ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪ್ರಕಾಶ ಪಿ.ಬಿ. ಅವರ ಸಹಕಾರದಲ್ಲಿ, ಅಕ್ಟೋಬರ್ 26, 2025 ರ ಭಾನುವಾರ ಡಿಎಆರ್ ಆವರಣದಲ್ಲಿ ಡಿಎಆರ್ ಪೊಲೀಸ್ ಸಿಬ್ಬಂದಿಗೆ “ಸಂವಾದ ವಿಧಾನದ ಮೂಲಕ ಸಂಘರ್ಷ ಪರಿವರ್ತನೆಯ ಕಲಿಕಾ ವೃತ್ತ” ಕಾರ್ಯಾಕ್ರಮವನ್ನು ಕ್ಷೇತ್ರ ಫೌಂಡೇಶನ್ ಫಾರ್ ಡೈಲಾಗ್ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಯಿತು.
ಈ ಕಲಿಕಾ ವೃತ್ತ ಅಧಿವೇಶನದಲ್ಲಿ ಉಪಸ್ಥಿತರಿದ್ದ ಸಹಾಯಕ ಮೀಸಲು ಉಪ ನಿರೀಕ್ಷಕರಾದ ಶ್ರೀ ಅಕ್ರಮ್ ಬಾಷರವರು “ಪೊಲೀಸ್ ಸಿಬ್ಬಂದಿಗಳಾದ ನಮಗೆ ಕೆಲಸಕ್ಕೆ ಸಂಬಂಧಿಸಿದ ಒತ್ತಡವನ್ನು ನಿರ್ವಹಿಸಲು, ಕುಟುಂಬ ಸಂಬಂಧಗಳನ್ನು ಬಲಪಡಿಸಲು ಹಾಗು ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಂವಾದ ವಿಧಾನವು ಹೆಚ್ಚು ಪರಿಣಾಮಕಾರಿ ಎಂಬುದನ್ನು ಕಂಡುಕೊಂಡಿದ್ದೇವೆ, ಇತ್ತೀಚೆಗೆ ಸಿಬ್ಬಂದಿಗಳಲ್ಲಿ ದುಂದುವೆಚ್ಚ ಮಾಡುತ್ತಿರುವ ಘಟನೆಗಳನ್ನು ನೋಡಿ, ದುಂದುವೆಚ್ಚಕ್ಕಿಂತ ಉಳಿತಾಯ ಮತ್ತು ಕುಟುಂಬದ ಭವಿಷ್ಯ ಭದ್ರತೆ ಬಗ್ಗೆಯೂ ಗಮನ ನೀಡುವುದು ಮುಖ್ಯ ಎಂದು ತಿಳಿದಿದ್ದೇವೆ. ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಂತರ ಕಾರ್ಯಾಗಾರ ತುಂಬಾ ಉಪಯುಕ್ತವಾಗಿದೆ.” ಎಂದರು.
ಈ ಸಂದರ್ಭದಲ್ಲಿ ಸಶಸ್ತ್ರ ಪೊಲೀಸ್ ಸಿಬ್ಬಂದಿಯಾದ ಶ್ರೀ ಚಂದ್ರಶೇಖರ್ ಅವರು “ನಾನು ಮೊದಲು ಶೂಟಿಂಗ್ ಸ್ಪರ್ಧೆ ಮತ್ತು ಗನ್ ಮ್ಯಾನ್ ಕರ್ತವ್ಯದಲ್ಲಿದ್ದಾಗ ಸಮಯ ಪರಿಪಾಲನೆ ಪ್ರಬಲವಾಗಿ ರೂಢಿಯಾಗಿತ್ತು, ಈಗ ಕರ್ತವ್ಯ ಮಾಡುವಾಗ ಸಹೋದ್ಯೋಗಿಗಳು ತಮ್ಮ ಕರ್ತವ್ಯಕ್ಕೆ ಐದು ನಿಮಿಷ ತಡವಾಗಿ ಬಂದರೂ ಬಹಳ ಬೇಗ ಸಿಟ್ಟು ಬರುತ್ತಿತ್ತು, ಈ ಕಾರ್ಯಾಗಾರದ ನಂತರ ಸಹೋದ್ಯೋಗಿಗಳೊಂದಿಗೆ ಸಂವಾದ ನಡೆಸುತ್ತಾ ಅವರ ಮೂಲ ಕಾರಣಗಳನ್ನು ತಿಳಿಯುತ್ತಿರುವುದರಿಂದ ಈಗ ಕೋಪ ಕಡಿಮೆಗೊಳಿಸಿ, ಕರ್ತವ್ಯ ಮತ್ತು ಕುಟುಂಬದಲ್ಲಿ ಬಾಂಧವ್ಯ ವೃದ್ಧಿಸಲು ಸಾಧ್ಯವಾಗಿದೆ” ಎಂದು ಒತ್ತಿ ಹೇಳಿದರು.
ಕಾರ್ಯಾಗಾರದ ಶಿಬಿರಾರ್ಥಿಗಳು ತಮ್ಮ ಸಕಾರಾತ್ಮಕ ಕಲಿಕೆ, ಪರಾನುಭೂತಿ, ಪರಿಸ್ಥಿತಿ ಅರ್ಥಮಾಡಿಕೊಳ್ಳುವುದು ಮತ್ತು ಸಂವಾದ ವಿಧಾನದ ಮೂಲಕ ಪರಿಹಸಿದ ಪರಿಸ್ಥಿತಿಗಳ ಅನುಭವಗಳನ್ನು ಹಂಚಿಕೊಂಡರು.
ಒಬ್ಬ ಶಿಬಿರಾರ್ಥಿ “ಮನಸ್ಸು ಚೆನ್ನಾಗಿದ್ದರೆ, ಎಲ್ಲಾ ಚೆನ್ನಾಗಿರುತ್ತದೆ. ಸಹೋದ್ಯೋಗಿಗಳು ಅಥವಾ ಕುಟುಂಬದಲ್ಲಿ ಯಾವುದಾದರೂ ಸಮಸ್ಯೆ ಬಂದರೆ ನಾವು ಆ ಸಮಸ್ಯೆಯಿಂದ ಹೊರಗುಳಿದು ಮಾತನಾಡುವುದಕ್ಕೂ, ಅವರದೇ ಸ್ಥಾನದಲ್ಲಿ ನಿಂತು ಸಮಸ್ಯೆಯನ್ನು ಅರ್ಥೈಸಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸವಿದೆ. ಆ ಸಮಸ್ಯೆ ನನಗೆ ಬಂದಿದೆ ಎಂದು ಭಾವಿಸಬೇಕು. ವ್ಯಕ್ತಿಯೊಬ್ಬ ಅನಾರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ, ವ್ಯಕ್ತಿಯ ಬದಲಾಗಿ, ಅವರ ಮನಸ್ಥಿತಿಯನ್ನು ದೂರಬೇಕು”
ಮತ್ತೊಬ್ಬ ಶಿಬಿರಾರ್ಥಿ “ನಾವು ಬಂದೋಬಸ್ತ್ ಕೆಲಸಕ್ಕೆ ನಿಯುಕ್ತಿಗೊಂಡಾಗ ಎದುರಾಗುವ ಹಲವು ಸಮಸ್ಯೆ, ಪರಿಸ್ಥಿತಿಗಳನ್ನು, ನಮ್ಮ ಮೇಲಾಧಿಕಾರಿಗಳೊಂದಿಗೆ ಸಂವಾದ ನಡೆಸಿ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಿದೆ.” ಎಂದು ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಅಕ್ರಮ್ ಬಾಷರವರು ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ಕಲಿಕಾ ವೃತ್ತ ಕಾರ್ಯಾಗಾರವನ್ನು ಕ್ಷೇತ್ರ ಸಂಸ್ಥೆಯ ಸಮುದಾಯ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಸಿದ್ಧಾರೂಢ ಪಿ.ಎಂ, ತರಬೇತುದಾರರಾದ ಶ್ರೀ ಅರುಣ ಬಿ.ಟಿ, ಗೊಪ್ಪೇನಹಳ್ಳಿ ಮತ್ತು ದಾವಣಗೆರೆ ಜಿಲ್ಲಾ ಪೊಲೀಸ್‌ನ ಯೋಗಕ್ಷೇಮ ಅಧಿಕಾರಿ ಶ್ರೀ ರಂಜಿತ್ ಗೌಡ ಇವರು ಸುಗಮಗಾರಿಕೆ ಮಾಡಿದರು.

