ಜಗಳೂರು: ಬಿಸಿಊಟ ತಯಾರಕ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ಎನ್‌ಜಿಓ ಖಾಸಗಿ ಸಂಘ ಸಂಸ್ಥೆಗಳಿಗೆ ಕೊಡುವ ಹುನ್ನಾರ ವಿರೋಧಿಸಿ ರಾಜ್ಯಕರೆಗೆ ಬೆಂಬಲಿಸಿ ತಾಲ್ಲೂಕಿನಾದ್ಯಂತ ಶಾಲೆಗಳಲ್ಲಿ ಅಡುಗೆ ಬಂದ್ ಮಾಡಿ ಎಐಟಿಯುಸಿ ಸಂಯೋಜಿತ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ನಂತರ ಪಟ್ಟಣದ ತಾಲ್ಲೂಕುಕಛೇರಿ ಮುಂಬಾಗ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಎಐಟಿಯುಸಿ ತಾಲ್ಲೂಕು ಪ್ರಧಾನಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ, ಕಳೆದ 25 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಯಡಿಯಲ್ಲಿ ತಾಲ್ಲೂಕಿನಾದ್ಯಂತ 522 ಜನ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿರುವ ಬಿಸಿಊಟ ತಯಾರಕರನ್ನು ಸರ್ಕಾರ ಕೆಲಸದಿಂದ ಬಿಡಿಸಿ ಎನ್‌ಜಿಓ ಖಾಸಗಿ ಸಂಘ ಸಂಸ್ಥೆಗಳಿಗೆ ವಹಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಶಾಲೆಗಳಲ್ಲಿ ಅಡುಗೆ ಕೆಲಸದ ಬಗ್ಗೆ ಮಧ್ಯಾಹ್ನ ಉಪಹಾರ ಯೋಜನೆ ಕೈಪಿಡಿಯಲ್ಲಿ ಆ ಶಾಲೆಯ ಮುಖ್ಯ ಅಡುಗೆಯವರು ಅಡುಗೆ ಕೆಲಸದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಮಧ್ಯಾಹ್ನ ಉಪಹಾರ ಯೋಜನೆಯ ಕೈಪಿಡಿಯಲ್ಲಿದ್ದರೂ ಶಿಕ್ಷಕರ ಸಂಘ ಒಂದು ರಾಜ್ಯ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಶಿಕ್ಷಕರ ಕೆಲಸ ಕಡಿಮೆಗೊಳಿಸಲು ಬಿಸಿಊಟ ತಯಾರಿಕೆಯನ್ನು ಎನ್ ಜಿ ಒ, ಖಾಸಗಿ ಸಂಘ ಸಂಸ್ಥೆಗಳಿಗೆ ಕ್ಲಸ್ಟರ್ ಮಟ್ಟದ ಅಡುಗೆ ಕೇಂದ್ರ ನಿರ್ಮಿಸಿ ಅಲ್ಲಿ ಅಡಿಗೆ ತಯಾರಿಸಿ ವಿತರಿಸಿ ಎನ್ನುವುದು ಎಷ್ಟರಮಟ್ಟಿಗೆ ಸರಿ?
ಬಿಸಿಊಟ ತಯಾರಿಕೆಯಲ್ಲಿ ರಾಜ್ಯದ ಯಾವ ಶಿಕ್ಷಕರು ಭಾಗವಹಿಸುವುದು ಬೇಡ ಅದು ಕೈಪಿಡಿಯಲ್ಲಿ ಎಲ್ಲಿಯೂ ಇಲ್ಲ.
ಮಧ್ಯಾಹ್ನ ಉಪಹಾರ ಯೋಜನೆ, ರಾಜ್ಯ ನಿರ್ದೇಶಕರು ಶಿಕ್ಷಕರ ಸಂಘ ಕೊಟ್ಟಿರುವ ಮನವಿ ಪತ್ರವನ್ನೇ ನೆಪವಾಗಿಟ್ಟುಕೊಂಡು ಏಕ ಪಕ್ಷಿಯವಾಗಿ ತೀರ್ಮಾನಿಸಿ, ಕ್ಲಸ್ಟರ್ ಮಟ್ಟದ ಅಡುಗೆ ಕೇಂದ್ರದ ಮೂಲಕ ಅಡುಗೆ ತಯಾರಿಸಿ ವಿತರಿಸಲು ಮುಂದಾಗಿರುವುದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ. ರಾಜ್ಯಾದ್ಯಂತ ಹಾಲಿ ಕೆಲಸ ನಿರ್ವಹಿಸುತ್ತಿರುವ ಒಂದು ಲಕ್ಷದ ಹದಿಮೂರು ಸಾವಿರ ಬಿಸಿಊಟ ತಯಾರಕ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ಬೀದಿಪಾಲು ಮಾಡಲು ಹೊರಟಿರುವುದು ಖಂಡನೀಯ ಕೂಡಲೇ ನಿರ್ಧಾರ ಕೈಬಿಡಬೇಕು ಎಂದರು.
ಈ ಸಂದರ್ಭದಲ್ಲಿ ಎಐಟಿಯುಸಿತಾಲ್ಲೂಕು ಅಧ್ಯಕ್ಷ ಗೊಲ್ಲರಹಟ್ಟಿ ತಿಪ್ಪೇಸ್ವಾಮಿ,ಅಕ್ಷರದಾಸೋಹ ಬಿಸಿಯೂಟ ಸಂಘಟನೆ ಮುಖಂಡರಾದ ಮಡ್ರಹಳ್ಳಿ ರೇಣುಕಮ್ಮ,ಕಾನನಕಟ್ಟೆ ಚೌಡಮ್ಮ,ಲಕ್ಷ್ಮಿ,ಪಲ್ಲಾಗಟ್ಟೆ ಪಾರ್ವತಿ,ಅಂಜುಮ್ ಬಾನು,ಅಂಬಿಕಾ,ಕರಿಬಸಮ್ಮ,ಗೌರಮ್ಮ,ಸಾಕಮ್ಮ,ತಿಪ್ಪೀರಮ್ಮ,ಸೇರಿದಂತೆ ಇತರರು ಇದ್ದರು.

