ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ 94 ನೇ ಜನುಮದಿನದ ಅಂಗವಾಗಿ ಬಾಸ್ಕೆಟ್ ಬಾಲ್ ಕ್ಲಬ್, ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗ, ಜಿ. ಎಸ್. ಮಂಜುನಾಥ್
ಗಡಿಗುಡಾಳ್ ಸ್ನೇಹ ಬಳಗದ ಆಶ್ರಯದಲ್ಲಿ ಮನೆಗೆರಡು ಮರ- ದಾವಣಗೆರೆಗೆ ವರ ಕಾರ್ಯಕ್ರಮ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು.
ಮಕ್ಕಳಲ್ಲಿ ಪರಿಸರ ಪ್ರೇಮ ಮೂಡಿಸುವ ಸಲುವಾಗಿ ಮಹಾನಗರ ಪಾಲಿಕೆ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಮತ್ತು ಸ್ನೇಹಿತರ ಬಳಗ ಚಿತ್ರಕಲಾ ಸ್ಪರ್ಧೆಯಲ್ಲಿ ಬಾಪೂಜಿ, ಗುಂಡಿ ಮಹದೇವಪ್ಪ, ಶಾಮನೂರು ಸರ್ಕಾರಿ ಪ್ರೌಢಶಾಲೆ, ಸೀತಮ್ಮ ವಸತಿಯುತ ಶಾಲೆ, ಬಕ್ಕೇಶ್ವರ , ಜಗದ್ಗುರು ಮುರುಗರಾಜೇಂದ್ರ ಪ್ರೌಢಶಾಲೆ, ವಿಶ್ವಭಾರತಿ ಮುಂತಾದ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಥಳದಲ್ಲಿ ಪರಿಸರ ಕುರಿತ ಚಿತ್ರಗಳನ್ನು ರಚಿಸಿ ಗಮನ ಸೆಳೆದರು.
ಪರಿಸರ ದಿನಾಚರಣೆ ಮತ್ತು ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಎಂಸಿ.ಸಿ ಬಿ ಬ್ಲಾಕ್‌ನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಂ.ಸಿ.ಸಿ. ಬಿ ಬ್ಲಾಕ್‌ನ
ಕಾರ್ಪೋರೇಟರ್ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಈಗಾಗಲೇ ದೆಹಲಿಯಲ್ಲಿ 52 ಡಿಗ್ರಿ ಬಿರುಬಿಸಿಲಿನಿಂದ ಜನ ತತ್ತರಿಸುತ್ತಿರುವುದನ್ನು ನೋಡಿದ್ದೇವೆ. ದೆಹಲಿಯ ಪರಿಸ್ಥಿತಿ ದಾವಣಗೆರೆಗೆ ಬರಬಾರದೆಂದರೆ ನಾವು ಇಂದೇ ಎಚ್ಚೆತ್ತು ಮುಂದಾಗುವ ದುಷ್ಪರಿಣಾಮಗಳನ್ನು ತಡೆಯಬೇಕು. ಸಾರ್ವಜನಿಕರು ಮನೆಯ ಮುಂದೆ ಎರಡೆರಡು ಗಿಡಗಳನ್ನು ನೆಡಲು ತನು-ಮನ-ಧನದಿಂದ ಸಹಕರಿಸಬೇಕು ಎಂದು ಕರೆ ನೀಡಿದರು.
ಕರುಣಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಬಸವಲಿಂಗಪ್ಪ ಮಾತನಾಡಿ, ಪ್ರಕೃತಿಯೇ ದೇವರು, ಪ್ರಕೃತಿಯೇ ಧರ್ಮ. ಪ್ರಕೃತಿ ಪೋಷಣೆ ನಮ್ಮ ಪೋಷಣೆಗೆ ಹೊರತು, ಪ್ರಕೃತಿಗೆ ನಮ್ಮಿಂದ ಯಾವುದೇ ಲಾಭವಿಲ್ಲ. ಹಾಗಾಗಿ ಶುದ್ಧ ಗಾಳಿ, ನೀರು, ಆಕಾಶ, ಆಹಾರ, ಮರಗಳೇ, ಪ್ರಕೃತಿಯೇ ನಮ್ಮ ದೇವರು ಎಂದು ಬಣ್ಣಿಸಿದರು.
ಅತ್ಯಗತ್ಯವಾದ ಆಮ್ಲಜನಕದ ಸಿಲಿಂಡರ್ ಆಗಿರುವ ಮರ ಮುಖ್ಯ. “ಮನೆಗೆರಡು ಮರ ಪ್ರಾಣವಾಯುವಿನ ವರ, ಮರ ಕಡಿದರೆ ಮಗನ ಕಡಿದಂತೆ. ಇಂದು ಮರ ಮಾಯ ನಾಳೆ ನಾವೂ ಮಾಯ” ಎನ್ನುವ ಮಾತಿನಂತೆ
ದವನಗಿರಿ ಅಭಿವೃದ್ಧಿ ಹೊಂದುತ್ತಿದ್ದು ಅದರೊಟ್ಟಿಗೆ ಮರಗಳ ಕಡಿದು ಪ್ರಾಣವಾಯುವಿನ ಕೊರತೆಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಮರಗಳನ್ನು ಬೆಳೆಸುವುದು ಮತ್ತು ಸಂರಕ್ಷಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ. ಜನರು ಮನೆಯ ಮುಂದೆ ಗಿಡಗಳನ್ನು ನೆಟ್ಟ ಪರಿಸರ ಪ್ರೇಮದ ಈ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು. ಈ ವರ್ಷ 16 ಸಾವಿರ ಸಸಿಗಳನ್ನು ನಗರದಾದ್ಯಂತ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಮನೆಗರೆಡು ಮರ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದ್ಯದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಾರ್ಡ್ ನ ಪ್ರಮುಖರಾದ ಗುರುಮೂರ್ತಿ, ಮಂಜುಳಾ ಬಸವಲಿಂಗಪ್ಪ, ಆರ್‌ಟಿಒ ರಾಜು, ಹೆಲ್ತ್ ಇನ್ಸ್ ಪೆಕ್ಟರ್ ಪ್ರಕಾಶ್, ಹೆಲ್ತ್ ದಫೇದಾರ್ ರಮೇಶ್, ಭದ್ರಾ ಕಾಲೇಜಿನ ಸಂಕೇತ್, ಎಂ. ವಿಜಯಗೌಡರು,
ಶ್ರೀರಾಮಮೂರ್ತಿ, ಸಪ್ತಗಿರಿ, ಭರತ್, ಪ್ರಮೋದ್, ಪ್ರವೀಣ ಕಂಬಳಿ, ಗುರು, ಬಸವರಾಜ್, ನೀಲಕಂಠಪ್ಪ, ನಿಖಿಲ್ ಮತ್ತು ಪಾಲಿಕೆಯ ನೌಕರರು ಮತ್ತಿತರರು ಹಾಜರಿದ್ದರು.