Saturday, December 21, 2024
Homeಸಂಸ್ಕೃತಿಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿ, ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಡಾ; ವೆಂಕಟೇಶ್...

ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿ, ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಸೂಚನೆ


ದಾವಣಗೆರೆ,ಜ.23: ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಮಹಾರಾಜರ 285 ನೇ ಜಯಂತಿಯನ್ನು ಫೆಬ್ರವರಿ 13 ರಿಂದ 15 ರ ವರೆಗೆ ಆಚರಿಸಲಾಗುತ್ತಿದ್ದು ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂತ ಸೇವಾಲಾಲ್ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ಕ್ಷೇತ್ರ ಸೂರಗೊಂಡನಕೊಪ್ಪದಲ್ಲಿ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ತಾಂಡ ಅಭಿವೃದ್ದಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ದಿ ಮತ್ತು ನಿರ್ವಹಣಾ ಪ್ರತಿಷ್ಟಾನದ ಸಹಯೋಗದಲ್ಲಿ ಜಯಂತಿಯನ್ನು 3 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಇತರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು ಶ್ವೇತವಸ್ತ್ರ ಮಾಲಾಧಾರಿಗಳು ಭಾಗವಹಿಸಲಿದ್ದು 3 ಲಕ್ಷಕ್ಕೂ ಹೆಚ್ಚು ಭಕ್ತರು ಈ ಜಾತ್ರಾ ಮಹೋತ್ಸವದಲ್ಲ್ಲಿ ಭಾಗವಹಿಸುವರು.
ಲಕ್ಷಾಂತರ ಭಕ್ತಾಧಿಗಳು ಭಾಗವಹಿಸುವುದರಿಂದ ಇಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಆಗಮಿಸುವ ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ, ಸುಗಮ ಸಂಚಾರ, ಆರೋಗ್ಯ ಮತ್ತು ನೈರ್ಮಲ್ಯತೆ ಕಾಪಾಡುವುದು, ವೇದಿಕೆ ನಿರ್ಮಾಣ, ಆಸನದ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಸೇರಿದಂತೆ ಸ್ನಾನ ಮತ್ತು ಶೌಚಾಲಯದ ವ್ಯವಸ್ಥೆಯನ್ನು ತುಂಬ ಅಚ್ಚುಕಟ್ಟಾಗಿ ನೆರವೇರಿಸಬೇಕಾಗಿದೆ. ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲು ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಉಪಮುಖ್ಯಮಂತ್ರಿಯವರು, ಸಚಿವರು, ಗಣ್ಯ ವ್ಯಕ್ತಿಗಳು ಸಹ ಭಾಗವಹಿಸಲಿದ್ದು ಹೆಲಿಪ್ಯಾಡ್ ಸೇರಿದಂತೆ ಶಿಷ್ಟಾಚಾರ ಪಾಲನೆಯ ಉಸ್ತುವಾರಿಗೆ ಅಧಿಕಾರಿಗಳ ತಂಡ ರಚಿಸಲಾಗುತ್ತದೆ ಎಂದರು.
ಚಿನ್ನಿಕಟ್ಟೆ ಸೂರಗೊಂಡನಕೊಪ್ಪ ಸೇವಾಲಾಲ್ ರವರ ಜನ್ಮಸ್ಥಳವಾಗಿದ್ದು ನೂರಾರು ಕಿ.ಮಿ. ದೂರದಿಂದ ಬರಿಗಾಲಲ್ಲಿ ಬಂದು ತಮ್ಮ ಭಕ್ತಿ ಸಮರ್ಪಿಸುವರು. ಇಲ್ಲಿಗೆ ಕುಟುಂಬ ಸಮೇತರಾಗಿ ಭಾಗವಹಿಸಿ ಭಕ್ತಿ ಭಾವದಿಂದ ಹೋಗುವರು. ಫೆಬ್ರವರಿ 13 ರಿಂದ 15 ರ ವರೆಗೆ ಜಾತ್ರಾ ನಡೆಯಲಿದ್ದು ಮೊದಲು ಧ್ವಜಾರೋಹಣ, ಆಗಮಿಸಿದ ಮಾಲಾಧಾರಿಗಳ ವಿಸರ್ಜನ, ಸಂಜೆ ಸಂತರ ಭಜನೆ, ಸಾಂಸ್ಕøತಿಕ ಕಾರ್ಯಕ್ರಮಗಳು, ಹೋಮಕುಂಡ ಭೋಗ್ ಕಾರ್ಯಕ್ರಮ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳು ನಡೆಯಲಿವೆ.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments