ದಾವಣಗೆರೆ:ಕೆನರಾ ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿರುವ “ಕೆನರಾ ವಿದ್ಯಾ ಜ್ಯೋತಿ” ಯೋಜನೆಯಲ್ಲಿ ಸರಕಾರಿ ಹಾಗೂ ಅನುದಾನಿತ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡ ವಿದ್ಯಾರ್ಥಿನಿಯರಿಗೆ ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ದಾವಣಗೆರೆಯ ಕೆನರಾ ಬ್ಯಾಂಕ್ ವಿದ್ಯಾನಗರ ಶಾಖೆಯಲ್ಲಿ ನಡೆಯಿತು. ಕೆನರಾ ಬ್ಯಾಂಕ್ ದಾವಣಗೆರೆ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ವೈ.ವಿ.ಎನ್.ಶಿವಪ್ರಸಾದ್ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡುತ್ತಾ 1906 ರಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕೆನರಾ ಬ್ಯಾಂಕನ್ನು ಸ್ಥಾಪಿಸುವಾಗ ಹೊಂದಿದ್ದ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯನ್ನು ಕೆನರಾ ಬ್ಯಾಂಕ್ ಇಂದಿಗೂ ಮುಂದುವರೆಸಿಕೊಂಡು ಬರುತ್ತಿದೆ. ಈ ಯೋಜನೆಯಡಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪಂಗಡದ 5, 6, 7 ನೇ ತರಗತಿಯ ವಿದ್ಯಾರ್ಥಿನಿಯರಿಗೆ ತಲಾ ರೂ.2,500 ಹಾಗೂ 8, 9, 10 ನೇ ತರಗತಿಯ ವಿದ್ಯಾರ್ಥಿನಿಯರಿಗೆ ತಲಾ ರೂ.5000 ವಿದ್ಯಾರ್ಥಿ ವೇತನ ವಿತರಿಸುತ್ತಿದ್ದೇವೆ ಎಂದರು. ದಾವಣಗೆರೆಯ ಕೆನರಾ ಬ್ಯಾಂಕ್ ವಿದ್ಯಾನಗರ ಶಾಖೆ, ವಿನೋಬ ನಗರ ಶಾಖೆ, ಪಿಜೆ ಬಡಾವಣೆ ಶಾಖೆ ಹಾಗೂ ಎಸ್‌ಎಂಇ ಶಾಖೆಗಳು ಗುರುತಿಸಿರುವ ವಿವಿಧ ಶಾಲೆಗಳ 40 ವಿದ್ಯಾರ್ಥಿನಿಯರನ್ನು ಕೆನರಾ ಬ್ಯಾಂಕಿಗೆ ಬರಮಾಡಿಕೊಂಡು ವಿದ್ಯಾರ್ಥಿ ವೇತನವನ್ನು ಅವರು ವಿತರಿಸಿ ಮಾತನಾಡಿದರು. ದಾವಣಗೆರೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಕೊಟ್ರೇಶ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಎಮ್.ಹೆಚ್.ಬಸವರಾಜ್ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿ ನವೀನ್ ಮಠದ್ ಅವರು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆನರಾ ಬ್ಯಾಂಕಿನ ಸಾಮಾಜಿಕ ಜವಾಬ್ದಾರಿ ಯೋಜನೆಯನ್ನು ಶ್ಲಾಘಿಸಿದರು. ಕೆನರಾ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ವಿಭಾಗೀಯ ಪ್ರಬಂಧಕಿ ರವಿಕಲಾ ಮಾತನಾಡಿ ದೇಶದ ಎಲ್ಲ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಯೋಜನೆಯ ಫಲಾನುಭವಿ ವಿದ್ಯಾರ್ಥಿನಿಯರು ಮುಂದೆ ಕೆನರಾ ಬ್ಯಾಂಕಿನ ಜೊತೆಯೇ ವ್ಯವಹಾರಗಳನ್ನು ನಡೆಸಲು ಮನವಿ ಮಾಡಿದರು. ಸಮಾರಂಭದಲ್ಲಿ ಬ್ಯಾಂಕಿನ ವಿದ್ಯಾನಗರ ಶಾಖೆಯ ಮುಖ್ಯ ಪ್ರಬಂಧಕಿ ಶಿಲ್ಪಾ ಎಂ. ಗಾಯಕವಾಡ್, ವಿನೋಬ ನಗರ ಶಾಖೆಯ ಮುಖ್ಯ ಪ್ರಬಂಧಕಿ ಚಂಚಲಾ ಕುಮಾರಿ, ಪಿ.ಜೆ.ಬಡಾವಣೆ ಶಾಖೆಯ ಮುಖ್ಯ ಪ್ರಬಂಧಕ ಶಬೀರ್ ಬಶೀರ್, ಎಸ್‌ಎಂಇ ಶಾಖೆಯ ಮುಖ್ಯ ಪ್ರಬಂಧಕ ಎಸ್.ವಿ.ಕಿರುಬ ಶಂಕರ್ ಹಾಗೂ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಅನಿಲ್ ನಾಯಕ್, ಗೋಪಾಲ ಕೃಷ್ಣ, ವಿ.ಆರ್.ಹರೀಶ್, ಕೆ.ಭಾರ್ಗವಿ, ಸಿ.ಸುವೇಶ್ ಚಂದ್ರ, ಎನ್.ಪಾರ್ವತಿ, ಹೆಚ್.ಜೆ.ಆಶಾ, ಡಿ.ಎ.ಸಾಕಮ್ಮ ಮತ್ತಿತರರು ಉಪಸ್ಥಿತರಿದ್ದರು ಎಂದು ಎಐಟಿಯುಸಿ ಜಿಲ್ಲಾ ಅಧ್ಯಕ್ಷರಾದ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.