Homeಸಂಸ್ಕೃತಿಭಕ್ತಿಭಾವದಿಂದ ರಥವನ್ನು ಎಳೆಯುವ ಈ ಕ್ಷಣವು ಕೇವಲ ಉತ್ಸವವಲ್ಲ. ಬಸವತತ್ತ್ವದ ಕಡೆಗೆ ಸಾಗುವ ಆಧ್ಯಾತ್ಮಿಕ ಪಯಣದ...

ಭಕ್ತಿಭಾವದಿಂದ ರಥವನ್ನು ಎಳೆಯುವ ಈ ಕ್ಷಣವು ಕೇವಲ ಉತ್ಸವವಲ್ಲ. ಬಸವತತ್ತ್ವದ ಕಡೆಗೆ ಸಾಗುವ ಆಧ್ಯಾತ್ಮಿಕ ಪಯಣದ ಸಂಕೇತ

ದಾವಣಗೆರೆ : ಸಿದ್ಧರಾಮೇಶ್ವರರು ಕೇವಲ ಹಠಯೋಗಿ ಮತ್ತು ಪವಾಡಪುರುಷರಾಗಿ ಕಾಣದೆ, ಜ್ಞಾನ-ಶಿವಯೋಗ-ಭಕ್ತಿಗಳ ತ್ರಿವೇಣಿ ಸಂಗಮವಾಗಿ ಮೂಡಿಬರುತ್ತಾರೆ. ಅಲ್ಲಮರ ಮಾರ್ಗದರ್ಶನ, ಬಸವಣ್ಣನವರ ವಾತ್ಸಲ್ಯ, ಚನ್ನಬಸವಣ್ಣನವರ ದೀಕ್ಷೆ, ಅಕ್ಕಮಹಾದೇವಿಯ ಗೌರವಕ್ಕೆ ಮತ್ತು ಶಿವಶರಣರ ಮನ್ನಣೆಗೆ ಪಾತ್ರರಾದ  ಕಾರಣ ಶೂನ್ಯಪೀಠದ ಮೂರನೇ ಪೀಠಾಧ್ಯಕ್ಷರಾಗುತ್ತಾರೆ ಸಿದ್ಧರಾಮರು. ತಮ್ಮ ಕರ್ಮಯೋಗದ ಮೂಲಕ ಶರಣ ಚಳವಳಿಗೆ ವಿಶಿಷ್ಟ ತೇಜಸ್ಸನ್ನು ನೀಡಿದ ಮಹಾಯೋಗಿಯಾಗಿದ್ದಾರೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಜರುಗಿದ ಸಿದ್ಧರಾಮೇಶ್ವರ ದೇವರ 64ನೇ ರಥೋತ್ಸವ ಹಾಗೂ ಲಿಂಗೈಕ್ಯ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮೀಜಿರವರವ 24ನೇ ಸಂಸ್ಮರಣೋತ್ಸವ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು, ಬಸವಣ್ಣನವರು ಸಿದ್ಧರಾಮರ ಅಪಾರ ಲೋಕಸೇವೆ ಹಾಗೂ ಸಾಧನೆಯನ್ನು ಅತ್ಯಂತ ಗೌರವದಿಂದ ಕಂಡವರು. ಸಿದ್ಧರಾಮರ ಕಾಯಕ ನಿಷ್ಠೆ ಮತ್ತು ಶಿವಭಕ್ತಿಯನ್ನು ಬಸವಣ್ಣನವರು ತಮ್ಮ ವಚನದಲ್ಲಿ ಸಿದ್ಧರಾಮಯ್ಯನವರೆಂಬ ಪ್ರಾಣಲಿಂಗಿ, ಸಿದ್ಧರಾಮಯ್ಯನವರೆಂಬ ಶೂನ್ಯಲಿಂಗಿ, ಸಿದ್ಧರಾಮಯ್ಯನವರೆಂಬ ಸ್ವಯಂಲಿಂಗಿ, ಸಿದ್ಧರಾಮಯ್ಯನವರೆಂಬ ನಿರಂಗಿ.. ಪ್ರಸ್ತುತ ಪಡಿಸುತ್ತ ಸಿದ್ಧರಾಮರ ಶರೀರ ಮತ್ತು ಆತ್ಮ ಎರಡೂ ಲಿಂಗಮಯವಾಗಿದ್ದು, ಅವರು ನಿರಹಂಕಾರಿ ಯೋಗಿ ಎಂಬುದನ್ನು ಬಸವಣ್ಣನವರು ಇಲ್ಲಿ ಸ್ಪಷ್ಟಪಡಿಸುತ್ತಾರೆ. ಸಿದ್ಧರಾಮಣ್ಣನವರ ಕಂಡೆ, ಎನ್ನ ಕಂಗಳ ಕಾಡಿಗೆ ಹರಿಯಿತ್ತಯ್ಯ. ಸಿದ್ಧರಾಮಣ್ಣನವರ ಸನ್ನಿಧಿಯಲ್ಲಿ ಎನ್ನ ಮನ ನೆಲೆಗೊಂಡು ಬದುಕಿದೆನಯ್ಯ. ಸಿದ್ಧರಾಮರ ದರ್ಶನದಿಂದ ತಮ್ಮ ಅಜ್ಞಾನದ ಕತ್ತಲೆ ದೂರವಾಯಿತು ಎಂದು ಅಕ್ಕಮಹಾದೇವಿ ತಮ್ಮ ವಚನದ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ವಿಶ್ಲೇಷಿಸಿದರು.

ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಡಾ ಶಾಂತವೀರ ಸ್ವಾಮೀಜಿ ಮಾತನಾಡಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಪ್ರಮುಖ ಶರಣ, ಮಹಾ ತಪಸ್ವಿ ಸಿದ್ಧರಾಮೇಶ್ವರರು ತಮ್ಮ ಕಾಯಕ ನಿಷ್ಠೆ ಮತ್ತು ಜಾಗೃತಿ ಸಾಧನೆಯ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದ ಅಪರೂಪದ ಯೋಗಿಯಾಗಿದ್ದಾರೆ. ಆರಂಭದಲ್ಲಿ ಬಾಹ್ಯ ಸಮಾಜಸೇವೆ ಹಾಗೂ ಕೆರೆ-ಕಟ್ಟೆಗಳನ್ನು ನಿರ್ಮಿಸುವ ಕಾಯಕದಲ್ಲಿ ತೊಡಗಿದ್ದ ಸಿದ್ಧರಾಮರು, ಮುಂದೆ ಅನುಭವ ಮಂಟಪದ ಶರಣರ ಒಡನಾಟದಿಂದ ಆಂತರಿಕ ಜ್ಞಾನ ಮತ್ತು ಲಿಂಗಾಂಗ ಸಾಮರಸ್ಯದ ಜಾಗೃತಿ ಸಾಧನೆಯತ್ತ ಹೆಜ್ಜೆ ಇಟ್ಟರು.
ಲೋಕಕಲ್ಯಾಣವೇ ಉಸಿರಾಗಿಸಿಕೊಂಡ
ಸಿದ್ಧರಾಮೇಶ್ವರರ ವ್ಯಕ್ತಿತ್ವದ ಮುಖ್ಯ ಮೂಲಸ್ತಂಭ ಅವರ ಕಾಯಕ ನಿಷ್ಠೆ. ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳನ್ನು ನೀಗಿಸಲು ನೀರಾವರಿ, ಬಾವಿ, ಕೆರೆಗಳನ್ನು ತೋಡಿಸುವುದು ಮತ್ತು ಅನ್ನದಾಸೋಹ ನಡೆಸುವುದು ಶಿವನ ನಿಜವಾದ ಪೂಜೆ ಎಂದು ಅವರು ನಂಬಿದ್ದರು. ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಅಂಕಿತನಾಮದಲ್ಲಿ ವಚನ ಸಾಹಿತ್ಯ ರಚಿಸಿದ ಸಿದ್ಧರಾಮರು, ಪ್ರತಿಯೊಬ್ಬ ಸಾಧಕನೂ ಅಹಂಕಾರವನ್ನು ತೊರೆದು ಸಮಾಜಮುಖಿ ಕಾಯಕದಲ್ಲಿ ತೊಡಗಬೇಕೆಂದು ಕರೆ ನೀಡಿದ್ದರು.

ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ ಕಾಯಕ ವರ್ಗದ ಹಾಗೂ ಶೋಷಿತ ಸಮುದಾಯಗಳ ಆತ್ಮಗೌರವದ ಸಂಕೇತವಾಗಿ ಹೊರಹೊಮ್ಮಿದವರು ಸೊನ್ನಲಾಪುರದ ಶಿವಯೋಗಿ ಸಿದ್ಧರಾಮೇಶ್ವರರು. ಸಮಾಜದ ಕೆಳವರ್ಗದ ಜನರ ಕಣ್ಣೀರು ಒರೆಸುವುದು, ಶ್ರಮಿಕರ ಶ್ರಮಕ್ಕೆ ಗೌರವ ತಂದುಕೊಡುವುದು ಮತ್ತು ಅಸಮಾನತೆಯ ವಿರುದ್ಧ ನಿಲ್ಲುವುದನ್ನೇ ತಮ್ಮ ಜೀವನದ ಮುಖ್ಯ ಉದ್ದೇಶವಾಗಿಸಿಕೊಂಡಿದ್ದ ಸಿದ್ಧರಾಮರ ಬದುಕು ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ಶೋಷಿತರ ಬದುಕಿಗೆ ಭರವಸೆಯಾಗಿ, ಕಾಯಕ ಜೀವಿಗಳ ಅಸ್ಮಿತೆಯಾಗಿ ಬಾಳಿದ ಸಿದ್ಧರಾಮೇಶ್ವರರ ವಿಚಾರಗಳು ಇಂದಿನ ಆಧುನಿಕ ಯುಗದಲ್ಲೂ ಅತ್ಯಂತ ಪ್ರಸ್ತುತ. ಅವರ ಕಾಯಕ ನಿಷ್ಠೆ ಮತ್ತು ಸಮಾನತೆಯ ಸಂದೇಶವನ್ನು ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಪಂಚಮಸಾಲಿ ಜಗದ್ಗುರುಪೀಠದ ಜಗದ್ಗುರು ಶ್ರೀ ವಚನಾನಂದಸ್ವಾಮೀಜಿ ಮಾತನಾಡಿ ದಾವಣಗೆರೆಯಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿವರ್ಷ ನಡೆಯುವ ಸಿದ್ಧರಾಮೇಶ್ವರ ರಥೋತ್ಸವವು ಶರಣ ಸಂಸ್ಕೃತಿಯ ಪವಿತ್ರ ಪರಂಪರೆಯನ್ನು ಮುಂದುವರಿಸುವ ಮಹೋತ್ಸವವಾಗಿದೆ. ಸಾವಿರಾರು ಭಕ್ತರು ಭಕ್ತಿಭಾವದಿಂದ ರಥವನ್ನು ಎಳೆಯುವ ಈ ಕ್ಷಣವು ಕೇವಲ ಉತ್ಸವವಲ್ಲ. ಬಸವತತ್ತ್ವದ ಕಡೆಗೆ ಸಾಗುವ ಆಧ್ಯಾತ್ಮಿಕ ಪಯಣದ ಸಂಕೇತ. ಸಿದ್ಧರಾಮೇಶ್ವರರ ಕಾಯಕ, ದಾಸೋಹ ಮತ್ತು ಶಿವಯೋಗ ಸಂದೇಶವನ್ನು ಜನಮಾನಸದಲ್ಲಿ ಜೀವಂತವಾಗಿರಿಸುವ ಈ ರಥೋತ್ಸವವಾಗಿದೆ. ರಥ ಸಾಗಲಿ, ಭಕ್ತಿ ಬೆಳೆಯಲಿ, ಜ್ಞಾನ ಬೆಳಗಲಿ,ಬಸವತತ್ತ್ವ ನೆಲೆಸಲಿ ಎಂದು ಕರೆ ನೀಡಿದರು.

ಮಾದಾರ ಚನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮಿಗಳು ಮಾತನಾಡಿ ಶುಭ ಶ್ರಾವಣದ ಸಂದರ್ಭದಲ್ಲಿ ಕಾಯಕ ಯೋಗಿ ಶ್ರೀ ಸಿದ್ಧರಾಮೇಶ್ವರ ರಥೋತ್ಸವವು ಶ್ರಮಿಕವರ್ಗಕ್ಕೆ ಪರಿಶ್ರಮದ ಮಹತ್ವ ತಿಳಿಸುವ ಸಂದೇಶ ಹೊತ್ತು ಹೊರಟಿದೆ. ಹಲವು ಶರಣರು ತತ್ವ, ಸಂದೇಶಗಳನ್ನು ನುಡಿದರೆ ಸಿದ್ಧರಾಮೇಶ್ವರರು ಕಾಯಕ ಪ್ರಧಾನ ಸಮಾಜಕ್ಕೆ ಆದ್ಯತೆ ನೀಡಿದರು. ಇಂದು ಅದೆಷ್ಟೋ ಶ್ರಮಿಕ ವರ್ಗಗಳಿಗೆ ಶಿವಯೋಗಿ ಸಿದ್ಧರಾಮೇಶ್ವರರೇ ಪ್ರೇರಣೆ. ಅವರಿಂದ ಲೋಕೋದ್ಧಾರದ ಕಾರ್ಯಗಳು ನಡೆದಿದ್ದವು ಎನ್ನುವುದಕ್ಕೆ ನಾಡಿನಾದ್ಯಂತ  ಅವರು ನಿರ್ಮಿಸಿರುವ ಕೆರೆ ಕಟ್ಟೆಗಳು ಇಂದಿಗೂ ಸುಸ್ಥಿತಿಯಲ್ಲಿದ್ದು ಸಾಕ್ಷಿ ನುಡಿಯುತ್ತಿವೆ. ಇಂದಿನ ಕೃಷಿ ಕಾಯಕ ಚಟುವಟಿಕೆಗಳಿಗೆ ಜೀವ ಜಲವೇ ಮೂಲಾಧಾರ. ಅದಕ್ಕೆ ಪ್ರೇರಣೆ ಹನ್ನೆರಡನೇ ಶತಮಾನದ ಸಿದ್ಧರಾಮೇಶ್ವರರು. ಅಂತಹ ಮಹನೀಯರ ರಥೋತ್ಸವವನ್ನು ದಕ್ಷಿಣ ಭಾರತದ ದಾವಣಗೆರೆಯಲ್ಲಿ ನಡೆಸುವ ಮೂಲಕ ಇಂದಿನ ಪೀಠಾಧಿಪತಿಗಳಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳವರು ಅವರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ತುಗೆ ವ್ಯಕ್ತಪಡಿಸಿದರು. ಸಿದ್ಧರಾಮೇಶ್ವರರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಮುಂದೆ ಸಾಗೋಣ ಎಂದು ಕರೆ ನೀಡಿದರು.

ಚಿಕ್ಕಮಗಳೂರು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮಿಗಳವರು ಮಾತನಾಡಿ ವಿದ್ಯೆ ಮತ್ತು ವಿವೇಕಗಳು ಒಟ್ಟಾದಾಗ ಮಾತ್ರ ಮನುಷ್ಯನ ಅಭ್ಯುದಯ ಸಾಧ್ಯ ಎಂದು ಸಾರಿದವರು ಸಿದ್ಧರಾಮೇಶ್ವರರು. ವಿದ್ಯೆ ನಿರ್ದಿಷ್ಟ ಮಾಹಿತಿಯನ್ನು ನೀಡಿದರೆ ವಿವೇಕ ವಿದ್ಯೆಯನ್ನು ಬಳಸುವ ಪ್ರಜ್ಞಯನ್ನು ರೂಪಿಸುತ್ತದೆ. ಅಂತಹ ಪ್ರಜ್ಞೆ ಎಲ್ಲರದಾಗಬೇಕೆಂದು ಸಿದ್ಧರಾಮೇಶ್ವರರು ತಮ್ಮ ವಚನಗಳ ಮೂಲಕ ಪ್ರತಿಪಾದನೆ ಮಾಡಿದ್ದಾರೆ. ವಿದ್ಯಾ ನಗರವಾಗಿ ಬೆಳೆಯುತ್ತಿರುವ ದಾವಣಗೆರೆ ನಗರದಲ್ಲಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳವರ ನೇತೃತ್ವದಲ್ಲಿ ಪ್ರತೀವರ್ಷ ನಡೆಯುತ್ತಿರುವ ಸಿದ್ಧರಾಮೇಶ್ವರ ರಥೋತ್ಸವವು ಸರ್ವ ಜನಾಂಗದ ಉತ್ಸವವಾಗಿ ರೂಪುಗೊಂಡಿದೆ. ಒಂದು ಸಮುದಾಯದ ಗುರುಗಳು ಹೇಗೆ ಸಾಮರಸ್ಯದ ಹಾದಿಯಲ್ಲಿ ಸಾಗಬೇಕೆಂಬುದಕ್ಕೆ ಮಾದರಿ ಎನಿಸುವಂತಹ ರಥೋತ್ಸವವನ್ನು  ಶ್ರೀಗಳು ರೂಪಿಸಿದ್ದಾರೆ. ಸಂಘಟನೆ, ಸಾಮರಸ್ಯ, ಸಂಸ್ಕಾರಗಳ ತ್ರಿವೇಣಿ ಸಂಗಮವಾಗಿ ಈ ರಥೋತ್ಸವ ರೂಪುಗೊಂಡಿದೆ ಎಂದರು.

ಭಗೀರಥ ಗುರುಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ ಕಾಯಕಯೋಗಿ ಸಿದ್ದರಾಮೇಶ್ವರರ ಜನೋಪಯೋಗಿ ತತ್ವ-ಸಿದ್ಧಾಂತಗಳು ಹಾಗೂ ಲೋಕಕಲ್ಯಾಣದ ಹಾದಿ ಇಂದಿಗೂ ಜಗತ್ತಿಗೆ ಬೆಳಕಾಗಿದೆ. ಶೋಷಿತ ಬೋವಿ ಸಮುದಾಯದಲ್ಲಿ ಜನಿಸಿ, ಇಡೀ ಮಾನವಕುಲದ ಉದ್ದಾರಕ್ಕೆ ಶ್ರಮಿಸಿದ ಸಿದ್ದರಾಮೇಶ್ವರರ ಆದರ್ಶಗಳನ್ನು ಇಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಗುರುಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.
ದಾವಣಗೆರೆಯ ವೆಂಕಬೋವಿ ಕಾಲೋನಿಯಲ್ಲಿ ಜರುಗುವ ಶ್ರೀ ಸಿದ್ದರಾಮೇಶ್ವರ ದೇವರ ಉತ್ಸವವು ಕೇವಲ ಒಂದು ಧಾರ್ಮಿಕ ಆಚರಣೆಯಾಗಿುಳಿಯದೆ, ಸರ್ವ ಧರ್ಮದ ಸಂತರ, ಶರಣರ ತತ್ವಗಳನ್ನು ಸಾರುವ ಭಾವೈಕ್ಯತೆಯ ಸಂಗಮವಾಗಿದೆ. ಸಮಾಜದಲ್ಲಿ ಐಕ್ಯತೆ, ಪ್ರೀತಿ ಮತ್ತು ಕಾಯಕ ನಿಷ್ಠೆಯನ್ನು ಬಿತ್ತುವ ಮೂಲಕ ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನು ನಿರ್ಮಿಸುತ್ತಿರುವ ಈ ಮಹೋತ್ಸವವು ಸಮಸ್ತ ಸಮಾಜಕ್ಕೆ ಪ್ರೇರಣಾದಾಯಿ ಹಾಗೂ ಆದರ್ಶಪ್ರಾಯವಾಗಿದೆ. ಸಿದ್ದರಾಮೇಶ್ವರರ ಮತ್ತು ಪೂಜ್ಯ ಶ್ರೀಗಳ ಈ ದಿವ್ಯ ಹಾದಿಯಲ್ಲಿ ನಾವೆಲ್ಲರೂ ಸಾಗಿ ಸುಂದರ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸೋಣ ಎಂದರು.

ಮಡಿವಾಳ ಗುರುಪೀಠದ ಜಗದ್ಗುರು ಶ್ರೀ ಬಸವಮಾಚಿದೇವ ಸ್ವಾಮೀಜಿ ಮಾತನಾಡಿ ಬಾಹ್ಯ ಸಮಾಜಸೇವೆಯಲ್ಲಿದ್ದ ಸಿದ್ಧರಾಮರನ್ನು ಲಿಂಗಾಂಗ ಸಾಮರಸ್ಯದ ಸನ್ಮಾರ್ಗಕ್ಕೆ ತಂದು, ಕರಸ್ಥಲದಲ್ಲಿ ಇಷ್ಟಲಿಂಗವನ್ನಿತ್ತು ಶಿವಯೋಗಿಯಾಗಿಸಿದ ಕೀರ್ತಿ ಷಟ್ಸ್ಥಲ ಬ್ರಹ್ಮಿ ಚನ್ನಬಸವಣ್ಣನವರಿಗೆ ಸಲ್ಲುತ್ತದೆ.
ದೇವಾಲಯ ನಿರ್ಮಾಣ ಮಾಡುವುದು ಅಥವಾ ಸ್ಥಾವರ ಲಿಂಗಗಳನ್ನು ಪೂಜಿಸುವುದು ಮುಕ್ತಿಗೆ ದಾರಿಯಲ್ಲ, ಅದು ಸಾಧಕನ ಭ್ರಮೆ ಮತ್ತು ಅಜ್ಞಾನ. ನಿಜವಾದ ಸಾಧನೆ ಎಂದರೆ ಸ್ವಯಂ ದೇಹವನ್ನೇ ದೇವಾಲಯವನ್ನಾಗಿ ಮಾಡಿ, ಕರಸ್ಥಲದಲ್ಲಿ ಇಷ್ಟಲಿಂಗವನ್ನು ಧರಿಸುವುದು. ಚನ್ನಬಸವಣ್ಣನವರು ಸಿದ್ಧರಾಮರ ಭ್ರಮೆಯನ್ನು ನಿವಾರಿಸಿ, ಅವರನ್ನು ಲಿಂಗಾಂಗ ಸಾಮರಸ್ಯದ ನಿಜವಾದ ಕರ್ಮಯೋಗಿ ಇಂದ ಶಿವಯೋಗಿಯನ್ನಾಗಿ ಪರಿವರ್ತಿಸಿದರು ಎಂದು ತಿಳಿಸಿದರು.

ಕರ್ನಾಟಕ ಸರ್ಕಾರದ ಸಚಿವರಾದ ಶಾಮನೂರು ಮಲ್ಲಿಕಾರ್ಜುನ, ಕೆ ಎಸ್ ಬಸವಂತಪ್ಪ, ಶಾಸಕ ಶಾಮನೂರು ಸಮರ್ಥ, ಭಾಜಪ ಮುಖಂಡ ದಾಸಕರಿಯಪ್ಪ, ಅನಿತ್ ಸಿದ್ದೇಶ, ಬಿ ಜಿ ವಿನಯ ಕುಮಾರಮಾಜಿ ಶಾಸಕರಾದ ರೇಣುಕಾಚಾರ್ಯ, ರಾಮಚಂದ್ರಪ್ಪ, ಚಂದ್ರಶೇಖರ ಪೂಜಾರ, ಲೋಕಿಕೆರೆ ನಾಗರಾಜ, ಅಜಯಕುಮಾರ್, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷರಾದ ಡಿ ಬಸವರಾಜ, ಹೆಚ್ ಜಯಣ್ಣ, ಹೆಚ್ ಆನಂದಪ್ಪ, ವಕೀಲ ಗೋಪಾಲ, ಮಹಾನಗರ ಪಾಲಿಕೆಯ ಸದಸ್ಯ ಶಿವಾನಂದ, ನಾಗರಾಜ, ಶ್ರೀನಿವಾಸ, ಮಂಜುನಾಥ, ದಾವಣಗೆರೆ ವಿವಿಯ ಸಿಂಡಿಕೇಟ್ ಸದಸ್ಯರಾದ ದ್ಯಾಮಣ್ಣ, ನಿವೃತ್ತ ಅಭಿಯಂತರರಾದ ಓದೋ ಗಂಗಪ್ಪ, ರಮೇಶ, ಡಿ ಕೆ ತಿಮ್ಮೇಶ, ಕೆಇಬಿ ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ, ಅರ್ಜುನಪ್ಪ, ರಾಜಪ್ಪ, ದೊಡ್ಡರಾಮಣ್ಣ, ಕಾಳಗಟ್ಟ ಹನುಮಂತಪ್ಪ ಹಾಗೂ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಮುಖಂಡರು ಉಪಸ್ಥಿತಿಯಿದ್ದರು.

ಸಾಮಾಜಿಕ ಸಾಮರಸ್ಯ ಸಾರುತ್ತಿರುವ ನಾಡಿನ ಪ್ರಮುಖ ಹಿಂದುಳಿದ ಹಾಗೂ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಪೀಠಾಧ್ಯಕ್ಷರಾದ ಶಿವಶರಣ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನಿ ಹಡಪದ ಅಪ್ಪಣ್ಣ ಸ್ವಾಮೀಜಿ
ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ
ಶ್ರೀ ನಾರಾಯಣ ಗುರುಪೀಠ..ಶ್ರೀ ರೇಣುಕಾನಂದ ಸ್ವಾಮೀಜಿ, ಹೆಬ್ಬಾಳ ವಿರಕ್ತಮಠದ ರುದ್ರೇಶ್ವರ ಮಹಾಸ್ವಾಮಿಗಳು, ಅಂಬಿಗರ ಚೌಡಯ್ಯ ಗುರುಪೀಠದ ಶ್ರೀಶಾಂತ ಭೀಷ್ಮ ಸ್ವಾಮೀಜಿ, ಮುಪ್ಪಿನ ಸ್ವಾಮಿ ವಿರಕ್ತಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಮುರುಘರಾಜೇಂದ್ರ ಕಲ್ಮಠದ ಶ್ರೀ ನಿರಂಜನ ಸ್ವಾಮೀಜಿ, ಕಾಶಿ ಅನ್ನಪೂರ್ಣೆಶ್ವರಿ ಕ್ಷೇತ್ರದ ಬಸವ ಮಹಾಲಿಂಗ ಸ್ವಾಮೀಜಿ, ಗುರುಮಠಕಲ್ ಮುರುಘರಾಜೇಂದ್ರ ಖಾಸಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಮೇದಾರ ಗುರುಪೀಠದ ಕೇತೆಶ್ವರ ಸ್ವಾಮೀಜಿ, ಶಿವಶಕ್ತಿ ಮಠದ ಶ್ರೀ ಬಸವ ಪ್ರಸಾದ ಸ್ವಾಮೀಜಿ, ಶಿಕಾರಿಪುರ ಚನ್ನಬಸವ ಸ್ವಾಮೀಜಿ
ಐರಾಣಿ ಮನೆಮಠದ ಗಜದಂಡ ಸ್ವಾಮೀಜಿ, ಭಾವೈಕ್ಯ ಕೇಂದ್ರದ ಬಸವ ಲಿಂಗಮೂರ್ತಿ ಸ್ವಾಮೀಜಿ,  ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಸಿದ್ಧಾರೂಢ ಮಠದ ಶ್ರೀ ಜಯದೇವ ಸ್ವಾಮೀಜಿ

ಶ್ರೀ ಗುರುಬಸವೇಶ್ವರ ವಿರಕ್ತ ಮಠದ ಶ್ರೀ ಶಿವಾನಂದ ಸ್ವಾಮಿಗಳು, ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮಿಗಳು, ಮಠ ಗಂಗಾಪುರ
ಶ್ರೀಧರ ಸ್ವಾಮೀಜಿ, ಅಕ್ಕಿ ಮಠ
ಶ್ರೀ ಗುರುಲಿಂಗ ಸ್ವಾಮಿಗಳು, ಶ್ರೀ ಅಲ್ಲಮಪ್ರಭು ಮಠ, ಶ್ರೀ ತಿಪ್ಪೇರುದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ರಥೋತ್ಸವದ ಮೆರವಣಿಗೆ ವೆಂಕಭೋವಿ ಕಾಲೋನಿಯ ಸಿದ್ದರಾಮೇಶ್ವರ ಮಠದಿಂದ ಪ್ರಾರಂಭವಾಗಿ ಅರಳಿಮರ ವೃತ್ತ, ಗಣೇಶ ದೇವಸ್ಥಾನ, ಕೆ ಆರ್ ಮಾರ್ಕೆಟ್,ರಾಮ ಮಂದಿರ, ಗಡಿಯಾರ ಕಂಬ ವೃತ್ತ, ಬಕ್ಕೇಶ್ವರ ದೇವಸ್ಥಾನದ ಮೂಲಕ ಪುನಃ ಶ್ರೀಮಠ ತಲುಪಿತು. ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿತ್ತು. ನೂರಾರು ಮಹಿಳೆಯರು ಕುಂಭ ಕಳಸ ಹೊತ್ತು ಭಾಗವಹಿಸಿದ್ದರು.(ವರದಿ:ಸತೀಶ್ ಎಮ್ ವೈ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments