Homeಬರಹಡಿಜೆ ಮ್ಯೂಸಿಕ್‌ನಲ್ಲಿ ಹೆಚ್ಚಾಗಿ ಭಕ್ತಿಗೀತೆಗಳಿಗಿಂತ ಅಸಭ್ಯ ಅಥವಾ ಸಿನಿಮಾ ಹಾಡುಗಳನ್ನು ಬಳಸಲಾಗುತ್ತಿದ್ದು, ಇದು ಗಣೇಶ ಹಬ್ಬದ...

ಡಿಜೆ ಮ್ಯೂಸಿಕ್‌ನಲ್ಲಿ ಹೆಚ್ಚಾಗಿ ಭಕ್ತಿಗೀತೆಗಳಿಗಿಂತ ಅಸಭ್ಯ ಅಥವಾ ಸಿನಿಮಾ ಹಾಡುಗಳನ್ನು ಬಳಸಲಾಗುತ್ತಿದ್ದು, ಇದು ಗಣೇಶ ಹಬ್ಬದ ಪವಿತ್ರತೆ ಮತ್ತು ನಮ್ಮ ಮೂಲ ಸಾಂಸ್ಕೃತಿಕ ಹಿನ್ನೆಲೆಯನ್ನು ಹಾಳುಮಾಡುತ್ತಿದೆ

ದಾವಣಗೆರೆ:ಗಣೇಶನನ್ನು ಎಲ್ಲಾ ವಿಘ್ನಗಳನ್ನು (ತೊಂದರೆಗಳನ್ನು) ನಿವಾರಿಸುವ ದೇವರೆಂದು (ವಿಘ್ನಹರ್ತ) ಪೂಜಿಸಲಾಗುತ್ತದೆ. ಯಾವುದೇ ಹೊಸ ಕಾರ್ಯ, ಉದ್ಯಮ ಅಥವಾ ವಿದ್ಯಾಭ್ಯಾಸ ಆರಂಭಿಸುವ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ. ಹಿಂದಿನ ಕಾಲದಲ್ಲಿ ಗಣೇಶೋತ್ಸವವು ಕೇವಲ ಒಂದು ಧಾರ್ಮಿಕ ಹಬ್ಬವಾಗಿರದೆ, ಸಾಮಾಜಿಕ ಒಗ್ಗಟ್ಟು, ಸ್ವಾತಂತ್ರ್ಯ ಚಳುವಳಿ ಮತ್ತು ಸಾಂಸ್ಕೃತಿಕ ಜಾಗೃತಿಯ ಮಹಾನ್ ವೇದಿಕೆಯಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಅದರ ನಂತರದ ಆರಂಭಿಕ ದಿನಗಳಲ್ಲಿ ಗಣೇಶ ಹಬ್ಬಕ್ಕೆ ವಿಶೇಷವಾದ ಗೌರವ ಮತ್ತು ಪ್ರಾಮುಖ್ಯತೆ ಇತ್ತು.
ಇಂತಹ ಗಣೇಶನನ್ನು
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವವನ್ನು ಜನರಲ್ಲಿ ರಾಷ್ಟ್ರೀಯತೆ ಮತ್ತು ಒಗ್ಗಟ್ಟು ಮೂಡಿಸಲು ಪ್ರಮುಖ ಮಾಧ್ಯಮವಾಗಿ ಬಳಸಿದರು. ಈ ಹಬ್ಬವು ಹತ್ತು ದಿನಗಳ ಕಾಲ ಸಾರ್ವಜನಿಕವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತಿಗೀತೆಗಳು ಮತ್ತು ಸಾಮಾಜಿಕ ಕೂಡುವಿಕೆಗಳಿಗೆ ವೇದಿಕೆಯಾಗುತ್ತದೆ.ಕೇವಲ ಹಿಂದೂಗಳಷ್ಟೇ ಅಲ್ಲದೆ, ಬೇರೆ ಧರ್ಮದವರೂ ಕೂಡ ಹಬ್ಬದ ಸಿದ್ಧತೆಗಳಲ್ಲಿ ಮತ್ತು ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಭ್ರಾತೃತ್ವವನ್ನು ಬೆಳೆಸುತ್ತಿದ್ದರು.ಹಬ್ಬದ ದಿನಗಳಲ್ಲಿ ನಾಟಕಗಳು, ಹರಿಕಥೆ, ಕೀರ್ತನೆ, ಯಕ್ಷಗಾನ, ಭಜನೆ ಮತ್ತು ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಇದು ಪ್ರಾದೇಶಿಕ ಕಲೆ ಮತ್ತು ಕಲಾವಿದರಿಗೆ ದೊಡ್ಡ ಪ್ರೋತ್ಸಾಹ ನೀಡುತ್ತಿತ್ತು. ಹಿಂದಿನ ಕಾಲದ ಗಣೇಶೋತ್ಸವದಲ್ಲಿ ಆಡಂಬರಕ್ಕಿಂತ ಭಕ್ತಿ, ತೋರ್ಪಡಿಕೆಗಿಂತ ಒಗ್ಗಟ್ಟು, ಮತ್ತು ಧ್ವನಿವರ್ಧಕಗಳ ಗದ್ದಲಕ್ಕಿಂತ ಸಾಂಸ್ಕೃತಿಕ ಶ್ರೀಮಂತಿಕೆ ಎದ್ದು ಕಾಣುತ್ತಿತ್ತು. ಅದು ಜನರನ್ನು ಭಾವನಾತ್ಮಕವಾಗಿ ಮತ್ತು ರಾಷ್ಟ್ರೀಯವಾಗಿ ಬೆಸೆಯುವ ಶಕ್ತಿಯಾಗಿತ್ತು. ಆದರೇ ಇಂದು ಈ ತತ್ವಗಳಿಗೆಲ್ಲಾ ತಿಲಾಂಜಲಿ ಇಡುವ ಕಡೆಗೆ ಸಾಗುತಿದ್ದೇವೇ. ಎಲ್ಲಿ ಸಾಂಸ್ಕೃತಿಕ ಚೈತನ್ಯದ ಜಾಗೃತಿ ಆಗುತಿತ್ತೋ ಆ ಜಾಗವನ್ನ ಡಿಜೆ ಎಂಬ ರಕ್ಕಸ ಮತ್ತು ಧರ್ಮಾಂಧತೆ ಆವರಿಸಿಕೊಂಡಿದೆ.
ಡಿಜೆ (DJ) ಎಂದರೆ ಡಿಸ್ಕ್ ಜಾಕಿ (Disc Jockey) ಎಂದರ್ಥ. ಇದು ಮುಖ್ಯವಾಗಿ ಸಂಗೀತವನ್ನು ಪ್ರದರ್ಶಿಸುವ, ರೆಕಾರ್ಡ್ ಮಾಡಲಾದ ಸಂಗೀತವನ್ನು ಸಾರ್ವಜನಿಕರಿಗೆ ಪ್ಲೇ ಮಾಡುವ ಮತ್ತು ಮಿಕ್ಸ್ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
ವಿಭಿನ್ನ ಹಾಡುಗಳನ್ನು ಒಂದಕ್ಕೊಂದು ಸೇರಿಸಿ (ಮಿಕ್ಸಿಂಗ್), ಹೊಸ ಧ್ವನಿ ಪರಿಣಾಮಗಳನ್ನು ನೀಡಿ ಜನರನ್ನು ರಂಜಿಸುವ ವಿಧಾನ. ಇಲ್ಲಿ ಟರ್ನ್‌ಟೇಬಲ್ಸ್, ಮಿಕ್ಸರ್, ಹೆಡ್‌ಫೋನ್, ಲ್ಯಾಪ್‌ಟಾಪ್ ಮತ್ತು ಡಿಜೆ ಸಾಫ್ಟ್‌ವೇರ್‌ಗಳನ್ನ ಬಳಸಲಾಗುತ್ತದೆ.ಮದುವೆ ಸಮಾರಂಭಗಳು, ಪಾರ್ಟಿಗಳು, ನೈಟ್‌ಕ್ಲಬ್‌ಗಳು, ಮತ್ತು ಸಂಗೀತ ಉತ್ಸವಗಳಲ್ಲಿ ಮಾತ್ರ ಬಳಕೆಯಲ್ಲಿತ್ತು. ಆದರೇ
ಡಿ ಜೆ ಸಂಸ್ಕೃತಿ ಗಣೇಶೋತ್ಸವಕ್ಕೆ ಕಾಲಿಟ್ಟು ಹಲವು ವರ್ಷಗಳೇ ಕಳೆದಿವೆ. ಡಿಜೆ (DJ) ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆಚರಣೆಗಳ ನಡುವಿನ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿರುವ ಪ್ರಮುಖ ವಿಷಯವಾಗಿದೆ. ಗಣೇಶ ಹಬ್ಬವು ಮೂಲತಃ ಭಕ್ತಿ, ಸಾಂಸ್ಕೃತಿಕ ಸಾಮರಸ್ಯ ಮತ್ತು ಸಾಮೂಹಿಕ ಆಚರಣೆಯ ಪ್ರತೀಕವಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಮೆರವಣಿಗೆಗಳ ವೇಳೆ ಅತಿಯಾದ ಸೌಂಡ್ ಸಿಸ್ಟಮ್ ಹಾಗೂ ಡಿಜೆ ಬಳಕೆ ಹೆಚ್ಚಾಗುತ್ತಿರುವುದು ಹಲವು ಚರ್ಚೆಗಳನ್ನ ಹುಟ್ಟು ಹಾಕಿದೆ
ಹಬ್ಬಗಳಲ್ಲಿ ಯುವಜನರು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಲು ಡಿಜೆ ಹಾಡುಗಳು, ಲೇಸರ್ ಲೈಟ್‌ಗಳು ಮತ್ತು ಡ್ಯಾನ್ಸ್ ಸಹಕಾರಿಯಾಗುತ್ತವೆ ಎಂಬುದು ಸಂಘಟಕರ ವಾದ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಧಾರ್ಮಿಕ ಆಚರಣೆಗಳಿಗೂ ಆಧುನಿಕ ಮ್ಯೂಸಿಕ್ ಅಗತ್ಯ ಎಂದು ಕೆಲವರು ಭಾವಿಸುತ್ತಾರೆ. ಡಿಜೆ ಮ್ಯೂಸಿಕ್‌ನಲ್ಲಿ ಹೆಚ್ಚಾಗಿ ಭಕ್ತಿಗೀತೆಗಳಿಗಿಂತ ಅಸಭ್ಯ ಅಥವಾ ಸಿನಿಮಾ ಹಾಡುಗಳನ್ನು ಬಳಸಲಾಗುತ್ತಿದ್ದು, ಇದು ಗಣೇಶ ಹಬ್ಬದ ಪವಿತ್ರತೆ ಮತ್ತು ನಮ್ಮ ಮೂಲ ಸಾಂಸ್ಕೃತಿಕ ಹಿನ್ನೆಲೆಯನ್ನು ಹಾಳುಮಾಡುತ್ತಿದೆ ಎಂಬ ಕಳಕಳಿ ಸಾರ್ವಜನಿಕರಲ್ಲಿದೆ.ಡಿಜೆ ಸಿಸ್ಟಮ್‌ಗಳಿಂದ ಹೊರಹೊಮ್ಮುವ ಅತಿಯಾದ ಶಬ್ದ ಮಾಲಿನ್ಯ (Noise Pollution), ಗರ್ಭಿಣಿಯರು, ಹಿರಿಯ ನಾಗರಿಕರು, ಮಕ್ಕಳು ಮತ್ತು ಹೃದಯ ರೋಗಿಗಳಿಗೆ ತೀವ್ರ ತೊಂದರೆ ಉಂಟುಮಾಡುತ್ತದೆ. ಇದರ ಹಾವಳಿ ಹೆಚ್ಚಾಗಿ, ಹಿಂದೆಲ್ಲಾ ಮೆರವಣಿಗೆಯಲ್ಲಿ ಕಂಸಾಳೆ, ಡೊಳ್ಳು ಕುಣಿತ, ನಾಸಿಕ್ ಡೋಲ್, ಮತ್ತು ಭಜನಾ ಮಂಡಳಿಗಳಂತಹ ದೇಶಿ ಕಲೆಗಳಿಗೆ ಆದ್ಯತೆ ಇರುತ್ತಿತ್ತು. ಡಿಜೆ ಹಾವಳಿಯಿಂದಾಗಿ ನಮ್ಮ ಈ ಸಾಂಪ್ರದಾಯಿಕ ಕಲಾತಂಡಗಳ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ.ಸರ್ಕಾರದ ನಿಯಮಗಳು ಮತ್ತು ನ್ಯಾಯಾಲಯದ ಆದೇಶ ಹೆಚ್ಚುತ್ತಿರುವ ಶಬ್ದ ಮಾಲಿನ್ಯ ಮತ್ತು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಗಳು ಕಠಿಣ ಕ್ರಮ ಕೈಗೊಂಡಿವೆ. ಸುಪ್ರೀಂ ಕೋರ್ಟ್ ಮತ್ತು ಪರಿಸರ ನಿಯಮಗಳ ಅನ್ವಯ, ನಿಗದಿತ ಡೆಸಿಬಲ್ (Decibel) ಗಿಂತ ಹೆಚ್ಚಿನ ಶಬ್ದ ಹೊರಡಿಸುವ ಸೌಂಡ್ ಬಾಕ್ಸ್‌ಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಸಾಮಾನ್ಯವಾಗಿ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗುತ್ತಿದೆ. ಹಬ್ಬಗಳಲ್ಲಿ ಸ್ಥಳೀಯ ಕಲೆಗಳು ಮತ್ತು ವಾದ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ.ಆಚರಣೆಯ ಉತ್ಸಾಹದಲ್ಲಿ ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಗಣೇಶೋತ್ಸವದ ಭವ್ಯ ಪರಂಪರೆ, ಭಕ್ತಿ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಉಳಿಸಿಕೊಂಡು, ಮಿತಿಯಾದ ಶಬ್ದದೊಂದಿಗೆ ಹಬ್ಬ ಆಚರಿಸುವುದೇ ಡಿಜೆ ಸಂಸ್ಕೃತಿಯ ಅತಿಯಾದ ಹಾವಳಿಗೆ ಸೂಕ್ತ ಪರಿಹಾರವಾಗಿದೆ. ಹಾಗೂ ನಮ್ಮ ನೆಲದ ಕಲೆಗಳನ್ನ ಸಂಸ್ಕೃತಿಯನ್ನ ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಅಲ್ಲವೇ ಅಂತರಾತ್ಮನ ಸಖನೆ.(ಬರಹ:ಡಾಕ್ಟರ್, ಬಿ.ಲಿಂಗಣ್ಣಯ್ಯ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments