ದಾವಣಗೆರೆ: ಜಾತಿವಾರು ಜನಗಣತಿ ವರದಿ ಅಂಗೀಕಾರ ಆಗಬೇಕು. ಈ ಮೂಲಕ ಶೈಕ್ಷಣಿಕ ಅಸಮಾನತೆ ತೊಲಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಬೇಕು. ಆದ್ರೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೈಗೊಂಡಿರುವ ನಿರ್ಣಯ ದುರದೃಷ್ಟಕರ. ವಿರೋಧ ವ್ಯಕ್ತಪಡಿಸಿದ್ದು ಸೂಕ್ತ ಅಲ್ಲ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಾತಿ ಗಣತಿ ವರದಿ ಅಂಗೀಕರಿಸಿರುವ ರಾಜ್ಯ ಸರ್ಕಾರವು ಸಚಿವ ಸಭೆಯಲ್ಲಿ ಮಂಡಿಸಿ ಅಂಗೀಕರಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನೆಡೆ ಆಗಿರುವುದು ಮಾತ್ರವಲ್ಲ, ಶೋಷಿತ, ಬಡವ, ಹಿಂದುಳಿದ, ದಲಿತ ವರ್ಗದವರಿಗೆ ಶಕ್ತಿ ನೀಡುವುದರ ವಿರುದ್ಧ ಪ್ರಬಲ ಸಮುದಾಯವು ನಿಂತಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಈ ವರದಿ ತಯಾರಿಸಲಾಗಿದೆ. ಆದ್ರೆ, ಆಗ ಅವೈಜ್ಞಾನಿಕ ಎಂದು ಯಾರೂ ಹೇಳಲಿಲ್ಲ. ಸಮೀಕ್ಷೆ ನಡೆಯುವಾಗ ಸರಿಯಾಗಿ ನಡೆಯುತ್ತಿಲ್ಲ ಎಂದು ಧ್ವನಿ ಎತ್ತಲಿಲ್ಲ. ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂಬ ಒತ್ತಾಯ ಮಾಡಲಾಗಿದೆ. ಆದ್ರೆ, ಯಾಕೆ ಸಮರ್ಪಕ ವರದಿ ತಯಾರಿಕೆಗೆ ಸಹಕರಿಸಿಲ್ಲ ಎಂಬ ಪ್ರಶ್ನೆ ಕಾಡಲಾರಂಭಿಸಿದೆ ಎಂದು ಹೇಳಿದ್ದಾರೆ.
ಕಾಂತರಾಜ ನೇತೃತ್ವದ ಆಯೋಗವು ನಡೆಸಿದ ಸಮೀಕ್ಷೆಯು ಪಾರದರ್ಶಕವಾಗಿದೆ. ಇದಕ್ಕಾಗಿ 22 ಸಾವಿರ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಇದು ಸ್ವೀಕಾರ್ಹವಾದ ವರದಿ ಎಂಬುದು ಎರಡು ಸಮುದಾಯ ಹೊರತುಪಡಿಸಿದರೆ ಉಳಿದವರೆಲ್ಲರೂ ಒಪ್ಪಿದ್ದಾರೆ. ಆದರೂ ಮಹಾಸಭಾ ಜಾರಿಗೆ ವಿರೋಧ ವ್ಯಕ್ತಪಡಿಸಿರುವ ನಿರ್ಣಯ ಸರಿಯಿಲ್ಲ ಎಂದು ವಿನಯ್ ಕುಮಾರ್ ಅವರು ತಿಳಿಸಿದ್ದಾರೆ.
ಎಷ್ಟೇ ಒತ್ತಡ ಬಂದರೂ ರಾಜಕೀಯ ಹಿತಾಸಕ್ತಿಗೆ ಮಣಿಯದೇ ಜಾತಿ ಗಣತಿ ವರದಿ ಜಾರಿಯಾಗಬೇಕು. ಅಹಿಂದ ವರ್ಗ ಸೇರಿದಂತೆ ಕೆಳಸಮುದಾಯಗಳ ಹಿತ ಕಾಪಾಡಲು ಸಿದ್ದರಾಮಯ್ಯರು ಮುಂದಾಗಬೇಕು. ಒಳ್ಳೆಯ ಕೆಲಸ ಮಾಡುವಾಗ ಅಡ್ಡಿ, ಆತಂಕ ಬರುವುದು ಸಹಜ. ಯಾವುದಕ್ಕೂ ಮಣಿಯದೇ ಆದಷ್ಟು ಬೇಗ ವರದಿ ಜಾರಿಗೊಳಿಸಿ, ಇದರಲ್ಲಿರುವ ಅಂಶಗಳನ್ನು ರಾಜ್ಯದ ಜನರಿಗೆ ತಿಳಿಸಿಕೊಡುವ ಕೆಲಸ ಆಗಬೇಕು ಎಂದು ಜಿ. ಬಿ. ವಿನಯ್ ಕುಮಾರ್ ಅವರು ಹೇಳಿದ್ದಾರೆ.