Saturday, December 21, 2024
Homeಸಾಹಿತ್ಯ"ಊರ್ಮಿಳೆ ಮತ್ತು ಕ್ವಾರೆಂಟೈನ್"ರಾಮಾಯಣ ರಚಿಸಿದ ವಾಲ್ಮೀಕಿಯಿಂದ ಹಿಡಿದು ಕಂಬನವರೆಗೆ ಯಾರೂ ಅವಳಿಗೆ ನ್ಯಾಯ ಸಲ್ಲಿಸಲಿಲ್ಲ

“ಊರ್ಮಿಳೆ ಮತ್ತು ಕ್ವಾರೆಂಟೈನ್”ರಾಮಾಯಣ ರಚಿಸಿದ ವಾಲ್ಮೀಕಿಯಿಂದ ಹಿಡಿದು ಕಂಬನವರೆಗೆ ಯಾರೂ ಅವಳಿಗೆ ನ್ಯಾಯ ಸಲ್ಲಿಸಲಿಲ್ಲ

ಹೇಗೆ ಇದ್ದಿರಬಹುದು ಊರ್ಮಿಳೆ? ಹದಿನಾಲ್ಕು ವರ್ಷಗಳ ದೀರ್ಘ ವಿರಹದಿಂದ ಅದೆಷ್ಟು ಬಳಲಿರಬಹುದು ಅವಳು; ದಾಂಪತ್ಯಗೀತೆ ಹಾಡದೆ. ಅವಳ ಆಣತಿಗೂ ಕಾಯದೆ ಅಣ್ಣನ ಹಿಂದೆ ಅಡಿಯಿಟ್ಟ ಲಕ್ಷ್ಮಣನ ಆ ನಿಲುವು ಊರ್ಮಿಳೆಯೆಂಬ ಕಿಶೋರಿಗೆ ಹೇಗೆ ಸಹ್ಯವಾಗಿದ್ದೀತು? ಸದ್ದಿಲ್ಲ, ಸುದ್ದಿಯಿಲ್ಲ, ಕುಶಲ ಅರಹುವವರಿಲ್ಲ. ಸಲಹುವವರು ಇದ್ದರಾಯಿತೆ? ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಸಲುವಾಗಿಯೇ ಕಟ್ಟಿಕೊಂಡವನೂ ಇರಬೇಕಲ್ಲವೆ?

ರಾಮಾಯಣ ರಚಿಸಿದ ವಾಲ್ಮೀಕಿಯಿಂದ ಹಿಡಿದು ಕಂಬನವರೆಗೆ ಯಾರೂ ಅವಳಿಗೆ ನ್ಯಾಯ ಸಲ್ಲಿಸಲಿಲ್ಲ. ಆಕೆಯದು ವರ್ಷಾನುವರ್ಷಗಳ ದೀರ್ಘ ನಿದಿರೆಯೆಂದು ನೇಪಥ್ಯಕ್ಕೆ ದೂಡಿಬಿಟ್ಟರು. ಊರ್ಮಿಳೆ ಉಪೇಕ್ಷೆಗೆ, ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾದ ಪೌರಾಣಿಕ ಪಾತ್ರ.

ನೀವು ಅಹುದು ಅಹುದು ಎನ್ನುವುದಾದರೆ ಊರ್ಮಿಳೆ ನಮ್ಮ ಮಹಾಕಾವ್ಯಗಳಲ್ಲಿನ ಮೊದಲ ಗೃಹಬಂದಿ. ಸುದೀರ್ಘ ಲಾಕ್ ಡೌನ್ ಗೆ ಒಳಗಾದ ಪಾತ್ರ. ಕ್ವಾರೆಂಟೈನ್ ಎಂದಿರಾ? ಆದರೆ ಅವಳ ಸ್ಥಿತಿ ಅದಕ್ಕಿಂತ ಘೋರ; ಘನಘೋರ. ಅರಣ್ಯಕಾಂಡದಿಂದ ಚತುರ್ದಶ ವರ್ಷಗಳ ಅನಂತರ ಮರಳಿ ಬಂದ ಪತಿಯ ಬಗೆಗಿನ ಅವಳ ತುಮುಲ-ತಿರಸ್ಕಾರ ಎಲ್ಲಾದರೂ ದಾಖಲಾಗಿದೆಯೆ? ‌ಆಕೆ ಇಂತಹ ಪರಿತ್ಯಕ್ತ ಹೆಣ್ಣುಮಕ್ಕಳ ಪ್ರತಿನಿಧಿಯಲ್ಲವೆ?

ಸುಂದರ ದಾಂಪತ್ಯದ ಹತ್ತಾರು ಕನಸುಗಳನ್ನು ಹರಡಿಕೊಂಡಿದ್ದವಳು ಊರ್ಮಿಳೆ. ಏರು ಜವ್ವನದಲ್ಲಿದ್ದವಳು. ಆಕೆಯದು ಬಯಕೆ ಸಿಹಿ ಉಣ್ಣುವ ವಯಸ್ಸು. ಒಲುಮೆ ಸಿರಿಯನ್ನೇ ಕಾಣದಾದಳು. ಕನಿಷ್ಠ ಸಂತೈಸದೆಯೇ ಲಕ್ಷ್ಮಣ ತೊರೆದು ಅಣ್ಣನ ಹಿಂದೆ ಹೋದ. ಈ ಸೌಮಿತ್ರಿ ಅಣ್ಣನ ಬರಿಯ ನೆರಳಷ್ಟೇ. ಊರ್ಮಿಳೆ ಬಯಕೆಗಳಲ್ಲಿ ಬೆಂದು, ಬೆಂದು ಕರಕಲಾಗಿ ನೊಂದ ವಿರಹಗೀತೆ. ಅವಳು ಅಂತರ್ಮುಖಿ. ತನ್ನ ಆಸೆಗಳೆಲ್ಲ ಕಮರಿಹೋದರೂ, ಆಕೆ ಸಿಡಿಯಲಿಲ್ಲ. ತನ್ನವನು ಧರ್ಮೇಚ, ಅರ್ಥೇಚ, ಕಾಮೇಚ ನಾತಿಚರಾಮಿ ಎಂದುಸಿರಿ ಮಾಂಗಲ್ಯ ಕಟ್ಟಿ ಆ ಎಲ್ಲವನ್ನೂ ಜಾಣಮರೆವಿನ ವಶವಾಗಿಸಿ ಜಾರಿಕೊಂಡ. ಆದರೂ ಆ ಎಲ್ಲ ನೋವು, ಸಂಕಟ, ಯಾತನೆ, ಅಪಮಾನಗಳನ್ನು ಸಹಿಸಿಕೊಂಡಳು. ಊರ್ಮಿಳೆ ಎಲ್ಲಿಯೂ ತನ್ನ ಸಂಕಟವನ್ನು ಹೇಳಿಕೊಳ್ಳದ ಮಹಾನ್ ಸಂಯಮಿ.

ಇಂದಿಗೂ ಊರ್ಮಿಳೆಯರು ಊರುಕೇರಿಗಳಲ್ಲೆಲ್ಲ ಇದ್ದಾರು; ಇದ್ದಾರೆ. ಹೇಳಲೂ ಆಗದೆ, ತಾಳಲೂ ಆಗದೆ, ಆರ್ತವಾಗಿ, ಆಂತರ್ಯದಲ್ಲೇ ಮೊರೆಯಿಡುವ ಊರ್ಮಿಳೆಯರು ವರ್ತಮಾನದಲ್ಲೂ ಇದ್ದಾರೆ. ಸಂದುಗೊಂದುಗಳ ಅಲೆದು, ಬೆಟ್ಟ-ಗುಡ್ಡ ಹತ್ತಿ, ಕಾಡುಮೇಡುಗಳ ಸುತ್ತುತ್ತ, ತಮಗೆ ತಾಳಿಯಭಾಗ್ಯ ಕರುಣಿಸಿದ ಕರಿಮಣಿ ಮಾಲೀಕರ ಸಂಕ್ಷೇಮಕ್ಕಾಗಿ ನೇಮ-ನಿಯಮ, ಹೋಮ-ಹವನ, ಜಪ-ತಪಗಳಲ್ಲಿ ನಿರತರಾದ ನಾರಿಯರು ಇಂದಿಗೂ ಇದ್ದಾರೆ.

ರಾಷ್ಟ್ರಕವಿ ಕುವೆಂಪು ಅವರು ಊರ್ಮಿಳೆಗೆ, ಸೀತೆಗಿಂತ ಎತ್ತರದ ಸ್ಥಾನ ನೀಡಿದ್ದಾರೆ. ವನವಾಸದ ಸಂದರ್ಭದಲ್ಲಿ ಹಸಿ ಸೌದೆಯಿಂದಾಗಿ ಒಲೆ ಹೊತ್ತಿಕೊಳ್ಳದೆ ಹೊಗೆ ಉಗುಳಿದಾಗ, ಸೀತೆ ಅಸಹಾಯಕಳಾಗುತ್ತಾಳೆ. ಆಕೆಯ ಮೊಗಕ್ಕೆ ಮಸಿ ಮೆತ್ತಿಕೊಳ್ಳುತ್ತದೆ. ರಾಮನು ಸೀತೆಯ ಸ್ಥಿತಿ ಕಂಡು ಛೇಡಿಸುತ್ತಾನೆ. ವಾನರಿ ಎನ್ನುತ್ತಾನೆ! ಆಗ ಅತ್ತಿಗೆಯ ನೆರವಿಗೆ ಧಾವಿಸಿದ ಲಕ್ಷ್ಮಣನು ತನ್ನ ಸತಿ ಊರ್ಮಿಳೆಯನ್ನು ಸ್ಮರಿಸಿ ಒಲೆ ಊದುತ್ತಾನೆ. ಅದು ಹೊತ್ತಿ ಧಗಧಗಿಸುತ್ತದೆ. ಈ ಪ್ರಸಂಗದ ಮೂಲಕ ಕುವೆಂಪು ಅವರು ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಊರ್ಮಿಳೆಯ ತ್ಯಾಗಾನುರಾಗಕ್ಕೆ ನೀಡಬೇಕಾದ ಎತ್ತರದ ಗೌರವವನ್ನು ನೀಡಿದ್ದಾರೆ.

ಹಿರಿಯ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಊರ್ಮಿಳೆಯನ್ನು ಕುರಿತು ಏಕವ್ಯಕ್ತಿ ನಾಟಕ ರಚಿಸಿದ್ದಾರೆ. ಮಾಸ್ತಿಯವರು ತಮ್ಮ ‘ಆದಿಕವಿ ವಾಲ್ಮೀಕಿ’ ಕೃತಿಯಲ್ಲಿ ಆಕೆಯ ಬಗೆಗೆ ಆದರಾಭಿಮಾನ ತೋರಿದ್ದಾರೆ. ಹಿರಿಯ ಸಾಹಿತಿ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಊರ್ಮಿಳೆಯನ್ನು ಕುರಿತು ಕಾದಂಬರಿಯನ್ನೇ ಬರೆದಿದ್ದಾರೆ. ಆಕೆ ಅರಮನೆಯಲ್ಲಿದ್ದರೂ ಅಂತರಂಗದಲ್ಲಿ ವನವಾಸ ಮಾಡಿದವಳು. ಅದು ಬರಿಯ ವನವಾಸವಲ್ಲ, ತಪಸ್ಸಿನಂತೆ ಎನ್ನುತ್ತಾರೆ. ಹಾಗಾಗಿ ಅವಳನ್ನು ತಪಸ್ವಿನಿ ಎಂದು ಹೇಳಿ ಗೌರವಿಸಿದ್ದಾರೆ. ಲೇಖಕಿ ಸುಧಾ ಅಡುಕಳ ಅವರು ತಮ್ಮ ‘ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರೆಹಗಳ ಅಧ್ಯಾಯವೊಂದರಲ್ಲಿ ಊರ್ಮಿಳೆಯ ನೋವು, ನಿಟ್ಟುಸಿರನ್ನು ಆರ್ದ್ರವಾಗಿ ಎದೆಗೆ ತಾಕುವಂತೆ ನಿರೂಪಿಸಿದ್ದಾರೆ. ಓದುಗರ ಕಣ್ಣು ಮಂಜಾಗುತ್ತದೆ; ಮಬ್ಬಾಗುತ್ತದೆ.

ಆಧುನಿಕ ಸಾರಸ್ವತಲೋಕ ಊರ್ಮಿಳೆಯನ್ನು ಆದರದಿಂದ, ಗೌರವದಿಂದ ಕಂಡಿದೆ. ಪ್ರಾಚೀನ ಕಾವ್ಯಗಳಲ್ಲಿ ಸೀತೆಯ ಪ್ರಭೆಯಲ್ಲಿ, ಆ ಪಾತ್ರದ ವೈಭವೀಕರಣದಲ್ಲಿ ಊರ್ಮಿಳೆ ಮಸಕಾಗುತ್ತಾಳೆ; ಮಂಕಾಗುತ್ತಾಳೆ. ಸಂಪೂರ್ಣ ನಿರ್ಲಕ್ಷಿಸಲ್ಪಡುತ್ತಾಳೆ. ಅಲ್ಲಿ ಆಕೆಯ ಪಾತ್ರಕ್ಕೆ ಸಲ್ಲದ ನ್ಯಾಯವನ್ನು ಆಧುನಿಕ ಸಾಹಿತಿಗಳು ದೊರಕಿಸಿಕೊಡಲು ಪ್ರಯತ್ನಿಸಿದ್ದಾರೆ.

ಕವಿ ರವೀಂದ್ರನಾಥ ಠಾಕೂರರು ಊರ್ಮಿಳೆಯ ಕುರಿತು ವಿಶೇಷ ಲೇಖನವನ್ನೇ ಬರೆದಿದ್ದಾರೆ. ಪುರಾಣದಲ್ಲಿ ನಿರ್ಲಕ್ಷಿತ ಪಾತ್ರವಾದ ಊರ್ಮಿಳೆಯ ಅನನ್ಯ ವ್ಯಕ್ತಿತ್ವವನ್ನು ಸಾರಸ್ವತಲೋಕ ಸೂಕ್ತವಾಗಿ, ಸೂಕ್ಷ್ಮವಾಗಿ ಸ್ಮರಿಸಿ ಗೌರವಾದರ ತೋರಿದೆ.

ಹೌದು. ಅಂದು ಅಯೋಧ್ಯೆಗೊಬ್ಬಳೇ ಊರ್ಮಿಳೆ. ವರ್ತಮಾನದಲ್ಲಿ ಊರೂರಲ್ಲೂ ಊರ್ಮಿಳೆಯರು. ಯಾರದೋ ಧ್ಯಾನ; ಏತಕೋ ಮೌನ? ಈ ಅಂಗನೆಯರದು ಹೇಳಲಾಗದ ಅಸಹಾಯಕತೆ. ಬಿಕ್ಕಲೂ ಆಗದೆ, ಎದೆ ಬಿರಿಯುವಂತೆ ಮೊರೆಯಿಡಲೂ ಆಗದೆ, ಕಂಬನಿಯ ಮಾಲೆಯನು ಎದೆಯ ಬಟ್ಟಲಲೇ ಹುದುಗಿಸಿ ಇಟ್ಟುಕೊಂಡ ಅಬಲೆಯರು. ಈ ಕಾಂತೆಯರು ಬಯಸುವುದೆಲ್ಲ ಒಂದು ಸಾಂತ್ವನ, ಒಂದು ನೇವರಿಕೆ. ಆದರೆ ಪುರುಷ ಪುಂಗವರಿಗೆ ಇದು ಅರ್ಥವಾಗದು.

ನಾನು ಕಾಡಿಗೆ ಹೋಗಲೇ ಎಂದು ಲಕ್ಷ್ಮಣ ಅನುಮತಿ ಕೇಳಬೇಕಿತ್ತಲ್ಲವೆ? ಅದೂ 14 ವರ್ಷ. ತಾನು ಪತಿಯೊಡನೆ ಕಾಡಿಗೆ ಬರುತ್ತೇನೆ ಎಂದು ಊರ್ಮಿಳೆ ಹಟಕ್ಕೆ ಬೀಳಲಿಲ್ಲ. ಆದರೆ ಬರುತ್ತೇನೆ ಎಂದಳು. ಅಪ್ಪ, ಅಮ್ಮಂದಿರ ಕುಶಲ ನೋಡಿಕೊಂಡು ಇಲ್ಲಿಯೇ ಇರು ಎಂದನವನು. ವನವಾಸ ಮುಗಿಸಿ ಬಂದವನು ಮಡದಿಯ ಕುಶಲೋಪರಿ ಕೇಳಲಿಲ್ಲ. ಕೇಳಿದ್ದೆಲ್ಲ ಅಪ್ಪ, ಮೂವರು ಅಮ್ಮಂದಿರೂ ಹೇಗಿದ್ದಾರೆ ಎಂದು. ಹೇಗಾಗಿರಬೇಡ ಆಕೆಗೆ? ಊರ್ಮಿಳೆ ಸಹನೆಗೊಂದು ಉಪಮೆ. ಆಕೆ ಮೂಕ ಮರ್ಮರಕ್ಕೊಂದು ರೂಪಕ. ಆಕೆಯದು “ಭಾಷೆಗೂ ನಿಲುಕದ ಭಾವಗೀತೆ!”

14 ವರ್ಷಗಳ ಅವಳ ವಿರಹ ವೇದನೆ ಸಾಹಿತ್ಯಲೋಕದಲ್ಲಿ ಹೆಸರುವಾಸಿ. ಅದರ ಕುರಿತ ಚರ್ಚೆಯಲ್ಲಿ ಹಲವು ಸಾಹಿತಿಗಳೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸಹ ಇದ್ದಾರೆ. ಹಿಂದಿ ಕವಿ ಬಾಲಕೃಷ್ಣಶರ್ಮ ನವೀನರು ಕೂಡ ಊರ್ಮಿಳೆಯನ್ನು ವಿರಹಿಣಿಯಂತೆಯೇ ಕಂಡು ದೀರ್ಘಕವನ ರಚಿಸಿದ್ದಾರೆ. ಕನ್ನಡದ ಹಿರಿಯ ಲೇಖಕಿ ಭಾರತಿ (ತಿ.ತಾ. ಶರ್ಮರ ಪತ್ನಿ) ಊರ್ಮಿಳೆಯನ್ನು ಕುರಿತು ರಚಿಸಿರುವ ನಾಟಕದಲ್ಲಿ ‘ಶ್ರೀ ರಾಮಾಯಣ ದರ್ಶನಂ’ನಂತೆಯೇ ತಪಸ್ವಿನಿ ಅವಳು. ಪುತಿನ ಅವರ ‘ಬೀಳ್ಕೊಡಿಗೆ’ಯಲ್ಲಿ ಕರುಣಾರಸ ಪ್ರಧಾನವಾದ ಚಿತ್ರವನ್ನು ನೀಡಿದ್ದಾರೆ. ಒಟ್ಟಾರೆ ಉತ್ತರದ ಕವಿಗಳು ಅವಳನ್ನು ವಿರಹಿಣಿಯಂತೆ ಕಂಡಿದ್ದರೆ ದಕ್ಷಿಣದ (ಕನ್ನಡ) ಕವಿಗಳು ತಪಸ್ವಿನಿಯಂತೆ ಕಂಡಿದ್ದಾರೆ. ಇದರ ಸುಂದರವಾದ ತೌಲನಿಕ ಅಧ್ಯಯನಕ್ಕೆ ಆಸಕ್ತರು ಡಾ. ಪ್ರಧಾನ ಗುರುದತ್ ಮತ್ತು‌ ರಾಜೇಶ್ವರಯ್ಯನವರ ಊರ್ಮಿಳಾ ಹೊತ್ತಗೆಯನ್ನು ಪರಾಮರ್ಶಿಸಿದರೆ ಭರಪೂರ ಮಾಹಿತಿ ದೊರೆಯುತ್ತದೆ.

ಪ್ರಖ್ಯಾತ ಹಿಂದಿ ಕವಿ ಮೈಥಿಲಿಶರಣ ಗುಪ್ತರು ರಚಿಸಿರುವ ‘ಸಾಕೇತ’ ಎಂಬ ಮಹಾಕಾವ್ಯದ ನಾಯಕ, ನಾಯಿಕೆಯರು ಲಕ್ಷ್ಮಣ ಮತ್ತು ಊರ್ಮಿಳೆ. ಅದರಲ್ಲಿ ಅವಳನ್ನು ಒಬ್ಬ ಮಹಾನ್ ವಿರಹಿಣಿ ಎಂಬಂತೆ ಚಿತ್ರಿಸಲಾಗಿದೆ. ಸಾಕೇತವನ್ನು ಸಮರ್ಥವಾಗಿ ಪದ್ಯರೂಪದಲ್ಲೇ ಕನ್ನಡಕ್ಕೆ ಅನುವಾದ ಮಾಡಿ ಕೃತಾರ್ಥರಾದವರು ಕೆ. ಜಗನ್ನಾಥ ಶಾಸ್ತ್ರೀ. ಬೆಂಗಳೂರು ವಿವಿ ಅದನ್ನು ಪ್ರಕಟಿಸಿದೆ.

ಕಡೆಯ ಮಾತು: ಸ್ತ್ರೀ ಶೋಷಣೆಗೆ ಈ ನೆಲದಲ್ಲಿ ನಿಡಿದಾದ ಇತಿಹಾಸವಿದೆ. ಲಕ್ಷ್ಮಣನದು ಕಾನನದಲ್ಲಿ ರಾಮಸೀತಾ ವಿಲಾಸದ ಸಂದರ್ಭಗಳಲ್ಲಿ ಕಾವಲುಗಾರನ ಪಾತ್ರ. ಶ್ರೀರಾಮನಾದರೂ ಶೋಷಿತೆ ಊರ್ಮಿಳೆಯ ಬಗೆಗೆ ಯೋಚಿಸಬಹುದಿತ್ತು. ಆ ಪಾತ್ರ ಕಡೆದ ವಾಲ್ಮೀಕಿಗೂ ಭಾತೃಪ್ರೇಮದ, ಪಿತೃವಾಕ್ಯ ಪರಿಪಾಲನೆಯ ಆದರ್ಶಗಳನ್ನು ಪ್ರತಿಪಾದಿಸುವುದೇ ಮುಖ್ಯವಾಗಿತ್ತು. ವಾಲ್ಮೀಕಿಗೆ ಅಣ್ಣತಮ್ಮಂದಿರ ಅನುಬಂಧ ಸಾರಬೇಕೆಂದಿತ್ತು. ಸಂಸಾರದಲ್ಲಿ ಇರಬೇಕಾದ ಸಾರವನ್ನು ಕುರಿತು ಶ್ರೀ ರಾಮಾಯಣವನ್ನು ಬರೆದವರು ಯೋಚಿಸಲಿಲ್ಲ. ಇಂದಿನ ವರ್ತಮಾನದ ವಾಸ್ತವಗಳೇ ಬೇರೆಯಾಗಿವೆ. ರಾಮಾಯಣದ ಸ್ತ್ರೀಪಾತ್ರಗಳನ್ನು ಮಾನವೀಯ ಅನುಕಂಪದಿಂದ, ಅಂತಃಕರಣದಿಂದ, ಮರುವ್ಯಾಖ್ಯಾನಕ್ಕೆ ಒಡ್ಡಬೇಕಿದೆ.

  • (ಕೆ. ರಾಜಕುಮಾರ್)
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments