ದಾವಣಗೆರೆ,ಮಾರ್ಚ್.28: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಏಪ್ರಿಲ್ 12 ರಿಂದ ಆರಂಭವಾಗಲಿದ್ದು ವಿಧಾನಸಭಾ ಕ್ಷೇತ್ರದಲ್ಲಿನ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿನ ವಾರ್ ರೂಂ ಪರಿಶೀಲನೆಯನ್ನು ಗುರುವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ನಡೆಸಿದರು.
ಮಾಯಕೊಂಡ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿನ ಸ್ಥಾಪಿಸಲಾದ ವಾರ್ ರೂಂ ಪರಿಶೀಲನೆ ನಡೆಸಲಾಯಿತು. ವಾರ್ ರೂಂನಲ್ಲಿ ಸಾರ್ವಜನಿಕರಿಗೆ ಸಹಾಯಕ್ಕಾಗಿ ಸ್ಥಾಪಿಸಲಾಗಿರುವ ಸಂಪರ್ಕ ವಿಧಾನ, ದೂರು ಸ್ವೀಕರಿಸಿ ನಿರ್ವಹಣೆ ಮಾಡುವ ವ್ಯವಸ್ಥೆ, ಮತಯಂತ್ರಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಿಕೊಳ್ಳಲಾದ ಭದ್ರತಾ ಕೊಠಡಿ, ಗೈರು ಮತದಾರರ ಪಟ್ಟಿ ಸಿದ್ದಪಡಿಸುವ ಬಗ್ಗೆ ಪರಿಶೀಲನೆ ನಡೆಸಿದರು.
ಹೊನ್ನಾಳಿ ಭೇಟಿ; ಹೊನ್ನಾಳಿ ಸಹಾಯಕ ಚುನಾವಣಾಧಿಕಾರಗಳ ಕಚೇರಿಗೆ ಭೇಟಿ ನೀಡಿ ಅಲ್ಲಿ ಮತಯಂತ್ರಗಳನ್ನು ಸಂಗ್ರಹಿಸಲು ಸ್ಥಾಪಿಸಲಾದ ಸ್ಟ್ರಾಂಗ್ ರೂಂ ಪರಿಶೀಲನೆ ನಡೆಸಿದರು.
ಚೆಕ್‍ಪೋಸ್ಟ್ ಪರಿಶೀಲನೆ; ಹೊನ್ನಾಳಿ ತಾ; ಹೊಳೆಹರಳಹಳ್ಳಿ ಹಾಗೂ ಹರಿಹರ ತಾ; ನಂದಿಗುಡಿ ಚೆಕ್‍ಪೋಸ್ಟ್ ಪರಿಶೀಲನೆ ನಡೆಸಿ ಮಾರ್ಗದಲ್ಲಿ ಹೋಗುವ ಎಲ್ಲ ಮಾದರಿಯ ವಾಹನಗಳನ್ನು ಪರಿಶೀಲನೆ ಮಾಡಬೇಕು. ವಾಹನದಲ್ಲಿ ಸರಕು ಸಾಗಣೆ ಮಾಡುತ್ತಿದ್ದಲ್ಲಿ ನಿಯಮಾನುಸಾರ ಇನ್‍ವಾಯ್ಸ್ ಬಿಲ್, ಡೆಲಿವರಿನೋಟ್ ಎಲ್ಲಿಂದ ಎಲ್ಲಿಗೆ, ಯಾವ ಮಾದರಿ ವಸ್ತು ಎಂದು ತಿಳಿದುಕೊಂಡು ದಾಖಲು ಮಾಡಬೇಕೆಂದು ಸೂಚನೆ ನೀಡಿದರು.
ಈ ವೇಳೆ ಮಾಯಕೊಂಡ ಸಹಾಯಕ ಚುನಾವಣಾಧಿಕಾರಿ ದುರ್ಗಶ್ರೀ, ಹೊನ್ನಾಳಿ ಸಹಾಯಕ ಚುನಾವಣಾಧಿಕಾರಿ ಅಭಿಷೇಕ್ ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.