆ 160 ರೂ., ಬಾಲಕರು ಹಾಗೂ ಪುರುಷರಿಗೆ 330 ರೂ. ದರವನ್ನು ನಿಗದಿಪಡಿಸಲಾಗಿದೆ.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ, ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೇರಿದಂತೆ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.