ಬೆಳಗಾವಿ.ಅ.23(ಕರ್ನಾಟಕ ವಾರ್ತೆ): ಕಿತ್ತೂರು ಉತ್ಸವ-2024 ಹಾಗೂ ಚನ್ನಮ್ಮನ ವಿಜಯೋತ್ಸವದ 200 ನೇ ವರ್ಷದ ಆಚರಣೆಯನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಕಿತ್ತೂರಿನ ಇತಿಹಾಸವನ್ನು ರಾಜ್ಯಕ್ಕೆ ಸೀಮಿತಗೊಳಿಸದೇ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಪ್ರತಿಪಾದಿಸಿದರು.
ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಚನ್ನಮ್ಮ ಮುಖ್ಯ ವೇದಿಕೆಯಲ್ಲಿ ಬುಧವಾರ (ಅ.23) ಜರುಗಿದ ಕಿತ್ತೂರು ಉತ್ಸವ-2024 ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಿತ್ತೂರು ಉತ್ಸವದಲ್ಲಿ ಅನೇಕ ಸಾಹಿತಿಗಳು, ಬುದ್ಧಿ ಜೀವಿಗಳು, ಕಲಾವಿದರು ತಮ್ಮ ಪರಿಚಯವನ್ನು ನಾಡಿಗೆ ಮಾಡಿಕೊಳ್ಳುತ್ತಿದ್ದಾರೆ.
ಕಿತ್ತೂರು ಇತಿಹಾಸಕ್ಕೆ ಸಂಬಂದಪಟ್ಟಂತೆ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಸೇರಿದಂತೆ ಇನ್ನೂ ಅನೇಕ ಹೋರಾಟಗಾರರ ಇತಿಹಾಸವನ್ನು ಮರುಸೃಷ್ಠಿ ಮಾಡುವುದು ಈ ಕಾರ್ಯಕ್ರಮದ ಉದ್ಧೇಶವಾಗಿದೆ.
ರಾಣಿ ಚನ್ನಮ್ಮನ ಆದರ್ಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಳೆದ ಸಾಲಿನಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಕಿತ್ತೂರು ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಮುಂದೆಯೂ ಕೂಡ ಕಿತ್ತೂರು ಅಭಿವೃದ್ಧಿಗೆ ಅನುದಾನ ನೀಡಲಾಗುವುದು.
ಇತಿಹಾಸ ಅಧ್ಯಯನ ಕೇಂದ್ರ ಸ್ಥಳಾಂತರ:
ಕಿತ್ತೂರು ಇತಿಹಾಸ ಅಧ್ಯಯನ ಕೇಂದ್ರವನ್ನು ವಿಜಯಪುರದಿಂದ ಬೆಳಗಾವಿಗೆ ಸ್ಥಳಾಂತರಿಸಲಾಗುವುದು. ರಾಣಿ ಚನ್ನಮ್ಮವಿಶ್ವ ವಿದ್ಯಾಲಯವನ್ನು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸ್ವಾತಂತ್ರ್ಯ ಶ್ರೀ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಕಿತ್ತೂರು ನಾಡು ಸ್ವಾಭಿಮಾನದ ನಾಡಾಗಿದೆ. ಹೆಣ್ಣು ಮಕ್ಕಳು ಮನೆಯಿಂದ ಹೊರಬರದಂತಹ ಕಾಲದಲ್ಲಿ ರಾಣಿಚನ್ನಮ್ಮ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಧೀರ ಮಹಿಳೆಯಾಗಿದ್ದಳು.
ರಾಜ್ಯದ ಶ್ರೀಮಂತ ಸಂಸ್ಕೃತಿಗೆ ರಾಣಿ ಚನ್ನಮ್ಮ, ಅಮಟೂರ ಬಾಳಪ್ಪನವರಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಇಂದಿನ ಮಕ್ಕಳಿಗೆ ಮನವರಿಕೆ ಮಾಡಬೇಕಾಗಿದೆ. ಸ್ವಾತಂತ್ರ್ಯ ಹೊರಾಟದ ಬೆಳ್ಳ ಚುಕ್ಮಿ ರಾಣಿ ಚನ್ನಮ್ಮಳ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು.
ರಾಜ್ಯ ಸರ್ಕಾರವು ಬಡವರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ವಿಶೇಷವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢ ವಾಗಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ ಎಂದು ನುಡಿದರು.
ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ವಿಜಯೋತ್ಸವದ ಉತ್ಸಾಹ ಕೇವಲ ಕಿತ್ತೂರಿಗೆ ಸಿಮಿತವಾಗದೆ ಇಡೀ ವಿಶ್ವಕ್ಕೆ ಪ್ರೇರಣೆಯಾಗಿದೆ. ಕಿತ್ತೂರು ಉತ್ಸವ ಜನರ ಉತ್ಸವಾಗಿದೆ. ಇದು ಕೇವಲ ವಿಜಯೋತ್ಸವವಾಗದೇ ಪ್ರೇರಣಾ ಉತ್ಸವವಾಗಲಿ ಎಂದರು.
ಬ್ರಿಟಿಷ‌್ ಅಧಕಾರಿ ಥ್ಯಾಕರೆಯನ್ನು ಬಲಿ ಪಡೆದು ವಿಜಯ ಪಥಾಕೆ ಸಾರಿದ ವಿಜಯೋತ್ಸವದ 200 ವರ್ಷಾಚರಣೆ ಆಚರಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೊರಾಡುವುದರ ಮೂಲಕ ಇಡೀ ದೇಶಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಇಟ್ಟಂತಹ ಐತಿಹಾಸಿಕ ಸನ್ನಿವೇಶವಾಗಿದೆ.
ಕಿತ್ತೂರು ಸ್ವಾಭಿಮಾನದ ನಾಡಾಗಿದೆ. ದೇಶ ಸ್ವತಂತ್ರ್ಯಗೊಂಡು 75 ವರ್ಷಗಳು ಕಳೆದಿವೆ. ಆದರೆ ದೇಶಕ್ಕೆ ಅಂಟಿರುವ ಗುಲಾಮಿತನದಿಂದ ಹೊರ ಬರಬೇಕಾಗಿದೆ. ಈ ಕುರಿತು ಜಾಗೃತಿ ಹೊಂದುವುದರ ಮೂಲಕ ಬದಲಾವಣೆಯನ್ನು ತರುವಂತೆ ತಿಳಿಸಿದ ಅವರು, ಉತ್ಸವವನ್ನು ಕೇವಲ ಮನರಂಜನೆಗೆ ಸಿಮಿತಗೊಳಿಸಿದೇ ನಮ್ಮ ಜವಾಬ್ದಾರಿಗಳನ್ನು ಅರಿತು ಕೊಳ್ಳುವಂತೆ ಸಂಸದರಾದ ವಿಶ್ವೆಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು, ಕಿತ್ತೂರು ಗಂಡು ಮೆಟ್ಟಿನ ನಾಡಾಗಿದ್ದು, ಇದು ಯಾರಿಗೂ ಬಗ್ಗದೆ ಇರುವಂತಹ ನಾಡಾಗಿದ್ದ ನಮ್ಮಲ್ಲಿ ಸ್ವಾಭಿಮಾನದ ರಕ್ತ ಹರಿಯುತ್ತದೆ.
ಕಿತ್ತೂರು ಕೊಟೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಕಾರ್ಯವನ್ನು ಕೆಲವೇ ದಿನಗಳಲ್ಲಿ ಕೃತಿ ಮೂಲಕ ಮಾಡಿ ತೋರಿಸಲಾಗುವುದು ಎಂದರು. ಕಿತ್ತೂರು ಚನ್ನಮ್ಮನ ಸಂಶೋಧನೆ ಕೇಂದ್ರವನ್ನು ಕಿತ್ತೂರಿಗೆ ಒದಗಿಸಲು ಕೋರಿಕೆ ಇಟ್ಟ ಅವರು, ವಿಜಯೋತ್ಸವದ 200ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿ, ನಿಚ್ಚಣಕಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಜಿಗಳು ಆಶಿರ್ವಚನ ನೀಡಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿ ರಾಣಿ ಚನ್ನಮ್ಮನ ಸಾಹಸವನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಚನ್ನಮ್ಮ ಮುಂಚೂಣಿಯಲ್ಲಿದ್ದರು. ಕಿತ್ತೂರಿನ ಕೋಟೆಯಲ್ಲಿ ಸ್ವಾತಂತ್ರ್ಯ ಹೊರಾಟದ ಕುರುಹುಗಳನ್ನು ನಾವು ಕಾಣಬಹುದಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ರಾಜು(ಆಸೀಫ್) ಸೇಠ,
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ.ಸಿ.ಇ.ಓ ರಾಹುಲ್ ಶಿಂಧೆ , ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೆಶಕ ಕೆ.ಎಚ್.ಚನ್ನೂರ, ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಪ್ರವಾಸೊದ್ಯಮ ಇಲಾಖೆ ಉಪನಿರ್ದೆಶಕಿ ಸೌಮ್ಯ ಗುಳೇದ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಬೈಲಹೊಂಗಲ್ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಸ್ವಾಗತಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ:
ಇದೇ ಸಂದರ್ಭದಲ್ಲಿ ಸಂತೋಷ ಹಾನಗಲ್ ಸಂಪಾದಕತ್ವದಲ್ಲಿ ರಚಿತ ದಿ ಪೋರ್ಟೆಸ್ ಆಫ್ ಪಿಯರಲೆಸ್ಸ್ ಡ್ರೀಮ್ಸ ಸ್ಮರಣ ಸಂಚಿಕೆಯನ್ನು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ಬಿಡುಗಡೆ ಮಾಡಿದರು.
ರಾಣಿ ಚನ್ನಮ್ಮನ ವಿಜಯೊತ್ಸವದ 200 ನೇ ವರ್ಷದ ಸ್ಮರಣಾರ್ಥವಾಗಿ ಕಿತ್ತೂರು ರಾಣಿ ಚನ್ನಮ್ಮನ ಅಂಚೆ ಚೀಟಿ, ಶಾಶ್ವತ ಅಂಚೆ ರದ್ಧತಿ ಹಾಗೂ ವಿವಿಧ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.