ವಿಜಯಪುರ:ಮೂರು ಸಾವಿರ ಎಕರೆ ವಿಶಾಲ ಪ್ರದೇಶ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸುಸಜ್ಜಿತ ಕೈಗಾರಿಕಾ ವಸಾಹತು, ಅಗತ್ಯ ಮೂಲಸೌಕರ್ಯಗಳಿದ್ದರೂ ದಶಕಗಳಿಂದ ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಕಾಯುತ್ತಿದ್ದ ವಿಜಯಪುರ ಜಿಲ್ಲೆಗೆ ಇದೀಗ ಹೊಸ ಭರವಸೆಯ ಬೆಳಕು ಮೂಡಿದೆ.
ಮುಳವಾಡ ಗ್ರಾಮದ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಅಭಿವೃದ್ಧಿಪಡಿಸಿರುವ ಬೃಹತ್ ಕೈಗಾರಿಕಾ ಪ್ರದೇಶದಲ್ಲಿ ಇದುವರೆಗೂ ನಿರೀಕ್ಷಿತ ಮಟ್ಟದ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿರಲಿಲ್ಲ. ಉದ್ಯಮಿಗಳ ಹೂಡಿಕೆಗೆ ಸೂಕ್ತವಾದ ಎಲ್ಲ ಅನುಕೂಲಗಳಿದ್ದರೂ ದೊಡ್ಡ ಕೈಗಾರಿಕೆಗಳು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದವು.
ಆದರೆ, 2023ರಲ್ಲಿ ಕೈಗಾರಿಕಾ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಮ್ಮ ಹೆಮ್ಮೆಯ ನಾಯಕ, ನೀರಾವರಿ ಹರಿಕಾರ ಶ್ರೀ ಎಂ.ಬಿ. ಪಾಟೀಲರು ವಿಜಯಪುರದ ಕೈಗಾರಿಕಾ ಭವಿಷ್ಯಕ್ಕೆ ಹೊಸ ದಿಕ್ಕು ತೋರಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಉದ್ಯಮಿಗಳನ್ನು ಭೇಟಿಯಾಗಿ, ವಿವಿಧ ದೇಶಗಳಿಗೆ ಭೇಟಿ ನೀಡಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಅವರ ಪ್ರಯತ್ನ ಮತ್ತು ಬದ್ಧತೆ ಅನನ್ಯ. ಅದರಲ್ಲೂ ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಬೆಂಗಳೂರಿನಾಚೆಗೂ ಕೈಗಾರಿಕೆಗಳನ್ನು ವಿಸ್ತರಿಸಿ, ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸಮಾನ ಕೈಗಾರಿಕಾ ಅವಕಾಶಗಳನ್ನು ಕಲ್ಪಿಸುವುದು ಅವರ ಮಹತ್ವದ ಕನಸು. ಮೂರು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಇದೀಗ ವಿಜಯಪುರದ ನೆಲದಲ್ಲಿ ಬೃಹತ್ ಕೈಗಾರಿಕೆಯೊಂದು ತಲೆ ಎತ್ತಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ ಪ್ರತಿಷ್ಠಿತ ಕ್ಯಾಂಪಾ ಕೋಲಾ ತಂಪು ಪಾನೀಯ ಉತ್ಪಾದನಾ ಘಟಕಕ್ಕೆ ನವೆಂಬರ್ 16, ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಭೂಮಿಪೂಜೆ ನೆರವೇರಲಿದೆ. ಸುಮಾರು ₹1,500 ಕೋಟಿ ಬಂಡವಾಳದ ಈ ಬೃಹತ್ ಯೋಜನೆ ವಿಜಯಪುರದ ಕೈಗಾರಿಕಾ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.
ಇದು ಕೇವಲ ಒಂದು ಕಾರ್ಖಾನೆಯ ಸ್ಥಾಪನೆಯಲ್ಲ. ಸಾವಿರಾರು ದುಡಿಯುವ ಕೈಗಳಿಗೆ ಉದ್ಯೋಗದ ಭರವಸೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೊಸ ಅವಕಾಶ. ಸಾರಿಗೆ, ಪ್ಯಾಕೇಜಿಂಗ್, ಪೂರೈಕೆ, ಸೇವಾ ವಲಯ ಸೇರಿದಂತೆ ಅನೇಕ ಪೂರಕ ಉದ್ಯಮಗಳ ಬೆಳವಣಿಗೆಗೆ ಮುನ್ನುಡಿ.
ಇದು ವಿಜಯಪುರದ ಕೈಗಾರಿಕಾ ಕ್ರಾಂತಿಯ ಆರಂಭ.
ಪಂಚನದಿಗಳ ಬೀಡು, ದಕ್ಷಿಣದ ಪಂಜಾಬ್ ಎಂದೇ ಹೆಸರಾದ ವಿಜಯಪುರ ನೀರಾವರಿ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯ ನಂತರ ಇದೀಗ ಕೈಗಾರಿಕಾ ಕ್ಷೇತ್ರದಲ್ಲಿಯೂ ಹೊಸ ಇತಿಹಾಸ ನಿರ್ಮಿಸುವತ್ತ ಹೆಜ್ಜೆ ಇಡುತ್ತಿದೆ. ಮಹಾರಾಷ್ಟ್ರದ ಬಾರಾಮತಿ ಮಾದರಿಯಲ್ಲಿ ವಿಜಯಪುರವನ್ನೂ ಕೃಷಿ, ನೀರಾವರಿ ಮತ್ತು ಕೈಗಾರಿಕೆಗಳ ಸಮನ್ವಯದೊಂದಿಗೆ ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಆಶಯ.
ಈ ದೀಪಾವಳಿ ವಿಜಯಪುರದ ಜನತೆಗೆ ನಿಜಕ್ಕೂ ವಿಶೇಷ ಕೊಡುಗೆ. ಬೆಳಕಿನ ಹಬ್ಬದ ಸಂಭ್ರಮದೊಂದಿಗೆ ಜಿಲ್ಲೆಯ ಕೈಗಾರಿಕಾ ಭವಿಷ್ಯಕ್ಕೂ ಹೊಸ ಬೆಳಕು ಮೂಡುತ್ತಿದೆ. ನಿರುದ್ಯೋಗಿ ಯುವಕರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಲಿ. ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳು ಸೇರಿದಂತೆ ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಈ ಯೋಜನೆ ನಾಂದಿಯಾಗಲಿ.(ಕೃಪೆ:ಮಹಾಂತೇಶ್ ಬಿರಾದಾರ. ಫೇಸ್ಬುಕ್)

