Saturday, December 21, 2024
Homeಕೃಷಿಕೃಷಿ ಸಾಲ ನೀಡಿಕೆ ಕಡ್ಡಾಯ- ಬಲವಂತವಾಗಿ ಬೆಳೆಸಾಲ ವಸೂಲಿ ಮಾಡಬೇಡಿ:ಸಿಇಒ ಅಕ್ಷಯ್ ಶ್ರೀಧರ್ ಬ್ಯಾಂಕರ್ಸ್ ಗಳಿಗೆ...

ಕೃಷಿ ಸಾಲ ನೀಡಿಕೆ ಕಡ್ಡಾಯ- ಬಲವಂತವಾಗಿ ಬೆಳೆಸಾಲ ವಸೂಲಿ ಮಾಡಬೇಡಿ:ಸಿಇಒ ಅಕ್ಷಯ್ ಶ್ರೀಧರ್ ಬ್ಯಾಂಕರ್ಸ್ ಗಳಿಗೆ ಸೂಚನೆ

ಹಾವೇರಿ:ನ.03: ಜಿಲ್ಲೆಯಲ್ಲಿ ತೀವ್ರ ಬರಗಾಲ ಇದೆ, ಸರ್ಕಾರ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ರೈತರ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಬ್ಯಾಂಕ್‍ಗಳು ಬಲವಂತವಾಗಿ ರೈತರ ಸಾಲ ವಸೂಲಿಯಾಗಲಿ, ಹರಾಜು ಪ್ರಕ್ರಿಯೆ ಕೈಗೊಳ್ಳದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್ ಅವರು ಬ್ಯಾಂಕರ್ಸ್‍ಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲೆಯ ಬ್ಯಾಂಕುಗಳ ತ್ರೈಮಾಸಿಕ ಸಭೆ ಹಾಗೂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿದ ಅವರು, ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರ ಸಾಲ ವಸೂಲಿಗೆ ಒತ್ತಡ ಹಾಕಬೇಡಿ. ಎಲ್ಲವನ್ನೂ ಕಾನೂನಿನ ಆಯಾಮದಲ್ಲಿ ನೋಡಬೇಡಿ, ರೈತರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಿ, ಮಾನವೀಯ ನೆಲೆಯಲ್ಲಿ ವ್ಯವಹರಿಸಿ ಎಂದು ಬ್ಯಾಂಕರ್ಸ್‍ಗಳಿಗೆ ಸಲಹೆ ನೀಡಿದರು.

ಸಾಲದ ಹಣಕ್ಕೆ ಜಮೆ ಬೇಡ: ಬೆಳೆ ಪರಿಹಾರ, ಬೆಳೆ ವಿಮಾ ಪರಿಹಾರ ಹಣ ರೈತರ ಖಾತೆಗೆ ಜಮೆಯಾದಾಗ ಸಾಲದ ಹಣಕ್ಕೆ ಬಲವಂತವಾಗಿ ಜಮೆ ಮಾಡಿಕೊಳ್ಳಬೇಡಿ. ಆದಾಗ್ಯೂ ಖಾತೆದಾರ ರೈತನೊಂದಿಗೆ ಚರ್ಚಿಸಿ, ಆ ರೈತ ಒಪ್ಪಿದರೆ ಭಾಗಶಃ ಹಣ ಮಾತ್ರ ಸಾಲಕ್ಕೆ ಜಮೆ ಮಾಡಿಕೊಳ್ಳಬಹುದು. ರೈತ ಒಪ್ಪದಿದ್ದರೆ ಪರಿಹಾರ ಹಣದಲ್ಲಿ ಸಾಲದ ಕಂತು ಕಟಾವು ಮಾಡಿಕೊಳ್ಳದಂತೆ ಅಲ್ಲದೆ ಸಾಮಾಜಿಕ ಭದ್ರತಾ ಯೋಜನೆಯಡಿ ಜಮೆಯಾಗುವ ಪೆನ್‍ಶನ್ ಹಣವನ್ನು ಫಲಾನುಭವಿಗಳ ಸಾಲದ ಬಾಕಿಗೆ ಜಮೆ ಮಾಡಿಕೊಳ್ಳಬಾರದು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆದೇಶ, ರಿಸರ್ವ ಬ್ಯಾಂಕ್ ಆಪ್ ಇಂಡಿಯಾದ ಮಾರ್ಗಸೂಚಿಗಳಿದ್ದಾಗ್ಯೂ ಸಾಲ ವಸೂಲಾತಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಜಮೆಯಾದ ಹಣವನ್ನು ಅವರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ದೂರುಗಳು ಬರುತ್ತಿವೆ. ಬ್ಯಾಂಕುಗಳ ಈ ನಡೆ ಆಕ್ಷೇಪಾರ್ಹ. ಇಂತಹ ಪ್ರಕರಣಗಳು ಮರುಕಳಿಸಬಾರದು. ಪುನಃ ಇಂತಹ ದೂರುಗಳು ಬಂದರೆ ಬ್ಯಾಂಕುಗಳ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ. ರೈತರಿಗೆ ಕೃಷಿ ಸಾಲ, ಕೃಷಿ ಪೂರಕ ಸಾಲ ನೀಡಿಕೆ ಮತ್ತು ಸಾಲ ವಸೂಲಾತಿಯಲ್ಲಿ ಆರ್.ಬಿ.ಐ. ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ರೈತರಿಗೆ ಸಾಲ : ಬ್ಯಾಂಕುಗಳು ರೈತರಿಗೆ ಸಾಲ ನೀಡುತ್ತಿಲ್ಲ ಎಂಬ ದೂರುಗಳಿವೆ. ಜಿಲ್ಲೆಯ ಅರ್ಹ ರೈತರಿಗೆ ಕಿಸಾನ್ ಕ್ರೆಡಿಟ್ ಸಾಲ ಕಡ್ಡಾಯವಾಗಿ ನೀಡಬೇಕು. ಬರಗಾಲ ಇದ್ದರೂ ನೀರಾವರಿ ಸೌಕರ್ಯ ಇರುವವರಿಗೆ ಬೆಳೆಸಾಲ ನೀಡಲು ತೊಂದರೆ ಏನು. ಅಲ್ಲದೇ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಒಳಗೊಂಡಂತೆ ಕೃಷಿ ಪೂರಕ ಚಟುವಟಿಕೆಗೆ ಸಾಲ ನೀಡುವಂತೆ ಬ್ಯಾಂಕರ್ಸ್‍ಗಳಿಗೆ ಸೂಚನೆ ನೀಡಿದರು.
ವಿವಿಧ ಇಲಾಖೆ, ನಿಗಮ-ಮಂಡಳಿ ಕೌಶಲ್ಯಾಧಾರಿತ ವೃತ್ತಿಪರ ಸಣ್ಣ ಮದ್ಯಮ ಗುಡಿ ಕೈಗಾರಿಕೆ ಅಭಿವೃದ್ಧಿಗೂ ಸಾಲದ ನೆರವನ್ನು ಸಕಾಲದಲ್ಲಿ ಒದಗಿಸುವಂತೆ ಬ್ಯಾಂಕರ್ಸ್‍ಗಳಿಗೆ ತಿಳಿಸಿದರು. ಸರ್ಕಾರಿ ಪ್ರಾಯೋಜಿತ ಯೋಜನಾ ಫಲಾನುಭವಿಗಳಿಗೆ ಸಕಾಲದಲ್ಲಿ ಸಾಲ ಸೌಲಭ್ಯ ದೊರಕುವಂತಾಗಲು ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡಬೇಕು. ಸದರಿ ಸಾಲ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಾಲ ನೀಡಿಕೆಯಲ್ಲಿ ಸಮಸ್ಯೆಗಳಿದ್ದರೆ ಜಿಲ್ಲಾ ಅಗ್ರಣೀ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವಂತೆ ಲೈನ್ ಡಿಪಾರ್ಟಮೆಂಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಂದು ಜಿಲ್ಲೆ ಒಂದು ಉದ್ಯಮ: ಒಂದು ಜಿಲ್ಲೆ ಒಂದು ಉದ್ಯಮ ಯೋಜನೆಯಡಿ ಆಹಾರ ಸಂರಕ್ಷಣ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ 103 ಜನರಿಗೆ ಸಾಲ ನೀಡಿರುವುದು ಅಭಿನಂದನಾರ್ಹ. ಬಾಕಿ 93 ಜನರಿಗೂ ಸಾಲ ನೀಡಲು ಬ್ಯಾಂಕರ್ಸ್‍ಗಳಿಗೆ ಸೂಚನೆ ನೀಡಿದರು.
ಕೆಸಿಸಿ ಕಾರ್ಡ್ ನೀಡಲು ಸೂಚನೆ: ಗ್ರಾಮೀಣ ಮಟ್ಟದಲ್ಲಿ ಅಭಿಯಾನದ ಮೋಡ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಬಾಕಿ ಉಳಿದಿರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಬೇಕು. ಖಾತೆಗೆ ಆಧಾರ್ ಜೋಡಣೆ, ಇ-ಕೆವೈಸಿಗೂ ಕ್ರಮವಹಿಸಬೇಕು. ಎಲ್ಲ ಬ್ಯಾಂಕುಗಳು ಗ್ರಾಮವಾರು ಅಭಿಯಾನವನ್ನು ಹಮ್ಮಿಕೊಂಡು ಫಲಾನುಭವಿಗಳನ್ನು ಗುರುತಿಸಿ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಕ್ರಮವಹಿಸಿ ಎಂದರು. ಈ ಕಾರ್ಯದಲ್ಲಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಹಾಲು ಉತ್ಪಾದಕರ ಸಹಕಾರ ಮಹಾ ಮಂಡಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಸಹಕರಿಸುವಂತೆ ಸಲಹೆ ನೀಡಿದರು. ಇದೇ 31ರೊಳಗಾಗ ಎಲ್ಲ ಅರ್ಹರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಸೂಚನೆ ನೀಡಿದರು.
ವಿಮಾ ನೋಂದಣಿ: ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆ(ಪಿಎಂಜೆಜೆಬಿವೈ) ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ(ಪಿಎಂ.ಎಸ್‍ಬಿವೈ) ಹಾಗೂ ಅಟಲ್ ಪೆನಷನ್ ಯೋಜನೆ(ಎಪಿವೈ) ಯೋಜನೆ ಬಗ್ಗೆ ಇಲಾಖೆಯ ಕೆಳಕಂಡಂತಹ ಸಿಬ್ಬಂದಿಗಳಿಗೆ ಅರಿವು ಮೂಡಿಸಿ ನೋಂದಾಯಿಸಿಕೊಳ್ಳಿ. ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ. ಈ ಮೂರು ವಿಮಾ ವ್ಯಾಪ್ತಿ ಹೆಚ್ಚಿಸಿ ಎಂದು ಸೂಚನೆ ನೀಡಿದರು.
ಬ್ಯಾಂಕ್ ಶಾಖೆ ಆರಂಭಿಸಿ: ರಾಷ್ಟ್ರೀಕೃತ ಬ್ಯಾಂಕ್‍ಗಳು ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಬೇಕು. ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್‍ಗಳಿಗೆ ಕನಿಷ್ಠ ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಶಾಖೆಗಳ ಆರಂಭಿಸಲು ಗುರಿ ನಿಗದಿಪಡಿಸಲಾಗಿತ್ತು. ಪ್ರಮುಖ ಬ್ಯಾಂಕುಗಳು ಈವರೆಗೆ ಶಾಖೆ ತೆರೆದಿಲ್ಲ. ಆದರೆ ಇತರೆ ಬ್ಯಾಂಕ್‍ಗಳು 11 ಶಾಖೆಗಳನ್ನು ತೆರೆದಿರುವುದು ಅಭಿನಂದಿಸುವೆ. ಪ್ರಮುಖ ಬ್ಯಾಂಕ್‍ಗಳಿಗೆ ಗುರಿ ನಿಗದಿಪಡಿಸಿದರೂ ಶಾಖೆ ಆರಂಭಿಸದೇ ಇರುವ ಬಗ್ಗೆ ಇವರಿಗೆ ಪತ್ರ ಬರೆದು ವಿವರ ಕೇಳಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಬ್ಯಾಂಕ್ ಆಫ್ ಬರೋಡಾ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ರವಿ ಹೆಚ್.ಜಿ. ಅವರು ಮಾತನಾಡಿ, ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ಅಲ್ಪಸಂಖ್ಯಾತರಿಗೆ ರೂ.707.63 ಕೋಟಿ, ದುರ್ಬಲ ವರ್ಗದವರಿಗೆ ರೂ.5684.45 ಕೋಟಿ ಹಾಗೂ ಮಹಿಳೆಯರಿಗೆ ರೂ.2402.60 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪಿಎಂ.ಜೆಡಿವೈ ಯೋಜನೆಯಡಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದೆ. ಈಗಾಗಲೇ ಶೇ.67ರಷ್ಟು ಖಾತೆದಾರರಿಗೆ ರೂಪೇ ಎಟಿಎಂ ಕಂ ಡೆಬಿಟ್ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 1,83,097 ನೋಂದಣಿಗಳಾಗಿವೆ. ಪ್ರಸಕ್ತ ಸಾಲಿನಲ್ಲಿ ಸಾಲ ಯೋಜನೆಯನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿವಿಧ ಇಲಾಖೆಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಮುಖ್ಯವಾಗಿದೆ ಎಂದರು.
ಕೋಟ್: ಇದೇ ಸಂದರ್ಭದಲ್ಲಿ “ನಬಾರ್ಡ ಬ್ಯಾಂಕಿನಿಂದ (ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್)24-25ನೇ ಸಾಲಿನ ಸಂಭವ್ಯ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್ ಅವರು ಬಿಡುಗಡೆಮಾಡಿದರು. 2024-25ನೇ ಸಾಲಿನಲ್ಲಿ ಬೆಳೆ ಉತ್ಪಾನದೆ, ನಿರ್ವಹಣೆ ಮತ್ತು ಮಾರುಕಟ್ಟೆ ಸಂಬಂಧಿಸಿದ ಚಟುವಟಿಕೆಗಳ ಟರ್ಮಲೋನ್, ಕೃಷಿ ಮೂಲ ಸೌಕರ್ಯ, ಕೃಷಿ ಪೂರಕ ಚಟುವಟಿಕೆಗಳು, ಸೂಕ್ಷ್ಮ, ಸಣ್ಣ ಹಾಗೂ ಮದ್ಯಮ ಉದ್ಯಮಗಳಿಗೆ ಕ್ರೆಡಿಟ್ ಸಾಲ, ಶಿಕ್ಷಣ, ವಸತಿ, ಸಾಮಾಜಿಕ ಮೂಲ ಸೌಕರ್ಯಗಳು, ಇತರ ನವೀಕರಸಬಹುದಾದ ಶಕ್ತಿ ಉತ್ಪಾದನಾ ಚಟುವಟಿಕೆ, ಇತರೆ ಆದ್ಯತೆ ವಲಯಗಳು ಒಳಗೊಂಡಂತೆ ವಿವಿಧ ಎಂಟು ಕ್ಷೇತ್ರಗಳಿಗೆ ರೂ.632727 -00 ಲಕ್ಷ ಮೊತ್ತದ ಸಾಲ ನೀಡಿಕೆಗೆ ಪ್ರಸ್ತಾವಿಸಲಾಗಿದೆ.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಅಣ್ಣಯ್ಯ ಅವರು ವಿಷಯಗಳನ್ನು ಮಂಡಿಸಿದರು. ಬೆಂಗಳೂರು ಆರ್.ಬಿ.ಐ. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಇಳಾಸಾಹು, ಕೆ.ವಿ.ಜಿ.ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಟಿ.ವಿ.ಭಾಗವತ್, ನಬಾರ್ಡ್ ಬ್ಯಾಂಕ್ ಅಧಿಕಾರಿ ರಂಗನಾಥ್, ಜಿಲ್ಲಾ ಪಂಚಾಯತ್ ಪಿಡಿಒ ಕೊರವರ ಅವರು ವಿವಿಧ ವಿಷಯಗಳ ಕುರಿತಂತೆ ಬ್ಯಾಂಕರ್ಸ್ ಹಾಗೂ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡರು. ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments