ದಾವಣಗೆರೆ ಅ.15: ಪರಿಶ್ರಮದಿಂದ ದುಡಿಯುವ ವ್ಯಕ್ತಿಗೆ ಪ್ರತಿಫಲ ಇದ್ದೇ ಇರುತ್ತದೆ, ಅದರಿಂದ ಬದುಕಿನಲ್ಲಿ ಸಾರ್ಥಕತೆಯನ್ನು ಕಾಣಬಹುದು, ಅಂತೆಯೇ ಮಂಜುನಾಥರವರು ಶ್ರಮದ ಹಾದಿಯಲ್ಲಿ ಯಶಸ್ಸಿನ ಗುರಿ ತಲುಪಿ, ಸಂತೃಪ್ತಿಯ ಜೀವನ ಕಡ್ಡಿದ್ದಾರೆ ಎಂದು, ಹಿರಿಯ ಪತ್ರಕರ್ತ ಹಾಗೂ ರಂಗಕರ್ಮಿ ಬಸವರಾಜ ಐರಣಿಯವರು ತಿಳಿಸಿದರು.
ಅವರಿಂದು ನಗರದ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಛೇರಿಯಲ್ಲಿ, ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ, “ಜನತಾವಾಣಿ” ಪತ್ರಿಕೆಯ ಉಪಸಂಪಾದಕ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ, ಇ. ಎಂ.ಮಂಜುನಾಥರವರಿಗೆ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಾತನಾಡಿದರು.
ಪತ್ರಿಕಾ ವಿತರಕ, ಅಚ್ಚು ಮೊಳೆ ಜೋಡಣೆಗಾರ, ವರದಿಗಾರರಾಗಿ, ಪತ್ರಿಕಾ ರಂಗದಲ್ಲಿ ನಿಷ್ಠೆಯ ಸೇವೆ ಗೈಯ್ಯುತ್ತಾ, ಹಂತ ಹಂತವಾಗಿ ಬೆಳೆದು, “ಜನತಾವಾಣಿ ಪತ್ರಿಕೆಯ ಉಪಸಂಪಾದಕರಾಗಿ, ಅಕ್ಷರ ಸೇವೆ ಸಲ್ಲಿಸುತ್ತ ಬಂದಿರುವ ಇ. ಎಂ.ಮಂಜುನಾಥರವರು ಎಲ್ಲ ವರ್ಗದ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಈಶ್ವರಿ ವಿಶ್ವವಿದ್ಯಾಲಯದ ಧ್ಯಾನ ಮಂದಿರದಲ್ಲಿ ಆಧ್ಯಾತ್ಮದ ಜ್ಞಾನ ಪಡೆದ ಅವರಿಗೆ ಉನ್ನತ ಅವಕಾಶಗಳು ಅರಸಿಬಂದಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷರಾದ ಎನ್.ಎಸ್. ರಾಜು ಅವರು ಮಾತನಾಡಿ, ಶಿಸ್ತು, ದಕ್ಷತೆಯಿಂದ ಕಾರ್ಯನಿರ್ವಹಿಸುತ್ತ ಬಂದ ಮಂಜುನಾಥ ಅವರು, ಪತ್ರಿಕಾರಂಗದಲ್ಲಿ ಪ್ರತಿಭಾವಂತರಾಗಿ ಬೆಳೆದು ಹೆಸರಾಗಿದ್ದಾರೆ, ಸರಳ ನಡೆ ನುಡಿಯಿಂದಲೇ ಶ್ರೇಷ್ಠತೆಯನ್ನು ಕಂಡಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಸೇವಾ ಭಾಗ್ಯಗಳು ದೊರೆಯಲೆಂದು ಆಶಿಸಿದರು. ಎಸ್. ಸಿದ್ದೇಶ್ ಕುರ್ಕಿ ಅವರು ಮಾತನಾಡಿ, ಹಸನ್ಮುಖಿ ಗಳಾದ ಮಂಜುನಾಥ ಕಾಯಕ ನಿಷ್ಠೆಯಿಂದ ಎಲ್ಲರ ಅಭಿಮಾನಕ್ಕೂ ಪಾತ್ರರಾಗಿ, ಉನ್ನತ ಅವಕಾಶಗಳನ್ನು ಪಡೆದಿದ್ದಾರೆಂದು ಹೇಳಿದರು.
ಸನ್ಮಾನಕ್ಕುತ್ತರವಾಗಿ ಇ. ಎಂ. ಮಂಜುನಾಥರವರು ಮಾತನಾಡಿ, ಪತ್ರಿಕಾ ರಂಗದಲ್ಲಿ ವೇತನ ನೋಡದೆ ಕಾಯಕ ಮಾಡಿದೆ, ಹೆಚ್. ಎನ್. ಎಸ್. ರವರ ಮಾರ್ಗದರ್ಶನದಲ್ಲಿ ಬೆಳೆದು, ನಿಮ್ಮೆಲ್ಲರ ಹಾರೈಕೆ, ಅಭಿಮಾನದಿಂದ ನಿರೀಕ್ಷಿಸಲಾಗದ ಉತ್ತಮ ಅವಕಾಶಗಳನ್ನು ಪಡೆದಿದ್ದೇನೆ ಎಂದು ಮನದಾಳದ ಮಾತುಗಳನ್ನಾಡಿದರು. ಹೆಚ್. ನಾಗರಾಜ ಸ್ವಾಗತಿಸಿ, ವಂದಿಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.