ದಾವಣಗೆರೆ: ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದ ಬಳಸಿದ್ದಾರೆ ಎಂಬ ಆರೋಪದ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸಚಿವರು ಕ್ಷಮೆ ಕೇಳದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿರುವುದಾಗಿ ವರದಿಯಾಗಿದೆ.
ವಿಜಯೇಂದ್ರ ಹೋರಾಟಕ್ಕೆ ಬಂದರೆ ತಾವೂ ಭಾಗವಹಿಸುವುದಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ಜಿಎಂಐಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದೇಶ್ವರ, ದಾವಣಗೆರೆಯಲ್ಲಿ ಬಿಜೆಪಿ ಭದ್ರವಾಗಿದ್ದು, ಪಕ್ಷದೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಎಂದು ಹೇಳಿದ್ದಾರೆ.
“ಎಲ್ಲಾ ಪಕ್ಷಗಳಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರುತ್ತವೆ. ನಮ್ಮಲ್ಲೂ ಇವೆ. ಕಾರ್ಯಕರ್ತರು ಬೇಸರಗೊಂಡಿಲ್ಲ. ನಾವೆಲ್ಲಾ ಚೆನ್ನಾಗಿದ್ದೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಧಿಕಾರ ಅಥವಾ ಸಚಿವ ಸ್ಥಾನ ಸಿಗದ ಸಂದರ್ಭದಲ್ಲಿ ನಾಯಕರಲ್ಲಿ ಬೇಸರ ಉಂಟಾಗುವುದು ಸಾಮಾನ್ಯವಾಗಿದ್ದು, ನವೆಂಬರ್ ವೇಳೆಗೆ ಪಕ್ಷದ ವಾತಾವರಣ ಸರಿಹೋಗಬಹುದು ಎಂಬ ವಿಶ್ವಾಸವನ್ನೂ ಸಿದ್ದೇಶ್ವರ ವ್ಯಕ್ತಪಡಿಸಿದ್ದಾರೆ.
“ನಾನು ಮೂಲತಃ ರೈತ. ನನ್ನನ್ನು ಊರಿನಿಂದ ಓಡಿಸಲು ಯಾರಿಂದಲೂ ಸಾಧ್ಯವಿಲ್ಲ. ಉಸಿರಿರುವವರೆಗೆ ಬಿಜೆಪಿಯಲ್ಲೇ ಉಳಿದು ಪಕ್ಷಕ್ಕಾಗಿ ಶ್ರಮಿಸುತ್ತೇನೆ” ಎಂದು ಮಾಜಿ ಕೇಂದ್ರ ರಾಜ್ಯಸಚಿವ ಜಿ.ಎಂ.ಶಿದ್ದೇಶ್ವರ್ ಪುನರುಚ್ಚರಿಸಿದ್ದಾರೆ.

