ದಾವಣಗೆರೆ: ತಮ್ಮ ವಿಶಿಷ್ಟ ಸಾಹಿತ್ಯಕ ಸಾಮಾಜಿಕ ಚಟುವಟಿಕೆಗಳ ಮೂಲಕ ಅಪೂರ್ವ ಆಧ್ಯಾತ್ಮಿಕ ಚಿಂತನೆಯನ್ನು ಮನಗಾಣಿಸಿದ ದಿ.ಬೆಳಗೆರೆ ಕೃಷ್ಣಶಾಸ್ತಿಗಳ 110ನೇ ಜನ್ಮ ದಿನದ ಅಂಗವಾಗಿ ದಿ.ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಸ್ಮರಣೆ ಕಾರ್ಯಕ್ರಮವನ್ನು ಇದೇ 22ಕ್ಕೆ ದಾವಣಗೆರೆಯಲ್ಲಿ ದಾವಣಗೆರೆ ಅಭಿಮಾನಿಗಳ ಬಳಗದಿಂದ ಆಯೋಜಿಸಲಾಗಿದೆ.
ಅಂದು ಸಂಜೆ 6ಗಂಟೆಗೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಿಂಭಾಗದ ನಳಂದ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗೆರೆ ಮತ್ತು ಬೆಂಗಳೂರಿನ ಕೆಲವು ಅಭಿಮಾನಿಗಳು ಭಾಗವಹಿಸುತ್ತಿದ್ದು, ಅವರ ಅಭಿಮಾನಿಗಳು ಸಲ್ಲಿಸುತ್ತಿರುವ ಗೌರವದ ಸಂಕೇತ. ಈ ಪ್ರಕ್ರಿಯೆಗೆ ವಾರ್ಷಿಕ ನಿಯಮಿತತೆ ತರುವ ಉದ್ದೇಶಕ್ಕೆ ಇದು ನಾಂದಿಯಾಗುತ್ತಿದೆ ಎಂದು ದಾವಣಗೆರೆ ಅಭಿಮಾನಿಗಳ ಬಳಗ ತಿಳಿಸಿದೆ.
ಕೃಷ್ಣ ಶಾಸ್ತ್ರಿಗಳ ಬೆಳೆಗೆರೆಯಲ್ಲಿನ ಮಾದರಿ ಶಿಕ್ಷಣ ಸಂಸ್ಥೆ ಹಾಗೂ ‘ಯೇಗ್ದಾಗೆಲ್ಲಾ ಐತೆ’, ‘ಸಾಹಿತಿಗಳ ಸ್ಮೃತಿ’, ‘ಮರೆಯಲಾದೀತೇ’, ಸಾಹಿತ್ಯ ಕೃತಿಗಳಿಂದ ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ‘ಅವರು ಒಂದು ಸಮಾಜ ಸೇವೆಯ ರೂಪಕ’ ಎಂಬುದು ಭಾರತದ ವಿಶ್ರಾಂತ ಮುಖ್ಯ ನ್ಯಾಯಧೀಶ ನ್ಯಾಯಮೂರ್ತಿ ಎಂ.ಎಸ್ ವೆಂಕಟಾಚಲಯ್ಯ ಅವರು ಹೇಳಿದ ಮಾತು.
ಬೆಳೆಗೆರೆಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡಿದ್ದ ಶಾಸ್ತ್ರಿಜೀ ಅವರಿಗೆ ಅವರ ಜೀವನದ ಕೊನೆಯ ಎರಡು ದಶಕಗಳಲ್ಲಿ ದಾವಣಗೆರೆ ಆತ್ಮೀಯ ತಾಣವಾಗಿತ್ತು. ದಾನಿಗಳಾದ ರಮೇಶ್ ಬಾಬು ನೇತೃತ್ವದಲ್ಲಿ ದಾವಣಗೆರೆ ಅಭಿಮಾನಿ ಬಳಗ ಸ್ಥಾಪಿಸಿ, ಅವರ ಸಾಮಾಜಿಕ ಸಾಹಿತ್ಯಕ ಚಟುವಟಿಕೆಗಳಿಗೆ ಹೊಸ ಭರವಸೆ ನೀಡಿದ್ದರಿಂದ ಅವರು ದಾವಣಗೆರೆಯನ್ನು ಸಾಂಸ್ಕೃತಿಕವಾಗಿ ಪೋಷಿಸಿದರು. ಅವರ ಜನ್ಮಶತಾಬ್ಬಿ, ಅವರ ಜೀವನ ಚರಿತ್ರೆ ‘ನಾನಿದ್ದು ನನ್ನದೇನಿಲ್ಲ’ ಕೃತಿಯ ಬಿಡುಗಡೆಗೆ ದಾವಣಗೆರೆ ಒಂದು ತಾಣವಾಗಿದ್ದು ಇದರ ಸಂಕೇತ.
ಅನೇಕ ವರ್ಷ ದಾವಣಗೆರೆಯಲ್ಲಿ ಅವರ ಜಯಂತಿಯನ್ನು ಅಭಿಮಾನಿಗಳು ಆಚರಿಸಿ ಅವರಿಗೆ ಗೌರವ ತೋರಿಸುತ್ತಿದ್ದದ್ದೂ ಇದರ ಮುಂದುವರಿಕೆಯ ಭಾಗವೇ ಸರಿ. ಕಳೆದೆರಡು ವರ್ಷಗಳಲ್ಲಿ ‘ಭಾರತೀಯ ವಿದ್ಯಾಭವನ’ ಹಾಗೂ ‘ಹಾಯ್ ಬೆಂಗಳೂರು’ ಸಂಸ್ಥೆಗಳು ಈ ಕಾರ್ಯಕ್ರಮ ನಡೆಸುವಂತಾಗಿದ್ದು ದಾವಣಗೆರೆಯ ಅಭಿಮಾನಿಗಳು ಅಲ್ಲಿಯೇ ಸಂಭ್ರಮಪಟ್ಟರು.
ಆದರೆ, ಈ ವರ್ಷ ಪುನಃ ದಾವಣಗೆರೆಯಲ್ಲಿ ಇದೇ 22ರಂದು ದಾವಣಗೆರೆಯಲ್ಲಿ ಅವರ ಜಯಂತಿ ಆಯೋಜನೆ ಗೊಂಡಿರುವುದು ಅವರಿಗೆ ದಾವಣಗೆರೆಯ ಬಗ್ಗೆ ಇರುವ ಅಭಿಮಾನದ ದ್ಯೋತಕವಾಗಿದೆ.