ದಾವಣಗೆರೆ:ನಗರದ ಬಸವನಗರ ಪೊಲೀಸ್ ಠಾಣೆಯಲ್ಲಿ ನಡೆದ “ಸಂವಾದ ವಿಧಾನದ ಮೂಲಕ ಸಂಘರ್ಷ ಪರಿವರ್ತನೆಯ ಕಲಿಕಾ ವೃತ್ತ ಕಾರ್ಯಾಗಾರವನ್ನು ಫೌಂಡೇಶನ್ ಫಾರ್ ಡೈಲಾಗ್ ಸಂಸ್ಥೆವತಿಯಿಂದ ನಡೆಸಲಾಯಿತು.
ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀಯುತ ನಂಜುಂಡಸ್ವಾಮಿ ಪೊಲೀಸ್ ವೃತ್ತ ನಿರೀಕ್ಷಕರ ಸಹಕಾರದಲ್ಲಿ ಡಿಸೆಂಬರ್ 21, 2025 ರ ಭಾನುವಾರ ಬಸವನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳಿಗೆ “ಸಂವಾದ ವಿಧಾನದ ಕಲಿಕಾ ವೃತ್ತ ಕಾರ್ಯಾಗಾರ”ವನ್ನು ಕ್ಷೇತ್ರ ಫೌಂಡೇಶನ್ ಫಾರ್ ಡೈಲಾಗ್ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರದಲ್ಲಿ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಪೊಲೀಸ್ ಸಿಬ್ಬಂದಿಗಳು ತಮ್ಮ ದೈನಂದಿನ ಕೆಲಸದಲ್ಲಿ ಎದುರಿಸುವ ಹಲವಾರು ಸಂಘರ್ಷಗಳನ್ನು ಸಂವಾದ ವಿಧಾನ ಅಳವಡಿಸಿಕೊಂಡು, ವೃತ್ತಿ ಹಾಗು ವೈಯಕ್ತಿಕ ಜೀವನವನ್ನು ಹೇಗೆ ಉತ್ತಮಪಡಿಸಿಕೊಳ್ಳಬಹುದು ಎಂದು ತಿಳಿಸಲಾಯಿತು.
ಈ ಸಂವಾದ ವಿಧಾನ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಮತಿ ಪ್ರಮಿಳಮ್ಮ ಹೆಚ್ ಅವರು “ಮೊದಲೆಲ್ಲಾ ಮನೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ, ಅವರ ಮೇಲೆ ಯಾಕೆ ಹೀಗೆ ಮಾಡಿದೆ ಎಂಬ ಒತ್ತಡವನ್ನು ಏರುತ್ತಿದ್ದೆವು. ಈಚೆಗೆ ಅಂತಹ ಸಂದರ್ಭಗಳು ಎದುರಾದಾಗ, ನಮ್ಮಿಂದ ಏನಾಗಿದೆ? ಪ್ರೀತಿಯ ಕೊರತೆಯೇ, ಒತ್ತಡವನ್ನು ಹೇರುತ್ತಿದ್ದೇವೆಯೇ, ಏನು ಮಾಡಬಹುದು, ನಾವೇನು ತಪ್ಪು ಮಾಡುತ್ತಿದ್ದೇವೆ ?- ಮಕ್ಕಳಿಗೆ ಸಮಯ ನೀಡಲು ಸಾಧ್ಯವಾಗಿದೆ? ಅವರ ಸ್ನೇಹಿತರು ಹೇಗಿದ್ದಾರೆ? ಅವರ ಮೇಲೆ ಗಮನ ಹರಿಸಲು ಸಾಧ್ಯವಾಗಿದೆ? ಎಂಬುದನ್ನು ಗಮನಿಸುತ್ತೇವೆ. ಪೊಲೀಸ್ ಇಲಾಖೆಯಿಂದ ವೃತ್ತಿ ನಿಷ್ಠೆ ಕಡೆಗಿನ ಜವಾಬ್ದಾರಿಯ ಒತ್ತಡದಲ್ಲಿಯೂ ಕುಟುಂಬವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಠಾಣೆಯಲ್ಲೂ ಎಲ್ಲರೊಂದಿಗೆ ಸಂವಹನ ಕೌಶಲ್ಯ ಹೆಚ್ಚಾಗಿದೆ, ಯಾವುದೇ ಒಂದು ಕೆಲಸಕ್ಕೆ ಸಂಬಂಧಪಟ್ಟ ಮಾಹಿತಿ ಎಲ್ಲರಲ್ಲೂ ದೊರೆಯುವಂತೆ ಸಂವಾದ ನಡೆಸಲು ಈ ತರಬೇತಿ ಪೂರಕವಾಗಿದೆ.” ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯಾದ ಶ್ರೀಯುತ ಇಮ್ತಿಯಾಜ್, ರೈಟರ್ ಅವರು “ಒಂದು ಪ್ರಕರಣವನ್ನು ಏಕಪಕ್ಷೀಯವಾಗಿ ಈ ಮೊದಲು ನೋಡುತ್ತಿದ್ದೆವು, ತರಬೇತಿ ನಂತರದಲ್ಲಿ ಅದರ ಎಲ್ಲಾ ಸಾಧ್ಯತೆಗಳನ್ನು ನೋಡುವುದು ಮುಖ್ಯ ಎಂದು ತಿಳಿಯಿತು. ಎಲ್ಲರ ಗೆಲುವನ್ನು ಗಮನದಲ್ಲಿಟ್ಟುಕೊಂಡು ಹೇಗೆ ಮುನ್ನಡೆಯಬಹುದು ಎಂಬುದಕ್ಕೆ ನಡೆಸಿದ ಚಟುವಟಿಕೆಯು ನಮ್ಮ ಮೇಲೆ ತುಂಬಾ ಪರಿಣಾಮವನ್ನು ಬೀರಿತು.” ಎಂದು ಒತ್ತಿ ಹೇಳಿದರು.
ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಆದ ಶ್ರೀಯುತ ಗಿರೀಶ್ ಅವರು “ಆಲಿಸುವಿಕೆಯ ಮಹತ್ವ ಮತ್ತು ಅದರ ಉಪಯೋಗಗಳ ಬಗ್ಗೆ, ವೈಯಕ್ತಿಕ ಜೀವನದಲ್ಲಿ ಅದರ ಮಹತ್ವದ ಬಗ್ಗೆ, ಸಂವಾದ ವಿಧಾನದಲ್ಲಿ ನಾವು ಕಲಿತುಕೊಳ್ಳಲು ಸಹಕಾರಿಯಾಯಿತು. ಮೊದಲೆಲ್ಲ ಒಂದು ಫಿರ್ಯಾದು ಠಾಣೆಗೆ ಬಂದರೆ ನೇರವಾಗಿ ಪರಿಹಾರದ ಬಗ್ಗೆ ಯೋಚಿಸುತ್ತಿದ್ದೆವು, ಈಚೆಗೆ ಅವರ ಹಿಂದಿನ ನಡೆ ಮತ್ತು ಘಟನೆಯ ಬಗ್ಗೆ ಕೇಳಿಸಿಕೊಂಡು, ಉತ್ತಮ ಪರಿಹಾರ ಕಂಡುಕೊಳ್ಳಲು ಯೋಚಿಸುತ್ತಿದ್ದೇವೆ.” ಎಂದರು.
ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಆದ ಶ್ರೀಯುತ ಸುರೇಶ್ ಅವರು “ಸಂವಾದ ವಿಧಾನವು ನಮ್ಮ ಮನೆಯ ಅಥವಾ ವೈಯಕ್ತಿಕ ವಿಚಾರಗಳಿಗೆ ಹಾಗೂ ವೃತ್ತಿಪರ ಕೆಲಸಗಳಿಗೂ ಸಹಕಾರಿಯಾಗಿದೆ. ವೃತ್ತಿಪರ ಜೀವನದಲ್ಲಿ ಎದುರಿಸಬೇಕಾದ ಚಿಕ್ಕಪುಟ್ಟ ಸಂಘರ್ಷಗಳಿಗೂ ಇದು ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿಯಾಗಿದೆ. ಮನೆಯಲ್ಲಿ ಯಾವುದೇ ಒಂದು ಸಂಘರ್ಷವನ್ನು ಪರಿಹರಿಸುವಾಗ ಮನೆಯ ಎಲ್ಲಾ ಸದಸ್ಯರ ದೃಷ್ಟಿಕೋನ, ಭಾವನೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ರೂಪಿಸಲು ಸೂಕ್ತವಾಗಿದೆ.” ಎಂದರು.
ಈ ಕಾರ್ಯಾಗಾರವನ್ನು ಕ್ಷೇತ್ರ ಸಂಸ್ಥೆಯ ಸಮುದಾಯ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಸಿದ್ಧಾರೂಢ ಪಿ.ಎಂ, ತರಬೇತುದಾರರಾದ ಶ್ರೀ ಅರುಣ ಬಿ.ಟಿ, ಗೊಪ್ಪೇನಹಳ್ಳಿ ಹಾಗೂ ಶ್ರೀ ರಂಜಿತ್ ಗೌಡ ಅವರು ಸುಗಮಗಾರಿಕೆ ಮಾಡಿದರು.

