ಹಾವೇರಿ:ಅ.17: ಸಾಮಾಜಿಕ ಭದ್ರತೆ ಯೋಜನೆಯಡಿ ವಿಕಲಚೇತನರು, ವಿವಿಧ ಪಿಂಚಣಿ ಆಕಾಂಕ್ಷಿ ಫಲಾನುಭವಿಗಳು ವಿಳಂಬಮಾಡದೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳನ್ನು ಭೇಟಿಮಾಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಿದರೆ ಪಿಂಚಣಿ ಮಂಜೂರಾತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ಹೇಳಿದರು.
ಬ್ಯಾಡಗಿ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ, ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳಿಗೆ ಸಮಸ್ಯೆಗಳ ಇತ್ಯರ್ಥಕ್ಕೆ ಸೂಚನೆ ನೀಡಿದರು.
ರೈತರ ಪಂಪ್‍ಸೆಟ್‍ಗಳಿಗೆ ಪೂರೈಸಲಾಗುವ ವಿದ್ಯುತ್ ಯಾವ ವೇಳೆಯಲ್ಲಿ ಸರಬರಾಜು ಮಾಡಲಾಗುತ್ತದೆ ಎಂದು ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಿ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗಳ ಕೆಳಭಾಗದ ರೈತರಿಗೆ ಸರಾಗವಾಗಿ ನೀರು ಹೋಗಲು ಇರುವ ತೊಡಕುಗಳನ್ನು ಅಭಿಯಂತರರು ಒಂದುವಾರದೊಳಗೆ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದರು.

ಮಧ್ಯಂತರ ಬೆಳೆ ಪರಿಹಾರ ಸರ್ಕಾರದ ಹಂತದಲ್ಲಿ ತಾಂತ್ರಿಕ ತೊಡಕುಗಳು ನಿವಾರಣೆಯಾಗಿದ್ದು, ಶೀಘ್ರದಲ್ಲೇ ಪರಿಹಾರ ಹಣ ಬಿಡುಗಡೆಯಾಗಲಿದೆ. ಜಿಲ್ಲೆಯ ಎಂಟು ತಾಲೂಕುಗಳಲ್ಲೂ ಬರ ಘೋಷಣೆಯಾಗಿದೆ. ಬೆಳೆ ಸರ್ವೇ ನೆಲಸ್ಥಿತಿಯ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಾಲ್ಕುತಾಸು ಸಮಸ್ಯೆ ಆಲಿಕೆ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಸತತ ನಾಲ್ಕು ತಾಸು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್ ಅವರು ಅರ್ಜಿಗಳನ್ನು ಸ್ವೀಕರಿಸಿ, ಪ್ರತಿ ಅರ್ಜಿದಾರನ ಸಮಸ್ಯೆಯನ್ನು ಸಮಚಿತ್ತದಿಂದ ಆಲಿಸಿದರು. ಮುಂಜಾನೆ ಜನರ ಸಮಸ್ಯೆಗಳ ಅರ್ಜಿಗಳನ್ನು ಸಾವಧಾನದಿಂದ ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಶೀಲಿಸಿ ಪರಿಹಾರ ಒದಗಿಸಲು ಸೂಚನೆ ನೀಡುತ್ತಲೇ, ಸಾಮಾಜಿಕ ಭದ್ರತೆಯಡಿ ಸ್ಥಳದಲ್ಲೇ ಮಂಜೂರಾತಿ ಆದೇಶ ನೀಡಿ, ಸಂಜೆ ತಾಲೂಕಿನ ಆಸ್ಪತ್ರೆ, ಹಾಸ್ಟೇಲ್‍ಗಳ ಕುಂದುಕೊರತೆಗಳ ವಸ್ತುಸ್ಥಿತಿ ಪರಿಶೀಲನೆ ನಡೆಸಿ ಜನತಾ ದರ್ಶನ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ಬ್ಯಾಡಗಿ ತಾಲೂಕಿನ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಮೂಲಕ ಗಮನ ಸೆಳೆದರು.
ಸಾರ್ವಜನಿಕ ಸಮಸ್ಯೆಗಳ ಅರ್ಜಿಗಳ ಸ್ವೀಕಾರಕ್ಕೆ 12ಕ್ಕೂ ಹೆಚ್ಚು ಕೌಂಟರ್‍ಗಳನ್ನು ತೆರೆದು ಕಂಪ್ಯೂಟರ್‍ಗಳನ್ನು ಟೇಬಲ್‍ವಾರು ಅಳವಡಿಸಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಪ್ರತಿ ಸಾರ್ವಜನಿಕ ಅರ್ಜಿಗಳನ್ನು (ಐಪಿಜಿಆರ್‍ಎಸ್) ತಂತ್ರಾಂಶದಲ್ಲಿ ದಾಖಲಿಸಿಕೊಂಡು, ಸ್ವೀಕೃತಿ ನೀಡಿ ಈ ಅರ್ಜಿಗಳನ್ನು ಮೊದಲ ಮಹಡಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು.
ಸಭೆಯಲ್ಲಿ ಉಪಸ್ಥಿತರಿದ್ದ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಆಯಾ ಇಲಾಖಾ ಅಧಿಕಾರಿಗಳಿಗೆ ವರ್ಗಾಯಿಸಿ ಅಧಿಕಾರಿಗಳ ಮತ್ತು ಸಮಸ್ಯೆಗಳನ್ನು ಹೊತ್ತುತಂದ ಸಾರ್ವಜನಿಕರ ಮೊಬೈಲ್ ಸಂಖ್ಯೆಗಳನ್ನು ಸಭೆಯಲ್ಲಿ ವಿನಿಮಯಮಾಡಿ ಕಾಲಮಿತಿಯೊಳಗೆ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
234 ಅರ್ಜಿ ಸ್ವೀಕಾರ: ಜನತಾ ದರ್ಶನದಲ್ಲಿ 234 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು. ಈ ಪೈಕಿ 135 ಅರ್ಜಿಗಳು ಬೆಳೆಹಾನಿಗೆ ಸಂಬಂಧಿಸಿದ ಹಾಗೂ 99 ಅರ್ಜಿಗಳು ಇತರ ಸಮಸ್ಯೆಗಳ ಒಳಗೊಂಡ ಅರ್ಜಿಗಳಾಗಿದ್ದವು. ಈ ಪೈಕಿ ಮಾಶಾಸನ ಮಂಜೂರಾತಿಗಾಗಿ ಸಲ್ಲಿಸಿದ ಅರ್ಧತಾಸಿನಲ್ಲಿ ಆರು ಜನರ ಅರ್ಜಿಗಳನ್ನು ಪುರಸ್ಕರಿಸಿ ಮಾಶಾಸನ ಮಂಜೂರುಮಾಡಿ ಸಭೆಯಲ್ಲಿ ಆದೇಶ ಪತ್ರ ನೀಡಲಾಯಿತು.
ಬೆಳೆಹಾನಿಗೆ ಸಂಬಂಧಿಸಿದ 135 ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಯಾವ ಹಂತದಲ್ಲಿ ಬಾಕಿ ಉಳಿದಿದೆ, ಯಾವ ದಾಖಲೆಗಳ ಕೊರತೆ ಇದೆ, ತಕ್ಷಣವೇ ದೂರು ದಾರರಿಗೆ ಮನವರಿಕೆಮಾಡಿಕೊಟ್ಟು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸೂಚನೆ ನೀಡಿದರು.
ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಬಾಕಿ, ಬಿ1 ರಿಂದ ಬಿ2 ಪರಿವರ್ತನೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತಂತೆ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರಗಳಿಂದ ಮಾಹಿತಿ ಪಡೆದು, ಪರಿಶೀಲನೆ ನಡೆಸಿ ಪರಿಹಾರ ಒದಗಿಸಲು ಸಭೆಯಲ್ಲಿ ಸೂಚನೆ ನೀಡಿದರು.
ಸಾಗುವಳಿ ಹಕ್ಕು ಪತ್ರ ಬೇಡಿಕೆ, ಸೇವಾನಗರ ತಾಂಡಾ ಕಂದಾಯ ಗ್ರಾಮವಾಗಿ ಪರಿವರ್ತನೆ, ಜಮೀನಿನ ಪಟ್ಟಾ ವಿತರಣೆ, ಜಮೀನಿಗೆ ದಾರಿ ಸಮಸ್ಯೆ, ಪೋಡಿ ಪ್ರಕರಣಗಳು, ಜಮೀನಿನ ಪಹಣಿ ತಿದ್ದುಪಡಿ, ಸ್ಮಶಾನ ದಾರಿಯ ಕುರಿತಂತೆ ಸಮಸ್ಯೆಗಳು, ನಿವೇಶನಗಳ ಮಧ್ಯಭಾಗದಲ್ಲಿ ರಾಜಕಾಲುವೆ ಹಾದುಹೋಗಿರುವ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಭೂ ದಾಖಲೆ ಅಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿ, ತಹಶೀಲ್ದಾರ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿ, ಸರ್ವೇ ಮೂಲಕ ಪರಿಶೀಲನೆ ನಡೆಸಿ, ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ, ವಿಕಲಚೇತನರ ಮಾಶಾಸನ ಕೋರಿ ಮಂಜೂರಾತಿ ಕುರಿತಂತೆ ವಿವಿಧ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಅರ್ಧತಾಸು ಕಾಯಿರಿ, ನಿಮ್ಮಗೆ ಮಂಜೂರಾತಿ ಪತ್ರ ನೀಡಲಾಗುವುದು ಎಂದು ಹೇಳುತ್ತಲೇ ಅವರ ಅರ್ಜಿಗಳನ್ನು ತಹಶೀಲ್ದಾರಗೆ ವರ್ಗಾಯಿಸಿ ಪರಿಶೀಲಿಸಿ ಆದೇಶಪತ್ರ ನೀಡುವಂತೆ ಸೂಚನೆ ನೀಡಿದರು.
ಜನತಾ ದರ್ಶನದ ಅವಧಿ ಮುಗಿಯುತ್ತಲೇ ವಿಕಲಚೇತನ ಮಾಶಾಸನ ಹಾಗೂ ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ ಆರು ಜನರಿಗೆ ಮಾಶಾಸನ ಮಂಜೂರಾತಿ ಪತ್ರವನ್ನು ವಿತರಿಸಿ, ಬ್ಯಾಂಕ್ ಖಾತೆಮಾಡಿಸಲು ಫಲಾನುಭವಿಗಳಿಗೆ ಸಲಹೆ ನೀಡಿದರು.
ಗೃಹಲಕ್ಷ್ಮೀಗೆ ಪ್ರತ್ಯೇಕ: ಗೃಹಲಕ್ಷ್ಮೀ ಯೋಜನೆಯ ಹಣ ಜಮಾವಣೆ ಸಮಸ್ಯೆಗಳನ್ನು ಹೊತ್ತುತಂದಿದ್ದ ಮಹಿಳೆಯರಿಗೆ ಪ್ರತ್ಯೇಕ ಕೌಟಂರ್‍ಗಳನ್ನು ತೆರೆದು ಸ್ಥಳದಲ್ಲೇ ಆಧಾರ್ ಹಾಗೂ ಬ್ಯಾಂಕ್ ಖಾತೆ ಜೋಡಣೆ, ಇತರ ಸಮಸ್ಯೆಗಳಿಗಾಗಿಯೇ ಜನತಾ ದರ್ಶನದಲ್ಲಿ ಪ್ರತ್ಯೇಕ ಕೌಂಟರ್ ಆರಂಭಿಸಲು ಸೂಚನೆ ನೀಡಿ, ಪ್ರತಿ ಫಲಾನುಭವಿ ದೂರುದಾರರೊಂದಿಗೆ ಕಂದಾಯ ಇಲಾಖಾ ಅಧಿಕಾರಿಗಳನ್ನು ಜೊತೆಮಾಡಿ ಸಮಸ್ಯೆ ಇತ್ಯರ್ಥಪಡಿಸಿ ಪರಿಹಾರ ಒದಗಿಸಲು ವ್ಯವಸ್ಥೆ ಮಾಡಿ ಎಲ್ಲರ ಗಮನ ಸೆಳೆದರು.
ಆಧಾರ್ ನೋಂದಣಿ: ಬ್ಯಾಂಕ್‍ಗಳಲ್ಲಿ ಹಾಗೂ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಸಂದರ್ಭದಲ್ಲಿ ವಿಕಲಚೇತನರಿಗೆ ಆಸನ ವ್ಯವಸ್ಥೆ ಹಾಗೂ ನೆರಳಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳ ಕಲ್ಪಿಸುವ ಕುರಿತಂತೆ ಕೆಲ ವಿಕಲಚೇತನ ಸಂಘಟನೆಗಳು ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿಸಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಸೂಚನೆ ನೀಡಿ, ಆಧಾರ್ ನೋಂದಣಿ ಸ್ಥಳದಲ್ಲಿ ಆಸನ ವ್ಯವಸ್ಥೆ ಹಾಗೂ ತಾತ್ಕಾಲಿಕ ನೆರಳಿನ ವ್ಯವಸ್ಥೆ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಾಲುವೆ ದುರಸ್ತಿ: ತುಂಗಾ ಮೇಲ್ದಂಡೆ ಯೋಜನೆಯಡಿ ನಿರ್ಮಾಣವಾಗಿರುವ ಕಾಲುವೆಗಳ ಕೆಳಭಾಗದ ರೈತರಿಗೆ ನೀರು ಹರಿಸಲು ಎಲ್ಲೆಲ್ಲಿ ಸಮಸ್ಯೆಯಾಗಿದೆ ಅವುಗಳನ್ನು ಒಂದುವಾರದಲ್ಲಿ ಪರಿಶೀಲನೆ ನಡೆಸಿ ಇತ್ಯರ್ಥಪಡಿಸಬೇಕು. ಹೊಲಗಳಿಗೆ ಹೋಗಲು ಕೆಲ ರೈತರು ಕಾಲುವೆಗಳನ್ನು ಅಲ್ಲಲ್ಲಿ ಮುಚ್ಚಿದ್ದಾರೆ. ಅವುಗಳನ್ನು ತೆರವುಗೊಳಿಸುವಂತೆ ಕೆಲ ರೈತರು ಮನವಿ ಸಲ್ಲಿಸಿದ್ದಾರೆ, ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ಅಭಿಯಂತರರುಗಳಿಗೆ ಸೂಚನೆ ನೀಡಿದರು.
ರೈತರಿಗೆ ಭೂಸ್ವಾಧೀನ ಪರಿಹಾರ ಹಣ ಒದಗಿಸದ ಕಾರಣ ಕಾಲುವೆ ಮುಚ್ಚಿದ್ದಾರೆ ಎಂಬ ಅರ್ಜಿದಾರರ ದೂರು ಆಧಾರ ರಹಿತ, ಈಗಾಗಲೇ ಎಲ್ಲ ರೈತರಿಗೂ ಭೂ ಸ್ವಾಧೀನ ಪರಿಹಾರ ಒದಗಿಸಲಾಗಿದೆ. ಪರಿಹಾರ ಕಾರಣದಿಂದ ಯಾವ ರೈತರು ಕಾಲುವೆ ಮುಚ್ಚಿಲ್ಲ. ಅವರವರ ಹೊಲಕ್ಕೆ ಹೋಗಲು ಕೆಲ ರೈತರು ಕಾಲುವೆ ಮುಚ್ಚಿದ್ದಾರೆ. ಪರಿಶೀಲಿಸಿ ತೆರವುಗೊಳಿಸುವುದಾಗಿ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು.
ಬೆಳೆಸಾಲ ಕೊಡಿಸಿ: ಚನ್ನಬಸಪ್ಪ ಎಂಬ ರೈತ ಬ್ಯಾಡಗಿ ಕೆವಿಜಿ ಬ್ಯಾಂಕಿನಲ್ಲಿ ಬೆಳೆಸಾಲ ಸಿಗುತ್ತಿಲ್ಲ, ಎಲ್ಲ ದಾಖಲೆಗಳಿದ್ದರೂ ಬ್ಯಾಂಕಿನ ಅಧಿಕಾರಿಗಳು ಲೀಗಲ್ ಒಪಿನಿಯನ್ ಪಡೆಯಬೇಕು ಎಂದು ವಕೀಲರ ಬಳಿ ಕಳುಹಿಸುತ್ತಾರೆ ಎಂಬ ರೈತನ ಅಳಲಿಗೆ ತಕ್ಷಣವೇ ಸ್ಪಂದಿಸಿ ಸಭೆಯಲ್ಲಿದ್ದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ರೈತನ ಸಮಸ್ಯೆಯನ್ನು ಪರಿಹರಿಸುವಂತೆ ಜೊತೆಮಾಡಿ ಕಳುಹಿಸಿದರು.
ಸೌಲಭ್ಯ ಒದಗಿಸಿ: ಬ್ಯಾಡಗಿ ನೆಹರು ನಗರ ಬಡಾವಣೆಯ ನಿವಾಸಿಗಳು ಮನವಿ ಸಲ್ಲಿಸಿ ಕಳೆದ ಮೂರು ತಲೆಮಾರುಗಳಿಂದ ಸರ್ಕಾರಿ ಜಾಗೆಯಲ್ಲಿ ವಾಸಮಾಡುತ್ತಿದ್ದೇವೆ. ನಮಗೆ ಪಟ್ಟಾ ನೀಡಿರುವುದಿಲ್ಲ. ದಯಮಾಡಿ ಹಕ್ಕುಪತ್ರ ನೀಡುವಂತೆ ನಿವಾಸಿಗಳು ಜನತಾದರ್ಶನದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶಿವಪೂರ ಬಡಾವಣೆಯ ನೀವಾಸಿಗಳು ಕುಡಿಯುವ ನೀರಿನ ನಳದ ಸಂಪರ್ಕ ಇಲ್ಲದಿರುವ ಬಗ್ಗೆ ಗಮನ ಸೆಳೆದರು. ಈ ಎರಡು ಸಮಸ್ಯೆಗಳನ್ನು ಪರಿಶೀಲಿಸಿ ತ್ವರಿತವಾಗಿ ಇತ್ಯರ್ಥಪಡಿಸಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ರೈತ ಸಂಘದ ಮನವಿ: ಸಭೆಯಲ್ಲಿ ರೈತ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿ, ಬರಗಾಲ ಇರುವುದರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡದಂತೆ ಸರ್ಕಾರ ನಿರ್ದೆಶನವಿದ್ದರೂ ಖಾಸಗಿ ಫೈನಾನ್ಸ್‍ನವರು ರೈತರಿಂದ ಟ್ರ್ಯಾಕ್ಟರ್ ಸಾಲವನ್ನು ಬಲವಂತವಾಗಿ ವಸೂಲಿಮಾಡುತ್ತಿದ್ದಾರೆ. ಇದನ್ನು ತಡೆಯಬೇಕು. ರೈತರಿಗೆ ಐದು ತಾಸ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಬಾರದು. ಯಾವ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂಬುದನ್ನು ರೈತರಿಗೆ ತಿಳಿಸಬೇಕು. ಮಧ್ಯಂತರ ಬೆಳೆ ವಿಮೆ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ಬರ ಪರಿಹಾರ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಎಷ್ಟು ಹಣ ಕೊಡುತ್ತಾರೆ ಎಂದು ರೈತರಿಗೆ ಮಾಹಿತಿ ನೀಡಬೇಕು. ಆಣೂರ, ಬುಡಪನಹಳ್ಳಿ ಬ್ಯಾರೇಜ್ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಮಧ್ಯಂತರ ಬೆಳೆ ಪರಿಹಾರ ಕುರಿತಂತೆ ಎಲ್ಲ ತಾಂತ್ರಿಕ ತೊಡಕುಗಳು ಸರ್ಕಾರದ ಹಂತದಲ್ಲಿ ನಿವಾರಣೆಯಾಗಿದೆ. ತ್ವರಿತವಾಗಿ ಹಣ ಬಿಡುಗಡೆಯಾಗಲಿದೆ. ಜಿಲ್ಲೆಯ ಎಂಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈಗಾಗಲೇ ಸರ್ವೇ ಮುಗಿಸಲಾಗಿದೆ. ಶೇ.80 ರಿಂದ 90ರಷ್ಟು ಬೆಳೆಹಾನಿಯಾಗಿರುವುದಾಗಿ ವರದಿ ಸಲ್ಲಿಸಲಾಗಿದೆ. ಬ್ಯಾರೇಜ್ ನಿರ್ಮಾಣ ಕಾಮಗಾರಿ ಆರಂಭ, ಸಾಲ ವಸೂಲಾತಿ ಕುರಿತಂತೆ ಶೀಘ್ರವೇ ಕ್ರಮವಹಿಸಲಾಗುವುದು. ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ರೈತ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಕೌಟುಂಬಿಕ ಸಮಸ್ಯೆಗೆ ಸ್ಪಂದನೆ: ನಿತ್ಯದ ಸಾಮಾನ್ಯ ದೂರುಗಳ ಮಧ್ಯ ಯುವ ಮಹಿಳೆಯೊಬ್ಬರು ಗಂಡನ ಮನೆಯ ಕಿರುಕುಳ ಕುರಿತಂತೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ತಾಯಿ, ಮಗಳು ಅರ್ಜಿ ಹಿಡಿದು ಜಿಲ್ಲಾಧಿಕಾರಿಗಳಿಗೆ ಗಂಡನ ನಿರ್ಲಕ್ಷ್ಯ, ನಿವೇಶನವನ್ನು ತನ್ನ ಅರಿವಿಲ್ಲದೇ ಬೇರೆಯವರಿಗೆ ವರ್ಗಾವಣೆ, ನಿತ್ಯದ ಜೀವನ ನಿರ್ವಹಣೆಯ ತೊಡಕುಗಳ ಕುರಿತಂತೆ ನಿವೇದಿಸಿಕೊಂಡರು. ಮಾನವೀಯತೆಯಿಂದ ಮಹಿಳೆಯ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇ ಶಕರಿಗೆ ಸೂಚನೆ ನೀಡಿ, ಕಾನೂನು ನೆರವು ಸೇರಿದಂತೆ ಈ ಕುಟುಂಬದ ಸಮಸ್ಯೆಗಳ ಇತ್ಯರ್ಥಕ್ಕೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಸೌಲಭ್ಯಗಳ ಪರಿಶೀಲನೆಗೆ ತಂಡ: ಮುಂಜಾನೆ ಜಿಲ್ಲಾಧಿಕಾರಿಗಳೊಂದಿಗೆ ಜನತಾದರ್ಶನದಲ್ಲಿ ಭಾಗವಹಿಸಿ ಸಾರ್ವಜನಿಕ ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮಿಸಿದ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳನ್ನು ತಂಡವಾಗಿ ವಿಭಾಗಿಸಿ ಸಂಜೆ ಊಟದ ನಂತರ ತಾಲೂಕಿನ ವಿವಿಧ ಇಲಾಖೆಯ ವಿದ್ಯಾರ್ಥಿ ನಿಲಯ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಾರ್ವಜನಿಕ ಸೇವಾ ಸೌಲಭ್ಯಗಳು, ಮೂಲ ಸೌಕರ್ಯಗಳ ವಸ್ತು ಸ್ಥಿತಿ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಖುದ್ದಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬ್ಯಾಡಗಿ ತಾಲೂಕಾ ಆಸ್ಪತ್ರೆ ಹಾಗೂ ಕ್ರೀಡಾಂಗಣ ಪರಿಶೀಲಿಸಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಡಾ.ಚನ್ನಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ತಹಶೀಲ್ದಾರ ಎ.ವಿ. ಪ್ರಸನ್ನ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.