Saturday, December 21, 2024
Homeದೇಶಭಾವಚಿತ್ರವಿರುವ ಕರಡು ಮತದಾರರ ಪಟ್ಟಿ ಪ್ರಕಟ, ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ನವೆಂಬರ್ 28...

ಭಾವಚಿತ್ರವಿರುವ ಕರಡು ಮತದಾರರ ಪಟ್ಟಿ ಪ್ರಕಟ, ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ನವೆಂಬರ್ 28 ರ ವರೆಗೆ ಅವಕಾಶ; ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್


ದಾವಣಗೆರೆ,ಅಕ್ಟೋಬರ್.29:ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಭಾವಚಿತ್ರವಿರುವ ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್ 29 ರಂದು ಪ್ರಕಟಿಸಲಾಗಿದ್ದು ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 28 ರವರೆಗೆ ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.
 ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು ಇದಕ್ಕಾಗಿ ಅಕ್ಟೋಬರ್ 29 ರಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದಾಗಿದೆ.
ಮತದಾರರು ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ಪಟ್ಟಿಯಿಂದ ಕೈಬಿಡುವುದು ಸೇರಿದಂತೆ ಯಾವುದೇ ತಿದ್ದುಪಡಿಗಳಿದ್ದಲ್ಲಿ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗೆ, ತಾಲ್ಲೂಕು ಕಚೇರಿಗೆ, ಉಪವಿಭಾಗಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ದಾವಣಗೆರೆ ನಗರದಲ್ಲಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಬೇಕು. ಆಕ್ಷೇಪಣೆ, ಸೇರ್ಪಡೆ, ತಿದ್ದುಪಡಿಗಳನ್ನು ಬರುವ ನವೆಂಬರ್ 28 ರ ವರೆಗೆ ಸ್ವೀಕರಿಸಲಾಗುತ್ತದೆ. ನಿಗಧಿತ ನಮೂನೆಯಲ್ಲಿ ಸಲ್ಲಿಸಬಹುದಾಗಿದೆ ಎಂದರು ತಿಳಿಸಿದರು.
 ಈ ಅವಧಿಯಲ್ಲಿ ಬರುವ ರಜಾ ದಿನಗಳಾದ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಪರಿಷ್ಕರಣೆಯ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. 2025 ರ ಜನವರಿ 1 ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಸಹ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಬಹುದಾಗಿದೆ. ಎಲ್ಲಾ ಆಕ್ಷೇಪಣೆಗಳನ್ನು ಡಿಸೆಂಬರ್ 24 ರೊಳಗಾಗಿ ಇತ್ಯರ್ಥ ಮಾಡಿ 2025 ರ ಜನವರಿ 6 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಕಾರ್ಯಕರ್ತರ ಮೂಲಕ, ಮತಗಟ್ಟೆ ಮಟ್ಟದ ಏಜೆಂಟರ ಮೂಲಕ ಸಾರ್ವಜನಿಕರಿಗೆ ತಿಳಿಸಲು ಮನವಿ ಮಾಡಿದರು.
 ಪ್ರಸ್ತುತ ಜಿಲ್ಲೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ 1693 ಮತಗಟ್ಟೆಗಳು, 1693 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು 168 ಮೇಲ್ವಿಚಾರಕರಿದ್ದಾರೆ. ಕರಡು ಮತದಾರರ ಪಟ್ಟಿಯನ್ವಯ 743476 ಪುರುಷ, 751161 ಮಹಿಳಾ, 116 ಇತರೆ ಸೇರಿ 1494753 ಮತದಾರರಿದ್ದಾರೆ.
ಮತದಾರರ ಹೊಸದಾಗಿ ಸೇರ್ಪಡೆಗೆ ನಮೂನೆ-6, ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ನಾಗರೀಕರು ನಮೂನೆ-6ಎ, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ, ಇತರೆ 11 ದಾಖಲೆಗಳ ಜೋಡಣೆಗೆ ನಮೂನೆ-6ಬಿ, ಹೆಸರು ತೆಗೆದು ಹಾಕಲು ನಮೂನೆ-7, ತಿದ್ದುಪಡಿ ಸ್ಥಳಾಂತರ ಮಾಡಲು ನಮೂನೆ-8 ರಲ್ಲಿ ಸಲ್ಲಿಸಬೇಕು. ಅರ್ಜಿಗಳನ್ನು ಆನ್‍ಲೈನ್‍ನಲ್ಲಿಯು ಸಲ್ಲಿಸಬಹುದಾಗಿದ್ದು   www.nsvp.in        ಹಾಗೂ ವೋಟರ್ ಹೆಲ್ಪ್ ಲೈನ್ ಆಪ್ ಹಾಗೂ  ceo.karnataka.gov.in  ವೆಬ್‍ಸೈಟ್ ಮೂಲಕ ಸಲ್ಲಿಸಬಹುದಾಗಿದೆ ಎಂದರು.
 ಈ ವೇಳೆ ಚುನಾವಣಾ ತಹಶೀಲ್ದಾರ್ ಕವಿರಾಜ್ ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments