ವಿಜಯಪುರ:ಐತಿಹಾಸಿಕ ವಿಜಯಪುರ ನಗರದ ಬೌದ್ಧವಿಹಾರ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 67ನೆಯ ಪರಿನಿರ್ವಾಣ ದಿನದ ನಿಮಿತ್ಯವಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದ 1500ಕ್ಕೂ ಹೆಚ್ಚು ಛಾಯಾಚಿತ್ರಗಳ ಭವ್ಯ ಪ್ರದರ್ಶನವು ವಿಜಯಪುರ ನಗರದ ಜಲನಗರ ಬಸ್ ಸ್ಟಾಪ್ ಹತ್ತಿರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಡಿಸೆಂಬರ್ 6, 7 ಮತ್ತು 8ರಂದು ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ದೀಪಕ ಆಕಾರಾಮ ಮಧಾಳೆ ಮತ್ತು ನಂದಕುಮಾರ ಆಕಾರಾಮ ಮಧಾಳೆ ಅವರು ಸಂಗ್ರಹಿಸಿರುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಇದಾಗಿದೆ.
ಡಿಸೆಂಬರ್ 6. ರಂದು ಬೆಳಗ್ಗೆ 10 ಗಂಟೆಗೆ ಛಾಯಾಚಿತ್ರ ಪ್ರದರ್ಶನವನ್ನು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾದ ಬಿ.ಎ. ಸೌದಾಗರ ಅವರು ಉದ್ಘಾಟಿಸಲಿದ್ದಾರೆ.
ಅದೇ ದಿನ ಸಂಜೆ 6 ಗಂಟೆಗೆ ನಡೆಯಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ರಂಗನಾಥ ಬತ್ತಾಸೆ ಹಾಗೂ ತಂಡದವರಿಂದ ನೃತ್ಯರೂಪಕ ಪ್ರದರ್ಶನ ನಡೆಯಲಿದೆ. ನಿವೃತ್ತ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರಾದ ಬಸವರಾಜ ಹೋಳ್ಕರ್ ಉಪನ್ಯಾಸ ನೀಡಲಿದ್ದಾರೆ.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳು, ಪ್ರಗತಿಪರ ಚಿಂತಕರು. ಬುದ್ಧಾನುಯಾಯಿಗಳು ಈ ಛಾಯಾಚಿತ್ರಗಳ ಭವ್ಯ ಪ್ರದರ್ಶನ ಮತ್ತು ನುಡಿನಮನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿ.