Saturday, January 11, 2025
Homeಸಾರ್ವಜನಿಕ ಧ್ವನಿಜನತಾ ಅಧಿವೇಶನವನ್ನು ಕರೆದು ಜನರ ಬದುಕಿನ ಮುಖ್ಯ ಸಮಸ್ಯೆಗಳ ಕುರಿತು ಚರ್ಚೆಯಾಗಿ ಜನಪರ ನೀತಿಗಳು, ಕಾರ್ಯಕ್ರಮಗಳು...

ಜನತಾ ಅಧಿವೇಶನವನ್ನು ಕರೆದು ಜನರ ಬದುಕಿನ ಮುಖ್ಯ ಸಮಸ್ಯೆಗಳ ಕುರಿತು ಚರ್ಚೆಯಾಗಿ ಜನಪರ ನೀತಿಗಳು, ಕಾರ್ಯಕ್ರಮಗಳು ಜಾರಿಯಾಗಬೇಕು:ನೂರ್ ಶ್ರೀಧರ್

ದಾವಣಗೆರೆ:”ಮುಖ್ಯಮಂತ್ರಿಗಳು,ಸಚಿವರು ,ಸಂಬಂಧಿತ ಅಧಿಕಾರಿಗಳು ಮತ್ತು ಜನಚಳುವಳಿಗಳ ಮುಖಂಡರು ಸೇರಿದಂತೆ ಒಂದು ಜನತಾ ಅಧಿವೇಶನವನ್ನು ಕರೆದು ಜನರ ಬದುಕಿನ ಮುಖ್ಯ ಸಮಸ್ಯೆಗಳ ಕುರಿತು ಚರ್ಚೆಯಾಗಿ ಜನಪರ ನೀತಿಗಳು, ಕಾರ್ಯಕ್ರಮಗಳು ಜಾರಿಯಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧವೂ ಹೋರಾಟ ಕೈಗೊಳ್ಳಲಾಗುವುದು” ಎಂದು ರಾಜ್ಯ ಸಂಚಾಲಕ ನೂರ್ ಶ್ರೀಧರ್ ಎಚ್ಚರಿಸಿದರು.

ಸಂಯುಕ್ತ ಹೋರಾಟ -ಕರ್ನಾಟಕ ಮತ್ತು ರೈತ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ರಾಷ್ಟ್ರವ್ಯಾಪಿ ಕರೆ ನೀಡಿರುವ ಹೋರಾಟದ ಭಾಗವಾಗಿ ದಾವಣಗೆರೆಯ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು “ಕೇಂದ್ರ ಸರ್ಕಾರ ಐತಿಹಾಸಿಕ ರೈತರ ಪ್ರತಿಭಟನೆಯ ನಂತರ ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಭರವಸೆ ಜೊತೆಗೆ ಬೆಂಬಲ ಬೆಲೆ ಸೇರಿದಂತೆ ಇತರ ಆಶ್ವಾಸನೆಗಳನ್ನು ನೀಡಿತ್ತು. ಈ ಆಶ್ವಾಸನೆಗಳನ್ನು ನೀಡಿದ್ದು ಬಿಟ್ಟರೆ ಇದುವರೆಗೂ ಕೂಡ ಅವುಗಳನ್ನು ಈಡೇರಿಸಿಲ್ಲ. ಅವರ ನೀತಿಗಳು ಕಾರ್ಪೊರೇಟ್ ಮಾರುಕಟ್ಟೆ ಪೂರೈಕೆಗಳಿಗೆ ಸಹಾಯಕವಾಗಿದ್ದು, ಐ ಸಿ ಎ ಆರ್ ಕೂಡ ಬಹುರಾಷ್ಟ್ರೀಯ ಕಂಪೆನಿ ಗಳೊಂದಿಗೆ ಅನೇಕ ಒಪ್ಪಂದಗಳಿಗೆ ಸಹಿಯಾಕಿದ್ದು ಇವುಗಳು ರೈತರ ಶೋಷಿಸಲು ಕಾರಣವಾಗುತ್ತದೆ. ಕಾರ್ಮಿಕರ ನೀತಿಗಳನ್ನು ಕೂಡ ಬದಲಾಯಿಸಲು ಹೊರಟಿದ್ದು, ಅವು ಕೂಡ ಕಾರ್ಮಿಕರ ಶೋಷಣೆಗೆ ಕಾರಣವಾಗಿದೆ. ಹೀಗಾಗಿ ಈ ಕೂಡಲೇ ನಿಮ್ಮ ಮನೆಹಾಳು ನೀತಿಗಳನ್ನು ಬಿಟ್ಟು ಕಾರ್ಮಿಕರ, ರೈತ ಪರ ಮತ್ತು ಜನಪರ ನೀತಿಗಳನ್ನು ಜಾರಿಗೊಳಿಸಬೇಕು” ಎಂದು ಎಚ್ಚರಿಸಿದರು.

“2023ರಲ್ಲಿ ಕರ್ನಾಟಕ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳು ಸೇರಿದಂತೆ ಜನ ಚಳುವಳಿಗಳು ಮುಂದಿಡುತ್ತಿದ್ದ ಬಹಳಷ್ಟು ಬೇಡಿಕೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ ಭರವಸೆ ನೀಡಿದ್ದರು. ಕೇವಲ ಗ್ಯಾರಂಟಿಗಳನ್ನು ಬಿಟ್ಟರೆ ಬೇರೆಯವನ್ನು ಇದುವರೆಗೂ ಈಡೇರಿಸಿಲ್ಲ. ಬಿಜೆಪಿಯ ಜನವಿರೋಧಿ ನೀತಿಗಳನ್ನು ತೆಗೆದು ಜನಪರ ನೀತಿಗಳನ್ನು ಜಾರಿಗೆ ತರಲು ನಿಮಗೆ ಬೆಂಬಲಿಸಿದ್ದೆವು. ಆದರೆ ಒಂದುವರೆ ವರ್ಷದ ನಂತರವೂ ಬಿಜೆಪಿಯ ಜನ ವಿರೋಧಿ ನೀತಿಗಳನ್ನು ಹಿಂಪಡೆದಿಲ್ಲ. ಮತ್ತು ಅವುಗಳನ್ನು ಮುಂದುವರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದಿನ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬಹುದಾಗಿತ್ತು. ವಾಪಸ್ ಪಡೆಯುವ ಕೆಲಸ ಮಾಡಿಲ್ಲ. ಕಾರ್ಮಿಕರ ಕೆಲಸದ ಸಮಯವನ್ನು ಎಂಟು ಗಂಟೆಯಿಂದ 12 ಗಂಟೆಗೆ ಏರಿಸಿದ್ದ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂದಕ್ಕೆ ಪಡೆದಿಲ್ಲ. ಹಾಗಾಗಿ ಈ ಕೂಡಲೇ ಮೂರು ದಿನಗಳ ಜನತಾ ಅಧಿವೇಶನ ಕರೆಯಬೇಕೆಂಬ ಒತ್ತಾಯವನ್ನು ಮಾಡುತ್ತಿದ್ದೇವೆ. ಆ ಮೂಲಕ ರೈತ ಮುಖಂಡರು ಕಾರ್ಮಿಕ ಮಖಂಡರು ಮತ್ತು ಜನ ಚಳುವಳಿಗಳ ಮುಖಂಡರು ಸೇರಿದಂತೆ ಅಲ್ಲಿ ರೈತ, ಕಾರ್ಮಿಕರ, ಜನಸಾಮಾನ್ಯರ ಸಮಸ್ಯೆಗಳ ಚರ್ಚೆಯಾಗಿ ಒಪ್ಪಿತ ನೀತಿಗಳನ್ನು ಕೂಡಲೇ ಜಾರಿ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ ಕೂಡ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಚಾಲಕ ಮಧು ತೊಗಲೇರಿ “ಸರ್ಕಾರಗಳು ರೈತರು ಮತ್ತು ಕಾರ್ಮಿಕರ ಜನಸಾಮಾನ್ಯರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿವೆ. ರೈತರ ಕಾರ್ಮಿಕರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಆಡಳಿತ ನಡೆಸುತ್ತಿವೆ. ಈ ಕೂಡಲೇ ಇದನ್ನು ಕೈ ಬಿಟ್ಟು ಕಾರ್ಮಿಕರ ರೈತರ ಪರವಾದ ಕಾನೂನುಗಳನ್ನು ತಂದು ಅವರ ಬೆನ್ನಿಗೆ ನಿಲ್ಲಬೇಕು. ಇಲ್ಲವಾದಲ್ಲಿ ಸರ್ಕಾರಗಳ ವಿರುದ್ಧ ಜನಾಕ್ರೋಶ ಮುಂದುವರೆಯಲಿದೆ” ಎಂದು ತಿಳಿಸಿದರು.

ಎಐಟಿಯುಸಿ ಕಾರ್ಮಿಕ ಮುಖಂಡ ಉಮೇಶ್ ಅವರ್ಗೆರೆ ಮಾತನಾಡಿ “ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಶ್ರೀಮಂತರನ್ನು ಅತಿ ಶ್ರೀಮಂತ ಗೊಳಿಸುವ ಕಾರ್ಯದಲ್ಲಿ, ರೈತರು ಕಾರ್ಮಿಕರನ್ನು ಬಡವರನ್ನಾಗಿಸಿ ನೀತಿಗಳನ್ನು ಜಾರಿಗೆ ತರುತ್ತಿವೆ. ರೈತರ ಪರ ಎಂದು ಹೇಳಿಕೊಂಡು ಬಂದ ಸರ್ಕಾರಗಳು ಕೂಡ ವಂಚಿಸುತ್ತಿವೆ. ಈ ಕೂಡಲೇ ಎಚ್ಚೆತ್ತು ರೈತ ಮತ್ತು ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿಗಳನ್ನು ರೂಪಿಸಬೇಕು” ಎಂದು ಒತ್ತಾಯಿಸಿದರು.

ಡಾ. ಬಿಆರ್ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಯುಕ್ತ ಹೋರಾಟ-ಕರ್ನಾಟಕದ ರೈತ ಮತ್ತು ಕಾರ್ಮಿಕ ಕಾರ್ಯಕರ್ತರು ಮತ್ತು ಮುಖಂಡರು ಜಯದೇವ ಸರ್ಕಲ್ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಹೊನ್ನೂರು ಮುನಿಯಪ್ಪ, ಅರುಣ್ ಕುಮಾರ್ ಕುರುಡಿ, ಗುಮ್ಮನೂರು ಮಂಜುನಾಥ್, ಬುಳ್ಳಾಪುರ ಹನುಮಂತಪ್ಪ, ಬುಳ್ಳಾಪುರ ಪರಮೇಶ್ವರಪ್ಪ, ಮರುಳಸಿದ್ದಯ್ಯ, ಕಾರ್ಮಿಕ ಮುಖಂಡರಾದ ಉಮೇಶ್ ಆವರಗೆರೆ, ಆವರಗೆರೆ ಚಂದ್ರು, ಶಿವಕುಮಾರ್, ರಮೇಶ್, ಲಕ್ಷ್ಮಣ್, ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ, ಸತೀಶ್ ಕೈದಾಳೆ, ನಾಗಸ್ಮಿತ, ಜನಶಕ್ತಿಯ ಸತೀಶ್ ಅರವಿಂದ್, ಪವಿತ್ರ ಅರವಿಂದ್, ರಾಮಾಂಜನೇಯ, ಆದಿಲ್ ಖಾನ್, ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments