”ನಾಲಿಗೆಗೆ ಮೂಳೆ ಇಲ್ಲದಿದ್ದರೂ, ಅದು ಮೂಳೆಯನ್ನು ಮುರಿಯುವ ಶಕ್ತಿ ಹೊಂದಿದೆ” ಎಂಬ ಮಾತಿದೆ. ಮನುಷ್ಯನ ವ್ಯಕ್ತಿತ್ವವನ್ನು ಅಳೆಯುವ ಅತ್ಯಂತ ಪ್ರಬಲ ಸಾಧನವೆಂದರೆ ಅದು ಅವನ ಮಾತು. ಜೀವನದಲ್ಲಿ ಒಬ್ಬ ವ್ಯಕ್ತಿ ಎಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಅಥವಾ ಎಷ್ಟು ಬೇಗ ಪತನ ಹೊಂದುತ್ತಾನೆ ಎಂಬುದು ಆತನ ನಾಲಿಗೆಯ ನಡವಳಿಕೆಯ ಮೇಲೆ ಅವಲಂಬಿತವಾಗಿರುತ್ತದೆ.
ಮಾತು ಮತ್ತು ಸಂಬಂಧಗಳು
ನಮ್ಮ ಮಾತುಗಳು ಕೇವಲ ಶಬ್ದಗಳಲ್ಲ, ಅವು ನಮ್ಮ ಸಂಸ್ಕಾರದ ಪ್ರತಿಬಿಂಬ. ಸಿಹಿಯಾದ ಮಾತು ಕಹಿಯಾದ ಮನಸ್ಸುಗಳನ್ನು ಒಂದುಗೂಡಿಸುತ್ತದೆ. ಮನೆಯಿರಲಿ ಅಥವಾ ಆಫೀಸ್ ಇರಲಿ, ಹಿರಿಯರಿರಲಿ, ಕಿರಿಯರಿರಲಿ ನಾವು ಬಳಸುವ ಪದಗಳು ಇತರರ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಒಮ್ಮೆ ಆಡಿದ ಮಾತು ಬಿಟ್ಟ ಬಾಣದಂತೆ; ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಹೀಗಾಗಿ, ಆಡುವ ಮೊದಲು ಆಲೋಚಿಸುವುದು ಅತ್ಯಗತ್ಯ. ಮೃದುವಾದ ನಡವಳಿಕೆ ಮತ್ತು ಸೌಮ್ಯವಾದ ಮಾತು ಸಂಬಂಧಗಳನ್ನು ಗಟ್ಟಿಗೊಳಿಸಿದರೆ, ಕಠೋರವಾದ ಮಾತುಗಳು ಆಪ್ತರನ್ನೂ ಶತ್ರುಗಳನ್ನಾಗಿ ಮಾಡಬಲ್ಲವು.
ನಾವು ನೂರಕ್ಕೆ ನೂರರಷ್ಟು ಸತ್ಯ ಹೇಳದೇ ಇದ್ದರೂ ಪರವಾಗಿಲ್ಲ ಆದರೆ ನಾಲಿಗೆ ಯಾವಾಗಲೂ ಸತ್ಯಕ್ಕೆ ಹತ್ತಿರವಾಗಿರಬೇಕು. ಸುಳ್ಳು ತಾತ್ಕಾಲಿಕ ಜಯ ತಂದರೂ, ದೀರ್ಘಕಾಲದ ಗೌರವವನ್ನು ಕಸಿದುಕೊಳ್ಳುತ್ತದೆ. ಆದೇರೀತಿ ಮೌನ ಎಲ್ಲೆಡೆ ಮಾತನಾಡುವುದಕ್ಕಿಂತ, ಎಲ್ಲಿ ಮೌನವಾಗಿರಬೇಕು ಎಂದು ತಿಳಿಯುವುದು ದೊಡ್ಡ ಗುಣ. “ಮಾತು ಬೆಳ್ಳಿ, ಮೌನ ಬಂಗಾರ” ಎಂಬಂತೆ ಅತಿಯಾದ ಮಾತು ಅನರ್ಥಕ್ಕೆ ದಾರಿ ಮಾಡಿಕೊಡುತ್ತದೆ. ಹಾಗೂ ಸಂಯಮದಿಂದ ಕೋಪ ಬಂದಾಗ ನಾಲಿಗೆಯ ಮೇಲೆ ಹತೋಟಿ ಇರಲಿ. ಅಚಾತುರ್ಯದಿಂದ ಆಡಿದ ಮಾತು ಒಬ್ಬರ ಜೀವವನ್ನೇ ಬಲಿ ತೆಗೆದುಕೊಳ್ಳುಬಹುದು, ಒಬ್ಬರ ಬದುಕನ್ನು ಕಸಿದುಕೊಳ್ಳಬಹುದು, ಭಾವನ್ನೆಗಳನ್ನೆ, ನಿಮ್ಮ ಮೇಲಿನ ನಂಬಿಕೆಯನ್ನೆ ಹುಸಿಗೊಳಿಸಿಬಹುದು, ಆಚಾರವಿಲ್ಲದ ನಾಲಿಗೆ ನೀಚ ಬುದ್ಧಿಯ ಬಿಟ್ಟಿತೆ ಎಂಬ ಸರ್ವಾಕಾಲಿಕ ಸತ್ಯ ಇಂದಿಗೂ ಸಹ. ಇದು ಜೀವಮಾನವಿಡೀ ಪಶ್ಚಾತ್ತಾಪ ಪಡುವಂತೆ ಮಾಡಬಹುದು.
ನಾಲಿಗೆಯನ್ನು ಗೆದ್ದವನು ಜಗತ್ತನ್ನೇ ಗೆಲ್ಲಬಲ್ಲ. ನಮ್ಮ ನಾಲಿಗೆಯ ನಡವಳಿಕೆ ಇತರರಿಗೆ ನೋವು ನೀಡುವಂತಿರದೆ, ಸಾಂತ್ವನ ನೀಡುವಂತಿರಬೇಕು.
ಅಹಂಕಾರದ ಮಾತುಗಳಿಗಿಂತ ವಿನಯದ ನುಡಿಗಳು ಹೆಚ್ಚು ಪ್ರಭಾವಶಾಲಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಬದುಕಿನ ಯಶಸ್ಸಿನ ಮಂತ್ರ ನಮ್ಮ ನಾಲಿಗೆಯಲ್ಲೇ ಅಡಗಿದೆ. ಸಂಸ್ಕಾರಯುತವಾದ ಮಾತು ನಮಗೆ ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆ.

