Saturday, December 21, 2024
Homeರಾಜಕೀಯಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಂದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಬಹಿರಂಗ ಪತ್ರ

ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಂದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಬಹಿರಂಗ ಪತ್ರ

ಕೋಮುವಾದಿಗಳ ಕೈಯಿಂದ ರಾಜ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಕಳೆದ ಚುನಾವಣೆಯಲ್ಲಿ ಹಗಲುರಾತ್ರಿ ಶ್ರಮಿಸಿದ್ದೇವೆ. ಜಾತಿಬೇಧವನ್ನು ಮರೆತು ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ನಿಂತಿದ್ದೇವೆ. ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಊರಿನಲ್ಲೇ ಒಂದಷ್ಟು ಜನ ಗೆಳೆಯರು, ಸಂಬಂಧಿಗಳು ಇಂದು ನನಗೆ ಶತ್ರುಗಳಾಗಿದ್ದಾರೆ. ನನ್ನಂತಹ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದ ಫಲವಾಗಿ ನಮ್ಮ ಪಕ್ಷವು 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ. ಒಟ್ಟಿನಲ್ಲಿ ಕೋಮುವಾದಿ ಬಿಜೆಪಿ ಅಧಿಕಾರದಿಂದ ದೂರಾಗಿರುವುದು ಕರ್ನಾಟಕವೇ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಸ್ವತಃ ಲಿಂಗಾಯತ ಸಮುದಾಯದವನಾದ ನಾನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದನ್ನು, ಡಿ.ಕೆ ಶಿವಕುಮಾರ್‌ ಅವರು ಉಪಮುಖ್ಯಮಂತ್ರಿಯಾಗಿದ್ದನ್ನು ನೋಡಿ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟಿದ್ದೇನೆ. ನಮಗೆ ಪಕ್ಷದ ಹಿತವಷ್ಟೇ ಮುಖ್ಯ.

ನೀವು ಇಳಿ ವಯಸ್ಸಿನಲ್ಲೂ ಜಾತಿ ಜಾತಿ ಎಂದು ಹಲುಬುತ್ತಿರುವುದು ಏಕೆ? ನೀವು ಕೇವಲ ಲಿಂಗಾಯತರಿಗಷ್ಟೇ ಶಾಸಕರೇ? ನೀವು ಗೆದ್ದಿರುವ ದಾವಣಗೆರೆ ಕ್ಷೇತ್ರದಲ್ಲಿ ಎಷ್ಟು ಲಿಂಗಾಯತರಿದ್ದಾರೆ ಎಂಬ ಅರಿವಾದರೂ ಇದೆಯೇ? ಸುಮಾರು 2 ಲಕ್ಷ ಮತದಾರರ ಪೈಕಿ ಲಿಂಗಾಯತ ಮತಗಳಿರುವುದು ಕೇವಲ 25 ಸಾವಿರ ಮಾತ್ರ. ಮುಸ್ಲಿಮರು, ಮರಾಠರು, ಕುರುಬರು, ಉಪ್ಪಾರ, ಎಸ್‌ಸಿ/ಎಸ್‌ಟಿ ಮತದಾರರು ನಿಮಗೆ ಮತ ಚಲಾಯಿಸಿದ್ದಾರೆ, ಕ್ಷೇತ್ರದ ಪ್ರತಿನಿಧಿಯಾಗಿ ಈಗ ನೀವು ಎಲ್ಲ ಸಮುದಾಯದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ ಅಲ್ಲವೇ? ಒಂದು ವೇಳೆ ನಿಮ್ಮಂತೆ ಮತದಾರರು ತಮ್ಮ ಜಾತಿಯವನಿಗೆ ಮಾತ್ರ ಮತ ಚಲಾಯಿಸುತ್ತೇವೆ ಎಂದು ನಿರ್ಧರಿಸಿದ್ದರೆ ತಾವು ಇಂದು ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತಾ ಕೂತಿರಬೇಕಿತ್ತು ಎಂಬುದನ್ನು ಮರೆಯಬೇಡಿ.

ವಾಸ್ತವದಲ್ಲಿ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದ್ದರೆ ಪ್ರಶ್ನಿಸುವುದರಲ್ಲಿ ಔಚಿತ್ಯವಿದೆ. ಹಾಗೆ ನೋಡಿದರೆ ಉಳಿದ ಸಮುದಾಯಗಳಿಗೆ ಹೋಲಿಸಿದರೆ ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳೇ ಹೆಚ್ಚಿದ್ದಾರೆ. ರಾಜ್ಯದ 31 ಜಿಲ್ಲೆಗಳ ಅತ್ಯುನ್ನತ 108 ಅಧಿಕಾರಿಗಳ ಪೈಕಿ 14 ಮಂದಿ ಲಿಂಗಾಯತರಿದ್ದಾರೆ. ಈ ಪೈಕಿ ಮೂವರು ಜಿಲ್ಲಾಧಿಕಾರಿಗಳಿದ್ದಾರೆ, ನಾಲ್ವರು ಸಿಇಒಗಳಿದ್ದಾರೆ, 7 ಮಂದಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯ ಹುದ್ದೆಯಲ್ಲಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳ 41 ಕುಲಪತಿಗಳ ಪೈಕಿ 13 ಮಂದಿ ಲಿಂಗಾಯತರಿದ್ದಾರೆ. ವಸ್ತುಸ್ಥಿತಿ ಹೀಗಿದ್ದೂ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಹಲುಬುವುದರ ಹಿಂದೆ ಹುಳುಕುತನ ಅಡಗಿದೆ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ.

ನಿಮ್ಮದೇ ಸರ್ಕಾರದ ಬಗ್ಗೆ ಮಾತನಾಡುತ್ತೀರಲ್ಲಾ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿತ್ತೇ? ನೀವೇನಾದರೂ ಬಿಜೆಪಿಯಲ್ಲಿರುತ್ತಿದ್ದರೆ ನಿಮಗೆ ಎಂಎಲ್‌ಎ ಟಿಕೆಟ್‌ ಕೂಡ ಸಿಗುತ್ತಿರಲಿಲ್ಲ ನೆನಪಿರಲಿ. ಹಗಲು ರಾತ್ರಿ ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಯಡಿಯೂರಪ್ಪನವರನ್ನೇ ಮೂಲೆಗೊತ್ತಿದ್ದರು ಎಂದರೆ ನೀವು ಯಾವ ಲೆಕ್ಕ ಹೇಳಿ? ನೀವು ದಾವಣಗೆರೆ ಜಿಲ್ಲೆ ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲಿ ಪ್ರಚಾರಕ್ಕೆ ಹೋಗಿದ್ದೀರಿ? ಎಷ್ಟು ಮಂದಿ ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ? ಇಂಥ ಪ್ರಶ್ನೆಗಳನ್ನು ಕೇಳಿದರೆ ನಿಮ್ಮ ವಯಸ್ಸನ್ನು ಅವಮಾನಿಸಿದಂತೆ ಎಂದು ನಾವು ಇಷ್ಟು ದಿನ ಸುಮ್ಮನಿದ್ದೆವು. ಆದರೆ ಇನ್ನೂ ಸುಮ್ಮನಿದ್ದರೆ ನಮ್ಮ ಶ್ರಮವೆಲ್ಲ ವ್ಯರ್ಥವಾಗುತ್ತದೆ ಎಂದೆನಿಸುತ್ತಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಇದ್ದುದರಿಂದಲೇ ನಿಮ್ಮ ಮಗ ಇಂದು ಗಣಿಗಾರಿಕೆ, ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವರಾಗಿದ್ದಾರೆ. ಅದೇ ಬಿಜೆಪಿಯಲ್ಲಿ ಇದ್ದಿದ್ದರೆ ಸಂಘ ಪರಿವಾರದ ಬಿ.ಎಲ್‌.ಸಂತೋಷ್‌ ಅವರ ಮನೆಯ ಗೇಟ್‌ ಕೀಪಿಂಗ್‌ ಮಾಡಬೇಕಿತ್ತು, ಮರೆಯಬೇಡಿ..

74 ಲಿಂಗಾಯತ ಶಾಸಕರನ್ನು ಸೇರಿಸಿಕೊಂಡು ಹೊಸ ಸರ್ಕಾರ ಮಾಡುತ್ತೀನಿ ಎಂದೆಲ್ಲಾ ಹೇಳುತ್ತಿದ್ದೀರಲ್ಲಾ, ನಿಮಗೇನು ಮತಿಭ್ರಮಣೆಯೇ? ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರು ಪಕ್ಷದ ಶಾಸಕರನ್ನು ಸೇರಿಸಿಕೊಂಡರೂ ಒಟ್ಟು 56 ಶಾಸಕರಾಗುತ್ತಾರೆ. ಏನೇ ಸಮಸ್ಯೆಯಿದ್ದರೂ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ನೀಡಿ ಇತ್ಯರ್ಥ ಪಡಿಸಿಕೊಳ್ಳಿ. ನಿಮ್ಮ ವೈಯಕ್ತಿಕ ಅಸೂಯೆಯಿಂದ ಬಹಿರಂಗವಾಗಿ ಹೇಳಿಕೆ ನೀಡಿ ಸರ್ಕಾರವನ್ನು ದರ್ಬಲಗೊಳಿಸಲು ಪ್ರಯತ್ನಿಸಬೇಡಿ.

ಜಗದೀಶ್‌ ಶೆಟ್ಟರ್‌, ಲಕ್ಷ್ಮಣ್‌ ಸವದಿ ಸೇರಿದಂತೆ ಹಲವು ಲಿಂಗಾಯತ ಮುಖಂಡರು ಬಿಜೆಪಿ ತೊರೆದು ನಮ್ಮ ಪಕ್ಷ ಸೇರಿದ್ದೇಕೆ ಹೇಳಿ? ಸುಲಭವಾಗಿ ಗೆಲ್ಲಬಹುದಾಗಿದ್ದ ಸ್ವಕ್ಷೇತ್ರದಿಂದ ಸೋಮಣ್ಣ ಅವರನ್ನು ಹೊರಗಟ್ಟಿ, ಎರಡೆರಡು ಕಡೆ ಟಿಕೆಟ್‌ ಕೊಟ್ಟಿದ್ದೇವೆಂಬ ಬರೆ ಎಳೆದು ರಾಜಕೀಯವಾಗಿ ಮುಗಿಸಿ ಹಾಕಿದ್ದು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ಲಿಂಗಾಯತ ಸಮುದಾಯದ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ವಿದೇಶ ಪ್ರವಾಸ ಮಾಡುತ್ತ ರಾಜ್ಯಕ್ಕಾಗಿ ಸಾಲು ಸಾಲು ಉದ್ಯಮಗಳನ್ನು ಕರೆತರುತ್ತಿದ್ದಾರೆ. ಹಿರಿಯ ಮುಖಂಡರಾಗಿ ಪಕ್ಷದ, ರಾಜ್ಯದ, ಕ್ಷೇತ್ರದ ಏಳ್ಗೆ ನಿಟ್ಟಿನಲ್ಲಿ ಕೆಲಸ ಮಾಡುವುದು ಬಿಟ್ಟು ಇಲ್ಲಸಲ್ಲದ ವರಾತ ತೆಗೆಯುತ್ತಿದ್ದೀರಲ್ಲಾ, ಇದು ನ್ಯಾಯವೇ?

ಇದ್ದಕ್ಕಿಂದತೆ ನೀವು ಲಿಂಗಾಯತರ ಮೇಲೆ ತೋರಿಸುತ್ತಿರುವ ವ್ಯಾಮೋಹದ ಹಿಂದೆ ಕಾಳಜಿಯಿಲ್ಲ, ಜಾತ್ಯಾತೀತ ನಾಯಕ ಸಿದ್ದರಾಮಯ್ಯ ಅವರ ಕಾಲೆಳೆಯುವ ಕುತಂತ್ರವಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ನಿಮ್ಮ ವಯಸ್ಸಿನ ಮೇಲೆ ನಮಗೆ ಗೌರವವಿದೆ. ಅದು ಶಾಶ್ವತವಾಗಿರುವಂತೆ ಕಾಪಾಡಿಕೊಳ್ಳುವ ಜವಾಬ್ದಾರಿಯೂ ನಿಮ್ಮ ಮೇಲಿದೆ.

92 ವರ್ಷದ ನೀವು ಅರ್ಧ ಆಯಸ್ಸನ್ನು ಪಕ್ಷದಲ್ಲಿದ್ದುಕೊಂಡು ಅಧಿಕಾರ ಅನುಭವಿಸಿದ್ದೀರಿ. ಮುಂದಿನ ನೂರು ತಲೆಮಾರಿಗಾಗುವಷ್ಟು ಆಸ್ತಿ ಅಂತಸ್ತು ಮಾಡಿಕೊಂಡಿದ್ದೀರಿ. ನಾನು ಕಳೆದ ಒಂದೂವರೆ ದಶಕದಿಂದ ಪಕ್ಷಕ್ಕಾಗಿ ದುಡಿಯುತ್ತಾ ಓರ್ವ ಸಾಮಾನ್ಯ ಕಾರ್ಯಕರ್ತನಾಗಿಯೇ ಇದ್ದೇನೆ. ಪಕ್ಷದ ಬಗ್ಗೆ ನನಗಿರುವ ನಿಯತ್ತು, ನಿಷ್ಠೆ ನಿಮ್ಮಲ್ಲಿ ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ. ಇತಿಹಾಸ ನಿಮ್ಮನ್ನು ಒಬ್ಬ ಜಾತಿವಾದಿ ಎಂದು ನೋಡುವುದು ನನಗೆ ಇಷ್ಟವಿಲ್ಲ, ಇನ್ನಾದರೂ ಜಾತಿ ಸಂಕೋಲೆಯಿಂದ ಹೊರಗೆ ಬಂದು ಮನುಷ್ಯರಾಗಿ, ನಿಜ ಶರಣನಾಗಿ.

ಇಂತೀ,
ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments